ಹೊಸ ವರ್ಷಾಚರಣೆ: ಮೋಜು, ಪಾರ್ಟಿ ಮಾಡಲು ಹೊರಗೆ ಹೋಗಲು ಮಹಿಳೆಯರಿಗೆ ಆತಂಕ
ಹೊಸ ವರ್ಷಾಚರಣೆಗೆ ಇನ್ನು ಒಂದೇ ದಿನ ಬಾಕಿ. ಬೆಂಗಳೂರು ನಗರದಲ್ಲಿ ಕಳೆದ ವರ್ಷದ ಕಹಿ ಘಟನೆ ಮರುಕಳಿಸದಂತೆ ...

Published On :
ಬೆಂಗಳೂರು: ಹೊಸ ವರ್ಷಾಚರಣೆಗೆ ಇನ್ನು ಒಂದೇ ದಿನ ಬಾಕಿ. ಬೆಂಗಳೂರು ನಗರದಲ್ಲಿ ಕಳೆದ ವರ್ಷದ ಕಹಿ ಘಟನೆ ಮರುಕಳಿಸದಂತೆ ಈ ಬಾರಿಗೆ ನಗರ ಪೊಲೀಸ್ ಇಲಾಖೆ ಬಿಗಿ ಕ್ರಮ ಕೈಗೊಂಡಿದ್ದು ಅನೇಕ ಪ್ರದೇಶಗಳಲ್ಲಿ 15,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದೆ. 500ಕ್ಕೂ ಹೆಚ್ಚುವರಿ ಸಿಸಿಟಿವಿ ಕ್ಯಾಮರಾಗಳನ್ನು ನಿಯೋಜಿಸಲಿದೆ. ಶ್ವಾನ ಮತ್ತು ಬಾಂಬ್ ನಿಷ್ಕ್ರಿಯ ದಳವನ್ನು ಸಜ್ಜುಗೊಳಿಸಲಾಗಿದೆ.
ಇಷ್ಟೆಲ್ಲಾ ಭದ್ರತೆ, ಮುನ್ನೆಚ್ಚರಿಕೆಯನ್ನು ನಗರ ಪೊಲೀಸ್ ಇಲಾಖೆ ನೀಡಿದರೂ ಸಹ ನಗರದ ಬಹುತೇಕ ಮಹಿಳೆಯರು ಜನದಟ್ಟಣೆಯಲ್ಲಿ ಹೊರಗೆ ಹೋಗಲು ಬಯಸದೆ ಮನೆಯಲ್ಲಿಯೇ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಜೊತೆ ಪಾರ್ಟಿ ಮಾಡಲು ಬಯಸುತ್ತಾರೆ.
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ನಡೆಸಿದ ಸಮೀಕ್ಷೆಯಲ್ಲಿ ಪ್ರತಿಕ್ರಿಯೆ ನೀಡಿದ 19ರಿಂದ 35 ವರ್ಷದೊಳಗಿನ 50 ಮಂದಿ ಮಹಿಳೆಯರಲ್ಲಿ 34 ಮಂದಿ ಮಹಿಳೆಯರು ತಾವು ಜನದಟ್ಟಣೆಯ ರಸ್ತೆಯಲ್ಲಿ ಪಾರ್ಟಿ ಮಾಡಲು ಬಯಸುವುದಿಲ್ಲ ಎಂದು ಹೇಳಿದರೆ ಇನ್ನು ಕೆಲವರು ತಮ್ಮ ಸ್ನೇಹಿತರು ಬಂದರೆ ಮಾತ್ರ ಹೊರಗೆ ಹೋಗಿ ಪಾರ್ಟಿ ಮಾಡುತ್ತೇವೆ ಎಂದು ಹೇಳಿದ್ದಾರೆ.
ಈ ಬಾರಿ ಮನೆಯಿಂದ ಹೊರಬಂದು ಪಾರ್ಟಿ ಮಾಡಲು ಯುವತಿಯರಿಗೆ ಮತ್ತು ಮಹಿಳೆಯರಿಗೆ ಭದ್ರತೆ ಬಗ್ಗೆ ಆತಂಕವಿದೆ. ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಭದ್ರತೆಯ ಖಾತರಿಯಿಲ್ಲದಿರುವಾಗ ನಮ್ಮಂಥ ಸಾಮಾನ್ಯರಿಗೆ ಇರಲು ಹೇಗೆ ಸಾಧ್ಯ ಎಂದು ಕೇಳುತ್ತಾರೆ 29 ವರ್ಷದ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಯುವತಿ. ಕೆಲವು ವರ್ಷಗಳ ಹಿಂದೆ ಎಂ.ಜಿ.ರಸ್ತೆಯಲ್ಲಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ತಮ್ಮ ಜೊತೆ ಯುವಕನೊಬ್ಬ ಅಸಭ್ಯವಾಗಿ ವರ್ತಿಸಿದ್ದು ಈಗಲೂ ಕೂಡ ಅಲ್ಲಿ ಪರಿಸ್ಥಿತಿ ಬದಲಾಗಿರಬಹುದು ಎಂದು ನನಗನಿಸುತ್ತಿಲ್ಲ ಎನ್ನುತ್ತಾರೆ ಆಕೆ.
ಕೇವಲ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ಮಾತ್ರವಲ್ಲದೆ ಇಂದಿರಾ ನಗರ ಮತ್ತು ಇನ್ನೂ ಕೆಲ ಭಾಗಗಳು ಮಹಿಳೆಯರಿಗೆ ಮತ್ತು ಯುವತಿಯರಿಗೆ ಹೊಸ ವರ್ಷಾ ಮುನ್ನಾದಿನ ಸುರಕ್ಷಿತವಲ್ಲ ಎಂಬುದು ಬಹುತೇಕರ ಅಭಿಪ್ರಾಯ. ಎರಡು ವರ್ಷಗಳ ಹಿಂದೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ 5 ಸ್ಟಾರ್ ಹೊಟೇಲ್ ನಲ್ಲಿ ಕುಟುಂಬ ಸಮೇತರಾಗಿ ಪಾರ್ಟಿ ಮುಗಿಸಿಕೊಂಡು ಮನೆಗೆ ಹೋಗಲು ಕ್ಯಾಬ್ ಗಾಗಿ ಕಾಯುತ್ತಿದ್ದೆ. ಆಗ ಕೆಲ ಪುರುಷರು ನನ್ನ ಬಳಿ ಆಗಮಿಸಿ ಅಸಭ್ಯ ಮಾತುಗಳನ್ನು ಆಡಲು ಆರಂಭಿಸಿದರು ಎಂದು ಸೋಫಿಯಾ ಎಂಬ ಯುವತಿ ಹೇಳುತ್ತಾರೆ.
ಈ ಬಾರಿ ಪಬ್, ಬಾರ್ ಅಂಡ್ ರೆಸ್ಟೊರೆಂಟ್ ಗಳಲ್ಲಿ ಸಹ ಭದ್ರತೆಯನ್ನು ಹೆಚ್ಚಿಸಲಾಗಿದೆ. ಹೆಚ್ಚಿನ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


