ರಾಜ್ಯ

ಮಾಸ್ತಿಗುಡಿ ದುರಂತ: ಮೂರನೇ ಶವಕ್ಕಾಗಿ ಮುಂದುವರೆದ ರಕ್ಷಣಾ ಕಾರ್ಯಾಚರಣೆ?

ಮಾಸ್ತಿಗುಡಿ ಚಿತ್ರದ ಚಿತ್ರೀಕರಣ ದುರಂತ ಪ್ರಕರಣದಲ್ಲಿ ಸಾವನ್ನಪ್ಪಿದ್ದ ಇಬ್ಬರು ನಟರ ಮೃತದೇಹಗಳು ಪತ್ತೆಯಾಗಿದ್ದರೂ ಮೂರನೇ ಶವಕ್ಕಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಸಿಬ್ಬಂದಿ ಶೋಧ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮಾಸ್ತಿಗುಡಿ ದುರಂತ: ಮೂರನೇ ಶವಕ್ಕಾಗಿ ಮುಂದುವರೆದ ರಕ್ಷಣಾ ಕಾರ್ಯಾಚರಣೆ?
ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಶೋಧ ಕಾರ್ಯ
Published On :

ಬೆಂಗಳೂರು: ಮಾಸ್ತಿಗುಡಿ ಚಿತ್ರದ ಚಿತ್ರೀಕರಣ ದುರಂತ ಪ್ರಕರಣದಲ್ಲಿ ಸಾವನ್ನಪ್ಪಿದ್ದ ಇಬ್ಬರು ನಟರ ಮೃತದೇಹಗಳು ಪತ್ತೆಯಾಗಿದ್ದರೂ ಮೂರನೇ ಶವಕ್ಕಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಸಿಬ್ಬಂದಿ ಶೋಧ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ತಿಪ್ಪಗೊಂಡನಹಳ್ಳಿ ಡ್ಯಾಂ ಬಳಿ ನಟರ ಮೃತದೇಹ ಶೋಧಕ್ಕಾಗಿ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲೇ ಕಾರ್ಯಾಚರಣೆ ವೀಕ್ಷಿಸಲು ಸ್ಥಳೀಯ ಭಾರಿ ಜನಸ್ತೋಮ ಆಗಮಿಸಿತ್ತು. ಈ ವೇಳೆ ಯಾರೋ ದುಷ್ಕರ್ಮಿಗಳು ಡ್ಯಾಂ ಬಳಿ ಗೂಡು ಕಟ್ಟಿದ್ದ ಜೇನು ನೋಣಗಳಿಗೆ ಕಲ್ಲು ತೂರಿದ್ದು, ಜೇನು ನೋಣಗಳು ಏಕಾಏಕಿ ಜನರ ಮೇಲೆ ದಾಳಿ ನಡೆಸಿವೆ. ಈ ಸಂದರ್ಭದಲ್ಲಿ ಜೇನು ನೋಣಗಳ ಕಡಿತದಿಂದ ತಪ್ಪಿಸಿಕೊಳ್ಳಲು ಕೆಲವರು ನೀರಿಗೆ ಹಾರಿದ್ದಾರೆ. ಈ  ಸಂದರ್ಭದಲ್ಲಿ ಓರ್ವ ಸ್ಥಳೀಯ ವ್ಯಕ್ತಿ ಎಲ್ಲಯ್ಯ ಎಂಬಾತ ನಾಪತ್ತೆಯಾಗಿದ್ದು, ಆತ ನೀರಿನಲ್ಲಿ ಮುಳುಗಿರಬಹುದು ಎಂದು ಶಂಕಿಸಲಾಗುತ್ತಿದೆ.

ಮೂಲಗಳ ಪ್ರಕಾರ ರಾಮಯ್ಯ ಚೌಡಯ್ಯ ಅವರ ಮಗ ಎಲ್ಲಯ್ಯ ಎಂಬಾತ ರಕ್ಷಣಾ ಕಾರ್ಯಾಚರಣೆ ವೀಕ್ಷಿಸಲು ಸ್ನೇಹಿತರೊಂದಿಗೆ ಸೇರಿ ತಿಪ್ಪಗೊಂಡನಹಳ್ಳಿ ಡ್ಯಾಂಗೆ ಬಂದಿದ್ದನಂತೆ. ಈ ವೇಳೆ ಜೇನು ನೋಣಗಳು ದಾಳಿ  ಮಾಡಿದಾಗ ಎಲ್ಲರೂ ನೀರಿಗೆ ಧುಮುಕಿದರಂತೆ. ಎಲ್ಲಯ್ಯನೊಂದಿಗೆ ಆತನ ಸ್ನೇಹಿತರಾದ ರಮೇಶ್ ಮತ್ತು ಕಾಳಯ್ಯ ಎಂಬುವವರೂ ಕೂಡ ನೀರಿಗೆ ಬಿದ್ದಿದ್ದರು. ರಮೇಶ್ ಮತ್ತು ಕಾಳಯ್ಯ ನೀರಿನಿಂದ ಈಜಿ ದಡ ಸೇರಿದ್ದರಾದರೂ,  ಎಲ್ಲಯ್ಯ ಮಾತ್ರ ಬರಲಿಲ್ಲ. ಇದರಿಂದ ಎಲ್ಲಯ್ಯ ನೀರಿನಲ್ಲೇ ಮುಳುಗಿರಬಹುದು ಎಂದು ಶಂಕಿಸಿದ ಅವರು ಕೂಡಲೇ ಆತನ ಕುಟುಂಬಸ್ಥರಿಗೆ ಸುದ್ದಿ ಮುಟ್ಟಿಸಿದ್ದಾರೆ.

ಕೂಡಲೇ ಡ್ಯಾಂಗೆ ಆಗಮಿಸಿದ ಎಲ್ಲಯ್ಯನ ಪೋಷಕರು ಸ್ಥಳಕ್ಕೆ ಭೇಟಿ ನೀಡಿದ್ದ ಗೃಹಸಚಿವರ ಬಳಿ ತಮ್ಮ ಮಗ ನಾಪತ್ತೆಯಾಗಿರುವ ಕುರಿತು ವಿಷಯ ತಿಳಿಸಿದ್ದಾರೆ. ಗೃಹ ಸಚಿವರ ಸೂಚನೆ ಮೇರೆಗೆ ಇದೀಗ ತಿಪ್ಪಗೊಂಡನಹಳ್ಳಿ  ಜಲಾಶಯದಲ್ಲಿ ಮೂರನೇ ಶವಕ್ಕಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಎನ್ ಡಿಆರ್ ಎಫ್ ನ ಒಟ್ಟು 4 ಬೋಟ್ ಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ಕೆರೆಯಲ್ಲಿ ಮುಳುಗಿರುವ ಎಲ್ಲಯ್ಯನ ಶವಕ್ಕಾಗಿ ಶೋಧ  ನಡೆಸುತ್ತಿದ್ದಾರೆ.

ನಾಪತ್ತೆಯಾಗಿರುವ ಎಲ್ಲಯ್ಯ ಕಳೆದ 2 ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದನಂತೆ. ಇದೀಗ ದುರಂತದ ಕಾರ್ಯಾಚರಣೆ ವೀಕ್ಷಿಸಲು ಹೋಗಿ ತಾನೇ ದುರಂತಕ್ಕೀಡಾಗಿದ್ದಾನೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.