ನೋಟುಗಳ ಠೇವಣಿ, ವಿನಿಮಯ: ಹೈರಾಣಾಗಿ ಹೋಗಿರುವ ಜನತೆ ಮತ್ತು ಬ್ಯಾಂಕ್ ಸಿಬ್ಬಂದಿ
ವಾರಾಂತ್ಯದ ರಜೆಯೂ ಇಲ್ಲದೆ ಬ್ಯಾಂಕ್ ನೌಕರರು ಕಳೆದೊಂದು ವಾರದಿಂದ ಕಚೇರಿ ಕೆಲಸದಲ್ಲಿ ತೊಡಗಿದ್ದಾರೆ...
Published On :
ಬೆಂಗಳೂರು: ವಾರಾಂತ್ಯದ ರಜೆಯೂ ಇಲ್ಲದೆ ಬ್ಯಾಂಕ್ ನೌಕರರು ಕಳೆದೊಂದು ವಾರದಿಂದ ಕಚೇರಿ ಕೆಲಸದಲ್ಲಿ ತೊಡಗಿದ್ದಾರೆ. ಆದರೆ ಜನರಲ್ಲಿನ ಗೊಂದಲ, ಕಾತರತೆ, ಹಣ ಬೇಕೆಂಬ ಆತುರ ಇವೆಲ್ಲವೂ ಬ್ಯಾಂಕ್ ನೌಕರರನ್ನು ನಿಜವಾಗಿಯೂ ಹೈರಾಣಾಗಿಸಿದೆ. ಅಧಿಕ ಕೆಲಸದಿಂದಾಗಿ ಇದೀಗ ನಿವೃತ್ತ ಬ್ಯಾಂಕ್ ನೌಕರರನ್ನು ಕೂಡ ಕರೆದು ಬ್ಯಾಂಕ್ ನೌಕರರ ಕೆಲಸಕ್ಕೆ ಸಹಕಾರ ನೀಡುವಂತೆ ಕೋರಲಾಗಿದ್ದು ಅನೇಕ ಮಂದಿ ನಿವೃತ್ತ ನೌಕರರು ಒಪ್ಪಿಕೊಂಡಿದ್ದಾರೆ. ಸುಲಲಿತವಾಗಿ ಕೆಲಸ ಸಾಗಲು ಬ್ಯಾಂಕುಗಳ ಹಿರಿಯ ಅಧಿಕಾರಿಗಳು ಅನೇಕ ವ್ಯವಸ್ಥೆ ಮಾಡಿದ್ದಾರೆ.
ಬೆಂಗಳೂರಿನ ಎಂ.ಜಿ.ರಸ್ತೆಯ ಕೆನರಾ ಬ್ಯಾಂಕಿನ ವಿಭಾಗೀಯ ವ್ಯವಸ್ಥಾಪಕ ಗಂಗಾಧರ್, ಬ್ಯಾಂಕ್ ಜನರ ಸೇವೆಗಾಗಿ ಇರುವ ಉದ್ಯಮವಲಯ. ಸರ್ಕಾರ ಏನಾದರೊಂದು ಹೊಸತು ಘೋಷಿಸಿದಾಗ ನೌಕರರಾದ ನಾವು ಆ ಪರಿಸ್ಥಿತಿಗೆ ಹೊಂದಿಕೊಳ್ಳಬೇಕಾಗುತ್ತದೆ. ಬ್ಯಾಂಕ್ ನೌಕರರಿಗೆ ಈಗ ವಿಪರತ ಒತ್ತಡವಿದ್ದು ಸಾಕಾಗಿ ಹೋಗಿದೆ. ಆದರೆ ಬ್ಯಾಂಕ್ ಮುಂದೆ ಜನರು ಸಾಲುಗಟ್ಟಲೆ ನಿಂತುಕೊಂಡಿರುವುದು ನೋಡಿ ನಮಗೆ ಕೆಲಸ ಮಾಡಬೇಕೆನ್ನಿಸುತ್ತದೆ ಎನ್ನುತ್ತಾರೆ.
ಕಳೆದೊಂದು ವಾರದಿಂದ ಬ್ಯಾಂಕ್, ಅಂಚೆ ಕಚೇರಿಗೆ ಜನಸಾಗರ ಹರಿದು ಬರುತ್ತಿರುವ ಸಂದರ್ಭದಲ್ಲಿ ನೌಕರರಿಗೆ ತಿಂಡಿ ತಿನ್ನಲು, ಊಟ ಮಾಡಲು ಕೂಡ ಸಮಯ ಸಿಗದ ಪರಿಸ್ಥಿತಿಯುಂಟಾಗಿದೆ. ಕೆಲವು ಬ್ಯಾಂಕುಗಳಲ್ಲಿ ಹಣವನ್ನು ಇಡಲು ಜಾಗವಿಲ್ಲದ ಪರಿಸ್ಥಿತಿಯುಂಟಾಗಿದೆ. ಬೆಂಗಳೂರು ವಿಭಾಗದ ಕೆನರಾ ಬ್ಯಾಂಕ್ ವೊಂದರಲ್ಲಿ ಕಳೆದ ಮೂರು ದಿನಗಳಿಂದ 1,800 ಕೋಟಿ ರೂಪಾಯಿ ಸಂಗ್ರಹಿಸಿದೆ.
