ನಿಷ್ಫಲ

ಈಚಿನ ದಿನಗಳಲ್ಲಿ ನಗರವಾಸಿಗಳನ್ನು ಕಾಡುತ್ತಿರುವ ಬಹುಮುಖ್ಯ ಆರೋಗ್ಯ ಸಂಬಂಧಿ ವಿಷಯವೆಂದರೆ ಗರ್ಭಧಾರಣೆ ಸಮಸ್ಯೆ ಅಥವಾ ಬಂಜೆತನ. ಉದಾಹರಣೆಗೆ ಬೆಂಗಳೂರು ಮಹಾನಗರವನ್ನೇ ತೆಗೆದುಕೊಂಡರೆ, ಶೇಕಡಾ 12 ರಿಂದ 28 ರಷ್ಟು ಜನಸಂಖ್ಯೆಯು ಗರ್ಭಧಾರಣೆ ಬಯಸಿದ ಮೊದಲ ವರ್ಷದಲ್ಲಿ ಗರ್ಭಧರಿಸುವುದರಲ್ಲಿ ವಿಫಲವಾಗುತ್ತಿದೆ ಹಾಗೂ ಸುಮಾರು ಶೇಕಡಾ 3 ರಿಂದ 7ರಷ್ಟು ಜನಸಂಖ್ಯೆಯು, ಮೊದಲ ವರ್ಷದ ನಂತರವೂ ಗರ್ಭಧಾರಣೆ ಸಾಧ್ಯವಾಗದೇ ಸಮಸ್ಯೆ ಎದುರಿಸುತ್ತಿದೆ.
ಬಂಜೆತನ ನಿವಾರಣಾ ಕೇಂದ್ರಗಳಿಗೆ ಭೇಟಿ ನೀಡುತ್ತಿರುವ ದಂಪತಿಗಳ ಸಂಖ್ಯೆ ಈಚಿನ ವರ್ಷಗಳಲ್ಲಿ ದಿಢೀರ್ ಹೆಚ್ಚಿದೆ. ಪ್ರಸಕ್ತ ದಿನಗಳ ಜೀವನ ಶೈಲಿ ಹಾಗೂ ಕೆಲಸದ ಒತ್ತಡ ದಂಪತಿಗಳ ಸಂತಾನ ಧಾರಣಾ ಸಾಮರ್ಥ್ಯದ ಮೇಲೆ ದುಷ್ಪರಿಣಾಮ ಬೀರಿದೆ ಎಂಬುದಾಗಿ ಬಂಜೆತನ ನಿವಾರಣಾ ತಜ್ಞರು ಈಗ ಗುರುತಿಸಿದ್ದಾರೆ.
ಐಟಿ ಪೆಟ್ಟು
ಮಾಹಿತಿ ತಂತ್ರಜ್ಞಾನ ಉದ್ಯಮವು ದೊಡ್ಡಮಟ್ಟದಲ್ಲಿ ಬೆಳೆದು ನಿಂತಿರುವ ಈ ದಿನಗಳಲ್ಲಿ ಅನೇಕ ವೃತ್ತಿಪರ ಪುರುಷರು ಮತ್ತು ಮಹಿಳೆಯರು ತಡವಾಗಿ ಮದುವೆಯಾಗುತ್ತಿದ್ದಾರೆ. ಬಂಜೆತನದಲ್ಲಿ ಇದೂ ಒಂದು ಬಹುಮುಖ್ಯ ಕಾರಣ.
