ಲೋಕಾಯುಕ್ತ ಸಂಸ್ಥೆ ಅಧಿಕಾರ ಮೊಟಕು: ಭ್ರಷ್ಟಾಚಾರ ನಿಗ್ರಹ ದಳ ಸ್ಥಾಪನೆ
ಲೋಕಾಯುಕ್ತ ಸಂಸ್ಥೆಯ ಶಕ್ತಿ ಕುಗ್ಗಿಸಲು ಮುಂದಾಗಿರುವ ರಾಜ್ಯಸರ್ಕಾರ ಲೋಕಾಯುಕ್ತ ಸಂಸ್ಥೆಗೆ ಪರ್ಯಾಯವಾಗಿ ಭ್ರಷ್ಟಾಚಾರ ನಿಗ್ರಹ ದಳವನ್ನು ಅಸ್ತಿತ್ವಕ್ಕೆ ...

ಬೆಂಗಳೂರು: ಲೋಕಾಯುಕ್ತ ಸಂಸ್ಥೆಯ ಶಕ್ತಿ ಕುಗ್ಗಿಸಲು ಮುಂದಾಗಿರುವ ರಾಜ್ಯಸರ್ಕಾರ ಲೋಕಾಯುಕ್ತ ಸಂಸ್ಥೆಗೆ ಪರ್ಯಾಯವಾಗಿ ಭ್ರಷ್ಟಾಚಾರ ನಿಗ್ರಹ ದಳವನ್ನು ಅಸ್ತಿತ್ವಕ್ಕೆ ತರುತ್ತಿದೆ. ಈ ಸಂಬಂಧ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.
ಭ್ರಷ್ಟಾಚಾರ ತಡೆ ಅಧಿ ನಿಯಮ-1988ನ್ನು ಮತ್ತಷ್ಟು ಪರಿಣಾಮಕಾರಿ ಯಾಗಿ ಅನುಷ್ಠಾನಗೊಳಿಸಲು ಹಾಗೂ ಸ್ವತಂತ್ರ ವಾಗಿ ತನಿಖೆ ನಡೆಸಲು ಎಡಿಜಿಪಿ ನೇತೃತ್ವದಲ್ಲಿ ಪ್ರತ್ಯೇಕ ಭ್ರಷ್ಟಾಚಾರ ನಿಗ್ರಹ ದಳ ರಚಿಸಲಾಗಿದೆ.ಅಲ್ಲ ಈ ಭ್ರಷ್ಟಾಚಾರ ದಳದ ಮೇಲುಸ್ತುವಾರಿಗಾಗಿ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಜಾಗೃತ ಸಲಹಾ ಮಂಡಳಿಯನ್ನು ಕೂಡ ರಚಿಸಿದೆ.
ಭ್ರಷ್ಟಾಚಾರ ನಿಗ್ರಹ ದಳದ ರಚನೆಯ ಬೆನ್ನಲ್ಲೇ ಲೋಕಾಯುಕ್ತ ಪೊಲೀಸ್ ವಿಭಾಗದಲ್ಲಿ ಭ್ರಷ್ಟಾ ಚಾರ ತಡೆ ಅಧಿ ನಿಯಮದಡಿ ತನಿಖೆ ಹಾಗೂ ಅಭಿಯೋಜನೆಗಾಗಿ ಬಾಕಿ ಇರುವ ಪ್ರಕರಣಗಳು ಈ ಭ್ರಷ್ಟಾಚಾರ ನಿಗ್ರಹ ದಳಕ್ಕೆ ವರ್ಗಾವಣೆಗೊಳ್ಳಲಿವೆ.ಈ ದಳವು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಲು ಭ್ರಷ್ಟಾಚಾರ ನಿಗ್ರಹ ದಳದ ಕಚೇರಿಗಳೇ ಠಾಣೆಗಳೆಂದು ಘೋಷಿಸಲಾಗುವುದು.
