ಬೆಂಗಳೂರು ನಗರವಾಸಿಗಳಿಗೆ ಮೇ ತಿಂಗಳವರೆಗೂ ಸಾಕಾಗುವಷ್ಟು ನೀರಿದೆ: ಎಂಬಿ ಪಾಟೀಲ್
ಪ್ರಸಕ್ತ ವರ್ಷದಲ್ಲೂ ರಾಜ್ಯದಲ್ಲಿ ಮಳೆ ಕೊರತೆ ಉಂಟಾಗಿದ್ದು, ಬೇಸಿಗೆ ಹಿನ್ನಲೆಯಲ್ಲಿ ನಗರ ವಾಸಿಗಳಿಗೆ ಆತಂಕ ಶುರುವಾಗಿದೆ. ಈ ಹಿನ್ನಲೆಯಲ್ಲಿ ಭರವಸೆ ನೀಡಿರುವ ನೀರಾವರಿ ಸಚಿವ ಎಂ.ಬಿ. ಪಾಟೀಲ್ ಅವರು...

ಬೆಂಗಳೂರು: ಪ್ರಸಕ್ತ ವರ್ಷದಲ್ಲೂ ರಾಜ್ಯದಲ್ಲಿ ಮಳೆ ಕೊರತೆ ಉಂಟಾಗಿದ್ದು, ಬೇಸಿಗೆ ಹಿನ್ನಲೆಯಲ್ಲಿ ನಗರ ವಾಸಿಗಳಿಗೆ ಆತಂಕ ಶುರುವಾಗಿದೆ. ಈ ಹಿನ್ನಲೆಯಲ್ಲಿ ಭರವಸೆ ನೀಡಿರುವ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರು ಬೆಂಗಳೂರು ನಗರವಾಸಿಗಳ ಕುಡಿಯುವ ನೀರಿಗೆ ಯಾವುದೇ ಕೊರತೆ ಎದುರಾಗುವುದಿಲ್ಲ ಎಂದು ಮಂಗಳವಾರ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಕೃಷ್ಣರಾಜ ಸಾಗರ ಜಲಾಶಯದಲ್ಲಿ ಈಗಾಗಲೇ ನೀರು ತಳಮಟ್ಟಕ್ಕೆ ಇಳಿಯುತ್ತಿದ್ದು, ಅಗತ್ಯಬಿದ್ದರೆ, ಜಲಾಯಶದ ಡೆಡ್ ಸ್ಟೋರೇಜ್ ನೀರಿಗೂ ಕೈಹಾಕಲಾಗುತ್ತದೆ ಎಂದು ಹೇಳಿದ್ದಾರೆ.
ಮೇ ಅಂತ್ಯದವರೆಗೆ ಬೆಂಗಳೂರಿಗೆ ಕೆಆರ್‌ಎಸ್‌ನಿಂದ ನೀರು ಪೂರೈಸಲು ಸುಮಾರು 2ರಿಂದ 3 ಟಿಎಂಸಿ ನೀರಿನ ಕೊರತೆ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಅಳಿದುಳಿದಿರುವ ಡೆಡ್ ಸ್ಟೋರೇಜ್ ನೀರು ಬಳಕೆಗೆ ಅವಕಾಶ ನೀಡುವಂತೆ ಬೆಂಗಳೂರು ಜಲ ಮಂಡಳಿಯು ಜಲ ಸಂಪನ್ಮೂಲ ಇಲಾಖೆಗೆ ಪತ್ರ ಬರೆದು ಪ್ರಸ್ತಾವನೆಯೊಂದನ್ನು ಸಲ್ಲಿಸಿದೆ. ಆದರೆ, ಈ ಕೆಲಸ ಭಾರಿ ವೆಚ್ಚದಾಯಕ. ಜತೆಗೆ, ಜಲಾಶಯಕ್ಕೆ ಹಾನಿ ಮಾಡಬಹುದಾದ ಕಾರಣಕ್ಕೆ ಪ್ರಸ್ತಾವನೆಗೆ ಜಲ ಸಂಪನ್ಮೂಲ ಇಲಾಖೆ ಇನ್ನೂ ಒಪ್ಪಿಗೆ ನೀಡಿಲ್ಲ.
ಬೆಂಗಳೂರು ನಗರವಾಸಿಗಳಿಗೆ ಕುಡಿಯುವ ನೀರಿಗೆ ಕೆಆರ್'ಎಸ್ ಅತ್ಯೆಂತ ಪ್ರಮುಖ ಜಲಾಶಯವಾಗಿದೆ. ಪ್ರಸ್ತುತ ಕೆಆರ್'ಎಸ್ ಮತ್ತು ಕಬಿನಿ ಎರಡೂ ಜಲಾಶಯಗಳಲ್ಲೂ 5.69 ಟಿಎಂಸಿ ನೀರಿದ್ದು, ಮೇ ಅಂತ್ಯದವರೆಗೂ ಈ ನೀರನ್ನು ಬೆಂಗಳೂರು ನಗರವಾಸಿಗಳಿಗೆ ಕುಡಿಯುವ ನೀರನ್ನು ಪೂರೈಸಲಾಗುತ್ತದೆ. ಪ್ರತೀ ತಿಂಗಳೂ ನಗರವಾಸಿಗಳಿಗೆ 1.2 ಟಿಎಂಸಿ ನೀರು ಬೇಕಾಗುತ್ತದೆ.
