ರಾಜ್ಯ

ರಾಜ್ಯದ ಅನ್ನಭಾಗ್ಯ ಅಕ್ಕಿ ಆಂಧ್ರದ ಹೊಟೇಲ್ ಗಳಲ್ಲಿ ಇಡ್ಲಿ, ದೋಸೆಗೆ ಬಳಕೆ!

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಅನ್ನಭಾಗ್ಯ ಯೋಜನೆಯ ಅಕ್ಕಿ ಫಲಾನುಭವಿಗಳಿಗೆ ತಲುಪದೇ ಪಕ್ಕದ ರಾಜ್ಯವಾದ ಆಂಧ್ರ ಪ್ರದೇಶದ ಹೊಟೇಲ್ ಗಳಲ್ಲಿ ಇಡ್ಲಿ, ...

ರಾಜ್ಯದ ಅನ್ನಭಾಗ್ಯ ಅಕ್ಕಿ ಆಂಧ್ರದ ಹೊಟೇಲ್ ಗಳಲ್ಲಿ ಇಡ್ಲಿ, ದೋಸೆಗೆ ಬಳಕೆ!
ಅನ್ನ ಭಾಗ್ಯ
Published On :
ಬಳ್ಳಾರಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಅನ್ನಭಾಗ್ಯ ಯೋಜನೆಯ ಅಕ್ಕಿ ಫಲಾನುಭವಿಗಳಿಗೆ ತಲುಪದೇ ಪಕ್ಕದ ರಾಜ್ಯವಾದ ಆಂಧ್ರ ಪ್ರದೇಶದ ಹೊಟೇಲ್ ಗಳಲ್ಲಿ ಇಡ್ಲಿ, ದೋಸೆಗೆ ಬಳಕೆಯಾಗುತ್ತಿದೆ.
ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರ ಮನೆಯ ಪ್ರತಿಯೊಬ್ಬ ಸದಸ್ಯನಿಗೆ ತಲಾ 7ಕೆಜಿ ಅಕ್ಕಿ ವಿತರಿಸುತ್ತಿದೆ. ರಾಜ್ಯದ ಯಾವೊಬ್ಬ ವ್ಯಕ್ತಿಯು ಹಸಿದ ಹೊಟ್ಟೆಯಲ್ಲಿ ಮಲಗಬಾರದು ಎಂಬ ಉದ್ದೇಶದಿಂದ ಸಿಎಂ ಸಿದ್ದರಾಮಯ್ಯ ಈ ಯೋಜನೆ ಜಾರಿಗೆ ತಂದಿದ್ದಾರೆ.
ರಾಜ್ಯದ ಕೋಟ್ಯಂತರ ಜನ ಈ ಯೋಜನೆಯ ಉಪಯೋಗ ಪಡೆಯುತ್ತಿದ್ದಾರೆ. ಆದರೆ ಬಳ್ಳಾರಿ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಅನ್ನಭಾಗ್ಯ ಅಕ್ಕಿಯ ದುರುಪಯೋಗವಾಗುತ್ತಿದೆ. ಪಡಿತರ ಧಾನ್ಯ ವಿತರಿಸುವವರಿಗೆ ಹಣ ನೀಡಿ ಅಕ್ಕಿಯನ್ನು ಕೆಲವರು ಖರೀದಿಸುತ್ತಿದ್ದಾರೆ, ಮತ್ತೆ ಕೆಲವರು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ನೀಡುವ ಅಕ್ಕಿಯನ್ನು ತಾವೇ ಪಡೆದುಕೊಳ್ಳುತ್ತಿದ್ದಾರೆ.
ಬಿಪಿಎಲ್ ಕಾರ್ಡ್ ನವರು ಪಡೆಯುವ ಅಕ್ಕಿಯನ್ನು ಖರೀದಿಸಿರುವ ಅಂಗಡಿ ಮಾಲೀಕರು ಆ ಅಕ್ಕಿಯನ್ನು ಉತ್ತಮ ಬೆಲೆಗೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಗೋದಾಮಿನಲ್ಲಿ ಸಂಗ್ರಹಿಸಲ್ಪಟ್ಟ ಅನ್ನ ಭಾಗ್ಯ ಅಕ್ಕಿಯನ್ನು ಮಧ್ಯವರ್ತಿಗಳ ಮೂಲಕ ಆಂಧ್ರ ಪ್ರದೇಶಕ್ಕೆ  ಮಾರಾಟ ಮಾಡಲಾಗುತ್ತಿದೆ.
ಬಿಪಿಎಲ್ ಕಾರ್ಡ್ ನವರಿಗೆ ನೀಡುವ ಅಕ್ಕಿಯನ್ನು 6 ರಿಂದ 10 ರು ನೀಡಿ ಖರೀದಿಸುವ ಕೆಲ ಮಹಿಳೆಯರು, ಮಧ್ಯವರ್ತಿಗಳ ಮೂಲಕ ಆ ಅಕ್ಕಿಯನ್ನು ಮಂಡಕ್ಕಿ ಭಟ್ಟಿ ಅಥವಾ ಅಕ್ಕಿ ಕಾರ್ಖಾನೆಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆ. 
ಕಳೆದ ಕೆಲವು ದಿನಗಳಿಂದ ಈ ರೀತಿಯ ಹಲವು ದೂರುಗಳು ಕೇಳಿ ಬಂದಿವೆ. ಮಾರ್ಚ್ 8 ರಂದು ಬಳ್ಳಾರಿಯ ಹೊನ್ನಳ್ಳಿ ಎಂಬ ಗ್ರಾಮದಲ್ಲಿ  ದಾಳಿ ಮಾಡಿದ ಪೊಲೀಸರು ಸುಮಾರು 4 ಲಕ್ಷ ರು ಬೆಲೆಯ 252 ಕ್ವಿಂಟಾಲ್ ಅಕ್ಕಿ ಮತ್ತು 9.5 ಕ್ವಿಂಟಾಲ್ ಗೋದಿ ಸೇರಿದಂತೆ ಮತ್ತಿತರ ಧಾನ್ಯಗಳನ್ನು ಸೀಜ್ ಮಾಡಿದ್ದರು. 
ಒಟ್ಟು 7 ಲಕ್ಷ ರು ಮೌಲ್ಯದ ಧಾನ್ಯಗಳನ್ನು ಸೀಜ್ ಮಾಡಿದ್ದ ಪೊಲೀಸರು 9 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ಮೂವರು ಅಂಗಡಿ ಮಾಲೀಕರ ಪರವಾನಗಿ ರದ್ದುಗೊಳಿಸಲಾಗಿದೆ.
ಅಕ್ಕಿಯನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಎಪಿಎಂಸಿ ಪೊಲೀಸರು ಇತ್ತೀಚೆಗೆ ಮೂವರನ್ನು ಬಂಧಿಸಿದ್ದರು, ಅಕ್ರಮ ಅಕ್ಕಿ ಸಾಗಣೆ  ಗಮನಕ್ಕೆ ಬಂದರೆ ಆ ಬಗ್ಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ರಾಮ್ ಪ್ರಶಾಂತ್ ಮನೋಹರ್ ಮನವಿ ಮಾಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.