ನಗರದ ಜನತೆಗೆ ಎದುರಾಗಲಿದೆ ನೀರಿನ ಕೊರತೆ, ಇರುವುದು 60 ದಿನಗಳಿಗೆ ಸಾಕಾಗುವಷ್ಟು ನೀರು ಮಾತ್ರ!
ಮುಂಗಾರು ಮಳೆ ಕ್ಷೀಣಿಸಿದ ಪರಿಣಾಮ ಕಬಿನಿ ಜಲಾಶಯದಲ್ಲಿ ನೀರಿನ ಮತ್ತ ಕುಗ್ಗಿದ್ದು ಇನ್ನು ಕೆಲವೇ ದಿನಗಳಲ್ಲಿ ಬೆಂಗಳೂರು ಮೈಸೂರು ಭಾಗದ ಜನರಿಗೆ ನೀರಿನ ಕೊರತೆ ಎದುರಾಗಲಿದೆ.

ಬೆಂಗಳೂರು: ಮುಂಗಾರು ಮಳೆ ಕ್ಷೀಣಿಸಿದ ಪರಿಣಾಮ ಕಬಿನಿ ಜಲಾಶಯದಲ್ಲಿ ನೀರಿನ ಮತ್ತ ಕುಗ್ಗಿದ್ದು ಇನ್ನು ಕೆಲವೇ ದಿನಗಳಲ್ಲಿ ಬೆಂಗಳೂರು, ಮೈಸೂರು ಭಾಗದ ಜನರಿಗೆ ನೀರಿನ ಕೊರತೆ ಎದುರಾಗಲಿದೆ.
ಬೆಂಗಳೂರು, ಚಾಮರಾಜನಗರ, ಕೊಳ್ಳೆಗಾಲ ಹಾಗೂ ಮೈಸೂರಿನ ಕೆಲವು ಭಾಗಗಳಿಗೆ ನೀರು ಪೂರೈಕೆಯ ಮೂಲವಾಗಿರುವ ಕಬಿನಿಯಲ್ಲಿ ಇನ್ನು 60 ದಿನಗಳಿಗೆ ಸಾಕಾಗುವಷ್ಟು ಮಾತ್ರ ನೀರಿನ ಸಂಗ್ರಹವಿದೆ. ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಬಾರದ ಕಾರಣ ಕಬಿನಿಯಲ್ಲಿ ನೀರಿನ ಮತ್ತ ಕೇವಲ 6.4 ಟಿಎಂಸಿ ಅಡಿಯಷ್ಟಿದೆ. ಕಬಿನಿ ಜಲಾಶಯ ಬೆಂಗಳೂರು, ಮೈಸೂರು ಮಾತ್ರವೇ ಅಲ್ಲದೇ ನೆರೆ ರಾಜ್ಯ ತಮಿಳುನಾಡಿಗೂ ನೀರು ಪೂರೈಕೆ ಮಾಡುತ್ತಿದೆ.
2015 ರ ಮಾ.8 ರಂದು ಕಬಿನಿ ಜಲಾಶಯದ ನೀರಿನ ಮಟ್ಟ 2,275 ಅಡಿಗಳಷ್ಟಿತ್ತು( ಜಲಾಶಯದ ಗರಿಷ್ಠ ಸಾಮರ್ಥ್ಯ 2,284 ಅಡಿ) 2016 ರ ಮಾ.8 ರಂದು 2,260 ರಷ್ಟಾಗಿದೆ. ಕಬಿನಿ ಜಲಾಶಯದ ನೀರು ಸಂಗ್ರಹಣಾ ಪ್ರದೇಶಗಳಲ್ಲಿ ಏಪ್ರಿಲ್ ವೇಳೆಗೆ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಪೂರ್ವ ಮಳೆ ಬಾರದೇ ಇದ್ದಲ್ಲಿ ಬೇಸಿಗೆಯಲ್ಲಿ ನೀರಿನ ಕೊರತೆ ಎದುರಾಗುವುದು ನಿಶ್ಚಿತ.
