ರಾಜ್ಯ

ಉಪನಗರ ರೈಲು ನೀತಿ ಪರಾಮರ್ಶೆ ಅಗತ್ಯವಿದೆ: ರೈಲ್ವೆ ಸಚಿವರಿಗೆ ಮುಖ್ಯಮಂತ್ರಿ ಪತ್ರ

ರೈಲ್ವೆ ಸಚಿವಾಲಯ ಘೋಷಿಸಿದ ಉಪನಗರ ರೈಲು ನೀತಿ ರಾಜ್ಯ ಸರ್ಕಾರದ ಸಲಹೆಗಳನ್ನು ಪರಿಗಣಿಸುವುದಿಲ್ಲ ಮತ್ತು ರಾಜ್ಯದ ಅನಾನುಕೂಲತೆಗೆ...

ಉಪನಗರ ರೈಲು ನೀತಿ ಪರಾಮರ್ಶೆ ಅಗತ್ಯವಿದೆ: ರೈಲ್ವೆ ಸಚಿವರಿಗೆ ಮುಖ್ಯಮಂತ್ರಿ ಪತ್ರ
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ರೈಲ್ವೆ ಸಚಿವಾಲಯ ಘೋಷಿಸಿದ ಉಪನಗರ ರೈಲು ನೀತಿ ರಾಜ್ಯ ಸರ್ಕಾರದ ಸಲಹೆಗಳನ್ನು ಪರಿಗಣಿಸಿಲ್ಲ ಮತ್ತು ಕರ್ನಾಟಕಕ್ಕೆ ಅನನುಕೂಲವಾಗಿದೆ. ಈ ರೈಲು ನೀತಿಯನ್ನು ಪರಿಷ್ಕೃತಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಈ ಕುರಿತು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರಿಗೆ ಪತ್ರ ಬರೆದಿರುವ ಮುಖ್ಯಮಂತ್ರಿ, ಕಳೆದ ಜನವರಿ 12ರಂದು  ರಾಜ್ಯ ಸರ್ಕಾರ ರೈಲ್ವೆ ಸಚಿವಾಲಯಕ್ಕೆ ಎಲ್ಲಾ ಪ್ರಮುಖ ಯೋಜನೆಗಳ ಕುರಿತು ಹಣಕಾಸಿಗೆ ಸಂಬಂಧಪಟ್ಟ ಮತ್ತು ನಿರ್ವಹಣೆಯ ಲಾಭ, ನಷ್ಟಗಳ ಕುರಿತು ಸಲಹೆ ನೀಡಿತ್ತು. ಎಲ್ಲಾ ಯೋಜನೆಗಳಲ್ಲಿ ರಾಜ್ಯ ಮತ್ತು ಕೇಂದ್ರ ರೈಲ್ವೆ ಸಚಿವಾಲಯದ ಸಮಾನ ಪಾಲಿನ ಹೂಡಿಕೆ ಅಗತ್ಯವಿದೆ ಎಂಬುದು ಸಲಹೆಯ ಪ್ರಮುಖ ವಿಷಯವಾಗಿತ್ತು. ಆದರೆ ಏಪ್ರಿಲ್ 18ರಂದು ಕೇಂದ್ರ ಸರ್ಕಾರ ಹೊರಡಿಸಿದ ಹೊಸ ಉಪನಗರ ರೈಲು ನೀತಿಗಳಲ್ಲಿ ಈ ಸಲಹೆಗಳನ್ನು ಪರಿಗಣಿಸಿಲ್ಲ ಎಂದು ಹೇಳಿದ್ದಾರೆ.
ಯೋಜನೆಯನ್ನು ಜಾರಿಗೆ ತರುವಲ್ಲಿ ರಾಜ್ಯ ಹಾಗೂ ರೈಲ್ವೇ ಸಚಿವಾಲಯಗಳೆರಡರ ಸಮಾನ ಹೊಣೆಗಾರಿಕೆ ಇರಬೇಕು. ಉಪನಗರ ರೈಲು ಯೋಜನೆಗೆಂದೇ ಪ್ರತ್ಯೇಕ ಮೂಲಸೌಕರ್ಯವನ್ನು ಕಲ್ಪಿಸಲು ಒತ್ತಡ ಹೇರಬಾರದು. ಹಾಗೆ ಮಾಡುವುದರಿಂದ ಪ್ರಸ್ತುತ ಇರುವ ಸೌಕರ್ಯಗಳ ಪೂರ್ಣ ಲಾಭವನ್ನು ಅಗತ್ಯವಿರುವೆಡೆ ಬಳಸಿಕೊಳ್ಳಲು ತೊಡಕಾಗುವುದೇ ಅಲ್ಲದೆ, ಯೋಜನೆಯು ಆರ್ಥಿಕವಾಗಿಯೂ ಸಾಧುವಾಗುವುದಿಲ್ಲ ಎಂದು ವಿವರಿಸಿದ್ದೇನೆ.