ಮೇ ಅಂತ್ಯದ ವಾರಗಳಲ್ಲಿ ನೀರಿನ ಸಮಸ್ಯೆ ಎದುರಾಗಬಹುದು. ಅಗತ್ಯಬಿದ್ದರೆ, ಕೆಆರ್'ಎಸ್ ಜಲಾಶಯದ ಡೆಡ್ ಸ್ಟೋರೇಜ್ ವಾಟರ್'ನ್ನು ಬಳಸಿಕೊಳ್ಳಲಾಗುತ್ತದೆ. ಎಂದು ಹೇಳಿದ್ದಾರೆ.
ಕೆಆರ್'ಎಸ್ ನಲ್ಲಿ ನೀರು ಸಂಗ್ರಹ ಕಡಿಮೆ ಇರುವುದರಿಂದ ಲಭ್ಯ ನೀರನ್ನು ಮೇ ತಿಂಗಳ ಅಂತ್ಯದವರೆಗೆ ಪೂರೈಸುವುದು ಕಷ್ಟಸಾಧ್ಯ. ಸದ್ಯದ ಮಾಹಿತಿ ಪ್ರಕಾರ 2 ರಿಂದ ಟಿಎಂಸಿ ನೀರು ಕೊರತೆಯಾಗಲಿದೆ. ಈ ಕೊರತೆ ನಿವಾರಿಸಲು ಡೆಡ್ ಸ್ಟೋರೇಜ್ ನೀರು ಬಳಸಿಕೊಳ್ಳಲು ಅವಕಾಶ ನೀಡುವಂತೆ ಅಗತ್ಯ ಬಿದ್ದರೆ, ಒಪ್ಪಿಗೆ ನೀಡಲಾಗುತ್ತದೆ ಎಂದಿದ್ದಾರೆ.
ಮೇಕೆದಾಟು ಯೋಜನೆ ಕುರಿತಂತೆ ತಮಿಳುನಾಡು ಸರ್ಕಾರಕ್ಕೆ ಮನವೊಲಿಕೆಯ ಯತ್ನಗಳನ್ನು ಮಾಡಲಾಗುತ್ತಿದೆ. ಪ್ರಸ್ತುತ ಬೆಂಗಳೂರು ನಗರದ ಮೂರನೇ ಒಂದು ಭಾಗದಷ್ಟು ಜನರಿಗೆ ಮಾತ್ರ ಕಾವೇರಿ ನೀರು ಪೂರೈಸಲಾಗುತ್ತಿದೆ. ಈ ನಿಟ್ಟಿನಲ್ಲಿ ಮೇಕೆದಾಟು ಯೋಜನೆಯಿಂದ ಬೆಂಗಳೂರು ಮತ್ತು ಸುತ್ತಲಿನ ಪ್ರದೇಶಗಳಲ್ಲಿ 16.1 ಟಿಎಂಸಿ ನೀರು ಬಳಸಿಕೊಳ್ಳಲು ತೀರ್ಮಾನಿಸಿದ್ದು, ಯೋಜನೆ ಪೂರ್ಣಗೊಂಡ ಬಳಿಗ ಬೆಂಗಳೂರು ನೀರಿನ ಸಮಸ್ಯೆ ಬಹುತೇಕ ಬಗೆಹರಿಯಲಿದೆ. ಈ ನಿಟ್ಟಿನಲ್ಲಿ ಮೇಕೆದಾಟು ಯೋಜನೆಗೆ ಜಲ ಮಂಡಳಿಯಿಂದಲೂ ಆರ್ಥಿಕ ನೆರವನ್ನೂ ಪಡೆಯಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದ್ದಾರೆ.
"ಡೆಡ್ ಸ್ಟೋರೇಜ್ ನೀರು ಬಳಸಬೇಕಾದರೆ ಜಲಾಶಯದಿಂದ ನೀರನ್ನು ಪಂಪ್ ಮಾಡಬೇಕಾಗುತ್ತದೆ. ಇದಕ್ಕೆ ಸುಮಾರು 40 ಕೋಟಿ ರೂ. ವೆಚ್ಚವಾಗುತ್ತದೆ. ಜಲಾಶಯದ ಸಂರಕ್ಷಣೆ ದೃಷ್ಟಿಯಿಂದ ಸಾಮಾನ್ಯವಾಗಿ ಡೆಡ್ ಸ್ಟೋರೇಜ್ ನೀರು ಬಳಸುವುದಿಲ್ಲ. ಆದರೆ, ತುರ್ತು ಸಂದರ್ಭದಲ್ಲಿ ಜನರ ಜೀವ ಉಳಿಸಲು ಅನಿವಾರ್ಯವಾಗಿ ಈ ನೀರು ಬಳಸಿಕೊಳ್ಳಬೇಕಾಗುತ್ತದೆ. ಆದರೆ, ಅದರಿಂದ ಜಲಾಶಯಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು,'' ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


