ಆರೋಗ್ಯ-ಜೀವನಶೈಲಿ

ವಾಯುಮಾಲಿನ್ಯದಿಂದ ಭಾರತೀಯರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಹೆಚ್ಚಳ

ಹೊರಾಂಗಣದ ಮಲಿನ ವಾಯುವಿನಲ್ಲಿರುವ ಕ್ಯಾನ್ಸರ್ ಕಾರಕ ಪದಾರ್ಥಗಳು ಉಸಿರಾಟದ ಮೂಲಕ ದೇಹದೊಳಗೆ ಪ್ರವೇಷಿಸಿ ಅಂಗಾಂಶಗಳನ್ನು ನಾಶಗೊಳಿಸಿ ಶ್ವಾಸಕೋಶದ ಕ್ಯಾನ್ಸರಿಗೆ ಕಾರಣವಾಗುತ್ತವೆ.

ವಾಯುಮಾಲಿನ್ಯದಿಂದ ಭಾರತೀಯರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಹೆಚ್ಚಳ
Published On :

ವಾತಾವರಣದಲ್ಲಿ ಹೆಚ್ಚುತ್ತಿರುವ ಅಪಾಯದ ಅಂಶಗಳಿಂದಾಗಿ ಧೂಮ್ರಪಾನಿ ಗಳಲ್ಲದವರಲ್ಲಿಯೂ ಶ್ವಾಸಕೋಶದ ಕ್ಯಾನ್ಸರ್ ಜಾಸ್ತಿಯಾಗುತ್ತಿರುವ ಬಗ್ಗೆ ವಿಶ್ವ ಕ್ಯಾನ್ಸರ್ ದಿನಾಚರಣೆಯ ಸಂದರ್ಭದಲ್ಲಿ ಬೆಂಗಳೂರಿನ ಕಿದ್ವಾಯಿ ಸ್ಮರಣಾರ್ಥ ಕ್ಯಾನ್ಸರ್ ಸಂಸ್ಥೆಯ ಸರ್ಜಿಕಲ್ ಆಂಕಾಲಜಿ ವಿಭಾಗದ ಪ್ರಾಧ್ಯಾಪಕರಾದ ಡಾ. ಕೆ. ವಿ. ವೀರೇಂದ್ರ ಕುಮಾರ್‍ರವರು ಕಳವಳ ವ್ಯಕ್ತಪಡಿಸಿದ್ದಾರೆ. ಶ್ವಾಸಕೋಶದ ಕ್ಯಾನ್ಸರ್ (ಸ್ಮಾಲ್ ಸೆಲ್ ಮತ್ತು ನಾನ್ ಸ್ಮಾಲ್ ಸೆಲ್) ಪುರುಷ ಮತ್ತು ಮಹಿಳೆಯರಿಬ್ಬರಲ್ಲೂ ಕಂಡುಬರುವ ಎರಡನೆಯ ಸಾಮಾನ್ಯ ಕ್ಯಾನ್ಸರ್ ಆಗಿದೆ (ಚರ್ಮದ ಕ್ಯಾನ್ಸರ್ ಪರಿಗಣಿಸದೇ). ಪುರುಷರಲ್ಲಿ ಪ್ರೊಸ್ಟೇಟ್ ಕ್ಯಾನ್ಸರ್ ಸಾಮಾನ್ಯವಾಗಿದ್ದರೆ, ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪ್ರಮಾಣ ಹೆಚ್ಚಿರುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಎಲ್ಲ ಹೊಸ ಬಗೆಯ ಕ್ಯಾನ್ಸರುಗಳ 13% ದಷ್ಟು ಕೇಸುಗಳು ಶ್ವಾಸಕೋಶದ ಕ್ಯಾನ್ಸರಿಗೆ ಸಂಬಂಧಿಸಿದ್ದಾಗಿರುತ್ತವೆ.

