ನನ್ನ ಹೇಳಿಕೆ ತಿರುಚಿ ಸುದ್ದಿ ಪ್ರಸಾರ: ಜಿ ಪರಮೇಶ್ವರ್ ಅಸಮಾಧಾನ
ಹೊಸ ವರ್ಷಾಚರಣೆ ಸಂದರ್ಭದಲ್ಲಿ ನಡೆದಿದ್ದ ಘಟನೆಗಳಿಗೆ ಸಂಬಂಧಿಸಿದಂತೆ ನಾನು ನೀಡಿದ್ದ ಹೇಳಿಕೆಯನ್ನು ಮಾಧ್ಯಮದಲ್ಲಿ ತಿರುಚಿ ಸುದ್ದಿ ಪ್ರಸಾರ ಮಾಡಲಾಗಿತ್ತು ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರು: ಹೊಸಸ ವರ್ಷಾಚರಣೆ ಸಂದರ್ಭದಲ್ಲಿ ನಡೆದಿದ್ದ ಘಟನೆಗಳಿಗೆ ಸಂಬಂಧಿಸಿದಂತೆ ನಾನು ನೀಡಿದ್ದ ಹೇಳಿಕೆಯನ್ನು ಮಾಧ್ಯಮದಲ್ಲಿ ತಿರುಚಿ ಸುದ್ದಿ ಪ್ರಸಾರ ಮಾಡಲಾಗಿತ್ತು ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.
ಈ ಹಿಂದೆ ಪರಮೇಶ್ವರ್ ಅವರು ನೀಡಿದ್ದ ಹೇಳಿಕೆ ವಿವಾದದ ಸ್ವರೂಪ ಪಡೆದ ಹಿನ್ನಲೆಯಲ್ಲಿ ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿರುವ ಪರಮೇಶ್ವರ ಅವರ, ಅಂದು ನಾನು ನೀಡಿದ್ದ ಹೇಳಿಕೆಯನ್ನು ತಿರುಚಲಾಗಿದ್ದು, ಅದಕ್ಕೆ ಬೇರೆ ಅರ್ಥ ಕಲ್ಪಿಸಿ ಸುದ್ದಿ ಪ್ರಸಾರ ಮಾಡಲಾಗಿದೆ. ಅಂದು ನಾನು ಬೆಂಗಳೂರಿನಂತಹ ನಗರದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಸಾಮಾನ್ಯ ಎಂದು ಹೇಳಿದ್ದೆ. ಆದರೆ ಇದನ್ನು ತಿರುಚಿ ಮಾಧ್ಯಮಗಳಲ್ಲಿ ಲೈಂಗಿಕ ಕಿರುಕುಳ ಸಾಮಾನ್ಯ ಎಂದು ಸುದ್ದಿ ಪ್ರಸಾರ ಮಾಡಲಾಗಿದೆ ಎಂದು ಪರಮೇಶ್ವರ ಅವರು ಮಾಧ್ಯಮಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ಬೆಂಗಳೂರು ಸಾಮೂಹಿಕ ಲೈಂಗಿಕ ಕಿರುಕುಳ ಪ್ರಕರಣದ ಕುರಿತು ಮಾತನಾಡಿದ ಪರಮೇಶ್ವರ ಅವರು, ಘಟನೆ ನಿಜಕ್ಕೂ ದುರಾದೃಷ್ಟಕರ. ಇಂತಹ ಘಟನೆಗಳು ನಡೆಯಬಾರದಿತ್ತು. ಆದರೆ ಇದೊಂದು ಘಟನೆಯಿಂದ ಬೆಂಗಳೂರಿಗೆ ಕಪ್ಪು ಚುಕ್ಕೆ ಬೇಡ. ಬೆಂಗಳೂರು ನಿಜಕ್ಕೂ ಶಾಂತಿಯುತ ನಗರವಾಗಿದ್ದು, ಮಹಿಳೆ ಮತ್ತು ಮಕ್ಕಳಿಗೆ ಸುರಕ್ಷಿತ ಪಟ್ಟಣವಾಗಿದೆ. ಇಂತಹ ಘಟನೆಗಳಿಂದ ಬೆಂಗಳೂರಿನ ಚಿತ್ರಣ ಬದಲಾಗಬಹುದು.
ಕಮ್ಮನಹಳ್ಳಿ ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪ್ರಕರಣ ಸಂಬಂಧ ಈಗಾಗಲೇ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಅಂತೆಯೇ ಪ್ರಕರಣ ಸಂಬಂಧ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಸುರಕ್ಷತೆಗಾಗಿ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ನಾನು ಗೃಹ ಸಚಿವನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ್ದಂತೆ ಮಹಿಳೆ ಮತ್ತು ಮಕ್ಕಳ ಸುರಕ್ಷತೆಗೇ ನನ್ನ ಮೊದಲ ಆದ್ಯತೆ. ಇದನ್ನೇ ನಾನು ಈಗಲೂ ಮುಂದುವರೆಸಿಕೊಂಡು ಬಂದಿದ್ದೇನೆ. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ.
