ರಾಜ್ಯ

ಬೆಂಗಳೂರು: ಇನ್ಮುಂದೆ ವಾರಪೂರ್ತಿ ಮಧ್ಯರಾತ್ರಿ 1 ಗಂಟೆವರೆಗೂ ಮೋಜು ಮಸ್ತಿ

ನಗರದ ಬಾರ್‌ ಹಾಗೂ ಪಬ್‌ಗಳ ವಹಿವಾಟು ಅವಧಿಯನ್ನು ಈಗಿನ 11.30ವರೆಯಿಂದ ತಡರಾತ್ರಿ 1 ಗಂಟೆ ವರೆಗೂ ವಿಸ್ತರಿಸಿ ರಾಜ್ಯ ಅಬಕಾರಿ ಇಲಾಖೆ ..

ಬೆಂಗಳೂರು: ಇನ್ಮುಂದೆ ವಾರಪೂರ್ತಿ ಮಧ್ಯರಾತ್ರಿ 1 ಗಂಟೆವರೆಗೂ ಮೋಜು ಮಸ್ತಿ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ನಗರದ ಬಾರ್‌ ಹಾಗೂ ಪಬ್‌ಗಳ ವಹಿವಾಟು ಅವಧಿಯನ್ನು ಈಗಿನ 11.30ವರೆಯಿಂದ ತಡರಾತ್ರಿ 1 ಗಂಟೆ ವರೆಗೂ ವಿಸ್ತರಿಸಿ ರಾಜ್ಯ ಅಬಕಾರಿ ಇಲಾಖೆ ಶುಕ್ರವಾರ ಅಧಿಸೂಚನೆ ಹೊರಡಿಸಿದೆ. ಜುಲೈ 14ರಿಂದ ಹೊಸ ನಿಯಮ ಜಾರಿಗೆ ಬಂದಿದೆ.

ಬೆಂಗಳೂರಿನ ನಾಗರಿಕರು ತಡರಾತ್ರಿ ಜೀವನಕ್ಕೆ ಹೆಚ್ಚು ಒಗ್ಗಿಕೊಂಡಿದ್ದು, 30 ವರ್ಷ ಒಳಗಿನ ಯುವಕರು ತಡರಾತ್ರಿಯಲ್ಲಿ ಊಟ, ಮದ್ಯಕ್ಕಾಗಿ ಇನ್ನು ಮುಂದೆ ಪರದಾಡುವಂತಿಲ್ಲ. ಲೈಸೆನ್ಸ್ ಪಡೆದ ಎಲ್ಲಾ ಬಾರ್ ಮತ್ತು ಪಬ್ ಹಾಗೂ ರೆಸ್ಟೋರೆಂಟ್ ಗಳು ಮಧ್ಯರಾತ್ರಿ ಗಂಟೆಯವರೆಗೂ ತೆರೆದಿರಲಿವೆ.

ರಾತ್ರಿ 1 ಗಂಟೆಯವರೆಗೂ ರೆಸ್ಟೋರೆಂಟ್ ಗಳು ತೆರೆದಿರುವುದರಿಂದ ನಗರದಲ್ಲಿ ಮಹಿಳೆಯರು ಸುರಕ್ಷಿತವಾಗಿರುತ್ತಾರೆ. ಇದು ಸರ್ಕಾರದ ಒಳ್ಳೆಯ ನಿರ್ಧಾರ ಎಂದು ಐಟಿ ಕಂಪನಿಯ ಉದ್ಯೋಗಿಯೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

ಮಧ್ಯರಾತ್ರಿವರೆಗೂ ನಗರ ಎಚ್ಚರವಾಗಿರುವುದರಿಂದ ಹೆಚ್ಚು ಸುರಕ್ಷಿತವಾಗಿರುತ್ತದೆ ಎಂದು ಬೆಂಗಳೂರು ಪೊಲಿಟಿಕಲ್ ಆಕ್ಷನ್ ಕಮಿಟಿ ಸದಸ್ಯ ವಿ ರವಿ ಚಂದರ್ ತಿಳಿಸಿದ್ದಾರೆ.

