ಬೆಂಗಳೂರು: ನಾಪತ್ತೆಯಾಗಿದ್ದ ಬಾಲಕಿ ಶವವಾಗಿ ಪತ್ತೆ; ಅತ್ಯಾಚಾರ, ಕೊಲೆ ಪ್ರಕರಣ ದಾಖಲು!
ಕಳೆದ ಐದು ದಿನಗಳ ಹಿಂದೆ ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದ 6 ವರ್ಷದ ಬಾಲಕಿ ಹರ್ಷಿತಾಳ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದು, ಗಿರಿನಗರ ಪೊಲೀಸರು ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು: ಕಳೆದ ಐದು ದಿನಗಳ ಹಿಂದೆ ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದ 6 ವರ್ಷದ ಬಾಲಕಿ ಹರ್ಷಿತಾಳ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದು, ಗಿರಿನಗರ ಪೊಲೀಸರು ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಕುರಿತು ಪೊಲೀಸರು ಶಂಕಿಸಿದ್ದು, ಇದೇ ಪ್ರಕರಣಗಳ ಅಡಿಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೃತ ಬಾಲಕಿ ಗಿರಿನಗರ ಹತ್ತಿರದ ವೀರಭದ್ರನಗರ ಈರಣ್ಣಗುಡ್ಡ ನಿವಾಸಿ ಶಿವಕುಮಾರ್ ಮತ್ತು ಸರಸ್ವತಿ ದಂಪತಿ ಪುತ್ರಿಯಾಗಿದ್ದಾಳೆ. ಕಲಬುರಗಿ ಮೂಲದ ಶಿವಕುಮಾರ್ ದಂಪತಿ ಹೋಟೆಲ್ನಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಕಳೆದ ಏಪ್ರಿಲ್ 20ರಂದು ಮನೆ ಮುಂದೆ ಆಟವಾಡುತ್ತಿದ್ದಾಗ ಬಾಲಕಿ ನಾಪತ್ತೆಯಾಗಿದ್ದಳು. ಈ ಬಗ್ಗೆ ಪಾಲಕರು ಗಿರಿನಗರ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಭಾನುವಾರ ರಾತ್ರಿ 9 ಗಂಟೆಯಲ್ಲಿ ಪಕ್ಕದ ಮನೆಯ ಅನಿಲ್ ಎಂಬಾತನ ಮನೆಯಲ್ಲಿ ಬಾಲಕಿ ಶವ ಪತ್ತೆಯಾಗಿದೆ.ಇದೀಗ ಅನಿಲ್ ನಾಪತ್ತೆಯಾಗಿದ್ದು, ಬಂಧನಕ್ಕೆ ವಿಶೇಷ ತಂಡ ಬಲೆ ಬೀಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇವರ ಪಕ್ಕದ್ಮನೆಯಲ್ಲಿ ಕಲಬುರಗಿಯವನೇ ಆದ ಅನಿಲ್ ತನ್ನ ಕುಟುಂಬದೊಂದಿಗೆ ವಾಸವಾಗಿದ್ದಾನೆ. ಕೂಲಿ ಕೆಲಸ ಮಾಡುತ್ತಿದ್ದ. ಎರಡೂ ಮನೆಯ ಮಕ್ಕಳು ಒಟ್ಟಿಗೆ ಆಟವಾಡುತ್ತಿದ್ದರು. ಅನಿಲ್ ಪತ್ನಿ ತನ್ನ ಮಕ್ಕಳೊಂದಿಗೆ 15 ದಿನಗಳ ಹಿಂದೆ ತವರಿಗೆ ಹೋಗಿದ್ದರು. ಅನಿಲ್ ಒಬ್ಬನೇ ಇದ್ದ. ಗುರುವಾರ ಮಧ್ಯಾಹ್ನ 2 ಗಂಟೆಯಲ್ಲಿ ಹರ್ಷಿತಾ ನಾಪತ್ತೆಯಾಗಿದ್ದಳು. ಸಂಜೆ 4 ಗಂಟೆಗೆ ಅನಿಲ್ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದ.
ಅನಿಲ್ ಮನೆಯಿಂದ ಕೊಳೆತ ದುರ್ವಾಸನೆ!
ಭಾನುವಾರ ವಠಾರದ ಸ್ನೇಹಿತನಿಗೆ ಕರೆ ಮಾಡಿದ ಅನಿಲ್, ಮನೆಯಲ್ಲಿ ಲೈಟ್ ಆನ್ ಆಗಿದ್ದು, ಆಫ್ ಮಾಡಲು ಹೇಳಿದ್ದ. ಸ್ನೇಹಿತ ಕಿಟಕಿ ಬಾಗಿಲು ತೆಗೆದು ಕಡ್ಡಿಯ ಮೂಲಕ ಲೈಟ್ ಆಫ್ ಮಾಡಿದ್ದ. ಕಿಟಕಿ ತೆಗೆದಾಗ ದುರ್ವಾಸನೆ ಬರುತ್ತಿತ್ತು. ಹೆಗ್ಗಣ ಸತ್ತಿರಬೇಕೆಂದು ಎಲ್ಲ ಕಿಟಕಿಗಳನ್ನು ತೆಗೆದಿದ್ದರು. ದುರ್ವಾಸನೆ ಹೆಚ್ಚಾದಾಗ ಅನುಮಾನ ಬಂದು ಮತ್ತೆ ಲೈಟ್ ಹಾಕಿ ನೋಡಿದಾಗ ಅರೆನಗ್ನ ಸ್ಥಿತಿಯಲ್ಲಿ ಬಾಲಕಿ ಶವ ಪತ್ತೆಯಾಯಿತು. ಬಾಗಿಲು ಒಡೆದು ಮನೆ ಪ್ರವೇಶಿಸಿದ ಪೊಲೀಸರು ಪರಿಶೀಲಿಸಿದಾಗ ಅದು ಹರ್ಷಿತಾ ಶವ ಎಂಬುದು ಖಚಿತಪಟ್ಟಿತು. ಆರೋಪಿ ಮೊಬೈಲ್ ಕರೆ ಪರಿಶೀಲಿಸಿದಾಗ ಕಲುಬುರಗಿ ನೆಟ್ ವರ್ಕ್ ತೋರಿಸಿದೆ. ಆತನನ್ನು ಬಂಧಿಸಲು ವಿಶೇಷ ತಂಡ ಅಲ್ಲಿಗೆ ತೆರಳಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


