ಎಸಿಬಿ ಸ್ಥಾಪನೆ: ಭ್ರಷ್ಟಾಚಾರ ದೂರು ಕೊಡಲು ರಾಜ್ಯದೆಲ್ಲೆಡೆಯಿಂದ ಬೆಂಗಳೂರಿಗೇ ಬರಬೇಕು!
ರಾಜ್ಯ ಸರ್ಕಾರ ಭ್ರಷ್ಟಾಚಾರ ನಿಗ್ರಹ ದಳ ಸ್ಥಾಪನೆ ಮಾಡಿರುವುದು ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಿದಂತಾಗಿದೆ ಎಂಬ ಅನುಮಾನ ಬಲವಾಗತೊಡಗಿದ್ದು, ಹೌದೆನ್ನುತ್ತಿದೆ ಅಧಿಸೂಚನೆ...

Published On :
ಬೆಂಗಳೂರು: ರಾಜ್ಯ ಸರ್ಕಾರ ಭ್ರಷ್ಟಾಚಾರ ನಿಗ್ರಹ ದಳ ಸ್ಥಾಪನೆ ಮಾಡಿರುವುದು ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಿದಂತಾಗಿದೆ ಎಂಬ ಅನುಮಾನ ಬಲವಾಗತೊಡಗಿದ್ದು, ಹೌದೆನ್ನುತ್ತಿದೆ ಗೃಹ ಇಲಾಖೆಯ ಅಧೀನ ಕಾರ್ಯದರ್ಶಿ ಹೊರಡಿಸಿರುವ ಎರಡು ಅಧಿಸೂಚನೆಗಳು.
ಭ್ರಷ್ಟಾಚಾರ ನಿಗ್ರಹ ದಳ ಸ್ಥಾಪನೆ ಒಂದು ರೀತಿಯಲ್ಲಿ ಭ್ರಷ್ಟಾಚಾರದ ವಿರುದ್ಧ ದೂರು ಸಲ್ಲಿಸುವವರಿಗೆ ಸಮಸ್ಯೆಯಾಗಿ ಪರಿಣಮಿಸಲಿದೆ. ಈ ವರೆಗೂ ಲೋಕಾಯುಕ್ತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರತಿ ಜಿಲ್ಲೆಯಲ್ಲೂ ದೂರು ದಾಖಲಿಸುವ ಅವಕಾಶವಿತ್ತು. ಆದರೆ ರಾಜ್ಯ ಸರ್ಕಾರ ಲೋಕಾಯುಕ್ತ ಪೊಲೀಸರ ಅಧಿಕಾರವನ್ನು ಮೊಟಕುಗೊಳಿಸಿ ಅದನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಹಸ್ತಾಂತರಿಸಿರುವುದರ ಪರಿಣಾಮ ಇನ್ನು ಮುಂದೆ ಯಾವುದೇ ಜಿಲ್ಲೆಯಲ್ಲಿ ಭ್ರಷ್ಟಾಚಾರದ ವಿರುದ್ಧ ದೂರು ದಾಖಲಿಸಬೇಕಾದರೂ ಬೆಂಗಳೂರಿಗೇ ಬರಬೇಕಾದ ಅನಿವಾರ್ಯತೆ ಎದುರಾಗಲಿದೆ.
ಗೃಹ ಇಲಾಖೆ ಅಧೀನ ಕಾರ್ಯದರ್ಶಿ ದೇವೇಂದ್ರಪ್ಪ ಕಟ್ಟಿಮನಿ ಮಾ.19 ರಂದು ಹೊರಡಿಸಿರುವ ಅಧಿಸೂಚನೆ ಪ್ರಕಾರ, ಬೆಂಗಳೂರಿನಲ್ಲಿರುವ ಎಡಿಜಿಪಿ ಕಚೇರಿಯಲ್ಲಿ ಮಾತ್ರ ಭ್ರಷ್ಟಾಚಾರದ ವಿರುದ್ಧ ದೂರು ನೀಡಬಹುದಾಗಿದೆ. ರಾಜ್ಯ ಸರ್ಕಾರ ಲೋಕಾಯುಕ್ತ ಇನ್ಸ್ ಪೆಕ್ಟರ್ ಗಳಿಂದ ಅಧಿಕಾರ ಹಿಂಪಡೆದು ಭ್ರಷ್ಟಾಚಾರ ನಿಗ್ರಹ ದಳ ಸ್ಥಾಪನೆ ಮಾಡಿದ ನಂತರ ಈ ಅಧಿಸೂಚನೆ ಹೊರಡಿಸಲಾಗಿದೆ.
