ನಿಂಬೆ ನಂಬಿ

ನಿಂಬೆ ನೆನೆದರೆ ಬಾಯಲ್ಲಿ ನೀರೂರುವ ಜೊತೆಗೆ ಮೈನವಿರೇಳಿಸುವ ಹುಳಿಯ ಅನುಭವ. ಆದರೆ, ಇದಕ್ಕೆ ನೀರು, ಸಕ್ಕರೆ, ಏಲಕ್ಕಿ ಪುಡಿ ಮತ್ತು ಚಿಟಿಕಿ ಉಪ್ಪು ಬೆರೆಸಿದರೆ ರುಚಿಕಟ್ಟಾದ, ದೇಹ ಮನಸ್ಸಿಗೆ ತಂಪು ನೀಡುವ ಪಾನಕ ಸವಿಯಲು ಸಿದ್ಧ. ಜೊತೆಗೆ ಪ್ರತಿನಿತ್ಯದ ಅಡುಗೆಯಲ್ಲಿ ಬಳಸಿದರೆ ಪದಾರ್ಥ, ತಿಂಡಿ ರುಚಿ ಮತ್ತಷ್ಟು ಹೆಚ್ಚು.
ಇಂಥ ನಿಂಬೆಹಣ್ಣಿನಲ್ಲಿ ಔಷಧೀಯ ಗುಣಗಳ ಭಂಡಾರವೇ ಇದೆ. ಪಚನ ಶಕ್ತಿ ವರ್ಧಕ, ಆಯಾಸ ನಾಶಕ, ಸೌಂದರ್ಯ ಸಾಧಕದ ಜೊತೆಗೆ ವಾತ, ಪಿತ್ತ, ಕಫಗಳನ್ನು ಶಾಂತಗೊಳಿಸುತ್ತದೆ. ನಿಂಬೆಯ ರಸದಲ್ಲಿ ಶೇ.10ರಷ್ಟು ಪ್ರಮಾಣದಲ್ಲಿ ನೈಟ್ರಿಕ್ ಆಮ್ಲ, ಫಾಸ್ಪರಿಕ್ ಆಮ್ಲ, ಮೇಲಿಕ್ ಆಮ್ಲ ಮುಂತಾದ ಆರೋಗ್ಯವರ್ಧಕ ಆಮ್ಲಗಳಿವೆ. ಜೊತೆಗೆ ಶೇ.1ರಷ್ಟು ಸ್ನಿಗ್ಧ ದ್ರವಗಳಿವೆ. 100 ಗ್ರಾಂ ನಿಂಬೆರಸದಲ್ಲಿ 17ರಷ್ಟು ಕ್ಯಾಲೊರಿ, 16 ಮಿಲಿಗ್ರಾಂ ವಿಟಮಿನ್ ಎ, ವಿಟಮಿನ್ ಬಿ-01 ಮತ್ತು ವಿಟಮಿನ್ ಸಿ 62 ಮಿಲಿಗ್ರಾಂನಷ್ಟು ಇರುತ್ತದೆ. ಇದರೊಟ್ಟಿಗೆ ಕ್ಯಾಲ್ಸಿಯಂ, ಮೆಗ್ನೆಷಿಯಂ, ಕಬ್ಬಿಣ ಮುಂತಾದ ಲವಣಾಂಶಗಳೂ ಇರುತ್ತವೆ. ನಿಂಬೆ ಬ್ಯಾಕ್ಟೀರಿಯಾ ನಾಶಕ ಗುಣ, ಸೋಂಕು ತಡೆಗಟ್ಟುವ ಗುಣ ಕೂಡ ಹೊಂದಿದೆ. ನಿಂಬೆಯ ಸಿಪ್ಪೆಯಲ್ಲಿನ ಆರಿ ಹೋಗುವ ಎಣ್ಣೆ ಮತ್ತು ಹೆಸ್ಪರಿಡನ್ ಎಂಬ ಕಹಿ ಗ್ಲುಕೋನೈಟ್ ದೇಹಕ್ಕೆ ಅಂಟಿಕೊಳ್ಳುವ ವಿಷಗಳನ್ನು ನಾಶಮಾಡುವ ಮತ್ತು ಚರ್ಮಕ್ಕೆ ಕಾಂತಿಕೊಡುವ ಗುಣ ಹೊಂದಿವೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸಕ್ಕರೆ ಇಲ್ಲದೆ ಚಿಟಿಕೆ ಉಪ್ಪು ಹಾಕಿ ನಿಂಬೆರಸದ ಪಾನಕ ಕುಡಿಯುವುದರಿಂದ ಜೀರ್ಣಶಕ್ತಿ ವೃದ್ಧಿಸುತ್ತದೆ. <
ಮುಖಕಾಂತಿ
- ನಿಂಬೆರಸಕ್ಕೆ ಕಡಲೆ ಹಿಟ್ಟು ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಕ್ರಮೇಣ ಕಪ್ಪು ಕಲೆಗಳು ಮಾಯವಾಗಿ ಮುಖ ಕಾಂತಿಯುಕ್ತವಾಗುತ್ತದೆ.
