ಆರೋಗ್ಯ-ಜೀವನಶೈಲಿ

ಪಾದಾರೋಗ್ಯ

ಪಾದಾರೋಗ್ಯ
Published On :

ಇತ್ತೀಚಿನ ದಿನಗಳಲ್ಲಿ ಮಧುಮೇಹ ಕಾಯಿಲೆ ಹಿರಿಯರಾದಿಯಾಗಿ ಮಕ್ಕಳಲ್ಲೂ ಕಾಣಿಸಿಕೊಳ್ಳುತ್ತಿದೆ. ಮಧುಮೇಹದಿಂದ ಕಣ್ಣು, ಮೂತ್ರಪಿಂಡ, ಹೃದಯ ಹಾಗೂ ಕಾಲುಗಳ ಮೇಲೆ ತೀವ್ರ ಪರಿಣಾಮ ಉಂಟಾಗುತ್ತದೆ. ಮಧುಮೇಹ ತೊಂದರೆ ಇರುವವರು ಕಾಲಿನ ಸೋಂಕಿಗೆ ತುತ್ತಾಗುವುದು ಹೆಚ್ಚು. ಇಂಥವರಲ್ಲಿ ನರಗಳ ದೌರ್ಬಲ್ಯ ಅಥವಾ ಕಾಲುಗಳ ಪೆರಿಲ್ ವಾಸ್ಕ್ಯೂಲಾರ್ ಕಾಯಿಲೆ ಹಾಗೂ ಕಾಲಿನ ಅಲ್ಸರ್‌ನಂಥ ಇತರೆ ಕಾಯಿಲೆಗಳು ಗೋಚರಿಸಬಹುದು. ಕಾಲುಗಳಿಗೆ ಎರಡು ರೀತಿಯ ಅಪಾಯವಿದೆ. ಹೆಚ್ಚಿನ ಅಪಾಯ ಹಾಗೂ ಕಡಿಮೆ ಅಪಾಯ. ಈ ಅಪಾಯವನ್ನು ಅರಿತು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಲ್ಲಿ ಸಮಸ್ಯೆ ಉಲ್ಬಣಿಸುವುದರಿಂದ ತಪ್ಪಿಸಿಕೊಳ್ಳಬಹುದು. ಕೆಲವೊಮ್ಮೆ ಕಾಲುಗಳನ್ನೆ ಕಳೆದುಕೊಳ್ಳುವ ಸಂಭವವೂ ಇರುತ್ತದೆ. ಕಡಿಮೆ ಅಪಾಯದ ಪ್ರಕರಣಗಳಲ್ಲಿ ಕಾಲುಗಳ ಸಂವೇದನೆ ಸಾಮಾನ್ಯವಾಗಿರುತ್ತದೆ ಹಾಗೂ ರಕ್ತಚಲನೆ ಉತ್ತಮವಾಗಿರುತ್ತದೆ. ಆದರೆ, ಕಡಿಮೆ ಅಪಾಯವಿರುವ ಪ್ರಕರಣಗಳಲ್ಲಿ ಯಾವುದೇ ಮುನ್ಸೂಚನೆಗಳಿಲ್ಲದೆ, ಹೆಚ್ಚಿನ ಅಪಾಯದ ಪ್ರಕರಣಗಳಾಗಿ ಪರಿಣಮಿಸುವ ಅವಕಾಶಗಳಿರುತ್ತವೆ. ಆದ್ದರಿಂದ ಆಗಾಗ ವೈದ್ಯಕೀಯ ತಪಾಸಣೆಗೆ ಒಳಗಾಗುವುದು ಮುಖ್ಯ. ಸೈದ್ಧಾಂತಿಕವಾಗಿ ಹೇಳುವುದಾದರೆ, ಮಧುಮೇಹವನ್ನು ನಿಯಂತ್ರಣದಲ್ಲಿರಿಸಿಕೊಂಡರೆ ಇಂತಹ ಕಾಲುಗಳ ಸಮಸ್ಯೆಗಳಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿದೆ.