ಅಸ್ತಮಾ, ಶ್ವಾಸನಾಳದ ಉರಿಯೂತ ಮತ್ತು ಕೊರೊನರಿ ಹಾರ್ಟ್ ಡಿಸೀಸ್‍ಗಳಿಗೆ ಹಾಗೂ ವಾಯುಮಾಲಿನ್ಯಕ್ಕೆ ಸಂಬಂಧವ್ನು ವೈದ್ಯರುಗಳು ತಳುಕು ಹಾಕುವುದು ಸಾಮಾನ್ಯವಾಗಿತ್ತು. ಆದರೆ ಈಗ ನಗರಗಳಲ್ಲಿ ಮಲಿನಗೊಳ್ಳುತ್ತಿರುವ ವಾಯುವಿನ ಮಟ್ಟಕ್ಕೂ ಮತ್ತು ಶ್ವಾಸಕೋಶ ಕ್ಯಾನ್ಸರಿನ ಏರಿಕೆಗೂ ನಡುವೆ ಸಂಬಂಧವನ್ನು ಗಮನಿಸುತ್ತಿದ್ದಾರೆ. “ಕಳೆದ ದಶಕದಲ್ಲಿ ಭಾರತದಲ್ಲಿ ಶ್ವಾಸಕೋಶದ ಕ್ಯಾನ್ಸರಿನ ಕೇಸುಗಳಲ್ಲಿ ಬಹಳ ಹೆಚ್ಚಳ ಕಂಡುಬಂದಿದೆ. ಧೂಮ್ರಪಾನ ಮತ್ತು ತಂಬಾಕಿನ ಬಳಕೆ ಶ್ವಾಸಕೋಶದ ಕ್ಯಾನ್ಸರಿಗೆ ಪ್ರಮುಖ ಕಾರಣವಾಗಿದ್ದರೆ, ನಗರಗಳಲ್ಲಿ ಅಪಾಯದ ಮಟ್ಟವನ್ನು ತಲುಪಿರುವ ವಾಯುಮಾಲಿನ್ಯವು ಕೂಡಾ ಕ್ಯಾನ್ಸರಿಗೆ ಕಾರಣವಾಗುತ್ತಿದೆ,” ಎನ್ನುತ್ತಾರೆ ಡಾ. ಕೆ.ವಿ. ವೀರೇಂದ್ರ ಕುಮಾರ್.  
ಶ್ವಾಸಕೋಶದ ಕ್ಯಾನ್ಸರ್ ಜಗತ್ತಿನಾದ್ಯಂತ ಪುರುಷರು ಮತ್ತು ಮಹಿಳೆಯರಲ್ಲಿ ಕಂಡುಬರುವ ಮೊದಲ 5 ಕ್ಯಾನ್ಸರುಗಳಲ್ಲಿ ಒಂದಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜಗತ್ತಿನಾದ್ಯಂತ 1.59 ಮಿಲಿಯನ್ ಜನರು ಪ್ರತಿ ವರ್ಷ ಶ್ವಾಸಕೋಶದ ಕ್ಯಾನ್ಸರಿಗೆ ಬಲಿಯಾಗುತ್ತಾರೆ.  ಭಾರತದಲ್ಲಿ ಪ್ರತಿ ವರ್ಷ 63,000 ಶ್ವಾಸಕೋಶದ ಕ್ಯಾನ್ಸರಿನ ಹೊಸ ಕೇಸುಗಳು ಪತ್ತೆಯಾಗುತ್ತವೆ. ಅದರಲ್ಲಿ 10-15% ದಷ್ಟು ಜನ ಮಾತ್ರ ಸರಿಸುಮಾರು 5 ವರ್ಷಗಳವರೆಗೆ ಬದುಕುಳಿಯಬಲ್ಲರು. ಭಾರತದ ಪ್ರತಿ 1000 ಜನರಲ್ಲಿ ಸುಮಾರು 6.8 ಜನರು ಶ್ವಾಸಕೋಶದ ಕ್ಯಾನ್ಸರಿನಿಂದ ಸಾವಿಗೀಡಾಗುತ್ತಾರೆ. 2010 ರ ದಿ ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಪ್ರಾಜೆಕ್ಟ್ ಪ್ರಕಾರ ಜಗತ್ತಿನಾದ್ಯಂತ 3.2 ಮಿಲಿಯನ್  ಜನರು ವಾಯುಮಾಲಿನ್ಯದ ಕಾರಣದಿಂದ ಸಾವಿಗೀಡಾಗುತ್ತಿದ್ದಾರೆ ಮತ್ತು ಅದರಲ್ಲಿ 223,000 ಜನರು ಶ್ವಾಸಕೋಶದ ಕ್ಯಾನ್ಸರಿನಿಂದ ಸಾವಿಗೀಡಾಗುತ್ತಾರೆ ಎಂದು ತಿಳಿಸುತ್ತದೆ.