ನನ್ನ ಮನೆಯಲ್ಲೂ ಹೆಣ್ಣು ಮಕ್ಕಳಿದ್ದಾರೆ. ಮಹಿಳೆಯರನ್ನು ತುಚ್ಛವಾಗಿ ನೋಡಿಲ್ಲ
ಇದೇ ವೇಳೆ ಪರಮೇಶ್ವರ್ ಮಹಿಳೆಯರ ಬಗ್ಗೆ ತುಚ್ಛವಾಗಿ ಮಾತನಾಡಿದ್ದಾರೆ ಎಂಬ ಮಾತನ್ನು ನಿರಾಕರಿಸಿದ ಪರಮೇಶ್ವರ ಅವರು, ಯಾವುದೇ ಕಾರಣಕ್ಕೂ ಮಹಿಳೆಯರನ್ನು ನಾನು ತುಚ್ಛವಾಗಿ ನೋಡಿಲ್ಲ. ನನ್ನ ಮನೆಯಲ್ಲೂ ಮಹಿಳೆಯರಿದ್ದಾರೆ. ನನಗೂ ತಾಯಿ, ಮಡದಿ ಮತ್ತು ಸಹೋದರಿಯರು ಹಾಗೂ ಮಕ್ಕಳಿದ್ದಾರೆ ಎಂದು ಹೇಳಿದರು.
ಹೊಸ ವರ್ಷಾಚರಣೆ ಸಂದರ್ಭದಲ್ಲಿಯೂ ನಾವು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೆವು. ಸುರಕ್ಷತೆಗಾಗಿ ಸುಮಾರು 1600ಕ್ಕೂ ಹೆಚ್ಚು ಮಂದಿ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಿದ್ದೆವು. ಮುಂಜಾಗ್ರತಾ ಕ್ರಮವಾಗಿ 70 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದೆವು. ಸಾಕಷ್ಚು ಸಂಖ್ಯೆಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು. ಘಟನಾ ಸ್ಥಳದಲ್ಲಿ ಹಿರಿಯ ಮಹಿಳಾ ಪೊಲೀಸ್ ಅಧಿಕಾರಿಗಳು ಇರಲಿಲ್ಲ ಎನ್ನುವ ಮಾತು ಸತ್ಯಕ್ಕೆ ದೂರವಾದದ್ದು ಎಂದು ಪರಮೇಶ್ವರ್ ಹೇಳಿದ್ದಾರೆ.
ಆರೋಪಿಗಳ ಬಗ್ಗೆ ಮಾಹಿತಿ ಇದ್ದರೆ ಪೊಲೀಸರಿಗೆ ನೀಡಿ
ಇನ್ನು ಹೊಸ ವರ್ಷಾಚರಣೆ ಸಂದರ್ಭದಲ್ಲಿ ನಡೆದ ಲೈಂಗಿಕ ಕಿರುಕುಳ ಸಂಬಂಧ ಮಾಧ್ಯಮಗಳಾಗಲಿ ಅಥವಾ ಅಲ್ಲಿ ನೆರೆದಿದ್ದ ಜನ ಸಾಮಾನ್ಯರ ಬಳಿಯಾಗಲಿ ಸಾಕ್ಷ್ಯಾಧಾರಗಳು, ವಿಡಿಯೋಗಳು ಅಥವಾ ಫೋಟೋಗಳಿದ್ದರೆ ಪೊಲೀಸರಿಗೆ ನೀಡಿ. ಆ ಮೂಲಕ ತನಿಖೆಗೆ ಸಹಕರಿಸಿ ಎಂದು ಪರಮೇಶ್ವರ್ ಮನವಿ ಮಾಡಿಕೊಂಡರು.
ಸುರಕ್ಷತೆಗಾಗಿ ಮತ್ತಷ್ಟು ಕ್ರಮ
ಇದೇ ವೇಳೆ ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪರಮೇಶ್ವರ್ ತಿಳಿಸಿದರು. ಅದರಂತೆ ನಗರದಲ್ಲಿ ಇನ್ನೂ ಹೆಚ್ಚವರಿಯಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದಾಗಿ ಪರಮೇಶ್ವರ್ ತಿಳಿಸಿದರು. ತುರ್ತಾಗಿ ನಗರದಲ್ಲಿ 500 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಸಂಖ್ಯೆಯನ್ನು ಭವಿಷ್ಯದಲ್ಲಿ ಏರಿಕೆ ಮಾಡಲು ನಿರ್ಧರಿಸಲಾಗಿದ್ದು, ಕ್ರಮೇಣ ಈ ಸಂಖ್ಯೆಯನ್ನು 5 ಸಾವಿರಕ್ಕೆ ಏರಿಕೆ ಮಾಡಲು ನಿರ್ಧರಿಸಲಾಗಿದೆ. ಅಂತೆಯೇ ಪ್ರಸ್ತುತ ಇರುವ 100 ಹೆಲ್ಪ್ ಲೈನ್ ನಂಬರ್ ಅನ್ನು ಉನ್ನತೀಕರಿಸಲು ನಿರ್ಧರಿಸಲಾಗಿದೆ. ಪ್ರಸ್ತುತ ನಗರದಲ್ಲಿ 100 ನಂಬರ್ ನ 15 ಲೈನ್ ಗಳಿದ್ದು, ಅದನ್ನು 100 ಲೈನ್ ಗಳಾಗಿ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ಇದಕ್ಕಾಗಿ ಸುಮಾರು 14 ಕೋಟಿ ರು. ಹಣ ವೆಚ್ಚವಾಗಲಿದೆ. ಇದನ್ನು 24 ಗಂಟೆ ನಿರಂತರವಾಗಿ ಕಾರ್ಯಾಚರಣೆಯಲ್ಲಿಡಲಾಗುತ್ತದೆ. ಅಂತೇಯ ಪ್ರಸ್ತುತ ಪೊಲೀಸ್ ಇಲಾಖೆಯಲ್ಲಿ ಶೇ.5ರಷ್ಟು ಮಹಿಳಾ ಸಿಬ್ಬಂದಿಗಳಿದ್ದು, ಇದನ್ನು ಭವಿಷ್ಯದಲ್ಲಿ ಶೇ.20ಕ್ಕೆ ಏರಿಸಲು ನಿರ್ಧರಿಸಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


