ನೋಟು ಬದಲಾವಣೆ ಹೆಸರಲ್ಲಿ ಶ್ರೀಗಳಿಗೆ ಮೋಸ ಮಾಡಿದ ಭೂಪ!
ಕೇಂದ್ರ ಸರ್ಕಾರದ ನೋಟು ನಿಷೇಧ ಬಳಿಕ ಮಠಕ್ಕೆ ಬಂದಿದ್ದ ಸುಮಾರು 1 ಕೋಟಿ ಮೌಲ್ಯದ ಹಳೆಯ 500 ಮತ್ತು 1000 ರು.ನೋಟುಗಳನ್ನು ಬದಲಾಯಿಸಿ ಕೊಡುವುದಾಗಿ ಹೇಳಿದ ಭಕ್ತನೋರ್ವ ಬಳಿಕ ನಾಪತ್ತೆಯಾಗಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

ಹಾವೇರಿ: ಕೇಂದ್ರ ಸರ್ಕಾರದ ನೋಟು ನಿಷೇಧ ಬಳಿಕ ಮಠಕ್ಕೆ ಬಂದಿದ್ದ ಸುಮಾರು 1 ಕೋಟಿ ಮೌಲ್ಯದ ಹಳೆಯ 500 ಮತ್ತು 1000 ರು.ನೋಟುಗಳನ್ನು ಬದಲಾಯಿಸಿ ಕೊಡುವುದಾಗಿ ಹೇಳಿದ ಭಕ್ತನೋರ್ವ ಬಳಿಕ ನಾಪತ್ತೆಯಾಗಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.
ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ಈ ಘಟನೆ ನಡೆದಿದ್ದು, ಜಂಗಮವಾಡಿ ಮಠದ ದತ್ತಾತ್ರೇಯ ಅವಧೂತ ಶ್ರೀಗಳಿಂದ ಒಂದು ಕೋಟಿ ರು. ಹಳೆಯ ನೋಟುಗಳನ್ನು ಪಡೆದ ದಾದಾಪೀರ್ ಭೂಷಿ ಎಂಬಾತ ನಾಪತ್ತೆಯಾಗಿದ್ದ. ಇದೀಗ ಆರೋಪಿಯ ವಿರುದ್ಧ ದತ್ತಾತ್ರೇಯ ಅವಧೂತ ಶ್ರೀಗಳು ಪ್ರತಿಭಟನೆ ನಡೆಸುತ್ತಿದ್ದು, ಮಠದ ಹಲವು ಭಕ್ತರು ಶ್ರೀಗಳಿಗೆ ಸಾಥ್ ನೀಡಿದ್ದಾರೆ. ಇದೀಗ ದಾದಾ ಪೀರ್ ಭೂಷಣ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಬ್ಯಾಡಗಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಪರಾರಿಯಾಗಿರುವ ದಾದಾಪೀರ್ ಭೂಷಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬ್ಯಾಡಗಿಯಿಂದ ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ. ಅಲ್ಲದೆ ಈತ ಪಟ್ಟಣದ ಎಪಿಎಂಸಿ ಯಾರ್ಡ್‌ನಲ್ಲಿ ಮೆಣಸಿನಕಾಯಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಎಂದು ತಿಳಿದುಬಂದಿದೆ.
ಏನಿದು ಘಟನೆ?
