ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಂದ ಮಹಿಳೆಗೆ ಪ್ರಾಣ ಬೆದರಿಕೆ ಆರೋಪ
ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಮತ್ತು ಅವರ ಪುತ್ರ ಕಾರ್ತಿಕೇಶ್ ರಿಂದ ತಮಗೆ ಜೀವ ಬೆದರಿಕೆ ಎಂದು ಮಹಿಳೆಯೊಬ್ಬಳು ಆರೋಪಿಸಿದ್ದಾಳೆ...

ಬೆಂಗಳೂರು: ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಮತ್ತು ಅವರ ಪುತ್ರ ಕಾರ್ತಿಕೇಶ್ ರಿಂದ ತಮಗೆ ಜೀವ ಬೆದರಿಕೆ ಎಂದು ಮಹಿಳೆಯೊಬ್ಬಳು ಆರೋಪಿಸಿದ್ದಾಳೆ.
ಕಳೆದ ಶನಿವಾರ ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಪುತ್ರ ಅವರ ನೃಪತುಂಗಾ ರಸ್ತೆಯಲ್ಲಿರುವ ಅಧಿಕೃತ ನಿವಾಸದೆದುರು ಪ್ರತಿಭಟನೆ ಮಾಡಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಸಾಧನಾ ಅಲಿಯಾಸ್ ರಾಜೇಶ್ವರಿ ಎಂಬುವವರು ಈ ಆರೋಪ ಮಾಡಿದ್ದು, 5 ವರ್ಷಗಳಿಂದ ಇದ್ದ ಸಂಬಂಧವನ್ನು ಯಾರಿಗೂ ಬಹಿರಂಗ ಪಡಿಸದಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಅವರ ಪುತ್ರ ಕಾರ್ತಿಕೇಶ್ ಮತ್ತು ಅವರ ಸ್ನೇಹಿತ ರವಿಶಂಕರ್ ತಮಗೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ.
ಈ ಬಗ್ಗೆ ಪ್ರತಿಭಟನೆ ನಡೆಸುತ್ತಿದ್ದ ತಮ್ಮನ್ನು ವಶಕ್ಕೆ ಪಡೆದ ಪೊಲೀಸರು ವಿವಿಧ ಜೈಲುಗಳಿಗೆ ರವಾನಿಸಿದ್ದರು. ಮೊದಲು ರಾಮನಗರ ಜೈಲು, ಬಳಿಕ ಮಂಡ್ಯ ಜೈಲಿನಲ್ಲಿ ಮೂರು ದಿನ ಕಳೆದಿದ್ದರು. ಅಂತೆಯೇ ಮಂಡ್ಯದಲ್ಲಿ ಸಾಧನಾ ಅವರನ್ನು ವೈದ್ಯಕೀಯ ಪರೀಕ್ಷೆಗೂ ಒಳಪಡಿಸಲಾಗಿತ್ತು. ಇದೀಗ ಸಾಧನಾ ಅವರು ಜಾಮೀನಿನ ಮೇಲೆ ಹೊರಬಂದಿದ್ದಾರೆ.