- ಸಮ ಪ್ರಮಾಣದಲ್ಲಿ ನಿಂಬೆ ರಸ ಮತ್ತು ಪನ್ನೀರು ಬೆರೆಸಿ ಮುಖಕ್ಕೆ ಹಚ್ಚಿ ಸ್ವಲ್ಪ ಸಮಯದ ನಂತರ ತೊಳೆದರೆ ಮೊಡವೆ ಮಾಯ.
- ಉಪಯೋಗಿಸಿದ ನಿಂಬೆ ಹಣ್ಣಿನ ಸಿಪ್ಪೆಯನ್ನು ಮೊಣಕೈ, ಮೊಣಕಾಲು, ಅಂಗೈ ಅಂಗಾಲುಗಳಿಗೆ ಒತ್ತಿ ತಿಕ್ಕಿ ಅರ್ಧ ಗಂಟೆಯ ನಂತರ ಉಗುರು ಬೆಚ್ಚನೆಯ ನೀರಿನಲ್ಲಿ ತೊಳೆದರೆ ತ್ವಚೆ ಮೃದುವಾಗುವುದು.
- ನಿಂಬೆರಸದೊಂದಿಗೆ ಅರಿಶಿನ, ತುಳಸಿ ಎಲೆ, ಬೇವಿನ ತೊಗಟೆ ಪುಡಿಯನ್ನು ಬೆರೆಸಿ ಆ ಪೇಸ್ಟನ್ನು ಮೈಗೆ ಹಚ್ಚಿ ಸ್ನಾನ ಮಾಡುವುದರಿಂದ ಚರ್ಮ ರೋಗಗಳು ಬರುವುದಿಲ್ಲ.
- ನಿಂಬೆರಸದೊಂದಿಗೆ ಹಸಿ ಕೊಬ್ಬರಿ ಹಾಲನ್ನು ಸೇರಿಸಿ ತಲೆಗೆ ಹಚ್ಚಿ ಒಂದು ಗಂಟೆಯ ನಂತರ ತೊಳೆಯುವುದರಿಂದ ಕೂದಲಿಗೆ ಹೊಳಪು ಮತ್ತು ರೇಶ್ಮೆಯ ನುಣುಪು ಬರುತ್ತದೆ.
- ಕೂದಲಿನ ಬುಡಕ್ಕೆ ನಿಂಬೆರಸವನ್ನು ಚೆನ್ನಾಗಿ ತಿಕ್ಕಿ ಒಂದು ಗಂಟೆಯ ನಂತರ ತಲೆಸ್ನಾನ ಮಾಡುವುದರಿಂದ ಕೂದಲು ಉದುರುವುದು ನಿಂತು ಸೊಂಪಾಗಿ ಬೆಳೆಯುತ್ತವೆ ಮತ್ತು ಕಣ್ಣುರಿ ಹೋಗುತ್ತದೆ.
- ನಿಂಬೆರಸಕ್ಕೆ ಸ್ವಲ್ಪ ಸಕ್ಕರೆ, 1-2 ಚಮಚ ಉಪ್ಪು ಸೇರಿಸಿ ಪಾನಕ ಮಾಡಿ ದಿನಕ್ಕೆ ಮೂರು ನಾಲ್ಕು ಬಾರಿ ಕುಡಿದರೆ ತಲೆ ಸುತ್ತುವುದು ಕಡಿಮೆಯಾಗುತ್ತದೆ.
- ನಿಂಬೆರಸಕ್ಕೆ ಚಿಟಿಕೆ ಉಪ್ಪು, ಒಂದು ಲೋಟ ನೀರು ಬೆರೆಸಿ ಕುಡಿದರೆ ಅಜೀರ್ಣ ಶಮನವಾಗಿ ಹಸಿವು ಹೆಚ್ಚಾಗುತ್ತದೆ.
- ನಿಂಬೆ ರಸ ಮತ್ತು ಜೇನು ತುಪ್ಪವನ್ನು ಸಮ ಪ್ರಮಾಣದಲ್ಲಿ ಬೆರೆಸಿ ನಿತ್ಯ 2 ಬಾರಿ ಸೇವಿಸುವುದರಿಂದ ಎದೆ ಉರಿ ಹೋಗುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


