ಡೇಂಜರ್ ಜಿಬಿಎಸ್
ಗ್ರೂಪ್ ಬಿ ಸ್ಟ್ರೆಪ್ಟೊಕೊಕಸ್ ಇನ್ಫೆಕ್ಷನ್... ಜಿಬಿಎಸ್ ಎಂದೇ ಕರೆಯುವ ಈ ಬ್ಯಾಕ್ಟೀರಿಯಾ ದೇಹದಲ್ಲಿ ತನ್ನ ಇರುವಿಕೆಯನ್ನು....

ಗ್ರೂಪ್ ಬಿ ಸ್ಟ್ರೆಪ್ಟೊಕೊಕಸ್ ಇನ್ಫೆಕ್ಷನ್... ಜಿಬಿಎಸ್ ಎಂದೇ ಕರೆಯುವ ಈ ಬ್ಯಾಕ್ಟೀರಿಯಾ ದೇಹದಲ್ಲಿ ತನ್ನ ಇರುವಿಕೆಯನ್ನು ತೋರ್ಪಡಿಸದು. ಆದರೆ, ಗರ್ಭಿಣಿಯರಲ್ಲಿ ಈ ಬ್ಯಾಕ್ಟೀರಿಯಾ ಕಂಡುಬಂದರೆ ಅದು ಶಿಶುವಿಗೆ ವರ್ಗವಾಗಿ ಹೆರಿಗೆ ವೇಳೆ ಸಾಕಷ್ಟು ತೊಂದರೆ ಸೃಷ್ಟಿಸುತ್ತದೆ.
ಭಾರತದಲ್ಲಿ ಜಿಬಿಎಸ್ ವರ್ಗಾವಣೆ ಪ್ರಮಾಣ ಶೇ.53ರಿಂದ 56ರಷ್ಟು. ತಾಯಿಯ ಜೀರ್ಣಾಂಗ ವ್ಯವಸ್ಥೆಯಲ್ಲಿನ ಆಮ್ನಿಯೋಟಿಕ್ ಫ್ಲೂಯ್ಡ್ ಮೂಲಕ ಅಥವಾ ಮಗುವು ಜನನ ನಾಳದಿಂದ ಹೊರಬರುವ ವೇಳೆ ಜಿಬಿಎಸ್ ಮಗುವಿನ ಶರೀರ ಸೇರಿಕೊಳ್ಳುತ್ತದೆ ಎಂಬುದು ಸಕ್ರಾ ವರ್ಲ್ಡ್ ಆಸ್ಪತ್ರೆಯ ಶಿಶು ತಜ್ಞ ಡಾ. ರಾಜೀವ್ ಅಗರವಾಲ್ರ ಅಭಿಮತ.
ಕಲುಷಿತ ಆಮ್ನಿ ಯೋಟಿಕ್ ದ್ರವವನ್ನು ಭ್ರೂಣ ಒಮ್ಮೆ ಸೇವಿಸಿದರೆ ಅದರಿಂದ ಒಳಹೋಗುವ ಜಿಬಿಎಸ್, ಶ್ವಾಸಕೋಶವನ್ನು ಸೇರಿಕೊಳ್ಳುತ್ತದೆ. ಇದರಿಂದ ಶಿಶುವಿನ ಉಸಿರಾಟಕ್ಕೆ ತೊಂದರೆಯಾಗುತ್ತದೆ. ಉರಿಯೂತ ಸಮಸ್ಯೆಯೂ ಕಾಣಿಸಿಕೊಳ್ಳಬಹುದು.
ಅಂದಹಾಗೆ, ಈ ವೇಳೆ ಬ್ಯಾಕ್ಟೀರಿಯಾದಿಂದ ಆಗುವಂಥ ಸೋಂಕನ್ನು ತಡೆಯಲು ನವಜಾತ ಶಿಶುವಿನ ಅಭಿದಮನಿಯೊಳಗೆ ಆ್ಯಂಟಿ ಬಯೋಟಿಕ್ಸ್ ನೀಡುವುದು ಅನಿವಾರ್ಯ. ಈ ರೀತಿ ಮಾಡದೇ ಇದ್ದಲ್ಲಿ ಸೋಂಕು ರಕ್ತಕ್ಕೆ ಹರಡಿ ಇಡೀ ಶರೀರ ಹಾಗೂ ಮೆದುಳನ್ನೂ ತಲುಪಲಿದೆ. ಅಲ್ಲದೆ ಶಿಶು ಸಾವನ್ನೂ ಅಪ್ಪಬಹುದು.
ಭಾರತದಲ್ಲಿ ಕಡಿಮೆ
ಭಾರತದಲ್ಲಿ ಜಿಬಿಎಸ್ನಿಂದ ಬಳಲುತ್ತಿರುವ ನವಜಾತ ಶಿಶುಗಳ ಸಂಖ್ಯೆ ತೀರಾ ಕಡಿಮೆ. ಬಹುತೇಕ ಜಿಬಿಎಸ್ ಪ್ರಕರಣಗಳು ಶಿಶು ಜನನವಾದ ಕೆಲವೇ ಗಂಟೆಗಳಲ್ಲಿ ಅಂದರೆ, ಮಗು ಆಸ್ಪತ್ರೆಯಲ್ಲಿ ಇರುವಾಗಲೇ ಪತ್ತೆಯಾಗುತ್ತದೆ. ಇನ್ನೂ ಅತ್ಯಂತ ವಿರಳ ಎಂಬಂತೆ ಕೆಲವು ವೇಳೆ ಒಂದು ವಾರ ಅಥವಾ ಒಂದು ತಿಂಗಳ ನಂತರ ಸೋಂಕಿನ ಗುಣಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಜಿಬಿಎಸ್ ಹೊಂದಿರುವ ತಾಯಂದಿರಿಗೆ ಆಗಿಂದ್ದಾಗ್ಗೆ ಎನ್ಐಸಿಯು (ನಿಯೊನಾಟಲ್ ಇಂಟೆನ್ಸೀವ್ ಕೇರ್ ಯೂನಿಟ್) ಅಗತ್ಯ ಹೆಚ್ಚಿರುತ್ತದೆ.
