ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಆತ್ಮಹತ್ಯೆ; ಯಾವುದೇ ತನಿಖೆಗೂ ಸಿದ್ಧ: ಮೋಹನ ಆಳ್ವ
ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಬ್ಯಾಂಡ್ಮಿಂಟನ್ ಕ್ರೀಡಾಪಟು ಹಾಗೂ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ ಕಾವ್ಯಾ ಆತ್ಮಹತ್ಯೆ ಪ್ರಕರಣ ಸಂಬಂಧ ತಾವು ಯಾವುದೇ ತನಿಖೆಗೂ ಸಿದ್ಧ ಎಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಹೇಳಿದ್ದಾರೆ.

ಮಂಗಳೂರು: ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಬ್ಯಾಂಡ್ಮಿಂಟನ್ ಕ್ರೀಡಾಪಟು ಹಾಗೂ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ ಕಾವ್ಯಾ ಆತ್ಮಹತ್ಯೆ ಪ್ರಕರಣ ಸಂಬಂಧ ತಾವು ಯಾವುದೇ ತನಿಖೆಗೂ ಸಿದ್ಧ ಎಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಹೇಳಿದ್ದಾರೆ.
ವಿದ್ಯಾರ್ಥಿನಿ ಕಾವ್ಯಾ ಆತ್ಮಹತ್ಯೆ ಪ್ರಕರಣ ಸಂಬಂಧ ಈಗಾಗಲೇ ಮಂಗಳೂರು ನಗರ ಪೋಲಿಸ್ ಆಯುಕ್ತ ಟಿ.ಆರ್. ಸುರೇಶ್ ಅವರು ವಿಶೇಷ ತನಿಖೆಗೆ ಆದೇಶ ನೀಡಿದ್ದು, ಇದರ ನಡುವೆಯೇ ಕಾವ್ಯಾಳ ಪೋಷಕರು ಸಾವಿನ ಕುರಿತು ಶಂಕೆ ವ್ಯಕ್ತಪಡಿಸಿದ್ದಾರೆ. ಕಾವ್ಯಾ ಪೋಷಕರು ಹಾಗೂ ಸಾರ್ವಜನಿಕರ ಒತ್ತಡದಿಂದಾಗಿ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಸಲು ಸೂಚಿಸಲಾಗಿದೆ ಎನ್ನಲಾಗಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅವರು, "ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ವ್ಯವಸ್ಥೆಯು ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದ್ದು, ಕಾವ್ಯ ಆತ್ಮಹತ್ಯೆ ಪ್ರಕರಣವನ್ನು ಮುಂದಿಟ್ಟುಕೊಂಡು ವಿನಾಃ ಕಾರಣ ಸಂಸ್ಥೆಯನ್ನು ಗುರಿ ಮಾಡಲಾಗುತ್ತಿದೆ. ನಮ್ಮ ಸಂಸ್ಥೆಯಲ್ಲಿ ಕೊಲೆ ಪ್ರಕರಣ ಹಿಂದೆ ಎಂದಿಗೂ ನಡೆದಿಲ್ಲ. ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ, ಮಾಧ್ಯಮ ಅಥವಾ ವೈಯಕ್ತಿಕವಾಗಿ ಯಾರೇ ತನಿಖೆಗೆ ಮುಂದಾದರೂ ಯಾವುದೇ ತನಿಖೆಗೆ ನಾವು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.
ಯಾವುದೇ ಅಪರಾಧ ನಡೆದರೆ ಅದು ಪೊಲೀಸ್ ತನಿಖೆಯಾಗಬೇಕು. ಆದರೆ ಸಮಾಜದಲ್ಲಿ ಗೊಂದಲ ಸೃಷ್ಠಿಸಿ, ಜವಾಬ್ದಾರಿಯುತ ಸ್ಥಾನದಲ್ಲಿರುವ ನನ್ನನು ಹಾಗೂ ಕಳೆದ ಎರಡುವರೆ ದಶಕಗಳಿಂದ ಪಾರದರ್ಶಕವಾಗಿ ಶಿಕ್ಷಣ ನೀಡುತ್ತಿರುವ ಆಳ್ವಾಸ್ ಸಂಸ್ಥೆಯನ್ನು ಟಾರ್ಗೆಟ್ ಮಾಡುವುದರ ಮೂಲಕ ನಮಗೆ ಮಾನಸಿಕ ಹಿಂಸೆ ನೀಡುತ್ತಿರುವುದು ಸರಿಯಲ್ಲ. ಸಂಸ್ಥೆಯಲ್ಲಿ ಕಲಿಯುತ್ತಿರುವ 26 ಸಾವಿರ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ನಮ್ಮನ್ನೇ ನಂಬಿದ್ದಾರೆ. ಕಾವ್ಯ ಆತ್ಮಹತ್ಯೆ ಪ್ರಕರಣವು ಸರಿಯಾದ ರೀತಿಯಲ್ಲಿ ತನಿಖೆಯಾಗಿ ಅತೀ ಶೀಘ್ರ ಸತ್ಯಾಂಶ ಹೊರಬರಲಿ ಎಂದು ಡಾ.ಎಂ ಮೋಹನ್ ಆಳ್ವ ತಿಳಿಸಿದ್ದಾರೆ.
ಏನಿದು ಪ್ರಕರಣ?
ಕಟೀಲು ಸಮೀಪದ ಎಕ್ಕಾರು ದೇವಗುಡ್ಡೆ ನಿವಾಸಿ ಲೋಕೇಶ್ ಅವರ ಪುತ್ರಿ ಕಾವ್ಯಾ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದು, ಮೂಡಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಹಾಸ್ಟೆಲಿನಲ್ಲಿ ವಾಸವಾಗಿದ್ದರು. ಅಲ್ಲಿಯೇ ಶಿಕ್ಷಣ ಪಡೆಯುತ್ತಿದ್ದ ಕಾವ್ಯಾ ಕಳೆದ ಜುಲೈ 20 ರಂದು ರಾತ್ರಿ ಹಾಸ್ಟೆಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕ್ರೀಡಾ ಪ್ರತಿಭಾನ್ವಿತೆಯಾಗಿದ್ದ ಕಾವ್ಯಾಳ ಸಾವಿನ ಬಗ್ಗೆ ಆಕೆಯ ತಂದೆ ಲೋಕೆಶ್ ಶಂಕೆ ವ್ಯಕ್ತಪಡಿಸಿ ಇದೊಂದು ಕೊಲೆ ಎಂದು ಆಪಾದಿಸಿ ನಗರ ಪೋಲಿಸ್ ಆಯುಕ್ತರಿಗೆ ದೂರು ನೀಡಿದ್ದರು ಎನ್ನಲಾಗಿದೆ. ಅವರ ದೂರಿನ ಆಧಾರದಲ್ಲಿ ತನಿಖೆಗೆ ಆದೇಶ ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