“ಶ್ವಾಸಕೋಶದ ಕ್ಯಾನ್ಸರಿಗೆ ಧೂಮಪಾನವೇ ಪ್ರಮುಖ ಕಾರಣವೆಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಎಂದಿಗೂ ಧೂಮಪಾನ ಮಾಡಿರದ ಹಲವಾರು ಪುರುಷ ಮತ್ತು ಮಹಿಳಾ ರೋಗಿಗಳನ್ನು ನಾವು ನೋಡುತ್ತಿದ್ದೇವೆ. ಅತಿಯಾದ ಮಾಯುಮಾಲಿನ್ಯಕ್ಕೆ ಒಳಗಾದ ನಗರಗಳಲ್ಲಿ ವಾಸಿಸುತ್ತಿರುವ ಜನರ ಶಾಸೋಚ್ಛಾಸ ವ್ಯವಸ್ಥೆಯ ಮೇಲೆ ವಿಷಕಾರಿ ಅನಿಲವು ಉಂಟುಮಾಡುವ ಪರಿಣಾಮಗಳ ಬಗ್ಗೆ ಪುಲ್ಮನೊಲೊಜಿಸ್ಟ್‍ಗಳು ಮಾತನಾಡುತ್ತಿರುತ್ತಾರೆ. ಕಳೆದ ಕೆಲವು ವರ್ಷಗಳಲ್ಲಿ ವಾತಾವರಣದಲ್ಲಿರುವ ವಿಷಕಾರಿ ಮಲಿನಕಾರಕಗಳು ಶ್ವಾಸಕೋಶದ ಕ್ಯಾನ್ಸರಿನ ಹೆಚ್ಚಳಕ್ಕೆ ಕಾರಣವಾಗುತ್ತಿವೆ ಎಂಬ ಬಗ್ಗೆ ಸಾಕಷ್ಟು ಪುರಾವೆಗಳಿವೆ,” ಎಂದು ಡಾ. ಕೆ.ವಿ ವೀರೇಂದ್ರ ಕುಮಾರ್ ಮಾಹಿತಿ ನೀಡುತ್ತಾರೆ. 

“ನಗರದ ಗಾಳಿಯು ಸಸ್ಪೆಂಡೆಡ್ ಪಾರ್ಟಿಕ್ಯುಲೇಟ್, ನೈಟ್ರೋಜನ್ ಡೈಯಾಕ್ಸೈಡ್, ಸಲ್ಫರ್ ಡೈಯಾಕ್ಸೈಡ್, ಕಾರ್ಬನ್ ಡೈಯಾಕ್ಸೈಡ್ ಮತ್ತು ಪೊಲಿಸೈಕ್ಲಿಕ್ ಅರೊಮ್ಯಾಟಿಕ್ ಹೈಡ್ರೊಕಾರ್ಬನ್ಸ್‍ನಂತಹ ಹಲವು ಕ್ಯಾನ್ಸರ್ ಕಾರಕ ಅಂಶಗಳನ್ನು ಹೊಂದಿರುತ್ತದೆ. ಇವು ದೇಹದ ಅಂಗಾಂಶಗಳನ್ನು ನಾಶಗೊಳಿಸಿ ಕ್ಯಾನ್ಸರಿಗೆ ಕಾರಣವಾಗುತ್ತವೆ ಎಂದು ತಿಳಿಯಲಾಗಿದೆ.”

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸಂಸ್ಥೆಯು ನ್ಯಾಶನಲ್ ಕ್ಯಾನ್ಸರ್ ರಿಜಿಸ್ಟ್ರಿ ಕಾರ್ಯಕ್ರಮದಡಿಯಲ್ಲಿ ಕೆಲ ವರ್ಷಗಳ ಹಿಂದೆ ಹಲವು ನಗರಗಳಿಂದ ಸಂಗ್ರಹಿಸಿದ ಮಾಹಿತಿಯ ಪ್ರಕಾರ ಶ್ವಾಸಕೋಶದ ಕ್ಯಾನ್ಸರಿನಿಂದ ಬಳಲುತ್ತಿರುವ 90%ದಷ್ಟು ರೋಗಿಗಳು ತಂಬಾಕಿನ ಬಳಕೆಯನ್ನು ಮಾಡುತ್ತಿದ್ದುದು ತಿಳಿದುಬಂದಿದೆ. ಸುಮಾರು 87%ದಷ್ಟು ಪುರುಷರು ಸಕ್ರಿಯ ಧೂಮ್ರಪಾನಿಗಳಾಗಿದ್ದರೆ 85%ದಷ್ಟು ಮಹಿಳೆಯರು ಸಕ್ರಿಯ ಧೂಮ್ರಪಾನಿಗಳಾಗಿದ್ದರು. ಅದರಲ್ಲಿ 3%ದಷ್ಟು ರೋಗಿಗಳು ನಿಷ್ಕ್ರಯವಾಗಿದ್ದು ತಂಬಾಕಿನ ದುಷ್ಪರಿಣಾಮಕ್ಕೆ ಒಳಗಾಗಿದ್ದರು.

