ಇಂದಿರಾ ಕ್ಯಾಂಟೀನ್ ನಿರ್ಮಾಣದ ಒತ್ತಡ: ಚರಂಡಿ ನಿರ್ವಹಣೆ ಕೆಲಸಕ್ಕೆ ಕುತ್ತು?
ರಾಜ್ಯ ಕಾಂಗ್ರೆಸ್ ಸರ್ಕಾರದ ಇಂದಿರಾ ಕ್ಯಾಂಟೀನ್ ಯೋಜನೆ ನಿನ್ನೆ ಅದ್ದೂರಿಯಾಗಿ....

Published On :
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಇಂದಿರಾ ಕ್ಯಾಂಟೀನ್ ಯೋಜನೆ ನಿನ್ನೆ ಅದ್ದೂರಿಯಾಗಿ ಚಾಲನೆಗೊಂಡಿತಾದರೂ ಅದರ ಸುತ್ತ ವಿವಾದ ಸುತ್ತಿಗೊಂಡಿದೆ.
ಬೆಂಗಳೂರು ನಗರದ ಅನೇಕ ಕಡೆ ಮೊನ್ನೆ ಸೋಮವಾರ ಮತ್ತು ಮಂಗಳವಾರ ರಾತ್ರಿ ಧಾರಾಕಾರ ಮಳೆ ಸುರಿದು ಚರಂಡಿಯಲ್ಲೆಲ್ಲಾ ನೀರು ಹರಿದು ಹಲವು ಮನೆಗಳಿಗೂ ನೀರು ನುಗ್ಗಿತ್ತು. ಇದಕ್ಕೆಲ್ಲಾ ಇಂದಿರಾ ಕ್ಯಾಂಟೀನ್ ಕಾರಣ ಎಂಬ ಆರೋಪ ಕೇಳಿಬರುತ್ತಿದೆ. ಆಗಸ್ಟ್ 15ರೊಳಗೆ ಇಂದಿರಾ ಕ್ಯಾಂಟೀನ್ ಸಿದ್ದವಾಗಬೇಕೆಂಬ ರಾಜ್ಯ ಸರ್ಕಾರದ ಒತ್ತಡದಿಂದಾಗಿ ಬಿಬಿಎಂಪಿ ಅಧಿಕಾರಿಗಳ ಗಮನ ಈ ವರ್ಷ ಮಳೆಗಾಲದಲ್ಲಿ ಚರಂಡಿ ನಿರ್ವಹಣೆಯ ಕಾಮಗಾರಿಗೆ ಬದಲಾಗಿ ಇಂದಿರಾ ಕ್ಯಾಂಟೀನ್ ನಿರ್ಮಾಣದ ಕಡೆಗೆ ಹರಿದಿತ್ತು. ಚರಂಡಿಯನ್ನು ನಿರ್ವಹಣೆ ಮಾಡುವ ಬದಲು ಇಂದಿರಾ ಕ್ಯಾಂಟೀನ್ ನ್ನು ನಿರ್ಮಿಸಬೇಕಾಗಿ ಬಂತು.
ಬಿಬಿಎಂಪಿಯ ಎಂಜಿನಿಯರಿಂಗ್ ವಿಭಾಗದ ಹಿರಿಯ ಅಧಿಕಾರಿಗಳು ಹೇಳುವ ಪ್ರಕಾರ, ಸರ್ಕಾರ ಹೊರಡಿಸಿದ ನಿರ್ಧಾರ ಪ್ರಕಾರ ಈ ಮಳೆಗಾಲದಲ್ಲಿ ಚರಂಡಿ ನಿರ್ವಹಣೆಗೆ ಮೊದಲು ಇಂದಿರಾ ಕ್ಯಾಂಟೀನ್ ನಿರ್ಮಾಣವಾಗಬೇಕಾಗಿತ್ತು ಎನ್ನುತ್ತಾರೆ. ಇನ್ನು ಪಾಲಿಕೆ ಮೇಯರ್ ಕೂಡ ಈ ಯೋಜನೆ ಬಗ್ಗೆ ಆಕ್ಷೇಪ ಎತ್ತದಿದ್ದರೂ ಮಳೆಯ ಅನಾಹುತಕ್ಕೆ ಇದು ಕಾರಣ ಎನ್ನುವುದನ್ನು ಒಪ್ಪಿಕೊಳ್ಳುತ್ತಾರೆ.