ಈ ಹಿಂದೆ ಸಾಕಷ್ಟು ಬಾರಿ ಓಂ ಪ್ರಕಾಶ್ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದ ಸಾಧನಾ, ಡಿಜಿಪಿ ಅವರನ್ನು ತಮ್ಮನ್ನು ಬೇಕೆಂದೇ ಭೇಟಿಯಿಂದ ದೂರವಿಡುತ್ತಿದ್ದಾರೆ. ಅವರನ್ನು ನೋಡಲು ಹೋದಾಗ ಕಿರಿಯ ಅಧಿಕಾರಿಗಳಿಂದ ನನ್ನನ್ನು ಕಚೇರಿಯಿಂದ ಹೊರದಬ್ಬಿಸುತ್ತಿದ್ದಾರೆ. ಬೇರೊಬ್ಬ ವಕೀಲರ ಮೂಲಕ ನನ್ನ ವಿರುದ್ಧ ಇಲ್ಲ-ಸಲ್ಲದ ದೂರುಗಳು ದಾಖಲಾಗಿವೆ. ಸಂಪಗಿ ರಾಮಯ್ಯ ಎಂಬುವವರು ನನ್ನ ವಿರುದ್ಧ ಜಾತಿನಿಂದನೆ ಆರೋಪ ಮಾಡಿದ್ದಾರೆ. ಆದರೆ ಅವರು ನೀಡಿರುವ ದೂರಿನನ್ವಯ ನಾನು ಏಪ್ರಿಲ್ 27ರಂದು ಸಂಜೆ 7 ಗಂಟೆಯ ಸುಮಾರಿನಲ್ಲಿ ನಾನು ಡಿಜಿಪಿ ಕಚೇರಿಯಲ್ಲೇ ಇದ್ದೆ. ಬೇಕಾದರೆ ನೀವು ಸಿಸಿಟಿವಿ ವಿಡಿಯೋ ಪರೀಕ್ಷಿಸಬಹುದು ಎಂದು ಹೇಳಿದ್ದಾರೆ.
ಕ್ಷಣಾರ್ಧದಲ್ಲಿ ಮಹಿಳೆ ವಿರುದ್ಧ ದೂರು ದಾಖಲಿಸಿಕೊಂಡ ಕನಕಪುರ ಪೊಲೀಸರು
ರಾಜ್ಯ ಡಿಜಿಪಿ ಓಂಪ್ರಕಾಶ್ ಪುತ್ರನ ವಿರುದ್ಧ ಜೀವ ಬೆದರಿಕೆ ಆರೋಪ ಮಾಡಿದ್ದ ಮಹಿಳೆಯನ್ನು ಬಂಧಿಸಿ ಜೈಲಿಗೆ ಕಳುಹಿಸಿರುವ ಪೊಲೀಸರ ಕ್ರಮ ಸಾರ್ವಜನಿಕ ವಲಯದಲ್ಲಿ ಅನುಮಾನ ಮೂಡಿಸಿದೆ. ಓಂಪ್ರಕಾಶ್ ಪುತ್ರ ಕಾರ್ತಿಕೇಶ್ ಮತ್ತು ಸ್ನೇಹಿತ ರವಿಶಂಕರ್ ತಮಗೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಸಾಧನಾ ಅಲಿಯಾಸ್ ರಾಜೇಶ್ವರಿ ಏ.30ರಂದು ರಾತ್ರಿ 7.30ರಲ್ಲಿ ನೃಪತುಂಗ ರಸ್ತೆಯ ಡಿಜಿಪಿ ಮನೆ ಮುಂದೆ ಪ್ರತಿಭಟನೆ ನಡೆಸಿದ್ದರು. ಇದಾದ ಮಾರನೇ ದಿನ (ಮೇ 1) ಕನಕಪುರ ಟೌನ್ ಠಾಣೆ ಪೊಲೀಸರು ವಕೀಲರು ನೀಡಿದ ‘ಜಾತಿ ನಿಂದನೆ ಆರೋಪ ಪ್ರಕರಣ’ದಲ್ಲಿ ಬೆಂಗಳೂರಿನಲ್ಲಿ ಆಕೆಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಐದು ವರ್ಷಗಳ ಹಿಂದೆಯೇ ಪರಿಚಯವಾಗಿದ್ದ ಓಂ ಪ್ರಕಾಶ್
