ರಾಜ್ಯ

ಬೆಂಗಳೂರಿನಲ್ಲಿ ಈ ವರ್ಷ ಕಡಿಮೆಯಾಗಿರುವ ಪಟಾಕಿ ಸಪ್ಪಳ

ದೀಪಾವಳಿ ಹಬ್ಬ ಮತ್ತೆ ಬಂದಿದೆ. ಆದರೆ ಈ ಬಾರಿ ಬೆಂಗಳೂರು ನಗರದಲ್ಲಿ ಪಟಾಕಿ ಸದ್ದು ಅಷ್ಟೊಂದು ಜೋರಾಗಿ ಕೇಳಿಬರುತ್ತಿಲ್ಲ...

ಬೆಂಗಳೂರಿನಲ್ಲಿ ಈ ವರ್ಷ ಕಡಿಮೆಯಾಗಿರುವ ಪಟಾಕಿ ಸಪ್ಪಳ
ಬೆಂಗಳೂರಿನ ಪಟಾಕಿ ಮಳಿಗೆಯೊಂದರಲ್ಲಿ ಗ್ರಾಹಕರು
Published On :
ಬೆಂಗಳೂರು: ದೀಪಾವಳಿ ಹಬ್ಬ ಮತ್ತೆ ಬಂದಿದೆ. ಆದರೆ ಈ ಬಾರಿ ಬೆಂಗಳೂರು ನಗರದಲ್ಲಿ ಪಟಾಕಿ ಸದ್ದು ಅಷ್ಟೊಂದು ಜೋರಾಗಿ ಕೇಳಿಬರುತ್ತಿಲ್ಲ. ಇತ್ತೀಚಿನ ಕಾವೇರಿ ಪ್ರತಿಭಟನೆ, ಬಿಟ್ಟು ಬಿಟ್ಟು ಬರುತ್ತಿರುವ ಮಳೆ, ವಾಯುಮಾಲಿನ್ಯ ಮತ್ತು ಶಬ್ದ ಮಾಲಿನ್ಯದ ಬಗ್ಗೆ ಜನರಲ್ಲಿ ಜಾಗೃತಿಯಿಂದಾಗಿ ಪಟಾಕಿ ಖರೀದಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಅಲ್ಲದೆ ಈ ವರ್ಷ ತಾವು ಕೇಳಿದಷ್ಟು ತಮಿಳುನಾಡಿನಿಂದಲೂ ಪಟಾಕಿ ಬಂದಿಲ್ಲ ಎನ್ನುತ್ತಾರೆ ಮಾರಾಟಗಾರರು.
ಗಿರೀಶ್ ಆರ್ ಎಂಬುವವರು ಕಳೆದ 20 ವರ್ಷಗಳಿಂದ ಬೆಂಗಳೂರಿನಲ್ಲಿ ಪಟಾಕಿ ಮಾರಾಟ ಮಾಡುತ್ತಿದ್ದು ಬೇಗೂರು ರಸ್ತೆಯ ಬೊಮ್ಮನಹಳ್ಳಿಯಲ್ಲಿಯಲ್ಲಿ ಶ್ರೀ ಏಕದಂತ ಪಟಾಕಿ ಏಜೆನ್ಸಿ ನಡೆಸುತ್ತಿದ್ದಾರೆ. ಅವರು ಹೀಗನ್ನುತ್ತಾರೆ. '' ಈ ವರ್ಷ ಶೇಕಡಾ 50ರಷ್ಟು ಪಟಾಕಿ ಮಾರಾಟ ಕುಸಿದಿದೆ. ಇದಕ್ಕೆ ಕಾರಣ ಹಲವಾರು ಇರಬಹುದು. ಮೊದಲಿಗೆ ದೀಪಾವಳಿಯ ದಿನಾಂಕ, ಈ ವರ್ಷ ತಿಂಗಳ ಕೊನೆಗೆ ದೀಪಾವಳಿ ಹಬ್ಬ ಬಂದಿರುವುದರಿಂದ ಹಲವರ ಬಳಿ ಹಣವಿಲ್ಲದೆ ಪಟಾಕಿ ಖರೀದಿಸಿಲ್ಲದಿರಬಹುದು. ಇನ್ನೊಂದು ನಾವು ಕೇಳಿದಷ್ಟು ಪಟಾಕಿ ಈ ವರ್ಷ ಪೂರೈಕೆಯಾಗಿಲ್ಲ. ಕಾವೇರಿ ಪ್ರತಿಭಟನೆಯ ನಂತರ ತಮಿಳುನಾಡಿನಿಂದ ಪಟಾಕಿಯನ್ನು ಸಾಗಾಟ ಮಾಡಲು ಸಾಧ್ಯವಾಗುತ್ತಿಲ್ಲವಂತೆ. ಬೇಡಿಕೆ ಮತ್ತು ಪೂರೈಕೆಯಲ್ಲಿ ಶೇಕಡಾ 15ರಷ್ಟು ವ್ಯತ್ಯಾಸವಿದೆ. ತಮಿಳುನಾಡಿನಲ್ಲಿ ಮಳೆ ಕೂಡ ಪಟಾಕಿ ಮಾರಾಟ ಮತ್ತು ಜನರು ಖರೀದಿಸುವುದರ ಮೇಲೆ ಪರಿಣಾಮ ಬೀರಿದೆ ಎನ್ನುತ್ತಾರೆ.