ವೃತ್ತಿ ಜೀವನದಲ್ಲಿ ಉತ್ತಮ ಅವಕಾಶಗಳನ್ನು ಬಯಸಿ ಇಂದಿನ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸದಲ್ಲಿ ತೊಡಗಿಕೊಳ್ಳುತ್ತಿರುವುದರಿಂದ, ಅವರಿಗೆ ಗೊತ್ತಿಲ್ಲದಂತೆಯೇ, ಸಣ್ಣ ವಯಸ್ಸಿನಲ್ಲಿ ಗರ್ಭಧರಿಸುವ ಸಾಮರ್ಥ್ಯವನ್ನು ಅವರು ಕಳೆದುಕೊಳ್ಳುತ್ತಿದ್ದಾರೆ. 30ನೇ ವಯಸ್ಸಿನ ನಂತರ ಮದುವೆಯಾಗುವ ಯುವತಿಯರನ್ನು ಇಂದು ನಾವು ಕಾಣುತ್ತಿದ್ದೇವೆ. ಹಿಂದಿನ ದಿನಗಳಿಗೆ ಹೋಲಿಸಿದರೆ ಇದು ತುಂಬ ತಡವಾದ ಮದುವೆ ವಯಸ್ಸು. ಆಗಿನ ದಿನಗಳಲ್ಲಿ ಯುವತಿಯರ 20-22ನೇ ವಯಸ್ಸಿನ ವೇಳೆಗೆ ಮೊದಲ ಮಗು ಜನಿಸಿರುತ್ತಿತ್ತು.
ಗರ್ಭಧಾರಣೆ ಯಶಸ್ವಿಯಾಗಲು ಸತಿ-ಪತಿಯ ಉತ್ತಮ ಸಾಂಸಾರಿಕ ಬದುಕು ಅಗತ್ಯ. ಇಂದು ಬಹುತೇಕ ಕುಟುಂಬಗಳಲ್ಲಿ ಅದು ಕಾಣದಾಗಿದೆ. ಇದಕ್ಕೆ ಬೇರೆಬೇರೆ ಶಿಫ್ಟ್‌ಗಳಲ್ಲಿ ಪತಿ-ಪತ್ನಿ ಇಬ್ಬರೂ ಕೆಲಸ ಮಾಡುವುದು ಒಂದು ಕಾರಣವಾಗಿದೆ. ಅನೇಕ ದಂಪತಿ ಒಂದೇ ಸೂರಿನ ಕೆಳಗೆ ವಾಸಿಸುತ್ತಿದ್ದರೂ ಒಬ್ಬರನ್ನೊಬ್ಬರು ನೋಡುವುದೂ ಕಷ್ಟವಾಗಿದೆ. ಅಲ್ಲದೇ ಅನೇಕ ದಂಪತಿ ಕೆಲಸದ ಕಾರಣಕ್ಕಾಗಿ ಬೇರೆಬೇರೆ ಊರುಗಳಲ್ಲಿ ವಾಸಿಸುವುದರಿಂದ, ಮಹಿಳೆಯ ಫಲವತ್ತಾದ ದಿನಗಳಲ್ಲಿ ಲೈಂಗಿಕ ಸಂಪರ್ಕ ಆಗದೇ ಗರ್ಭಧಾರಣೆ ಸಾಧ್ಯವಾಗುತ್ತಿಲ್ಲ.
ಆರ್ಥಿಕ ಸ್ವಾತಂತ್ರ್ಯದ ಅಹಂಕಾರ
ಇಂದಿನ ಸಾಮಾಜಿಕ ಸಮಾನತೆ ಮತ್ತು ಇಬ್ಬರೂ ದುಡಿಯುವುದರಿಂದ ದೊರಕುವ ಆರ್ಥಿಕ ಸ್ವಾತಂತ್ರ್ಯ ಅಹಂಭಾವವನ್ನು ಮೂಡಿಸಿವೆ. ಇದರಿಂದಾಗಿ ದಾಂಪತ್ಯದಲ್ಲಿ ಸಮರಸ, ಹೊಂದಾಣಿಕೆ ಕಡಿಮೆಯಾಗುತ್ತಿವೆ. ಹೀಗಾಗಿ ದಂಪತಿಗಳ ಲೈಂಗಿಕ ಬದುಕಿನ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಇನ್ನೂ ಒಂದು ಗಮನಿಸಬೇಕಾದ ಸಂಗತಿ ಎಂದರೆ ಈಗಿನ ಅನೇಕ ಆಧುನಿಕ ದಂಪತಿಗಳು ಮದುವೆಯಾದ ನಂತರ ವರ್ಷಗಳವರೆಗೆ ದೂರವೇ ಉಳಿದುಬಿಡುತ್ತಿದ್ದಾರೆ. ಹೊಂದಾಣಿಕೆ ಕೊರತೆ ಅಥವಾ ಪರಸ್ಪರರಲ್ಲಿ ಲೈಂಗಿಕಾಸಕ್ತಿಯ ಕೊರತೆ ಇದಕ್ಕೆ ಕಾರಣ.