ಜಾಗೃತಿ ಅಗತ್ಯ
ಈವರೆಗೆ ಕಾಲಿನ ತೊಂದರೆಗೆ ಒಳಗಾಗದಿರುವ ಈಗಾಗಲೇ ಸೋಂಕು ಅಥವಾ ಕಾಲಿನ ಅಲ್ಸರ್‌ನಿಂದ ಬಳಲುತ್ತಿರುವ ಮಧುಮೇಹಿಗಳು ಕೂಡಲೇ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಅಗತ್ಯ. ನ್ಯೂರೋಪತಿ ಅಥವಾ ಪೆರಿಲ್ ವಾಸ್ಕ್ಯೂಲಾರ್ ಕಾಯಿಲೆಯಿಂದಾಗಿ ಉಂಟಾಗಿರುವ ಅಲ್ಸರ್‌ಗೆ ನೀಡುವ ಚಿಕಿತ್ಸೆ ಬೇರೆ ಸ್ವರೂಪದ್ದಾಗಿರುತ್ತದೆ. ಆದ್ದರಿಂದ ಸಮಸ್ಯೆಗಳ ಸ್ವರೂಪ ಹಾಗೂ ಸ್ವಭಾವವನ್ನು ಅವಲೋಕಿಸುವುದು ಅಗತ್ಯ. ಕಾಲು ನೋವಿನಿಂದ ಬಳುತ್ತಿರುವ ಮಧುಮೇಹಿಗಳಿಗೆ ಆ ನೋವು ನ್ಯೂರೋಪತಿ ಅಥವಾ ವಾಸ್ಕ್ಯೂಲಾರ್ ಕಾಯಿಲೆಯಿಂದ ಬಂದಿದೆಯೇ ಎಂದು ಪರಿಶೀಲಿಸಿ ಅದಕ್ಕೆ ತಕ್ಕಂತೆ ಚಿಕಿತ್ಸೆ ನೀಡಬೇಕಾಗುತ್ತದೆ.

ಗ್ಯಾಂಗ್ರೀನ್ ಆದೀತು?
ಕಾಲುಗಳಲ್ಲಿ ಸಂವೇದನೆ ಕಡಿಮೆಯಾಗಿದ್ದು, ರಕ್ತ ಚಲನೆ ಕಡಿಮೆಯಾಗಿದ್ದಲ್ಲಿ ಅಲ್ಸರ್ ಉಂಟಾಗುವ ಸಂಭವ ಹೆಚ್ಚು. ಕಾಲಿನ ಅಂಗಾಂಶಗಳಿಗೆ ಸರಿಯಾಗಿ ಆಮ್ಲಜನಕ ಸರಬರಾಜು ಆಗದಿದ್ದರೆ, ಅಂಗಾಂಶಗಳು (ಟಿಷ್ಯೂ) ಸತ್ತು ಗ್ಯಾಂಗ್ರೀನ್ ಉಂಟಾಗುವ ಸಂಭವವಿರುತ್ತದೆ. ಗ್ಯಾಂಗ್ರೀನ್ ಒಂದು ರೀತಿಯ ಅಪಾಯಕಾರಿ ಹಾಗೂ ಜೀವ ಬೆದರಿಕೆಯುಳ್ಳ ಬೆಳವಣಿಗೆಯಾಗಿರುತ್ತದೆ. ಸೆಲ್ಯೂಲೈಟಿಸ್ ಹಾಗೂ ಆಸ್ಟೀಯೋವೈಯೆಲೈಟಿಸ್; ಸೆಪ್ಸಿಸ್‌ಗಳು ಇತರೆ ಕೆಲವು ಕಾಲಿನ ತೀವ್ರ ಸಮಸ್ಯೆಗಳ ಪೈಕಿ ಸೇರಿವೆ.

ಬಹುತೇಕ ಬಾರಿ ಮಧುಮೇಹ ಕಾಯಿಲೆಯನ್ನು ನಿಯಂತ್ರಣದಲ್ಲಿರಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಹಾನಿಯಾದ ನರಗಳು ಹಾಗೂ ಮುಚ್ಚಿರುವ ಆರ್ಟಿರಿಗಳನ್ನು ಸರಿಪಡಿಸುವುದು ಸುಲಭದ ಕೆಲಸವಲ್ಲ. ಈ ಕಾರಣದಿಂದಾಗಿ ಬಹಳಷ್ಟು ಮಧುಮೇಹಿಗಳು ಕಾಲಿನ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಆದ್ದರಿಂದ ಇಂತಹ ಪ್ರಕರಣಗಳಲ್ಲಿ ಕಾಲುಗಳನ್ನು ಸುರಕ್ಷಿತ ಹಾಗೂ ಆರೋಗ್ಯವಾಗಿ ಇರಿಸಿಕೊಳ್ಳುವುದು ಹೇಗೆ ಎಂಬುದರ ಕಡೆ ಗಮನ ನೀಡುವುದು ಮುಖ್ಯವಾಗುತ್ತದೆ.
-ಡಾ. ನಾಗಭೂಷಣ್
ಕನ್ಸ್‌ಲ್ಟೆಂಟ್ ವಾಸ್ಕ್ಯೂಲಾರ್ ಸರ್ಜನ್
ಫೋರ್ಟಿಸ್ ಆಸ್ಪತ್ರೆ, ಬನ್ನೇರುಘಟ್ಟ ರಸ್ತೆ, ಬೆಂಗಳೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.