EYE ಡೋಂಟ್ ಕೇರ್ !
ನಮ್ಮ ದೇಹದಲ್ಲಿ ಅತಿ ಹೆಚ್ಚು ಬಳಕೆಯಾಗುವ ಅಂಗ ಕಣ್ಣು. ಸೂಕ್ಷ್ಮಾತಿ ಸೂಕ್ಷ್ಮ ಅಂಗಗಳ ಪೈಕಿ ಅಗ್ರಗಣ್ಯ ಈ ಅಂಗ...

ನಮ್ಮ ದೇಹದಲ್ಲಿ ಅತಿ ಹೆಚ್ಚು ಬಳಕೆಯಾಗುವ ಅಂಗ ಕಣ್ಣು. ಸೂಕ್ಷ್ಮಾತಿ ಸೂಕ್ಷ್ಮ ಅಂಗಗಳ ಪೈಕಿ ಅಗ್ರಗಣ್ಯ ಈ ಅಂಗ. ಆದರೆ, ಇತರ ಅಂಗಗಳ ಬಗ್ಗೆ ವಹಿಸಿದಷ್ಟು ಕಾಳಜಿಯನ್ನು ಕಣ್ಣಿನ ಬಗ್ಗೆ ವಹಿಸುವುದಿಲ್ಲ. ಜ್ವರ, ತಲೆನೋವು ಬಂದರೆ ಮಾತ್ರೆ ನುಂಗುತ್ತೇವೆ. ಅಜೀರ್ಣವಾದಾಗ ಓಆರ್ಎಸ್ ಕುಡಿಯುತ್ತೇವೆ. ಕೈ ಕಾಲು ಸೋತಾಗ ಯಾವುದೋ ವಿಟಮಿನ್ ಟಾನಿಕ್ ಕುಡಿದು ಹಾಯ್ ಎನ್ನುತ್ತೇವೆ. ಎಷ್ಟೇ ಆರೋಗ್ಯವಂತರಾಗಿದ್ದರೂ ವರ್ಷಕ್ಕೊಮ್ಮೆ ಫ್ಯಾಮಿಲಿ ಡಾಕ್ಟರ್ ಎದುರು ಕೂತು ನರ ನಾಡಿಗಳ ಜಾತಕ ಹೇಳಿಸಿಕೊಂಡು ಬರುತ್ತೇವೆ. ಕಣ್ಣನ್ನು ಮರೆಯುತ್ತೇವೆ! ನಮ್ಮ ಈ ಮರೆಗುಳಿತನ ಹಾಗೂ ನಿರ್ಲಕ್ಷ್ಯದಿಂದಲೇ ಸಾಕಷ್ಟು ಅಪಾಯವನ್ನೂ ತಂದುಕೊಳ್ಳುತ್ತೇವೆ. ವರ್ಷಕ್ಕೊಮ್ಮೆಯೂ ಕಣ್ಣಿನ ಆಸ್ಪತ್ರೆಗೆ ಹೋಗಿ ಪರೀಕ್ಷಿಸಿಕೊಳ್ಳದೇ ಇದ್ದರೆ ಇದಕ್ಕಾಗಿ ದುಬಾರಿ ಬೆಲೆ ತೆರಬೇಕಾಗುತ್ತದೆ. ಇದನ್ನು ತಪ್ಪಿಸಲು ಕೆಲವೊಂದಿಷ್ಟು ಉಪಾಯಗಳು ಇಲ್ಲಿವೆ...
ಕಾಲಕಾಲಕ್ಕೆ ಪರೀಕ್ಷೆ
ಕಣ್ಣನ್ನು ಆರೋಗ್ಯವಾಗಿಟ್ಟುಕೊಳ್ಳಲು ಕಾಲಕಾಲಕ್ಕೆ ಪರೀಕ್ಷಿಸಿಕೊಳ್ಳುವುದಕ್ಕಿಂತ ಉತ್ತಮ ಮಾರ್ಗ ಇನ್ನೊಂದಿಲ್ಲ. ಆದರೆ, ಹೆಚ್ಚಿನ ಜನರು, ನೇತ್ರ ದವಾಖಾನೆಯತ್ತ ಮುಖ ಹಾಕಲು ಹಿಂಜರಿಯುತ್ತಾರೆ. ವಯಸ್ಸಾದ ಮೇಲೂ ಕಣ್ಣು ಸ್ಪಷ್ಟವಾಗಿ ಗ್ರಹಿಸುವುದಕ್ಕೆ ಕಣ್ಣಿನ ಪರೀಕ್ಷೆ ಅತಿ ಮುಖ್ಯವಾದದ್ದು ಎಂಬುದನ್ನು ಯಾವತ್ತೂ ಮರೆಯಬಾರದು.
