ಹಕ್ಕಿ ಜ್ವರ ಭೀತಿ: ತಿಂಗಳ ಕಾಲ ಮೈಸೂರು ಮೃಗಾಲಯ ಬಂದ್!
ಹಕ್ಕಿ ಜ್ವರ ಭೀತಿ ಆವರಿಸಿರುವ ಹಿನ್ನಲೆಯಲ್ಲಿ ಸಮಾರು 125 ವರ್ಷಗಳ ಇತಿಹಾಸವಿರುವ ಮೈಸೂರಿನ ಐತಿಹಾಸಿಕ ಶ್ರೀಚಾಮರಾಜೇಂದ್ರ ಮೃಗಾಲಯವನ್ನು ಇದೇ ಮೊದಲ ಬಾರಿಗೆ ಮುಂಜಾಗ್ರತಾ ಕ್ರಮವಾಗಿ ಒಂದು ತಿಂಗಳ ಕಾಲ ಮುಚ್ಚಲಾಗತ್ತಿದೆ.

ಮೈಸೂರು: ಹಕ್ಕಿ ಜ್ವರ ಭೀತಿ ಆವರಿಸಿರುವ ಹಿನ್ನಲೆಯಲ್ಲಿ ಸಮಾರು 125 ವರ್ಷಗಳ ಇತಿಹಾಸವಿರುವ ಮೈಸೂರಿನ ಐತಿಹಾಸಿಕ ಶ್ರೀಚಾಮರಾಜೇಂದ್ರ ಮೃಗಾಲಯವನ್ನು ಇದೇ ಮೊದಲ ಬಾರಿಗೆ ಮುಂಜಾಗ್ರತಾ ಕ್ರಮವಾಗಿ ಒಂದು ತಿಂಗಳ ಕಾಲ ಮುಚ್ಚಲಾಗತ್ತಿದೆ.
ಮೈಸೂರು ಮೃಗಾಲಯದ ಆಡಳಿತ ಸಿಬ್ಬಂದಿಗಳು ತಿಳಿಸಿರುವಂತೆ ಮೃಗಾಲಯದಲ್ಲಿ ಹಕ್ಕಿ ಜ್ವರ ಭೀತಿ ಆವರಿಸಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದೆ. ಮೃಗಾಲಯದ ಕೊಳ-3ರಲ್ಲಿ ವಲಸೆ ಹಕ್ಕಿಗಳು ಮೃತಪಟ್ಟಿದ್ದು, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈ ಸೆಕ್ಯೂರಿಟಿ ಆಂಡ್ ಅನಿಮಲ್ ಡಿಸೀಸ್ (ಎನ್ಐಎಚ್ಎಸ್ಎಡಿ) ಸಂಸ್ಥೆಯು ಮೃತಪಟ್ಟ ಹಕ್ಕಿಗಳಲ್ಲಿ ಎಚ್5ಎನ್8 ವೈರಾಣು ಇರುವುದನ್ನು ಮಂಗಳವಾರ ದೃಢಪಡಿಸಿರುವ ಹಿನ್ನೆಲೆಯಲ್ಲಿ ಮೃಗಾಲಯವನ್ನು ಬಂದ್ ಮಾಡಲು ಮೃಗಾಲಯ ಆಡಳಿತ ಮಂಡಳಿ ನಿರ್ಧರಿಸಿದೆ. ಹೀಗಾಗಿ ಇದೇ ಜನವರಿ 4 ರಿಂದ ಫೆಬ್ರವರಿ 2ರವರೆಗೆ ಮೃಗಾಲಯವನ್ನು ಬಂದ್ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಅದೇ ಕೊಳದಲ್ಲಿ ಡಿಸೆಂಬರ್ 30ರಂದು ಮತ್ತೆ 1 ಸ್ಪಾಟ್ ಬಿಲ್ಡ್ ಪೆಲಿಕಾನ್ ಮತ್ತು 1 ಗ್ರೇಯ್ಲಾಗ್ ಗೂಸ್ ಮೃತಪಟ್ಟಿರುವುದು ಕಂಡು ಬಂತು. ಮೃತ ಹಕ್ಕಿಗಳ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದಾಗ ಮೃತಪಟ್ಟ ಹಕ್ಕಿಗಳಲ್ಲಿ ಎಚ್5ಎನ್8 ವೈರಾಣು ಇರುವುದು ದೃಢಪಟ್ಟಿದೆ. ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕಿ ಕಮಲಾ ಕರಿಕಾಳನ್ ಅಧ್ಯಕ್ಷತೆಯಲ್ಲಿ ಮಂಗಳವಾರ ತುರ್ತು ಸಭೆ ನಡೆಸಲಾಯಿತು. ಮತ್ತಷ್ಟು ಹಕ್ಕಿಗಳಿಗೆ ಹರಡುವುದನ್ನು ತಡೆಗಟ್ಟಲು ಮೃಗಾಲಯವನ್ನು ಬಂದ್ ಮಾಡುವುದು ಸೂಕ್ತ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಕಾರಂಜಿ ಕೆರೆ ಸೋಂಕು ಮುಕ್ತ
ಇನ್ನು ಮೃಗಾಲಯದ ಆಡಳಿತಕ್ಕೆ ಒಳಪಟ್ಟಿರುವ ಪಕ್ಕದ ಕಾರಂಜಿಕೆರೆಯಲ್ಲಿಯೂ ಪರೀಕ್ಷೆ ನಡೆಸಲಾಗಿದ್ದು, ಇಲ್ಲಿ ಹಕ್ಕಿಗಳಿಗೆ ಯಾವುದೇ ರೀತಿಯ ಸೋಂಕು ಕಾಣಿಸಿಕೊಂಡಿಲ್ಲ. ಹೀಗಾಗಿ ಕಾರಂಜಿಕೆರೆ ಎಂದಿನಂತೆ ಪ್ರವಾಸಿಗರಿಗೆ ಮುಕ್ತವಾಗಿರಲಿದೆ ಎಂದು ಆಡಳಿತ ಸಿಬ್ಬಂದಿಗಳು ತಿಳಿಸಿದ್ದಾರೆ. ಮೃಗಾಲಯದಲ್ಲಿ ಡಿಸೆಂಬರ್ 28 ರಂದು 1 ಸ್ಪಾಟ್ ಬಿಲ್ಡ್ ಪೆಲಿಕನ್ ಮತ್ತು 3 ಗ್ರೇಯ್ಲಾಗ್ ಗೂಸ್ ಮೃತಪಟ್ಟಿದ್ದವು.
ಮೈಸೂರು ಮೃಗಾಲಯ ಸುಮಾರ 80 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿದ್ದು, ಪ್ರತೀ ವರ್ಷ 3 ಮಿಲಿಯನ್ ಪ್ರವಾಸಿಗರು ಮೃಗಾಲಯಕ್ಕೆ ಭೇಟಿ ನೀಡುತ್ತಾರೆ. ಪ್ರತಿ ನಿತ್ಯ ಕನಿಷ್ಠ 6 ಸಾವಿರ ಮಂದಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. 125ನೇ ವರ್ಷಾಚರಣೆ ಸಿದ್ಧತೆಯಲ್ಲಿ ತೊಡಗಿರುವ ಸಂದರ್ಭದಲ್ಲಿಯೇ ಮೈಸೂರು ಮೃಗಾಲಯ ಬಂದ್ ಆಗಿರುವುದು ಪ್ರವಾಸಿಗರ ಪಾಲಿಗೆ ನಿರಾಸೆ ಮೂಡಿಸಿದೆ.
ಕೆಲವು ತಿಂಗಳ ಹಿಂದೆ ಇದೇ ಹಕ್ಕಿಜ್ವರ ಭೀತಿ ಹಿನ್ನೆಲೆಯಲ್ಲಿ ದೆಹಲಿ ಮೃಗಾಲಯ ಬಂದ್ ಆಗಿತ್ತು. ಒಡಿಶಾ ಮತ್ತು ಕೇರಳದ ಮೃಗಾಲಯಗಳಲ್ಲೂ ಹಕ್ಕಿ ಜ್ವರ ಸೋಂಕು ಪತ್ತೆಯಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


