ಮಲ್ಲೇಶ್ವರಂ ಬಾಂಬ್ ಸ್ಫೋಟ ಪ್ರಕರಣ: 2 ಶಂಕಿತ ಉಗ್ರರ ಬಂಧನ
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಬಳಿ 2013ರಲ್ಲಿ ನಡೆಸಲಾಗಿದ್ದ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಇದೀಗ ನಗರದ ಸಿಸಿಬಿ ಪೊಲೀಸರು ಇಬ್ಬರು ಶಂಕಿತ ಉಗ್ರರನ್ನು...

ಬೆಂಗಳೂರು: ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಬಳಿ 2013ರಲ್ಲಿ ನಡೆಸಲಾಗಿದ್ದ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಇದೀಗ ನಗರದ ಸಿಸಿಬಿ ಪೊಲೀಸರು ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿರುವುದಾಗಿ ತಿಳಿದುಬಂದಿದೆ.
ಮೂಲಗಳ ಪ್ರಕಾರ ಬಂಧಿತರನ್ನು ಸಯೀದ್ ಅಲಿ ಹಾಗೂ ಜಿಹಾನ್ ಅಸಿರ್ ಎಂದು ಹೇಳಲಾಗುತ್ತಿದ್ದು, ಇವರು ಚೆನ್ನೈನ ನಗರದ ತಿರುನೆಲ್ವೇಲಿ ನಿವಾಸಿಗಳಾಗಿದ್ದಾರೆಂದು ತಿಳಿದುಬಂದಿದೆ.
ಪ್ರಸುತ ಬಂಧನಕ್ಕೊಳಗಾಗಿರುವ ಶಂಕಿತ ಉಗ್ರರು ಸ್ಫೋಟಕ್ಕೆ ಬಳಸಲಾಗಿದ್ದ ಬಾಂಬ್ ತಯಾರಿಕೆಗೆ ಬೇಕಾದ ಎಲ್ಲಾ ರೀತಿಯ ಅಗತ್ಯ ವಸ್ತುಗಳನ್ನು ಪೂರೈಸಿದ್ದರು ಎಂದು ಹೇಳಲಾಗುತ್ತಿದ್ದು, ಈ ಆರೋಪದ ಮೇಲೆ ಕೆಲವು ವರ್ಷಗಳಿಂದಲೂ ಸಿಸಿಬಿ ಪೊಲೀಸರು ಉಗ್ರರ ಪತ್ತೆಗಾಗಿ ತನಿಖೆ ನಡೆಸುತ್ತಿದ್ದರು.
ಇದರಂತೆ ನಿನ್ನೆ ಖಚಿತ ಮಾಹಿತಿ ಮೇರೆಗೆ ಚೆನ್ನೈಗೆ ಭೇಟಿ ನೀಡಿರುವ ವಿಶೇಷ ತನಿಖಾಧಿಕಾರಿ ಎಸಿಬಿ ವೆಂಕಟೇಶ್ ಪ್ರಸನ್ನ ನೇತೃತ್ವದ ತಂಡ ಶಂಕಿತ ಉಗ್ರರನ್ನು ಬಂಧಿಸಿದ್ದಾರೆನ್ನಲಾಗಿದೆ. ನಂತರ ಬಂಧಿತ ಶಂಕಿತ ಉಗ್ರರನ್ನು ಪೊಲೀಸರು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ವಿಚಾರಣೆ ನಡೆಸಿರುವ ನ್ಯಾಯಾಧೀಶರು 7 ದಿನಗಳ ಕಾಲ ಪೊಲೀಸರ ವಶಕ್ಕೆ ಪಡೆಯುವಂತೆ ತಿಳಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಶಂಕಿತ ಉಗ್ರರಿದ್ದ ತಾಣದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಇದನ್ನು ವಿರೋಧಿಸಿದ್ದ ಶಂಕಿತ ಉಗ್ರರ ಕುಟುಂಬಸ್ಥರು ಸಿಸಿಬಿ ಪೊಲೀಸರನ್ನು ಅಪಹರಣಕಾರರು ಎಂದು ಭಾವಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಕೆಲವು ಗಂಟೆಗಳ ಕಾಲ ತಮಿಳುನಾಡಲ್ಲಿ ಹೈಡ್ರಾಮಾವೇ ನಡೆದಿತ್ತು.
ನಗರದ ಪೊಲೀಸರನ್ನು ಕೆಲವು ಗಂಟೆಗಳ ಕಾಲ ಠಾಣೆಯಲ್ಲಿ ಇರಿಸಿಕೊಂಡಿದ್ದ ಚೆನ್ನೈ ಪೊಲೀಸರು ನಂತರ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸರ್ ಆಯುಕ್ತ. ಪಿ. ಹರಿಶೇಖರನ್ ಹಾಗೂ ನಗರ ಪೊಲೀಸ್ ಆಯುಕ್ತ ಮೇಘರಿಕ್ ಮಧ್ಯಸ್ಥಿಕೆ ವಹಿಸಿ ಬಂದಿರುವವರು ನಮ್ಮ ಪೊಲೀಸರೇ ಎಂದು ಸ್ಪಷ್ಟಪಡಿಸಿದಾಗ ಪೊಲೀಸರನ್ನು ಬಿಟ್ಟಿದ್ದರು ಎಂದು ತಿಳಿದುಬಂದಿದೆ.
2013ರ ಏಪ್ರಿಲ್ 17 ರಂದು ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಬಳಿ ಬಾಂಬ್ ವೊಂದು ಸ್ಫೋಟಗೊಂಡಿತ್ತು. ಘಟನೆಯಲ್ಲಿ 18 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಬಾಂಬ್ ಸ್ಫೋಟವನ್ನು ನಿಷೇಧಿತ ಅಲ್-ಉಮ್ಮಾ ಉಗ್ರ ಸಂಘಟನೆ ನಡೆಸಿದೆ ಎಂದು ಹೇಳಲಾಗುತ್ತಿತ್ತು.
ಬಾಂಬ್ ಸ್ಫೋಟದಲ್ಲಿ ಮೂವರು ಉಗ್ರರು ಭಾಗಿಯಾಗಿದ್ದು, ಇದರಲ್ಲಿ ಪನ್ನಾ ಇಸ್ಮೇಲ್, ಬಿಲಾಲ್ ಮಲಿಕ್ ಹಾಗೂ ಫಕ್ರುದ್ದೀನ್ ಎಂಬುವವರನ್ನು ಆಂಧ್ರಪ್ರದೇಶದ ಪುತ್ತೂರಿನಲ್ಲಿ ಬಂಧನಕ್ಕೊಳಪಡಿಸಲಾಗಿತ್ತು. ಈ ಮೂವರು ಹಿಂದೂ ಸಂಘಟನೆ ಕಾರ್ಯಕರ್ತರನ್ನು ಹತ್ಯೆ ಮಾಡಿದ ಆರೋಪಗಳನ್ನು ಹೊತ್ತಿದ್ದರು. ಇದೀಗ ಪ್ರಕರಣ ಸಂಬಂಧ ಮತ್ತಿಬ್ಬರು ಶಂಕಿತ ಉಗ್ರರನ್ನು ಬಂಧಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


