ಸಿಹಿ ರೋಗದ ಕಹಿ
ಸಕ್ಕರೆ ಕಾಯಿಲೆ! ಸಿಹಿ ಇರುವುದು ಈ ಹೆಸರಿನಲ್ಲಷ್ಟೇ. ಆದರೆ ಈ ಕಾಯಿಲೆ ತಂದೊಡ್ಡುವ ಕಹಿ ಅನುಭವಿಸಿದವರಿಗಷ್ಟೇ ಗೊತ್ತು.

ಸಕ್ಕರೆ ಕಾಯಿಲೆ! ಸಿಹಿ ಇರುವುದು ಈ ಹೆಸರಿನಲ್ಲಷ್ಟೇ. ಆದರೆ ಈ ಕಾಯಿಲೆ ತಂದೊಡ್ಡುವ ಕಹಿ ಅನುಭವಿಸಿದವರಿಗಷ್ಟೇ ಗೊತ್ತು. ಮಧುಮೇಹ ಯಾರಿಗೆ ಬೇಕಾದರೂ, ಯಾವ ವಯಸ್ಸಿನಲ್ಲಾದರೂ ಬರಬಹುದು.
'ಭಾರತದಲ್ಲೀಗ 40 ಮಿಲಿಯನ್ ಜನರು ಮಧುಮೇಹದಿಂದ ಬಳಲುತ್ತಿದ್ದರೆ, ಈ ಸಂಖ್ಯೆ 2025ರ ವೇಳೆಗೆ 70 ಮಿಲಿಯನ್ ತಲುಪುವ ಸಾಧ್ಯತೆ ಇದೆ' ಎನ್ನುತ್ತದೆ ಅಂತಾರಾಷ್ಟ್ರೀಯ ಮಧುಮೇಹ ಒಕ್ಕೂಟ (ಐಡಿಎಫ್). ಅಂದರೆ ಆ ವೇಳೆಗೆ ಪ್ರಪಂಚದಲ್ಲಿ ಮಧುಮೇಹದಿಂದ ಬಳಲುತ್ತಿರುವ ಪ್ರತಿ ಐವರಲ್ಲಿ ಒಬ್ಬ ಭಾರತೀಯನಿರುತ್ತಾನೆ!
'ನಮ್ಮ ಮನೆಯಲ್ಲಿ ಯಾರಿಗೂ ಮಧುಮೇಹ ಇಲ್ಲ, ಹಾಗಾಗಿ ನನಗೂ ಬರುವುದಿಲ್ಲ' ಎಂದು ನೀವು ಯೋಚಿಸುತ್ತಿದ್ದರೆ, ನಿಮ್ಮ ಯೋಚನೆಯನ್ನು ಕೂಡಲೇ ಬದಲಿಸಿಕೊಳ್ಳಿ ಎನ್ನುತ್ತಾರೆ ಅಂತಾರಾಷ್ಟ್ರೀಯ ಮಧುಮೇಹ ಒಕ್ಕೂಟದ ನಿಯೋಜಿತ ಅಧ್ಯಕ್ಷ ಡಾ.ಎಸ್.ಎಮ್. ಸಾದಿಕೋಟ್.
ಭಾರತ ಮಧುಮೇಹ ರಾಜಧಾನಿ
ಎಲ್ಲ ವಯೋವಾನದವರನ್ನೂ ಡಯಾಬಿಟೀಸ್ ಕಾಡುತ್ತಿದ್ದು, ಭಾರತ ಈ ರೋಗದ ಕ್ಯಾಪಿಟಲ್ ಎಂದೇ ಕರೆಸಿಕೊಳ್ಳುತ್ತಿದೆ. ಕೆಲಸದ ಒತ್ತಡ, ಅನಿಯಮಿತ ಆಹಾರ ಸೇವನೆ, ನಿದ್ರಾಹೀನತೆ, ಅಧಿಕ ಬೊಜ್ಜು ಮುಂತಾದ ಹಲವು ಕಾರಣಗಳಿಂದ ನಗರವಾಸಿಗಳು ಬಹಳ ಬೇಗ ಈ ರೋಗಕ್ಕೆ ತುತ್ತಾಗುತ್ತಿದ್ದಾರೆ.
ಭಾರತದಂಥ ಅಭಿವೃದ್ಧಿಶೀಲ ರಾಷ್ಟ್ರಗಳು ಕ್ಷಿಪ್ರಗತಿಯ ನಗರೀಕರಣಕ್ಕೊಳಗಾಗುತ್ತಿವೆ. ಆಧುನಿಕ ಜೀವನ ಶೈಲಿ, ಕಡಿಮೆಯಾಗುತ್ತಿರುವ ದೈಹಿಕ ಚಟುವಟಿಕೆ, ಮಾನಸಿಕ ಒತ್ತಡಗಳೆಲ್ಲವೂ ಮಧುಮೇಹಕ್ಕೆ ಮುಖ್ಯ ಕಾರಣಗಳು. ಆದರೆ ಬಹುತೇಕರು ಮಧುಮೇಹದ ಬಗೆಗಿನ ಅಜ್ಞಾನದಿಂದ ತಮಗೆ ಅಥವಾ ತಮ್ಮ ಮಕ್ಕಳ ಮಧುಮೇಹದ ಲಕ್ಷಣಗಳನ್ನು ಗುರುತಿಸುವಲ್ಲಿ ವಿಫಲರಾಗುತ್ತಿದ್ದಾರೆ.
