ಕಾವೇರಿ ಕುರಿತು ಸುಪ್ರೀಂ ಆದೇಶ: ಮಂಡ್ಯ, ಮೈಸೂರಿನಲ್ಲಿ ತಾರಕ್ಕೇರಿದ ಪ್ರತಿಭಟನೆ
ತಮಿಳುನಾಡಿಗೆ ಮತ್ತೆ ನೀರು ಬಿಡುಗಡೆ ಮಾಡುವಂತೆ ಸುಪ್ರೀಂ ನೀಡಿರುವ ಆದೇಶದ ವಿರುದ್ಧ ಮಂಡ್ಯ ಮತ್ತು ಮೈಸೂರಿನಲ್ಲಿ ಮಂಗಳವಾರ ಪ್ರತಿಭಟನೆ ತಾರಕ್ಕೇರಿತ್ತು...

ಮೈಸೂರು: ತಮಿಳುನಾಡಿಗೆ ಮತ್ತೆ ನೀರು ಬಿಡುಗಡೆ ಮಾಡುವಂತೆ ಸುಪ್ರೀಂ ನೀಡಿರುವ ಆದೇಶದ ವಿರುದ್ಧ ಮಂಡ್ಯ ಮತ್ತು ಮೈಸೂರಿನಲ್ಲಿ ಮಂಗಳವಾರ ಪ್ರತಿಭಟನೆ ತಾರಕ್ಕೇರಿತ್ತು.
100ಕ್ಕೂ ಹೆಚ್ಚು ರೈತರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಲು ಆರಂಭಿಸಿದ್ದರು. ವಿಶ್ವೇಶ್ವರಾಯ ಪ್ರತಿಮೆ ಹಾಗೂ ಮೈಸೂರು-ಬೆಂಗಳೂರು ಹೆದ್ದಾರಿ ಬಳಿ ಕಾವೇರಿ ಹಿತರಕ್ಷಣ ಸಮಿತಿ ಅಧ್ಯಕ್ಷ ಜಿ. ಮಾದೇಗೌಡ ಅವರು ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆ ವೇಳೆ ಜೈಲ್ ಭರೋ ಚಳುವಳಿಗೂ ಕರೆ ನೀಡಲಾಗಿತ್ತು. ಪರಿಣಾಮ ಹೆದ್ದಾರಿಯಲ್ಲಿ ಸಾಕಷ್ಟು ಸಂಚಾರ ದಟ್ಟಣೆಯುಂಟಾಗಿತ್ತು.
ಪ್ರತಿಭಟನೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳಕ್ಕೆ ಬಂದು ಭದ್ರತಾ ಕಾರ್ಯಗಳನ್ನು ಪರಿಶೀಲನೆ ನಡೆಸಿದ್ದರು. ಅಲ್ಲದೆ, ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಮತ್ತಷ್ಟು ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿದರು.
ಸುಪ್ರೀಂ ಆದೇಶ ಕುರಿತಂತೆ ಪ್ರತಿಕ್ರಿಯೆ ನೀಡಿದ ಮಾದೇಗೌಡ ಅವರು, ನೀರು ಬಿಡುಗಡೆ ಮಾಡಿ ಎಂದು ಆದೇಶ ನೀಡುವ ಬದಲು ಮೊದಲು ಸುಪ್ರೀಂ ತಜ್ಞರ ಸಮತಿಯನ್ನು ಕಳುಹಿಸಿ ನೀರಿನ ಮಟ್ಟವನ್ನು ಪರಿಶೀಲನೆ ನಡೆಸಬೇಕಿದೆ ಎಂದು ಹೇಳಿದ್ದಾರೆ.
ನೀರೇ ಇಲ್ಲದಿದ್ದರೆ ಜಲಮಂಡಳಿ ಏನು ಮಾಡುತ್ತಿದೆ? ಜಲಮಂಡಳಿಯೇ ನೀರುನ್ನು ಸೃಷ್ಟಿ ಮಾಡುತ್ತದೆಯೇ? ನೀರಿನ ಅಭಾವದಿಂದಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ರೈತರಿಗೆ ಪರಿಹಾರವನ್ನು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಮೈಸೂರು ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬುರು ಶಾಂತಕುಮಾರ್ ಮಾತನಾಡಿ, ಸುಪ್ರೀಂ ಆದೇಶ ಮರಣ ಸೂಚಕವಾಗಿದ್ದು, ಈ ರೀತಿಯ ಆದೇಶವನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕಿದೆ ಎಂದು ಹೇಳಿದ್ದಾರೆ.
ಕಾವೇರಿ ಆದೇಶ ಕುರಿತಂತೆ ಇಂದು ನಡೆಯಲಿರುವ ಸಚಿವ ಸಂಪುಟದಲ್ಲಿ ನಾಯಕರು ಅಂತಿಮ ನಿರ್ಧಾರವನ್ನು ಕೈಗೊಳ್ಳಲಿದ್ದು, ಎಲ್ಲರ ಚಿತ್ತ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರತ್ತ ಹರಿದಿದೆ. ಇದರಂತೆ ಕನ್ನಡ ಪರ ಸಂಘಟನೆಗಳು ಕೂಡ ಸಚಿವ ಸಂಪುಟದ ನಿರ್ಧಾರಕ್ಕೆ ಕಾದು ಕುಳಿತಿದ್ದು, ಸಂಪುಟ ನಿರ್ಧಾರದ ಬಳಿಕ ಮುಂದಿನ ನಿರ್ಧಾರಗಳನ್ನು ಕೈಗೊಳ್ಳಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


