ಕಪಾಟಿನಲ್ಲಿದ್ದ ಮಹಿಳೆ ಶವದ ರಹಸ್ಯ; ಆಸ್ತಿಗಾಗಿ ಮೊಮ್ಮಗನಿಂದಲೇ ಅಜ್ಜಿಯ ಕೊಲೆ?
ನಗರದ ಕೆಂಗೇರಿ ಉಪನಗರದ ಮನೆಯೊಂದರ ಕಪಾಟಿನಲ್ಲಿ ಪತ್ತೆಯಾಗಿದ್ದ ವೃದ್ಧೆಯ ಶವದ ರಹಸ್ಯವನ್ನು ಪೊಲೀಸರು ಬೇದಿಸಿದ್ದು, ಆ ಶವ ಮನೆ ಮಾಲಕಿ 70 ವರ್ಷ ವಯಸ್ಸಿನ ಶಾಂತಲಾ ಅಲಿಯಾಸ್ ಶಾಂತಾಕುಮಾರಿ ಅವರದ್ದು ಎಂದು ತಿಳಿದುಬಂದಿದೆ.

ಬೆಂಗಳೂರು: ನಗರದ ಕೆಂಗೇರಿ ಉಪನಗರದ ಮನೆಯೊಂದರ ಕಪಾಟಿನಲ್ಲಿ ಪತ್ತೆಯಾಗಿದ್ದ ವೃದ್ಧೆಯ ಶವದ ರಹಸ್ಯವನ್ನು ಪೊಲೀಸರು ಬೇದಿಸಿದ್ದು, ಆ ಶವ ಮನೆ ಮಾಲಕಿ 70 ವರ್ಷ ವಯಸ್ಸಿನ ಶಾಂತಲಾ ಅಲಿಯಾಸ್ ಶಾಂತಾಕುಮಾರಿ ಅವರದ್ದು ಎಂದು ತಿಳಿದುಬಂದಿದೆ.
ಮೃತದೇಹವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಪ್ರಯೋಗಾಲಯದ ತಜ್ಞರು ಅಭಿಪ್ರಾಯಪಟ್ಟಿರುವಂತೆ ಅದು ಹಿರಿಯ ವಯಸ್ಸಿನ ಮಹಿಳೆಯದ್ದಾಗಿರಬಹುದು ಎಂದು ಹೇಳಿದ್ದಾರೆ. ಹೀಗಾಗಿ ಕಪಾಟಿನಲ್ಲಿ ಪತ್ತೆಯಾದ ಶವ ಮನೆ ಮಾಲಕಿ ಶಾಂತಾಕುಮಾರಿ ಅವರದ್ದಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮೃತ ಶಾಂತಾಕುಮಾರಿ ಅವರ ಹೆಸರಿನಲ್ಲಿ 4-5 ನಿವೇಶನಗಳಿದ್ದು, ಅದನ್ನು ತಮ್ಮದಾಗಿಸಿಕೊಳ್ಳುವ ಉದ್ದೇಶದಿಂದ ದುಷ್ಕರ್ಮಿಗಳು ಈ ಕೆಲಸ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಪೊಲೀಸ್ ಪ್ರಾಥಮಿಕ ವರಿದಗಳ ಅನ್ವಯ ಕೊಲೆ ಹಿಂದೆ ಶಾಂತಾಕುಮಾರಿ ಅವರ ಮೊಮ್ಮಗ ಸಂಜಯ್ ಕೈವಾಡ ಕುರಿತು ಶಂಕೆ ವ್ಯಕ್ತವಾಗಿದ್ದು, ಇದೇ ಕಾರಣಕ್ಕೆ ತನಿಖೆಗಾಗಿ ಪೊಲೀಸರು ಶಿವಮೊಗ್ಗಕ್ಕೆ ತೆರಳಿದ್ದಾರೆ. ಸಂಜಯ್ ಅವರ ತಾಯಿ ಶಶಿಕಲಾ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯವರಾಗಿದ್ದು, ಈ ಹಿಂದೆ ಶಶಿಕಲಾ ಅವರು ಪತಿಯಿಂದ ವಿಚ್ಛೇದನ ಪಡೆದು ತಮ್ಮ ತಾಯಿ ಮತ್ತು ಮಗನೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಆರಂಭದಲ್ಲಿ ಬ್ಯಾಟರಾಯನ ಪುರದ ಅವಲಹಳ್ಳಿಯಲ್ಲಿ ನೆಲೆಸಿದ್ದ ಈ ಕುಟುಂಬ ಬಳಿಕ ಆ ಮನೆಯನ್ನು ಮಾರಾಟ ಮಾಡಿದ್ದರು. ಬಳಿಕ ಗಿರಿನಗರಕ್ಕೆ ಸ್ಥಳಾಂತರವಾದ ಶಾಂತಾಕುಮಾರಿ ಕುಟುಂಬ ಗಿರಿನಗರದಲ್ಲಿ ಒಂದಷ್ಟು ವರ್ಷ ಹಾಗೂ ಕೆಂಗೇರಿಯ ಬಾಡಿಗೆ ಮನೆಯಲ್ಲಿ ಒಂದಷ್ಟು ವರ್ಷ ನೆಲೆಸಿದ್ದರು.
ಏತನ್ಮಧ್ಯೆ ಶಾಂತಾಕುಮಾರಿ ಅವರ ಮಗಳಾದ ಶಶಿಕಲಾ ಅವರು ತಮ್ಮ ವಿಚ್ಛೇದನಕ್ಕೆ ತಮ್ಮ ತಾಯಿಯೇ ಕಾರಣ ಎಂದು ದೂರಿದ್ದರು. ಈ ಬಗ್ಗೆ ಹಲವು ಬಾರಿ ಕುಟುಂಬದಲ್ಲಿ ಜಗಳವಾಗಿತ್ತು ಎಂದು ಅವರ ಸಂಬಂಧಿಕರು ಪೊಲೀಸರ ಬಳಿ ಹೇಳಿದ್ದಾರೆ. ಅಂತೆಯೇ ಶಾಂತಾಕುಮಾರಿ ಅವರಿಗೆ 2ನೇ ಮದುವೆಯಾಗಿದ್ದು, ಅವರ ಎರಡನೇ ಪತಿ ಪುತ್ರಿ ಶಶಿಕಲಾ ಅವರನ್ನು ಹಿಂಸಿಸುತ್ತಿದ್ದ. ಬಳಿಕ ಒಂದಷ್ಟು ವರ್ಷಗಳ ಬಳಿಕ ಆತ ಕೂಡ ಕುಟುಂಹವನ್ನು ತೊರೆದಿದ್ದ ಎಂದು ಸಂಬಂಧಿಸಕರು ತಿಳಿಸಿದ್ದಾರೆ. ಒಟ್ಟಾರೆ ನಿಗೂಢವಾಗಿ ಉಳಿದಿರುವ ಈ ಕೊಲೆ ಪ್ರಕರಣದ ಜಾಡು ಹಿಡಿದಿರುವ ಪೊಲೀಸರು ತೀವ್ರಗತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