ಇನ್ನು ನೀರಾವರಿ ಬೆಳೆಗಳಿಗೆ ಕಬಿನಿ ಜಲಾಶಯದಿಂದ ನೀರು ಪೂರೈಕೆಯನ್ನು ಸ್ಥಗಿತಗೊಳಿಸಲು ನೀರಾವರಿ ಇಲಾಖೆ ನಿರ್ಧರಿಸಿರುವುದರಿಂದ ಕೃಷಿ ಚಟುವಟಿಕೆ ಸಹ ಸ್ಥಗಿತಗೊಂಡಿದೆ. ಪ್ರತಿ 10 ದಿನಗೊಳಿಗೊಮ್ಮೆ ಕುಡಿಯುವ ನೀರಿಗಾಗಿ 1 ಟಿಎಂಸಿ ನೀರು ಖರ್ಚಾಗುತ್ತಿದೆ. ಕಬಿನಿ ಜಲಾಶಯದ ನೀರು ಸಂಗ್ರಹಣಾ ಪ್ರದೇಶವಾಗಿರುವ ವಯನಾಡ್ ನಲ್ಲಿ ಸಾಮಾನ್ಯವಾಗಿ ಅಕ್ಟೋಬರ್ ವರೆಗೂ ಮಳೆ ಸುರಿಯುತ್ತದೆ. ಆದರೆ ಕಳೆದ ವರ್ಷ ಜೂನ್ ನಿಂದ ವಯನಾಡ್ ನಲ್ಲಿ ಮಳೆಯಾಗಿಲ್ಲದ ಕಾರಣ ಜಲಾಶಯದಲ್ಲಿ ಈಗಾಗಲೇ ಸಂಗ್ರಹವಾಗಿರುವ ನೀರಿನ ಪ್ರಮಾಣ ವೇಗವಾಗಿ ಕುಸಿಯುತ್ತಿದೆ.
ಇನ್ನು ಕೆಆರ್ ಎಸ್ ಜಲಾಶಯದಲ್ಲಿಯೂ ನೀರಿನ ಮಟ್ಟ ಕುಸಿಯುತ್ತಿದ್ದು ಕಳೆದ ವರ್ಷ 105.56 ಅಡಿ ಇದ್ದ ನೀರಿನ ಮಟ್ಟ ಈ ವರ್ಷ 90 .94 ಕ್ಕೆ ಕುಸಿದಿದೆ. ಇಷ್ಟೆಲ್ಲಾ ಆದರು ಸಹ ಬೆಂಗಳೂರಿಗೆ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದು ಬೆಂಗಳೂರು ಜಲಮಂಡಳಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಬೆಂಗಳೂರಿಗೆ ನೀರನ್ನು ಸಂಗ್ರಹಣೆ ಮಾಡುವಂತೆ ಕೆಆರ್ ಎಸ್ ಅಧಿಕಾರಿಗಳಿಗೆ ಈಗಾಗಲೇ ಮನವಿ ಮಾಡಿರುವುದಾಗಿ ಬೆಂಗಳೂರು ಜಲಮಂಡಳಿ ಅಧ್ಯಕ್ಷ ಟಿಎಂ ವಿಜಯ್ ಭಾಸ್ಕರ್ ತಿಳಿಸಿದ್ದಾರೆ. ಬೆಂಗಳೂರಿಗೆ ಪ್ರತಿ ತಿಂಗಳಿಗೆ 1 .5 ಟಿಎಂಸಿ ಅಡಿ ನೀರಿನ ಅಗತ್ಯವಿದ್ದು ಕೆಆರ್ ಎಸ್ ನಲ್ಲಿ 16 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ಅದ್ದರಿಂದ ಬೆಂಗಳುರಿಗೆ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದು ವಿಜಯ್ ಭಾಸ್ಕರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