ಸೊಂಟಕ್ಕೆ ರೋಗದ ನಂಟು
ಸೊಂಟದ ಸುತ್ತಳತೆ ಅಳೆದರೆ ಸಾಕು, ಮಧುಮೇಹದ ಸಂಭಾವ್ಯತೆಗಳ ಅರಿವಾಗುತ್ತದೆ. ಮನೆಯಲ್ಲಿರುವ ಮೆಜರಿಂಗ್ ಟೇಪ್‌ನಿಂದ ಸೊಂಟದ ಸುತ್ತಳತೆ ಪರೀಕ್ಷಿಸಿಕೊಳ್ಳಿ. ಭಾರತೀಯರ ಸೊಂಟದ ಸುತ್ತಳತೆ- ಪುರುಷರಲ್ಲಿ 90 ಸೆಂ.ಮೀ. ಹಾಗೂ ಮಹಿಳೆಯರಲ್ಲಿ 80 ಸೆಂ.ಮೀ.ಗಿಂತಲೂ ಅಧಿಕವಿದ್ದರೆ- ಅವರಿಗೆ ಮಧುಮೇಹ ಬರಬಹುದಾದ ಸಾಧ್ಯತೆಗಳು ಹೆಚ್ಚು.
ಪ್ರಪಂಚದಲ್ಲಿ ಪ್ರತಿ 7 ಸೆಕೆಂಡ್‌ಗೆ ಒಬ್ಬ ವ್ಯಕ್ತಿ ಮಧುಮೇಹ ತೊಂದರೆಗಳಿಂದಾಗಿ ಸಾಯುತ್ತಿದ್ದಾನೆ. ಪ್ರತಿ 3 ಸೆಕೆಂಡ್‌ಗೆ ಒಬ್ಬ ವ್ಯಕ್ತಿಗೆ ಈ ರೋಗವಿರುವುದು ಪತ್ತೆಯಾಗುತ್ತಿದೆ. ನಮ್ಮಲ್ಲಿ ನಾನ್ ಕ್ರೋಮ್ಯಾಟಿಕ್ ಅಂಗಹಾನಿಗೆ ಅತಿ ದೊಡ್ಡ ಕಾರಣ ಮಧುಮೇಹ. ಡಯಾಲಿಸಿಸ್‌ಗೆ (ರಕ್ತ ಶುದ್ಧೀಕರಣ) ಒಳಗಾಗಿರುವ ಪ್ರತಿ ಮೂವರಲ್ಲಿ ಒಬ್ಬರು ಮಧುಮೇಹದಿಂದ ಬಳಲುತ್ತಿದ್ದಾರೆ. ಈ ರೋಗವಿರುವವರಲ್ಲಿ ಶೇ.70-80 ಮಂದಿ ಹೃದ್ರೋಗಳಿಂದಲೂ ಮೃತಪಡುತ್ತಿದ್ದಾರೆ ಎನ್ನುತ್ತದೆ ಐಡಿಎಫ್ ವರದಿ.
ಸಹಜ ಜೀವನ ಸಾಧ್ಯ
ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಸಹಜ ಜೀವನ ನಡೆಸಬಹುದು. ಜನರಿಗೆ ಈ ರೋಗದ ಕುರಿತು ಅರಿವು ಮೂಡಿಸಲು ಮಾಧ್ಯಮಗಳು ಸಕ್ರಿಯವಾಗಬೇಕು. ಏಕೆಂದರೆ, ಭಾರತದಲ್ಲಿಂದು ಮಧುಮೇಹಕ್ಕೆ ಚಿಕಿತ್ಸೆ ತೆಗೆದುಕೊಳ್ಳುವವರಿಗಿಂತ, ತಮಗೆ ಅಥವಾ ತಮ್ಮ ಮಕ್ಕಳಿಗೆ ಮಧುಮೇಹವಿದೆ ಎನ್ನುವುದನ್ನು ತಿಳಿಯದವರ ಸಂಖ್ಯೆಯೇ ಅಧಿಕವಿದೆ.
- ಡಾ. ಸಾದಿಕೋಟ್, ಐಡಿಎಫ್ ನಿಯೋಜಿತ ಅಧ್ಯಕ್ಷ
ಮಕ್ಕಳಲ್ಲಿ ಪತ್ತೆ ಹೇಗೆ?
ಈ ಲಕ್ಷಣಗಳು ನಿಮ್ಮ ಮಕ್ಕಳಲ್ಲಿ ಕಂಡುಬಂದರೆ ಜಾಗೃತರಾಗುವುದು ಒಳಿತು.
- ಹೆಚ್ಚು ಪ್ರಮಾಣದಲ್ಲಿ ಪದೇ ಪದೇ ಮೂತ್ರ ವಿಸರ್ಜಿಸುವುದು (ಪಾಲಿಯೂರಿಯಾ)
- ಬಾಯಾರಿಕೆ ಹೆಚ್ಚುವುದು (ಪಾಲಿಡಿಪ್ಸಿಯಾ)
- ಒಣ ಬಾಯಿ/ ಗಂಟಲು ಒಣಗುವುದು
- ತೂಕ ನಷ್ಟ, ಹೆಚ್ಚು ಹಸಿವು (ಪಾಲಿಫೇಜಿಯಾ)
ಗಂಭೀರವಾದರೆ?
ತೂಕ ನಷ್ಟ, ಹೊಟ್ಟೆ ನೋವು, ವಾಂತಿ, ತ್ವರಿತ ಉಸಿರಾಟ, ಅರೆನಿದ್ರಾವಸ್ಥೆಯಂಥ ಸ್ಥಿತಿ ತಲುಪಿದರೆ ಮಧುಮೇಹಕ್ಕೆ ಚಿಕಿತ್ಸೆ ಕಷ್ಟ.
- ರಾಘವೇಂದ್ರ ಆಚಾರ್ಯ
raghu.bioastra@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