ಇಂಟರ್‍ನ್ಯಾಶನಲ್ ಎಜೆನ್ಸಿ ಫಾರ್ ರಿಸ್ರ್ಚ್ ಆನ್ ಕ್ಯಾನ್ಸರ್ ಸಂಸ್ಥೆಯು ಈಗಾಗಲೇ ಹೊರಾಂಗಣ ವಾಯುಮಾಲಿನ್ಯವು ಕ್ಯಾನ್ಸರ್ ಕಾರಕ ಎಂದು ಘೋಷಿಸಿದೆ. ಜೊತೆಗೆ, ಹೊರಾಂಗಣ ವಾಯುಮಾಲಿನ್ಯದಲ್ಲಿರುವ  ಡೆಸೆಲ್ ಎಂಜಿನ್ ಉಗುಳಿವಿಕೆಯು, ಸಾಲ್ವೆಂಟುಗಳು, ಮೆಟಲ್ಸ್ ಮತ್ತು ಧೂಳು ಕ್ಯಾನ್ಸರ್ ಕಾರಕವೆಂದು ವಿಂಗಡಣೆ ಮಾಡಿದೆ. ಪಶ್ಚಿಮಾತ್ಯ ದೇಶಗಳಲ್ಲಿ ನಡೆಸಲಾದ ಅಧ್ಯಯನಗಳಿಂದ ಹೆಚ್ಚಿನ ವಾಯುಮಾಲಿನ್ಯಕ್ಕೆ ಒಳಗಾಗಿರುವ ಪ್ರದೇಶಗಳ ಸುತ್ತಮುತ್ತ ವಾಸಿಸುವ ಜನರಲ್ಲಿ ಕ್ಯಾನ್ಸರಿನ ಪ್ರಮಾಣವು ಹೆಚ್ಚಾಗಿರುವುದು ಕಂಡುಬಂದಿದೆ.

“ಭಾರತದಲ್ಲಿ ವಾಯುಮಾಲಿನ್ಯ ಮತ್ತು ಶ್ವಾಸಕೋಶದ ಕ್ಯಾನ್ಸರಿನ ನಡುವೆ ಇರುವ ಸಂಬಂಧದ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆದಿಲ್ಲವಾದರೂ ವೈದ್ಯಕೀಯ ಪುರಾವೆಗಳು ಈ ಅಂಶವು ಜನರಲ್ಲಿ ಕ್ಯಾನ್ಸರಿನ ಅಪಾಯವನ್ನು ಹೆಚ್ಚಿಸಿವೆ ಎಂದು ತಿಳಿಸುತ್ತವೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇದ ಮತ್ತು ಚಿತ್ರಗಳ ಮೂಲಕ ಈ ಬಗ್ಗೆ ಎಚ್ಚರಿಕೆಯನ್ನು ನೀಡಲಾಗುತ್ತಿದ್ದರೂ ಸಹ ಭಾರತದಲ್ಲಿ ಧೂಮ್ರಪಾನಿಗಳ ಸಂಖ್ಯೆ ಹೆಚ್ಚಿಗಿಯೇ ಇದೆ. ದುರದೃಷ್ಟವಶಾತ್ ಭಾರತದಲ್ಲಿ ಹೆಚ್ಚಿನ ಮಹಿಳೆಯರು ಮತ್ತು ಮಕ್ಕಳು ಸ್ವತಃ ಧೂಮ್ರಪಾನಿಗಳಲ್ಲಿದಿದ್ದರೂ ಸಹ ಧೂಮ್ರಪಾನದ ಹೊಗೆಗೆ ಈಡಾಗುತ್ತಿದ್ದಾರೆ. ಧೂಮ್ರಪಾನ, ತಂಬಾಕಿನ ಹೊಗೆಗೆ ಒಡ್ಡಿಕೊಳ್ಳುವುದು ಮತ್ತು ವಾಯುಮಾಲಿನ್ಯವು ಇದರ ಜೊತೆಗೆ ಸೇರಿಕೊಂಡಾಗ ಶ್ವಾಸಕೋಶದ ಕ್ಯಾನ್ಸರಿನ ಸಂಭವನೀಯತೆಯು ಹೆಚ್ಚಾಗುತ್ತದೆ” ಎನ್ನುತ್ತಾರೆ ಡಾ. ಕುಮಾರ್.