ಪ್ರಸ್ತುತ ರೂಪಿಸಲಾಗಿರುವ ನಿಯಮಾವಳಿಗಳಲ್ಲಿ, ಒಂದೊಮ್ಮೆ ಯೋಜನೆಯ ಅನುಷ್ಠಾನದ ಹೊಣೆ ಹೊತ್ತ ವಿಶೇಷ ಉದ್ದೇಶ ವಾಹಕವು (ಎಸ್ ಪಿ ವಿ) ಆರಂಭಿಕ ನಷ್ಟವನ್ನು ಹೊರಲು ಆಗದೆ ಹೋದ ಸಂದರ್ಭದಲ್ಲಿ ರಾಜ್ಯವೇ ಆ ಹೊಣೆಯನ್ನು ಹೊರಬೇಕು ಎಂದಿದೆ. ದರ ನಿಗದಿ ಮಾಡುವ ಅಂತಿಮ ಅಧಿಕಾರವನ್ನು ಭಾರತೀಯ ರೈಲ್ವೇ ಉಳಿಸಿಕೊಂಡಿದೆ. ಹಾಗಾಗಿ ಆರಂಭಿಕ ನಷ್ಟದ ಕುರಿತಾದ ನಿಯಮಾವಳಿಯನ್ನು ಸಡಿಲಿಸಿ ವಿಕೇಂದ್ರೀರಿಸಬೇಕು, ಆ ಮೂಲಕ ಇಬ್ಬರೂ ಪಾಲುದಾರರನ್ನು ಸಮಾನ ಭಾಧ್ಯಸ್ಥರನ್ನಾಗಿಸಬೇಕು ಹಾಗೂ ದರ ನಿಗದಿ ಸ್ವಾತಂತ್ರ್ಯವನ್ನು ವಿಶೇಷ ಉದ್ದೇಶ ವಾಹಕಕ್ಕೆ ವಹಿಸಬೇಕು ಎಂದು ಸಲಹೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. 

ಯೋಜನೆಯ ಕುರಿತಾದ ಆರ್ಥಿಕ ಹೊರೆಯನ್ನು ಸಮನಾಗಿ ಹಂಚಿಕೊಳ್ಳಬೇಕು ಹಾಗೂ ಎಲ್ಲ್ಲಿ ಪ್ರಸ್ತುತ ಇರುವ ಮೂಲಸೌಕರ್ಯಗಳನ್ನು ಬಳಸಿಕೊಳ್ಳಲು ಸಾಧ್ಯವಿದೆಯೋ ಅಲ್ಲಿ ರೈಲ್ವೇ ಇಲಾಖೆಯ ಸಮಾಲೋಚನೆಯೊಂದಿಗೆ ಅದನ್ನು ಬಳಸಿಕೊಳ್ಳುವ ಅನುಮತಿ ನೀಡುವಂತೆ ನಿಯಮಾವಳಿಗಳಲ್ಲಿ ಅವಕಾಶ ಕಲ್ಪಿಸಬೇಕು ನಮ್ಮ ಈ ಸಲಹೆಗಳನ್ನು ಸಚಿವರು ಸಕಾರಾತ್ಮಕವಾಗಿ ಪರಿಗಣಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಸಿದ್ದರಾಮಯ್ಯ ಪತ್ರದಲ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.