ಜನರಿಂದ ಹಣ ಸ್ವೀಕರಿಸುವುದು ಸುಲಭ. ಆದರೆ ಎಕ್ಸ್ ಚೇಂಜ್ ಕೊಡುವುದು, ವಿತ್ ಡ್ರಾವಲ್ ನಮಗೆ ಸವಾಲಾಗಿದೆ ಎನ್ನುತ್ತಾರೆ ಬ್ಯಾಂಕ್ ನೌಕರರು. ಎಕ್ಸ್ ಚೇಂಜ್ ಗೆಂದು ಬರುವ ಜನರ ಸಂಖ್ಯೆ ಹೆಚ್ಚಾಗಿರುತ್ತದೆ. ಕೆಲವೊಮ್ಮೆ ಬೇರೆ, ಬೇರೆ ಬ್ಯಾಂಕುಗಳಿಗೆ ಹೋಗುತ್ತಾರೆ. ನಮ್ಮ ನಿಗದಿತ ಗ್ರಾಹಕರಲ್ಲದವರೂ ಎಕ್ಸ್ ಚೇಂಜ್ ಗೆಂದು ಬರುತ್ತಾರೆ. ಜನರ ಅನುಕೂಲಕ್ಕಾಗಿ ಪೆಂಡಾಲ್ ಹಾಕಿದ್ದೇವೆ ಎನ್ನುತ್ತಾರೆ ಬೆಂಗಳೂರಿನ ಕೆನರಾ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಂ.ಎ.ಚಿನಿವಾರ.
ಎಟಿಎಂಗಳು ಬಂದ್: ಬ್ಯಾಂಕ್ ಮುಂದೆ ಸಾಲುಗಟ್ಟಲೆ ಜನ ಸೇರುವಂತೆ ಬೆಳಗ್ಗೆಯಿಂದಲೇ ಎಟಿಎಂಗಳ ಮುಂದೆ ಸರತಿ ಸಾಲಿನಲ್ಲಿ ಜನ ಹಣಕ್ಕಾಗಿ ನಿಂತಿರುವುದನ್ನು ನೋಡುತ್ತೇವೆ. ಅನೇಕ ಎಟಿಎಂಗಳಲ್ಲಿ ಹಣವಿಲ್ಲದೆ ನೋ ಕ್ಯಾಶ್ ಬೋರ್ಡ್ ಹಾಕಲಾಗಿದೆ. ಎರಡು ಮೂರು ದಿನಗಳಿಂದ ಎಟಿಎಂಗೆ ಬಂದಿದ್ದೇನೆ, ಹಣ ಸಿಗಲಿಲ್ಲ.ಹಾಗಾಗಿ ಇವತ್ತು ಬೆಳಗ್ಗೆ ಬೇಗನೆ ಬಂದಿದ್ದೇನೆ. ಹಣ ಸಿಗಲಿಲ್ಲವಾದರೆ ಮನೆಯಲ್ಲಿ ಸಾಮಾನು ತರಲು ಕೂಡ ಹಣವಿಲ್ಲ ಎನ್ನುತ್ತಾರೆ ಸೀತಾ ಜಿ. ಬೇರೆ ರಾಜ್ಯಗಳಲ್ಲಿನ ವಿದ್ಯಾರ್ಥಿಗಳು ಕೂಡ ಕಳೆದೊಂದು ವಾರದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ನನ್ನ ಅಮ್ಮ ಬ್ಯಾಂಕ್ ಖಾತೆಗೆ ಹಣ ಹಾಕಬೇಕಾಗಿತ್ತು. ಆದರೆ ಜನದಟ್ಟಣೆಯಿಂದಾಗಿ ಅವರಿಗೆ ಹಣ ಹಾಕಲು ಸಾಧ್ಯವಾಗುತ್ತಿಲ್ಲ. ಈಗ ಹಣಕ್ಕಾಗಿ ನನ್ನ ಸ್ನೇಹಿತರನ್ನು ನಂಬುವಂತಾಗಿದೆ ಎಂದು ಅಸ್ಸಾಂನ ವಿದ್ಯಾರ್ಥಿ ಬಿದುತ್ ಸಾಯ್ ಕಿಯಾ ಹೇಳುತ್ತಾರೆ. ಹೆಚ್ ಎಸ್ಆರ್ ಲೇ ಔಟ್ ನ ಮತ್ತೊಬ್ಬ ವಿದ್ಯಾರ್ಥಿ ರಾಜೇಶ್ ಕೃಷ್ಣ, ನಮ್ಮ ಮನೆ ಏರಿಯಾದಲ್ಲಿ ಎಟಿಎಂಗಳು ಕಾರ್ಯನಿರ್ವಹಿಸುತ್ತಿಲ್ಲ ಎನ್ನುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