ಶನಿವಾರ(ಮಾ.19 )ರಿಂದಲೇ ಲೋಕಾಯುಕ್ತ ಪೊಲೀಸರಿಗೆ ದೂರು ಬರುವುದು ಸ್ಥಗಿತವಾಗಿವೆ. ಉತ್ತರ ಕರ್ನಾಟಕದಲ್ಲಿರುವ ವ್ಯಕ್ತಿ ಯಾವುದೇ ಅಧಿಕಾರಿ ಕೆಲವು ನೂರು ರೂಪಾಯಿಗಳ ಲಂಚ ಕೇಳಿದರೂ ಅದರ ವಿರುದ್ಧ ದೂರು ನೀಡಲು ಲಂಚ ನೀಡುವುದಕ್ಕಿಂತ ಹೆಚ್ಚು ಮೊತ್ತ ತೆತ್ತು ಬೆಂಗಳೂರಿಗೆ ಬಂದು ಎಡಿಜಿಪಿ ಕಚೇರಿಯಲ್ಲಿ ದೂರು ನೀಡಬೇಕಾಗುತ್ತದೆ. ಇಂಥಹ ಪರಿಸ್ಥಿತಿ ನಿರ್ಮಾಣವಾದರೆ ಭ್ರಷ್ಟಾಚಾರದ ಬಲಿಪಶು ಲಂಚದ ವಿರುದ್ಧ ದೂರು ನೀಡುವುದಕ್ಕಿಂತ ಲಂಚ ನೀಡಲು ಮುಂದಾಗುತ್ತಾನೆ ಎನ್ನುತ್ತಾರ ಕಾನೂನು ತಜ್ಞರು. ಸರ್ಕಾರ ಜಿಲ್ಲಾ ಮಟ್ಟದಲ್ಲಿ ಎಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಕಚೇರಿಗಳಿಗೂ ದೂರು ದಾಖಲಿಸಿಕೊಳ್ಳುವ ಅಧಿಕಾರ ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ.
ಹೈಕೋರ್ಟ್ ನ ದಿಕ್ಕು ತಪ್ಪಿಸಿತ್ತಾ ರಾಜ್ಯ ಸರ್ಕಾರ?:
ರಾಜ್ಯ ಸರ್ಕಾರ ಭ್ರಷ್ಟಾಚಾರ ನಿಗ್ರಹ ದಳ ಸ್ಥಾಪನೆ ವಿಷಯದಲ್ಲಿ ಹೈಕೋರ್ಟ್ ನ ದಿಕ್ಕನ್ನು ತಪ್ಪಿಸಿದೆ ಎಂಬ ಆರೋಪ ಕೇಳಿಬಂದಿದೆ. ಎಸಿಬಿ ಸ್ಥಾಪನೆಗೆ ಮಾ.4 ರಂದೇ ರಾಜ್ಯ ಸರ್ಕಾರ ಹಣಕಾಸು ಇಲಾಖೆಯಿಂದ ಅನುಮತಿ ಪಡೆದಿದೆ. ಆದರೆ ಇದಾದ ನಾಲ್ಕು ದಿನಗಳ ನಂತರ ಮಾ.8 ರಂದು ಹೈಕೋರ್ಟ್ ನ ನ್ಯಾ. ಎಎನ್ ವೇಣುಗೋಪಾಲ್ ಗೌಡ, ಭ್ರಷ್ಟಾಚಾರದ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ರಾಜ್ಯ ಸರ್ಕಾರ ಹಾಗೂ ಲೋಕಾಯುಕ್ತಕ್ಕೆ ನಿರ್ದೇಶನ ನೀಡಿದ್ದಾರೆ. ಈ ವೇಳೆ ರಾಜ್ಯ ಸರ್ಕಾರ ಹೈಕೋರ್ಟ್ ಗೆ ಎಸಿಬಿ ಸ್ಥಾಪನೆ ಬಗ್ಗೆ ಸುಳಿವನ್ನು ನೀಡಿಲ್ಲ ಎಂಬುದು ತಿಳಿದುಬಂದಿದೆ.
ಮಾ.29 ರಂದು ನಡೆಯಲಿರುವ ವಿಚಾರಣೆ ವೇಳೆ ಎಸಿಬಿವಿ ಚಾರದಲ್ಲಿ ರಾಜ್ಯ ಸರ್ಕಾರ ಹೈಕೋರ್ಟ್ ನ್ನು ಎದುರಿಸಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