ಅಪಾಯವನ್ನು ತಗ್ಗಿಸುವುದು ಹೇಗೆ:
ಧೂಮಪಾನದಿಂದ ದೂರವಿರಿ: ಮೇಲೆ ತಿಳಿಸಿದಂತೆ 90%ದಷ್ಟು ಶ್ವಾಸಕೋಶದ ಕ್ಯಾನ್ಸರಿಗೆ ತಂಬಾಕಿನ ಹೊಗೆಯೇ ಕಾರಣವಾಗಿದೆ. ಜಗತ್ತಿನಾದ್ಯಂತ ಮತ್ತು ಭಾರತದಲ್ಲಿ ಶ್ವಾಸಕೋಶದ ಕ್ಯಾನ್ಸರಿನ ರೋಗಿಗಳು ಬದುಕುಳಿಯುವ ಸಾಧ್ಯತೆ ಕಡಿಮೆ ಇದೆ. ಭಾರತದಲ್ಲಿ ಶ್ವಾಸಕೋಶದ ಕ್ಯಾನ್ಸರಿನ ಕೇಸುಗಳು ಆಕ್ರಮಕವಾಗಿದ್ದು ಅತಿ ಬೇಗ ವೃದ್ಧಿಯಾಗುತ್ತವೆ. ಈರೀತಿಯಾದ ಪರಿಸ್ಥಿತಿಯಲ್ಲಿ ಅಪಾಯದ ಮಟ್ಟವನ್ನು ತಗ್ಗಿಸುವುದೇ ಪ್ರಮುಖ ಆಯ್ಕೆಯಾಗಿದೆ. ಧೂಮ್ರಪಾನವನ್ನು ಬಿಡುವುದು ಮೊದಲ ಮಾರ್ಗ.

ಮಲಿನ ಗಾಳಿಗೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡಿ: ರಸ್ತೆಯಲ್ಲಿ ಸಂಚರಿಸುವಾಗ ಅಪಾಯಕಾರಿ ರಾಸಾಯನಿಕಗಳು ಮತ್ತು ಪಾಟಕ್ಯುಲೇಟ್ ಕಣಗಳನ್ನು ಉಸಿರಾಡುವುದನ್ನು ತಪ್ಪಿಸಲು ಮಾಸ್ಕ್ ಧರಿಸಿ. ಜೊತೆಗೆ ಹೊರಾಂಗಣದಲ್ಲಿ ವಾಕಿಂಗ್ ಮತ್ತು ವ್ಯಾಯಾಮ ಮಾಡಲು ಮಾಲಿನ್ಯ ಕಡಿಮೆ ಇರುವ ಮುಂಜಾವಿನ ಸಮಯವನ್ನು ಆಯ್ದುಕೊಳ್ಳಿ.

ಲಕ್ಷಣಗಳ ಬಗ್ಗೆ ಎಚ್ಚರದಿಂದಿರಿ: ಮುಂಚಿತವಾಗಿ ಪತ್ತೆ ಹಚ್ಚುವುದರಿಂದ ಜೀವರಕ್ಷಣೆ ಅಥವಾ ಜೀವಿತಾವಧಿಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಜ್ವರದಿಂದ ಕೂಡಿದ ಉಸಿರಾಟದ ತೊಂದರೆ, ಕೆಮ್ಮು, ಶ್ವಾಸನಾಳದ ಉರಿಯೂತ ಅಥವಾ ಉಬ್ಬಸವನ್ನು ಕಡೆಗಣಿಸಬೇಡಿ. ಭಾರತದಲ್ಲಿ ಕೆಲವೊಮ್ಮೆ ಈ ಲಕ್ಷಣಗಳನ್ನು ಕ್ಷಯವೆಂದು ತಪ್ಪಾಗಿ ಭಾವಿಸಿ ಚಿಕಿತ್ಸೆ ನೀಡಲಾಗುತ್ತದೆ. ಆದ್ದರಿಂದ ಈ ಲಕ್ಷಣಗಳ ಬಗ್ಗೆ ಜಾಗೃತರಾಗಿರಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.