ರಾಜ್ಯ

ವರುಣಾ ಕ್ಷೇತ್ರದ ಮೇಲೆ ಪುತ್ರ ಯತೀಂದ್ರ, ಚಾಮುಂಡೇಶ್ವರಿ ಮೇಲೆ ಅಪ್ಪ ಸಿದ್ದರಾಮಯ್ಯನವರ ಚಿತ್ತ

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ...

ವರುಣಾ ಕ್ಷೇತ್ರದ ಮೇಲೆ ಪುತ್ರ ಯತೀಂದ್ರ, ಚಾಮುಂಡೇಶ್ವರಿ ಮೇಲೆ ಅಪ್ಪ ಸಿದ್ದರಾಮಯ್ಯನವರ ಚಿತ್ತ
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪುತ್ರ ಯತೀಂದ್ರ(ಸಂಗ್ರಹ ಚಿತ್ರ)
Published On :
ಮೈಸೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಉತ್ಸುಕವಾಗಿರುವುದರಿಂದ ಸಿದ್ದರಾಮಯ್ಯನವರು ತಮ್ಮ ಗಮನವನ್ನು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹರಿಸಲು ಚಿಂತಿಸಿದ್ದಾರೆ.
ಐದು ಬಾರಿ ಗೆದ್ದ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಮುಖ್ಯಮಂತ್ರಿಯವರು ಭೇಟಿ ನೀಡಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ಅವರೊಂದಿಗೆ ಅಭಿವೃದ್ಧಿಪರ ಕೆಲಸಗಳಿಗೆ ಚಾಲನೆ ನೀಡಲಿದ್ದಾರೆ.
ಸಿದ್ದರಾಮಯ್ಯನವರ ಹಿರಿಯ ಪುತ್ರ ರಾಕೇಶ್ ಅವರ ಅಕಾಲಿಕ ಮರಣದ ನಂತರ ಅವರ ಕುಟುಂಬದಲ್ಲಿ ರಾಜಕೀಯ ಅನಿಶ್ಚಿತತೆ ಉಂಟಾಗಬಹುದು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ವೃತ್ತಿಯಲ್ಲಿ ವೈದ್ಯರಾಗಿರುವ ಸಿದ್ದರಾಮಯ್ಯನವರ ಕಿರಿಯ ಪುತ್ರ ಯತೀಂದ್ರ ಯಾವಾಗ ರಾಜಕೀಯದಲ್ಲಿ ಆಸಕ್ತಿ ಬೆಳೆಸಿಕೊಂಡರೋ ಆಗ ಮತ್ತೆ ವರುಣಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿತು. ತಮ್ಮ ಮಗನನ್ನು ಹರಸುವಂತೆ ಇತ್ತೀಚೆಗೆ ವರುಣ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಜನತೆಯಲ್ಲಿ ಮನವಿ ಮಾಡಿರುವುದು  ಅವರ ಮಗನ ರಾಜಕೀಯ ಆಗಮನಕ್ಕೆ ಮುನ್ಸೂಚನೆಯಾಗಿದೆ ಎನ್ನಬಹುದು.
ಮುಖ್ಯಮಂತ್ರಿಯವರು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಭೇಟಿ ನೀಡಿ ವಿವಿಧ ಅಭಿವೃದ್ಧಿಪರ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಈ ಕ್ಷೇತ್ರ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರು ಪ್ರತಿನಿಧಿಸುವ ಕ್ಷೇತ್ರವಾದರೂ ಕೂಡ ಸ್ಥಳೀಯ ಶಾಸಕರ ಹೆಸರು ಅಲ್ಲಿ ಹೆಚ್ಚು ವಿಜೃಂಭಿಸುತ್ತಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿತ್ತು.
ಹಿಂದೊಮ್ಮೆ ಮಾತನಾಡುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮಗೆ ಚಾಮುಂಡೇಶ್ವರಿ ಕ್ಷೇತ್ರದ ಜನತೆ ಮೇಲೆ ವಿಶೇಷ ಭಾವನಾತ್ಮಕ ಸಂಬಂಧವಿದ್ದು 2018ರ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ್ದರು. 2006ರ ಉಪ ಚುನಾವಣೆಯಲ್ಲಿ 257 ಮತಗಳ ಅಂತರದಿಂದ ಗೆಲ್ಲಿಸಿ ರಾಜಕೀಯ ಪುನರ್ಜೀವನವನ್ನು ಚಾಮುಂಡೇಶ್ವರಿ ಕ್ಷೇತ್ರದ ಜನತೆ ತಮಗೆ ನೀಡಿದ್ದಾರೆ ಎಂದು ಹೇಳಿದ್ದರು.
2018ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಮತ್ತು ವರುಣ ಎರಡೂ ಕ್ಷೇತ್ರಗಳಿಗೆ ಸಮಾನ ಪ್ರಾಮುಖ್ಯತೆ ನೀಡಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ. ಒಕ್ಕಲಿಗರು, ದಲಿತರು, ಕುರುಬರು ಮತ್ತು ನಾಯಕರು ಹೆಚ್ಚಾಗಿರುವ ಕ್ಷೇತ್ರದ ಜನತೆಯ ವಿಶ್ವಾಸ ಗಳಿಸಲು ಜನತಾ ದರ್ಶನ ನಡೆಸಲು ಮುಂದಾಗಿದ್ದಾರೆ.
ವರುಣ ಕ್ಷೇತ್ರದಲ್ಲಿ ತಮ್ಮ ಮಗನನ್ನು ಮುಂದಿಟ್ಟು ಚುನಾವಣೆ ಎದುರಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಮುಖಂಡ ಜಿ.ಟಿ.ದೇವೇಗೌಡ ಪ್ರಮುಖರಾಗಿರುವುದರಿಂದ ತಾವೇ ಮುಂದಾಳತ್ವ ವಹಿಸುವ ಜಾಣ್ಮೆ ತೋರಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.