ಸಾಮಾನ್ಯವಾಗಿ ಪ್ರತಿವರ್ಷ ದೀಪಾವಳಿ ಹಬ್ಬಕ್ಕೆ 4-5 ದಿನ ಮುಂಚೆ ಶೇಕಡಾ 50ರಿಂದ 60ರಷ್ಟು ಪಟಾಕಿಗಳು ಮಾರಾಟವಾಗುತ್ತವೆ. ಆದರೆ ಈ ವರ್ಷ ಶೇಕಡಾ 85ರಷ್ಟು ಪಟಾಕಿ ಸಂಗ್ರಹಗಳು ಮಾರಾಟವಾಗದೆ ಇನ್ನೂ ಹಾಗೆಯೇ ಉಳಿದಿವೆ. ಕಳೆದ ವರ್ಷ ಮಳೆ ಬಂದಿದ್ದರೂ ಕೂಡ ಉತ್ತಮ ಮಾರಾಟವಾಗಿತ್ತು. ಹಬ್ಬಕ್ಕೆ ಇನ್ನು ಎರಡು ದಿನ ಬಾಕಿ ಉಳಿದಿದೆಯಷ್ಟೆ. ಪಟಾಕಿಗಳು ಖಾಲಿಯಾಗದಿದ್ದರೆ  ನಮಗೆ ನಷ್ಟವಾಗುತ್ತದೆ ಎನ್ನುತ್ತಾರೆ ಗಿರೀಶ್.
ಚೀನಾದ ಪಟಾಕಿಗಳಿಗೆ ನಿಷೇಧ:ತಮಿಳುನಾಡು ಪಟಾಕಿ ತಯಾರಕರ ಸಂಘದ ಅಧ್ಯಕ್ಷ ಎ.ಅಸೈತಂಬಿ ಹೀಗೆ ಹೇಳುತ್ತಾರೆ.'' ಇಂದಿಗೂ ಶಿವಕಾಶಿಯಲ್ಲಿರುವ ನಮ್ಮ ಪಟಾಕಿ ತಯಾರಿಕೆ ಕಾರ್ಖಾನೆಯಲ್ಲಿ ಸುಮಾರು ಎರಡೂವರೆ ಸಾವಿರ ಕೋಟಿ ರೂಪಾಯಿ ಪಟಾಕಿಗಳು ತಯಾರಾಗುತ್ತವೆ ಮತ್ತು ಚೀನಾದ ಪಟಾಕಿಗಳಿಂದ ನಮ್ಮ ಪಟಾಕಿಗಳ ಮೇಲೆ ಯಾವುದೇ ಹೊಡೆತ ಬಿದ್ದಿಲ್ಲ. ನಮಗೆ ಮಾರ್ಕೆಟ್ ಸಂಪರ್ಕ ಚೆನ್ನಾಗಿದೆ. ಯಾರಾದರೂ ಚೀನಾ ಪಟಾಕಿಗಳನ್ನು ಮಾರಾಟ ಮಾಡುತ್ತಿದ್ದರೆ ನಮಗೆ ಮೊದಲೇ ಗೊತ್ತಾಗುತ್ತದೆ. ಸರ್ಕಾರಿ ಜಾಹಿರಾತುಗಳಿಂದ ಪ್ರಯೋಜನವಾಗಿದೆ. ಆಮದು ಮಾಡಿಕೊಂಡ ಪಟಾಕಿಗಳನ್ನು ಮಾರಾಟ ಮಾಡಿದರೆ ಶಿಕ್ಷೆಯಾಗುತ್ತದೆ ಎಂಬ ಬಗ್ಗೆ ಜನರಲ್ಲಿ ಅರಿವು ಮೂಡಿದೆ.
1992ರಿಂದ ಪಟಾಕಿ ತಯಾರಿಕೆಯಲ್ಲಿ ಪೊಟಾಷಿಯಂ ಕ್ಲೋರೇಟ್ ನಿಷೇಧಿಸಲಾಗಿದೆ. ಅದು ಚೀನಾದ ಪಟಾಕಿಗಳಲ್ಲಿ ಹೇರಳವಾಗಿದೆ. ಹಾಗಾಗಿ ಯಾರೂ ಅದನ್ನು ಖರೀದಿಸುವುದಿಲ್ಲ. ಅಲ್ಲದೆ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಘಟನೆ ವಿದೇಶಿ ಪಟಾಕಿಗಳನ್ನು ಖರೀದಿಸಲು ನಿರ್ಬಂಧ ವಿಧಿಸಿದೆ. ಕೇಂದ್ರ ಸರ್ಕಾರ ಚೀನಾ ಪಟಾಕಿಗಳ ಖರೀದಿಯನ್ನು 2014ರಲ್ಲಿ ನಿಷೇಧಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.