ಕಳೆದ ಎರಡು ತಿಂಗಳಿನಿಂದ ಬಿಬಿಎಂಪಿಯ ಇಡೀ ಕಾಮಗಾರಿ ಇಲಾಖೆ ಇಂದಿರಾ ಕ್ಯಾಂಟೀನ್ ಗೆ ಸ್ಥಳ ಗುರುತಿಸುವುದು, ಮತ್ತು ಕಟ್ಟಡ ನಿರ್ಮಾಣದಲ್ಲಿ ತೊಡಗಿತ್ತು. ತಮಿಳು ನಾಡಿನ ಕೃಷ್ಣಗಿರಿಗೆ ಭೇಟಿ ನೀಡಿ ಅಲ್ಲಿ ಅಮ್ಮಾ ಕ್ಯಾಂಟೀನ್ ನಿರ್ಮಿಸಿದ ರೀತಿಯಲ್ಲಿ ಇಲ್ಲಿ ಕೂಡ ನಿರ್ಮಾಣ ಮಾಡಲಾಗಿದೆ ಎಂದು ಎಂಜಿನಿಯರಿಂಗ್ ವಿಭಾಗದ ಅಧಿಕಾರಿಯೊಬ್ಬರು ಹೇಳುತ್ತಾರೆ.
ನಿನ್ನೆ ಬೆಂಗಳೂರು ನಗರದಲ್ಲಿ 101 ಇಂದಿರಾ ಕ್ಯಾಂಟೀನ್ ಉದ್ಘಾಟನೆಗೊಂಡಿದ್ದು, ಉಳಿದ 97 ಕ್ಯಾಂಟೀನ್ ಗಳು ಅಕ್ಟೋಬರ್ 2ರಂದು ಉದ್ಘಾಟನೆಯಾಗಲಿವೆ.
ಭಾರೀ ಮಳೆ ಸುರಿಯುವ ಮತ್ತು ಅದರಿಂದ ಉಂಟಾಗಬಹುದಾದ ಅನಾಹುತವನ್ನು ಮೊದಲೇ ನಿರ್ಧರಿಸುವುದು ಅಸಾಧ್ಯವಾದರೂ ಕೂಡ ಚರಂಡಿ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡುವುದು, ತುರ್ತು ಪರಿಸ್ಥಿತಿಗೆ ತಂಡವನ್ನು ಕಳುಹಿಸುವುದು ಎಂಜಿನಿಯರ್ ವಿಭಾಗದ ಕರ್ತವ್ಯವಾಗಿದೆ. ಆದರೆ ಈ ಬಾರಿ ಅಧಿಕಾರಿಗಳು ಕ್ಯಾಂಟೀನ್ ಆರಂಭಿಸುವ ಒತ್ತಡದಲ್ಲಿದ್ದರಿಂದ ನೆರೆ ಪ್ರವಾಹದ ದೂರುಗಳಿಗೆ ಸ್ಪಂದಿಸಲು ಸಹ ಸಾಧ್ಯವಾಗುತ್ತಿರಲಿಲ್ಲ ಎನ್ನುತ್ತಾರೆ ಬಿಬಿಎಂಪಿ ಮೂಲಗಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
BBMPಬಿಬಿಎಂಪಿIndira Canteenಇಂದಿರಾ ಕ್ಯಾಂಟೀನ್Engineering departmentStorm water managementಎಂಜಿನಿಯರಿಂಗ್ ವಿಭಾಗಚರಂಡಿ ನೀರು ನಿರ್ವಹಣೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