ಇದೀಗ ಡಿಜಿಪಿ ಓಂ ಪ್ರಕಾಶ್ ಅವರ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಮಾಡಿರುವ ಮಹಿಳೆ, ತಮಗೂ ಡಿಜಿಪಿ ಓಂ ಪ್ರಕಾಶ್ ಅವರಿಗೂ ಐದು ವರ್ಷಗಳ ಹಿಂದೆಯೇ ಪರಿಚಯವಿತ್ತು. 2011ರಲ್ಲಿ ಮದುವೆಯಾದ 8 ದಿನಗಳಲ್ಲಿಯೇ ನಾನು ಮತ್ತು ನನ್ನ ಪತಿ ವಿಚ್ಚೇದನದ ತೀರ್ಮಾನಕ್ಕೆ ಬಂದಿದ್ದೆವು. ಸಮಸ್ಯೆ ಪರಿಹರಿಸುವ ನೆಪದಲ್ಲಿ ಮಧ್ಯಪ್ರವೇಶಿಸಿದ ಓಂ ಪ್ರಕಾಶ್ ನನಗೆ ಪರಿಚಯವಾದರು. ಬಳಿಕ ಪರಿಚಯ ಮುಂದುವರೆದು ಸಾಕಷ್ಟು ಬಾರಿ ನಾವು ಪರಸ್ಪರ ಭೇಟಿಯಾಗಿದ್ದೆವು. ಆಗ ಓಂ ಪ್ರಕಾಶ್ ಅವರು, ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾಗಿದ್ದರು. ಹೊಟೆಲ್ ಮೌರ್ಯದಲ್ಲಿ ಸಾಕಷ್ಟು ಬಾರಿ ನಾನು ಓಂ ಪ್ರಕಾಶ್ ಅವರನ್ನು ಭೇಟಿಯಾಗಿದ್ದೆ.
ಇದಲ್ಲದೆ ನಾನು ಮತ್ತು ಓಂ ಪ್ರಕಾಶ್ ಅವರು ಆಸ್ಪತ್ರೆಗೂ ಒಟ್ಟಿಗೆ ಹೋದ ದಾಖಲೆಗಳಿವೆ. ನನ್ನ ಅನಾರೋಗ್ಯ ಸಂಬಂಧಿತ ಫೈಲ್ ಗೆ ಓಂ ಪ್ರಕಾಶ್ ಅವರೇ ಸಹಿ ಹಾಕಿದ್ದಾರೆ. ಈ ದಾಖಲೆ ಕೂಡ ನನ್ನಲ್ಲಿದೆ. 2013 ಜನವರಿ 11ರಿಂದ 21ರವರೆಗೂ ನನ್ನನ್ನು ತಿರುಪತಿಯ ಹೊಟೆಲ್ ಒಂದರ ಕೊಠಡಿಯಲ್ಲಿ ಕೂಡಿ ಹಾಕಿದ್ದರು. ಆಗ ನಾನು ನನ್ನ ಸ್ನೇಹಿತರಿಗೆ ವಿಷಯ ಮುಟ್ಟಿಸಿದ್ದೆ, ಅವರು ಬಂದು ನನ್ನನ್ನು ಊರಿಗೆ ಕರೆತಂದಿದ್ದರು. ಬೇಕೆಂದರೆ ಈ ಬಗ್ಗೆ ಹೊಟೆಲ್ ನ ಸಿಸಿಟಿವಿ ದೃಶ್ಯಾವಳಿಗಳನ್ನು ನೀವು ಪಡೆಯಬಹುದು ಎಂದು ಹೇಳಿದ್ದಾರೆ.
ಪ್ರಸ್ತುತ ಸಾಧನಾ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸರುವ ಮಹಿಳೆಯರ ರಾಷ್ಟ್ರೀಯ ವೇದಿಕೆ ಪ್ರಕರಣ ದಾಖಸಿಕೊಂಡಿದ್ದು, ತನಿಖೆ ನಡೆಸುತ್ತಿದೆ. ಅಲ್ಲದೆ ರಾಜ್ಯ ಪೊಲೀಸ್ ಇಲಾಖೆಯಿಂದಲೂ ಪ್ರತ್ಯೇಕ ತಂಡ ರಚನೆ ಮಾಡಿ ತನಿಖೆ ನಡೆಸುವಂತೆ ಆಗ್ರಹಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