ಜೊತೆಗೆ ಇನ್ನೂ ಕೆಲವು ಮುಖ್ಯ ಕಾರಣಗಳಿಂದ ಬಂಜೆತನ ಉಂಟಾಗುತ್ತದೆ. ಸೋಮಾರಿತನದ ಜೀವನಶೈಲಿ, ಅನಾರೋಗ್ಯಕರ ಆಹಾರ ಪದ್ಧತಿಗಳು ಮಹಿಳೆಯರಲ್ಲಿ ಬೊಜ್ಜು ತರುತ್ತಿವೆ. ಈ ಬೊಜ್ಜಿನಿಂದ ಪಿಸಿಓ ಸಮಸ್ಯೆ ಉಂಟಾಗುತ್ತಿದೆ. ಇಂದು ಬೆಂಗಳೂರಿನಲ್ಲಿ ಬಂಜೆತನ ನಿವಾರಣಾ ತಜ್ಞರಿಗೆ ಇದೊಂದು ದೊಡ್ಡ ಸಮಸ್ಯೆಯಾಗಿದೆ. ಸುಮಾರು ಹತ್ತು ಅಥವಾ ಇಪ್ಪತ್ತಕ್ಕೆ ಒಬ್ಬ ಮಹಿಳೆಯಲ್ಲಿ ಪಿಸಿಓ ಇರುವುದನ್ನು ಬಂಜೆತನ ನಿವಾರಣಾ ಆಸ್ಪತ್ರೆಗಳಿಗೆ ಬರುವವರಲ್ಲಿ ಕಾಣಬಹುದು. ಅಲ್ಲದೇ ಋತುಚಕ್ರದಲ್ಲಿ ಸಮರ್ಪಕತೆ ಇಲ್ಲದ ಶೇಕಡಾ 83 ರಷ್ಟು ಮಹಿಳೆಯರು ಪಿಸಿಓಗಳಿಂದ ಬಳಲುತ್ತಾರೆ.
ಪುರುಷರನ್ನು ತೆಗೆದುಕೊಂಡರೆ, ಧೂಮಪಾನ, ಕುಡಿತ, ಅನಾರೋಗ್ಯಕರ ಆಹಾರ ಸೇವನೆ ವಿಧಾನ, ಅವಧಿಗೆ ಮೀರಿ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವುದು ಹಾಗೂ ಪರಿಸರ ಮಾಲಿನ್ಯಗಳಿಂದ ವೀರ್ಯಾಣುಗಳ ಸಂಖ್ಯೆಯ ಮೇಲೆ ದುಷ್ಪರಿಣಾಮ ಕಂಡುಬರುತ್ತಿದೆ. ಬಂಜೆತನ ನಿವಾರಿಸಿಕೊಳ್ಳಲು ಆಸ್ಪತ್ರೆಗಳಿಗೆ ಬರುವ ದಂಪತಿಗಳಲ್ಲಿ ಶೇಕಡಾ 40ರಷ್ಟು ಪುರುಷರಲ್ಲಿ ಈ ಸಮಸ್ಯೆ ಉಂಟಾಗಿರುವುದನ್ನು ಕಾಣಬಹುದು.