ಶುದ್ಧ ಗಾಳಿ, ವಾತಾವರಣ
ನಮ್ಮ ಅರಿವನ್ನೂ ಮೀರಿ ವಾತಾವರಣವನ್ನು ನಾವೇ ಹಾಳು ಮಾಡುತ್ತಿದ್ದೇವೆ. ಸಣ್ಣ ಸಣ್ಣ ಧೂಳಿನ ಕಣಗಳು ಗಾಳಿಯಲ್ಲಿ ಸೇರಿ ಬಂದು ನಮ್ಮ ಕಣ್ಣನ್ನು ಹಾಳು ಮಾಡಬಲ್ಲವು. ಪರಿಸರದಲ್ಲಿನ ಕಸಗಳು, ಸಾಕು ಪ್ರಾಣಿಗಳ ಉದುರಿದ ಕೂದಲುಗಳು ಕಣ್ಣುಗಳನ್ನು ಹಾಳು ಮಾಡಬಲ್ಲವು. ಹಾಗಾಗಿ ಸಾಧ್ಯವಾದಷ್ಟೂ ಸ್ವಚ್ಛತೆಗೆ ಆದ್ಯತೆ ನೀಡಿ.
ಕಂಪ್ಯೂಟರ್ ಅತಿ ಬಳಕೆ ಸಲ್ಲ
ಕಂಪ್ಯೂಟರ್ ಈಗ ಇಡೀ ಜಗತ್ತನ್ನು ಬಿಚ್ಚಿಡುವ ಕಿಟಕಿ. ದಿನದ ಬಹುಕಾಲ ಕಂಪ್ಯೂಟರ್ ಮುಂದೆಯೇ ಕಳೆದು ಹೋಗುತ್ತದೆ. ಇದರಿಂದ ಕಣ್ಣಿಗೂ ಮೆದುಳಿಗೂ ಹಾನಿ ಕಟ್ಟಿಟ್ಟ ಬುತ್ತಿ ಎಂಬುದನ್ನು ನಾವು ಮರೆಯುತ್ತೇವೆ. ಪ್ರತಿ ಇಪ್ಪತ್ತು ನಿಮಿಷಕ್ಕೊಮ್ಮೆ ಕಂಪ್ಯೂಟರ್ ಪರದೆಯಿಂದ ದೃಷ್ಟಿಯನ್ನು ಬೇರೆಡೆಗೆ ನೆಡುವುದು ಒಳಿತು. ಅಗತ್ಯಕ್ಕಿಂತ ಹೆಚ್ಚು ಹೊತ್ತು ಕಂಪ್ಯೂಟರ್ ಮುಂದೆ ಕಳೆಯುವುದು, ಕಣ್ಣು ಮತ್ತು ದೇಹದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.
ಸರಿಯಾಗಿ ತಿನ್ನಿ...
ತಿನ್ನೋದಕ್ಕೂ ಕಣ್ಣಿಗೂ ಏನಪ್ಪಾ ಲಿಂಕು ಅಂತ ನೀವು ಕೇಳಬಹುದು. ಆದರೆ ಆರೋಗ್ಯಕಾರಿ ಆಹಾರ ಸೇವಿಸದಿದ್ದರೆ ಕಣ್ಣು ಬೇಗ ಮಂಜಾಗುತ್ತದೆ. ಮೀನು, ಸ್ಪಿಂಚ್, ಕೆಂಪು ಈರುಳ್ಳಿ ಮತ್ತು 'ಸಿ' ವಿಟಮಿನ್ ಇರುವ ಆಹಾರವನ್ನೇ ಹೆಚ್ಚಾಗಿ ಸೇವಿಸುವುದರಿಂದ ಕಣ್ಣುಗಳು ಹೆಚ್ಚು ಕಾಲ ಮಂಜಾಗದಂತೆ ಕಾಯ್ದುಕೊಳ್ಳಬಹುದು. ಹೆಚ್ಚು ಎಣ್ಣೆ ಹಾಕಿದ, ಕೊಬ್ಬಿನಂಶ ಅಧಿಕವಾಗಿರುವ ಆಹಾರಗಳಿಂದ ದೂರವಿರಬೇಕಾಗಿದ್ದೂ ವಿಧಿತ. ಇಡೀ ಜಗತ್ತಿನ ಸೊಬಗನ್ನು ಕಣ್ಮುಂದೆ ಹರವಿಡುವ ಕಂಗಳಿಗಾಗಿ ನಾವು ಇಷ್ಟೂ ಕಾಳಜಿ ತಗೊಳ್ಳದಿದ್ದರೆ ಹೇಗೆ?
-ರಾಘವೇಂದ್ರ ಗಾಂವ್ಕಾರ್ ಚಾಪೆಗಾಳಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


