ರಾಜ್ಯ

ಮಕ್ಕಳ ಪರೀಕ್ಷಾ ಸಮಯದಲ್ಲಿ ವಿದ್ಯುತ್ ಸಮಸ್ಯೆಯಿರುವುದಿಲ್ಲ: ಇಂಧನ ಸಚಿವ

ವಿದ್ಯುತ್ ಸಮಸ್ಯೆ ಕುರಿತಂತೆ ಈಗಾಗಲೇ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಮಕ್ಕಳ ಪರೀಕ್ಷಾ ಸಮಯದಲ್ಲಿ ವಿದ್ಯುತ್ ಸಮಸ್ಯೆ ಎದುರಾಗುವುದಿಲ್ಲ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ಭರವಸೆ...

ಮಕ್ಕಳ ಪರೀಕ್ಷಾ ಸಮಯದಲ್ಲಿ ವಿದ್ಯುತ್ ಸಮಸ್ಯೆಯಿರುವುದಿಲ್ಲ: ಇಂಧನ ಸಚಿವ
ಇಂಧನ ಸಚಿವ ಡಿ.ಕೆ. ಶಿವಕುಮಾರ್
Published On :
ಬೆಂಗಳೂರು: ವಿದ್ಯುತ್ ಸಮಸ್ಯೆ ಕುರಿತಂತೆ ಈಗಾಗಲೇ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಮಕ್ಕಳ ಪರೀಕ್ಷಾ ಸಮಯದಲ್ಲಿ ವಿದ್ಯುತ್ ಸಮಸ್ಯೆ ಎದುರಾಗುವುದಿಲ್ಲ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ಭರವಸೆ ನೀಡಿದ್ದಾರೆ. 
ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ರಾಜ್ಯದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗುತ್ತಿದೆ ಎಂಬ ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ ಪ್ರಶ್ನೆಗೆ ಉತ್ತರ ನೀಡಿರುವ ಅವರು, ಗ್ರಾಮೀಣ ಭಾಗದಲ್ಲಿ 10 ಗಂಟೆ ಸಿಂಗಲ್ ಫೇಸ್, 7 ಗಂಟೆ ತ್ರಿಫೇಸ್ ವಿದ್ಯುತ್ ನೀಡಲಾಗುತ್ತಿದೆ. ನಗರ ಪ್ರದೇಶದಲ್ಲಿ 22 ರಿಂದ 24 ಗಂಟೆ ವಿದ್ಯುತ್ ಪೂರೈಸಲಾಗುತ್ತಿದೆ. 
ಕೆಲ ತಾಂತ್ರಿಕ ಕಾರಣಗಳಿಂದ ವಿದ್ಯುತ್ ವ್ಯತ್ಯಯ ಆಗುತ್ತಿದೆಯಷ್ಟೇ. ಆದಷ್ಟು ಬೇಗ ಸಮಸ್ಯೆಗಳನ್ನು ಸರಿಪಡಿಸಲಾಗುವುದು. ಸದ್ಯ ಒಂದು ಸಾವಿನ ಮೆಗಾವ್ಯಾಟ್ ವಿದ್ಯುತ್ ಕೊರತೆ ಇದ್ದು, ಅದನ್ನು ನೀಗಿಸಲು ಆದಷ್ಟು ಬೇಗನೇ ಪ್ರತಿ ಯೂನಿಟ್ ಗೆ ರೂ.4.18 ದರಲ್ಲಿ 800ರಿಂದ 900 ಮೆ.ವ್ಯಾ ಖರೀದಿಸಿ ವಿದ್ಯಾರ್ಥಿಗಳಿಗೆ ಮತ್ತು ರೈತರಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಭರವಸೆ ನೀಡಿದರು. 
ಸದನ ಸಮಿತಿ ವರದಿ ಪ್ರಕಟಿಸುವಂತೆ ಜೆಡಿಎಸ್ ಧರಣಿ
ಇಂಧನ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಕುರಿತಂತೆ ತನಿಖೆ ನಡೆಸಲು ರಚಿಸಲಾಗಿರುವ ಸದನ ಸಮಿತಿ ವರದಿಯನ್ನು ಪ್ರಕಟಿಸುವಂತೆ ಆಗ್ರಹಿಸಿ ಜೆಡಿಎಸ್ ಶಾಸಕರು ವಿಧಾನಸಭೆಯಲ್ಲಿ ಸದನದ ಬಾವಿಗಿಳಿದ ಧರಣಿ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂಧನ ಸಚಿವರಿಗೆ ಏಪ್ರಿಲ್ 15ರೊಳಗೆ ಸಮಿತಿ ವರದಿ ನೀಡುವಂತೆ ಸೂಚಿಸಿದ ಬಳಿಕ ಜೆಡಿಎಸ್ ಧರಣಿಯನ್ನು ಹಿಂದಕ್ಕೆ ಪಡೆಯಿತು. 

ಪ್ರಶ್ನೋತ್ತರ ಸಮಯ ಅಂತ್ಯವಾಗುತ್ತಿದ್ದಂತೆಯೇ ಜೆಡಿಎಸ್ ಶಾಸಕರು ಇಂಧನ ಇಲಾಖೆಯ ಸದನ ಸಮಿತಿ ವರದಿ ಒಂದೂವರೆ ವರ್ಷವಾದರೂ ಪ್ರಕಟಗೊಂಡಿಲ್ಲ. ಇದೇ ಅಧಿವೇಶನದಲ್ಲಿ ವರದಿ ಮಂಡಿಸಬೇಕು ಎಂದು ಒತ್ತಾಯಿಸಿದರು. 

ಈ ವೇಳೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, ಸದನ ಸಮಿತಿಯಲ್ಲಿರುವ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರಿದೆ ಲಿಖಿತ ಅಭಿಪ್ರಾಯ ನೀಡುವಂತೆ ನೋಟಿಸ್ ಜಾರಿ ಮಾಡಲಾಗಿದೆ ಆದರೆ, ಬಹುತೇಕ ಸದಸ್ಯರು ಅಭಿಪ್ರಾಯವನ್ನೇ ನೀಡುತ್ತಿಲ್ಲ. ಜೆಡಿಎಸ್ ಶಾಸಕಾಂಗ ಸಭೆಯ ನಾಯಕ ಕುಮಾರಸ್ವಾಮಿ ಅವರು ಸದನ ಸಮಿತಿಗೆ ಅಭಿಪ್ರಾಯ ನೀಡದೆಯೇ, ಸದನದ ಹೊರಗೆ ಮಾಧ್ಯಮಗಳಲ್ಲಿ ನನ್ನ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿ ಸದಸ್ಯರು ತನಿಖೆಯ ವ್ಯಾಪ್ತಿಯನ್ನು ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಗೂ ವಿಸ್ತರಣೆ ಮಾಡುವಂತೆ ಕೋರಿದ್ದಾರೆ. ಹೀಗಾಗಿ ವರದಿ ಸಿದ್ಧಪಡಿಸುವುದು ವಿಳಂಬವಾಗುತ್ತಿದೆ ಎಂದು ಹೇಳಿದರು. ಈ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ನಡುವೆ ಮಾತಿನ ಚಕಮಕಿ ನಡೆದು, ಜೆಡಿಎಸ್ ಶಾಸಕರು ಸದನದ ಬಾವಿಗಿಳಿದು ಧರಣೆ ನಡೆಸಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.