ಕಳೆದ ವಾರ ಮಧ್ಯರಾತ್ರಿ 1 ಗಂಟೆಯವರೆಗೂ ಬಾರ್ ಅಂಡ್ ರೆಸ್ಟೋರೆಂಟ್ ಗಳನ್ನು ತೆರೆದು ಟ್ರಯಲ್ ನೋಡಲಾಯಿತು. ನಿರೀಕ್ಷೆಗಿಂತ ಹೆಚ್ಚಿನ ಗ್ರಾಹಕರು ಆಗಮಿಸಿದ್ದು ಬಾರ್ ಮತ್ತು ಪಬ್ ಮಾಲೀಕರುಗಳಿಗೆ ಸಮಾಧಾನ ತಂದಿದೆ.

ರಾತ್ರಿ 1 ಗಂಟೆವರೆಗೂ ಅವಧಿ ವಿಸ್ತರಣೆ ಮಾಡಿರುವುದು ಅನೇಕ ಜನರ ಗಮನಕ್ಕೆ ಬಂದಿರಲಿಲ್ಲ. ಹೀಗಾಗಿ ಟ್ರಯಲ್ ಮಾಡಿದ ವಾರದಲ್ಲಿ ಹೆಚ್ಚು ಜನ ಬಂದಿಲ್ಲ. ಈಗ ಎಲ್ಲರಿಗೂ ವಿಷಯ ತಿಳಿದಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಗ್ರಾಹಕರು ಆಗಮಿಸಲಿದ್ದಾರೆ ಎಂದು ಚರ್ಚ್ ಸ್ಟ್ರೀಟ್ನಲ್ಲಿರುವ ಪಬ್ ಮ್ಯಾನೇಜರ್ ಓಂ ಪ್ರಕಾಶ್ ಅಭಿಪ್ರಾಯ ಪಟ್ಟಿದ್ದಾರೆ.

ತಡರಾತ್ರಿ ತನಕ ಬಾರ್‌ ಹಾಗೂ ಪಬ್‌ಗಳು ವಹಿವಾಟು ನಡೆಸುವುದರಿಂದ ಕುಡಿದು ವಾಹನಗಳನ್ನು ಓಡಿಸುವವರ ಪ್ರಮಾಣದಲ್ಲಿ ಹೆಚ್ಚುವ ಸಾಧ್ಯತೆಗಳಿವೆ. ಕುಡಿದು ವಾಹನ ಚಾಲನೆ ಮಾಡುವವರ ಪತ್ತೆಗೆ ಎಂದಿನಂತೆ ವಿಶೇಷ ಕಾರ್ಯಾಚರಣೆ ನಡೆಸುತ್ತೇವೆ. ಹಿಂದಿನಂತೆಯೇ ಅಂಗಡಿಗಳು ಮುಚ್ಚಿದ ಬಳಿಕ ಈ ಕಾರ್ಯಾಚರಣೆ ಮಾಡುತ್ತೇವೆ. ತಡರಾತ್ರಿವರೆಗೂ ಬಾರ್‌ಗಳು ಕಾರ್ಯನಿರ್ವಹಿಸಿದರೂ ದೊಡ್ಡಮಟ್ಟದಲ್ಲಿ ಸಂಚಾರ ಸಮಸ್ಯೆ ಎದುರಾಗುವುದಿಲ್ಲ. ಇರುವ ಸಿಬ್ಬಂದಿಯನ್ನು ವ್ಯವಸ್ಥಿತವಾಗಿ ಬಳಸಿಕೊಂಡು ಪರಿಸ್ಥಿತಿಯನ್ನು ನಿಭಾಯಿಸುತ್ತೇವೆ.

ಈಗಾಗಲೇ ವಾರಾಂತ್ಯದಲ್ಲಿ  ಬಾರ್‌ ಹಾಗೂ ಪಬ್‌ಗಳಿಗೆ ತಡರಾತ್ರಿ ತನಕ ವಹಿವಾಟಿಗೆ ಅವಕಾಶ ಇತ್ತು. ಅದು ಇನ್ನು ಮುಂದೆ ವಾರದ ಇತರ ದಿನಗಳಿಗೂ ಮುಂದುವರೆಯುತ್ತದೆ ಅಷ್ಟೇ. ಅಬಕಾರಿ ಇಲಾಖೆಯ ನಿರ್ಧಾರದಿಂದ ನಮಗೇನೂ ತೊಂದರೆ, ಹೊರೆ ಇಲ್ಲ ಎಂದು ನಗರ ಪೊಲೀಸ್ ಕಮಿಷನರ್‌ ಎನ್‌.ಎಸ್‌. ಮೇಘರಿಕ್‌  ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.