ತನಿಖೆ ನಡೆಸಲು ಡಿವೈಎಸ್‌ಪಿ ದರ್ಜೆಗಿಂತ ಕಡಿಮೆ ಇಲ್ಲದ ಪೊಲೀಸ್ ಅಧಿಕಾರಿಗಳನ್ನು ನೀಡಲಾಗುವುದು. ಹಾಗೂ ಈಗಿರುವ ಲೋಕಾಯುಕ್ತ ಪೊಲೀಸ್ ವಿಭಾಗವನ್ನು ಠಾಣೆಗಳೆಂದು ಘೋಷಿಸಿರುವ ಅಧಿಸೂಚನೆಗಳನ್ನು ಹಿಂಪಡೆಯಲಾಗುವುದು. ಈ ಸಂಬಂಧ ಶೀಘ್ರದಲ್ಲೇ ಪ್ರತ್ಯೇಕ ಅಧಿಸೂಚನೆ ಹೊರಡಿಸಲಾಗುವುದು ಎಂದು ಸರ್ಕಾರ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಮೇಲ್ವಿಚಾರಣೆ ಅಡಿ ಈ ಭ್ರಷ್ಟಾಚಾರ ನಿಗ್ರಹ ದಳ ಕಾರ್ಯನಿರ್ವಹಿಸಲಿದ್ದು, ಒಬ್ಬ ಎಡಿಜಿಪಿ ಮತ್ತು ಪೊಲೀಸ್ ಮಹಾನಿರೀಕ್ಷಕ (ಐಜಿಪಿ), 10 ಜನ ಪೊಲೀಸ್ ಅಧೀಕ್ಷಕರು, 35 ಪೊಲೀಸ್ ಉಪಾಧೀಕ್ಷಕರು, 75 ಪೊಲೀಸ್ ನಿರೀಕ್ಷಕರು, 200 ಹೆಡ್ ಕಾನ್‌ಸ್ಟೇಬಲ್‌ಗಳನ್ನು ಒಳಗೊಂಡಿರಲಿದೆ.
ಜಾಗೃತ ಸಲಹಾ ಮಂಡಳಿಯಲ್ಲಿ ಮುಖ್ಯ ಕಾರ್ಯದರ್ಶಿ (ಅಧ್ಯಕ್ಷರು), ಅಪರ ಮುಖ್ಯ ಕಾರ್ಯದರ್ಶಿ (ಒಳಾಡಳಿತ ಇಲಾಖೆ), ಆರ್ಥಿಕ ಇಲಾಖೆ ಮತ್ತು ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ಡಿಜಿ ಮತ್ತು ಐಜಿಪಿ, ಆಡಳಿತ ಮತ್ತು ಸಾರ್ವಜನಿಕ ವಿಷಯಗಳಲ್ಲಿ ಪರಿಣತಿ ಹೊಂದಿರುವ ಇಬ್ಬರು ಖ್ಯಾತನಾಮರು ಸದಸ್ಯರಾಗಿರುತ್ತಾರೆ.
ಇನ್ನು ಈಗಿನ ಲೋಕಾಯುಕ್ತ ವ್ಯವಸ್ಥೆಯ ಅಡಿ ಮುಖ್ಯಮಂತ್ರಿ, ಸಚಿವರು, ಶಾಸಕರ ವಿರುದ್ಧ ಲೋಕಾಯುಕ್ತ ಪೊಲೀಸರಿಗೆ ದೂರು ನೀಡುವ ಅವಕಾಶ ಇತ್ತು. ಇವರ ವಿರುದ್ಧದ ದೂರುಗಳನ್ನು ಯಾರಿಗೆ ನೀಡಬೇಕು ಎಂಬುದನ್ನು ಇನ್ನೂ ಸ್ಪಷ್ಟ ಪಡಿಸಿಲ್ಲ. ಈ ಜನ ಪ್ರತಿನಿಧಿಗಳ ವಿರುದ್ಧದ ದೂರನ್ನು ಹೊಸ ವ್ಯವಸ್ಥೆಯೊಂದು ಸ್ವೀಕರಿಸಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಸಂತೋಷ್ ಹೆಗಡೆ ಪ್ರತಿಕ್ರಿಯೆ: ಕೇವಲ ಲೋಕಾಯುಕ್ತ ಸಂಸ್ಥೆಯನ್ನು ಬಲಹೀನಗೊಳಿಸಲು ಭ್ರಷ್ಟಾಚಾರ ನಿಗ್ರಹ ದಳ ಸ್ಥಾಪಿಸುತ್ತಿಲ್ಲ. ಲೋಕಾಯುಕ್ತದ ಪೂರ್ಣ ಅಧಿಕಾರ ಕಸಿಯಲು ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಆರೋಪಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಭ್ರಷ್ಟಾಚಾರ ನಿಗ್ರಹದಳ ಸ್ಥಾಪಿಸುವ ಅಗತ್ಯ ಇರಲಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