ಈಗ ಭಾರತದಲ್ಲೂ ಶೇ.60ರಷ್ಟು ಹೆರಿಗೆಗಳು ಮನೆಯಲ್ಲಾಗುತ್ತವೆ. ಹಾಗಾಗಿ ಮಗುವನ್ನು ಆಸ್ಪತ್ರೆಗೆ ಕರೆತಂದಾಗ ಮಾತ್ರ ಇದರ ಬಗ್ಗೆ ಗೊತ್ತಾಗುತ್ತದೆ. ಇದರಿಂದಾಗಿ ಭಾರತದಲ್ಲಿ ಜಿಬಿಎಸ್ ಸೋಂಕು ಇನ್ನೂ ಅಸ್ಪಷ್ಟ ರೀತಿಯಲ್ಲಿದ್ದು, ಜಿಬಿಎಸ್ ಪರೀಕ್ಷೆಯು ಅನಿವಾರ್ಯವೇ ಅಥವಾ ಇಲ್ಲವೇ ಎಂಬ ಗೊಂದಲ ಕಾಡುವಂತಾಗಿದೆ.
ಸಾವು ಸಂಭವಿಸಬಹುದು...
ಭಾರತದಲ್ಲಿ ಈವರೆಗೆ ದಾಖಲಾಗಿರುವ ಶಿಶುವಿನಲ್ಲಿನ ಜಿಬಿಎಸ್ ಸೋಂಕಿನ ಪ್ರಕರಣಗಳ ಪ್ರಮಾಣ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೋಲಿಸಿದಲ್ಲಿ ತೀರಾ ಕಡಿಮೆ. ಆದರೂ, ಈ ಸಮಸ್ಯೆ ಅತ್ಯಂತ ಗಂಭೀರ ಸ್ವರೂಪದ್ದಾಗಿದೆ. ಒಮ್ಮೆ ಈ ಸೋಂಕಿಗೆ ತುತ್ತಾದಲ್ಲಿ ಅಂಗವೈಕಲ್ಯ ಅಥವಾ ಸಾವು ಕೂಡ ಸಂಭವಿಸಬಹುದು. ಹೀಗಾಗಿ ಭಾರತದಲ್ಲೂ ರಾಷ್ಟ್ರೀಯ ಮಟ್ಟದಲ್ಲಿ ಜಿಬಿಎಸ್ ಸೋಂಕು ಹಾಗೂ ತಪಾಸಣೆ ಕುರಿತಾಗಿ ಅರಿವು ಮೂಡಿಸುವ ಅಗತ್ಯವಿದೆ ಎನ್ನುತ್ತಾರೆ ಸಕ್ರಾ ಆಸ್ಪತ್ರೆಯ ಡಾ. ಪ್ರಭಾ ರಾಮಕೃಷ್ಣ.
ಬಯೋಟಿಕ್ಸ್ ಚಿಕಿತ್ಸೆ
37 ವಾರಗಳು ಸಂಪೂರ್ಣವಾಗುವ ಮೊದಲೇ ತಾಯಿಯ ಗರ್ಭದಲ್ಲಿನ ಒಳಪೊರೆ ಹರಿದಿದ್ದಲ್ಲಿ ಜಿಬಿಎಸ್ ಸೋಂಕು ಹೊಂದಿರುವ ಶಿಶುವಿನ ಜನನವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ವೇಳೆ ಜ್ವರವಿದ್ದಲ್ಲಿ ಮೂತ್ರದ ಮೂಲಕವೂ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಹಿಂದಿನ ಶಿಶುವಿಗೂ ಜಿಬಿಎಸ್ ಸೋಂಕಿದ್ದರೆ ಅದು ಮತ್ತೆ ಪುನರಾವರ್ತನೆಯಾಗಬಹುದು. ಈ ರೀತಿಯ ಗುಣಲಕ್ಷಣಗಳಿದ್ದಲ್ಲಿ ಅಂಥ ಗರ್ಭಿಣಿಯರಿಗೆ ಹೆರಿಗೆ ವೇಳೆ ಆ್ಯಂಟಿ ಬಯೋಟಿಕ್ ಚಿಕಿತ್ಸೆ ನೀಡಬೇಕಾಗುತ್ತದೆ. ಹೆರಿಗೆ ವೇಳೆ ಮಾತ್ರವಷ್ಟೇ ಪಡೆಯಬೇಕು. ಮಗುವಿನ ಜನನಕ್ಕೂ ಮುಂಚೆ ಪಡೆದರೆ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ತೀರಾ ಅನಿವಾರ್ಯ ವೇಳೆ ಮಾತ್ರವೇ ಆ್ಯಂಟಿಬಯೋಟಿಕ್ ಚಿಕಿತ್ಸೆ ಪಡೆಯಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