ಪೊಲೀಸ್ ಮೂಲಗಳ ಪ್ರಕಾರ ಕೇಂದ್ರ ಸರ್ಕಾರ ನೋಟು ನಿಷೇಧ ಮಾಡಿದ ಬಳಿಕ ದತ್ತಾತ್ರೇಯ ಅವಧೂತ ಶ್ರೀಗಳು ತಮ್ಮ ಬಳಿ ಇದ್ದ ಸುಮಾರು 1 ಕೋಟಿ ರು. ಮೌಲ್ಯದ ಹಳೆಯ 500 ಮತ್ತು 1000 ರು.ನೋಟುಗಳನ್ನು ಬದಲಿಸಲು ಮುಂದಾಗಿದ್ದರು. ಆದರೆ ಬ್ಯಾಂಕುಗಳಲ್ಲಿ ದಿನವೊಂದಕ್ಕೆ ಗರಿಷ್ಠ 2 ಸಾವಿರ ರು.ಗಳನ್ನು ಮಾತ್ರ ಬದಲಿಸಲು ಅವಕಾಶವಿದ್ದರಿಂದ ದಾದಾಪೀರ್ ಭೂಷಿ ಶ್ರೀಗಳ ಹಣ ಬದಲಾವಣೆ ಮಾಡಿಸಿಕೊಡುವುದಾಗಿ ಮುಂದೆ ಬಂದಿದ್ದ. ಕಳೆದ ನವೆಂಬರ್18ರಂದು ಹಾವೇರಿಯ ಜಾಫರ್ ಎಂಬುವರ ಮೂಲಕ ದಾದಾಪೀರ್ ಭೂಷಿ ಜಂಗಮವಾಡಿ ಮಠದ ದತ್ತಾತ್ರೇಯ ಅವಧೂತ ಶ್ರೀಗಳಿಂದ ಹಣ ಪಡೆದಿದ್ದ. ಕಮಿಷನ್ ಪಡೆದು ಹಳೆಯ ನೋಟುಗಳನ್ನು ಬದಲಾಯಿಸಿಕೊಡುವ ದಂಧೆಗಿಳಿದಿದ್ದ ದಾದಾಪೀರ್ ಭೂಷಿ, ಶೇ.25 ಕಮಿಷನ್ ಆಧಾರದಲ್ಲಿ ನೋಟುಗಳನ್ನು ಬದಲಾಯಿಸಿಕೊಡುವುದಾಗಿ ಹೇಳಿ ಶ್ರೀಗಳಿಂದ ಒಂದು ಕೋಟಿ ರು. ಪಡೆದಿದ್ದನಂತೆ.
ಆದರೆ ಕೆಲ ದಿನಗಳ ಬಳಿಕ ದಾದಾಪೀರ್ ಬಳಿ ಶ್ರೀಗಳು ಬದಲಾವಣೆ ಹಣ ಕೇಳಿದಾಗ, ದಾದಾಪೀರ್ ಕೇವಲ 15 ಲಕ್ಷ ರು.ಗಳನ್ನು ಶ್ರೀಗಳ ಸಂಬಂಧಿಯೊಬ್ಬರ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದ. ಉಳಿದ ಹಣವನ್ನು ಇಂದು ನೀಡುತ್ತೇನೆ ನಾಳೆ ನೀಡುತ್ತೇನೆ ಎಂದು ದಿನದೂಡುತ್ತಾ ಬಂದ. ಬಳಿಕ ಒಂದು ದಿನ ಉಲ್ಟಾ ಹೊಡೆದ ದಾದಾಪೀರ್ ಬಳಿಕ ಹಣ ನೀಡಲು ಸಾಧ್ಯವಿಲ್ಲ ಎಂದು ಮತ್ತೊಮ್ಮೆ ನೀವು ಹಣವನ್ನು ಕೊಟ್ಟೇ ಇಲ್ಲ ಎಂದು ವಾದಿಸತೊಡಗಿದ.
ಈತನ ಈ ನಡವಳಿಕೆಯ ವಿರುದ್ಧ ಅಸಮಾಧಾನಗೊಂಡ ಶ್ರೀಗಳು ಸಮುದಾಯದ ಮುಖಂಡರಿಂದ ರಾಜಿಪಂಚಾಯತಿ ಮಾಡಿಸಿದರು. ಆಗಲೂ ಈತ ಬಗ್ಗದಿದ್ದಾಗ ಶ್ರೀಗಳು ಧರಣಿ ನಡೆಸಲು ನಿರ್ಧರಿಸಿದ್ದಾರೆ. ಇತ್ತ ಶ್ರೀಗಳು ಪ್ರತಿಭಟನೆ ನಡೆಸುತ್ತಿದ್ದಂತೆ ಅತ್ತ ದಾದಾಪೀರ್ ಪರಾರಿಯಾಗಿದ್ದು, ಶ್ರೀಗಳು ಈ ಬಗ್ಗೆ ಬ್ಯಾಡಗಿ ಠಾಣೆಗೆ ದೂರು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