(ಲೇಖಕಿ ಬೆಂಗಳೂರಿನ ಬಸವನಗುಡಿಯಲ್ಲಿರುವ ಗುಣಶೀಲ ಐವಿಎಫ್ ಕೇಂದ್ರದ ಬಂಜೆತನ ನಿವಾರಣಾ ತಕ್ಷೆ ಹಾಗೂ ಸ್ತ್ರೀರೋಗ ತಜ್ಞೆ. ಅವರನ್ನು ಸಂಪರ್ಕಿಸಲು- 080-41312600, 26673585)
ಬಂಜೆತನ ಎಂದರೇನು?
ಗರ್ಭಧಾರಣೆ ಸಾಮರ್ಥ್ಯ ಇಲ್ಲದಿರುವಿಕೆಯನ್ನು ಬಂಜೆತನ ಎಂಬುದಾಗಿಯೇ ಹೇಳಲಾಗದು. ಇವೆರಡಕ್ಕೂ ವ್ಯತ್ಯಾಸವಿದೆ. ಮದುವೆಯಾಗಿ ಹಲವು ವರ್ಷಗಳ ಪ್ರಯತ್ನದ ನಂತರವೂ ಗರ್ಭಧಾರಣೆ ಆಗದಿರುವುದಕ್ಕೆ ಗರ್ಭಧಾರಣೆ ಸಾಮರ್ಥ್ಯ ಇಲ್ಲದಿರುವುದು ಎನ್ನಬಹುದು. ಆದರೆ ಬಂಜೆತನ ಎಂದರೆ ಅದು ಯಾವುದೇ ವೈದ್ಯಕೀಯ ವಿಧಾನಗಳಿಂದಲೂ ಶಾಶ್ವತವಾಗಿ ಮಕ್ಕಳನ್ನು ಪಡೆಯಲಾಗದ ಸ್ಥಿತಿ. ಮಕ್ಕಳಾಗದೇ ಇರುವುದಕ್ಕೆ ಕಾರಣಗಳನ್ನು ಅರಿತು ಚಿಕಿತ್ಸೆ ಆರಂಭಿಸಬೇಕು.
ದಾರಿ ಹಲವು
ಮಹಿಳೆಯಲ್ಲಿನ ಗರ್ಭಧಾರಣೆ ಸಾಮರ್ಥ್ಯದ ಕೊರತೆ ನೀಗಿಸಲು ಹಲವು ಚಿಕಿತ್ಸೆಗಳು ಲಭ್ಯ. ಸಂಪೂರ್ಣ ಪ್ರಾಥಮಿಕ ತಪಾಸಣೆ, ಐಸಿಎಸ್‌ಐ (ಇಕ್ಸಿ), ಕೃತಕ ಗರ್ಭಧಾರಣೆ, ಐವಿಎಫ್, ಐಯುಐ, ಓವಲೇಷನ್ ಇಂಡಕ್ಷನ್, ವೀರ್ಯಾಣು ದಾನ, ಎಂಬ್ರಿಯೊ ಡೊನೇಷನ್ ಮತ್ತು ಎಂಬ್ರಿಯೊ ಫ್ರೀಜಿಂಗ್. ಪುರುಷರಲ್ಲಿನ ಸಾಮರ್ಥ್ಯ ಕೊರತೆಗೆ ಪ್ರಾಥಮಿಕ ತಪಾಸಣೆ, ವೆರಿಕೊಸಿಲ್ ಸರ್ಜರಿ, ವ್ಯಾಸೊ-ವ್ಯಾಸಸ್ಟೊಮಿ, ವ್ಯಾಸೊ-ಎಪಿಡೈಮಲ್, ಅನಾಸ್ಟೊಮೊಸಿಸ್, ಟಿಇಎಸ್‌ಎ (ಎಂಇಎಸ್‌ಎ), ಪಿಇಎಸ್‌ಎ ಮತ್ತು ಸಿಮೆನ್ ಫ್ರೀಜಿಂಗ್.
-ಡಾ.ದೇವಿಕಾ ಗುಣಶೀಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


