ಆರೋಗ್ಯ-ಜೀವನಶೈಲಿ

ಕ್ಯಾಟರ್ಯಾಕ್ಟ್ ಕೇರ್

ಕ್ಯಾಟರ್ಯಾಕ್ಟ್ ಕೇರ್
Published On :

ಪಾರದರ್ಶಕವಾದ ಕಣ್ಣಿನ ಮಸೂರವು (ಲೆನ್ಸ್) ಅಪಾರದರ್ಶಕವಾದರೆ ಅದನ್ನು ಪೊರೆ (ಕ್ಯಾಟರ್ಯಾಕ್ಟ್) ಎಂದು ಕರೆಯುತ್ತಾರೆ. ಇದು ಸಾಮಾನ್ಯವಾಗಿ (ಶೇ.75) 40 ವರ್ಷದ ಮೇಲ್ಪಟ್ಟವರಿಗೆ ಬರುತ್ತಾದರೂ, ಮಕ್ಕಳಲ್ಲೂ ಕಾಣಿಸಿಕೊಳ್ಳುತ್ತದೆ.
ಪೊರೆಯನ್ನು ಕರಗಿಸಬಹುದಾದ ಔಷಧಿಯನ್ನು ಇಲ್ಲಿಯವರೆಗೆ ಕಂಡುಹಿಡಿದಿಲ್ಲ. ಅದನ್ನು ಶಸ್ತ್ರ ಚಿಕಿತ್ಸೆಯಿಂದಲೇ ತೆಗೆಯಬೇಕು. ಪೊರೆ ಶಸ್ತ್ರಚಿಕಿತ್ಸೆಯ ಗುರಿ ಕಣ್ಣಿನ ದೃಷ್ಟಿಯನ್ನು ಉತ್ತಮಪಡಿಸುವುದು. ಕೆಲವು ವರ್ಷಗಳವರೆಗೆ ಪೊರೆ ಪೂರ್ಣ ಬಲಿತ ಮೇಲೆಯೇ ಆಪರೇಷನ್ ಮಾಡುವುದು ವಾಡಿಕೆಯಾಗಿತ್ತು. ಆದರೆ, ಈಗ ಕಣ್ಣಿನ ಪೊರೆ ಚಿಕಿತ್ಸೆಯಲ್ಲಿ ಬಹಳಷ್ಟು ಸುಧಾರಣೆಗಳಾಗಿದ್ದು, ಹೊಲಿಗೆಯೇ ಇಲ್ಲದೆ ಆಪರೇಷನ್ ಮಾಡಬಹುದು. ಪೊರೆಗೆ ಅತಿಮುಖ್ಯ ಪರಿಹಾರವೆಂದರೆ, ಕಣ್ಣಿನ ಕೃತಕ ಮಸೂರ. ಮೊದಮೊದಲು ಗಾಜಿನ ಮಸೂರವನ್ನು ಅಳವಡಿಸುತ್ತಿದ್ದರು. ಇದೀಗ ಪ್ಲಾಸ್ಟಿಕ್ ಮತ್ತು ಕಣ್ಣಿನೊಳಗೆ ತೂರಿಸಬಹುದಾದ ಮಸೂರವನ್ನೂ ಕಂಡು ಹಿಡಿಯಲಾಗಿದೆ.

ಆವಿಷ್ಕಾರದ ಕಥೆ
ಕೃತಕ ಮಸೂರವನ್ನು ಕಂಡುಹಿಡಿದ ಹಿನ್ನೆಲೆಯೂ ಸ್ವಾರಸ್ಯಕರ. ಎರಡನೇ ಮಹಾಯುದ್ಧದ ಸಮಯದಲ್ಲಿ (1945) ಇಂಗ್ಲೆಂಡಿನಲ್ಲಿ ನೇತ್ರ ತಜ್ಞ ಹೆರಾಲ್ಡ್ ರಿಡ್ಲೆಯವರು ಯುದ್ಧದ ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ವಿಮಾನ ಚಾಲಕನೊಬ್ಬ ಗಾಯಗೊಂಡು, ಕಿಟಕಿಯ ಗಾಜಿನ ಚೂರುಗಳು ಆತನ ಕಣ್ಣಿನಲ್ಲಿ ಹೊಕ್ಕಿರುವುದನ್ನು ಗಮನಿಸಿದರು. ಕಾಲಕ್ರಮೇಣ ಗಾಯಾಳುಗಳನ್ನು ಸೂಕ್ಷ್ಮವಾಗಿ ತಪಾಸಣೆ ನಡೆಸಿದಾಗ, ಎಷ್ಟೋ ದಿನ, ತಿಂಗಳಾದರೂ ದೇಹವು ಹೊರಗಿನ ಪದಾರ್ಥಗಳಿಗೆ ತೋರಿಸಬಹುದಾದ ಪ್ರತಿಕ್ರಿಯೆಯೇ ಇಲ್ಲದಿರುವುದನ್ನು ನೋಡಿ ಚಕಿತರಾದರು. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಕಣ್ಣಿನ ಪೊರೆಯನ್ನು ತೆಗೆದು ಅದರ ಜಾಗದಲ್ಲಿ ಕೃತಕ ಮಸೂರ (ಗಾಜಿನ)ವನ್ನು ಜೋಡಿಸಬಹುದು ಎಂದು ಯೋಚಿಸಿದರು. ಪ್ರಥಮವಾಗಿ ಶಸ್ತ್ರಚಿಕಿತ್ಸೆಯನ್ನು 1949ರಲ್ಲಿ ಮಾಡಿ ಯಶಸ್ವಿಯಾದರು. ಕಾಲಕ್ರಮೇಣ ಗಾಜಿನ ಮಸೂರದ ಬದಲಿಗೆ ಪ್ಲಾಸ್ಟಿಕ್ ಹಾಗೂ ಕಣ್ಣಿನ ಒಳಗೆ ತೂರಿಸಬಹುದಾದ ಮಸೂರಗಳು ಆವಿಷ್ಕಾರಗೊಂಡವು.

ಹೇಗೆ ಸಹಕಾರಿ?

  • ಚಿಕ್ಕ ಗಾಯವಾಗುವುದರಿಂದ ಗಾಯ ಬೇಗ ಗುಣವಾಗುತ್ತದೆ. ರೋಗಿಯು ವಾರದಲ್ಲಿ ತನ್ನ ಸಹಜ ಕೆಲಸಗಳನ್ನು ಮಾಡಿಕೊಳ್ಳಬಹುದು.
  • ದೃಷ್ಟಿಯ ಗುಣಮಟ್ಟ ಮೇಲ್ಮಟ್ಟದ್ದಾಗಿರುತ್ತದೆ.
  • ಹೊಲಿಗೆಯ ಅಗತ್ಯವಿರುವುದಿಲ್ಲ.
  • ಹೊಲಿಗೆ ಇಲ್ಲದಿರುವುದರಿಂದ ಕಣ್ಣಿಗೆ ಹೆಚ್ಚಿನ ನೋವಿರುವುದಿಲ್ಲ.
  • ಹೊಲಿಗೆ ಹಾಕದಿದ್ದರೆ ಗಾಯ ಬಿರುಕು ಬಿಡುವುದಿಲ್ಲವೇ ಎಂಬ ಅನುಮಾನ ಬೇಡ. ಏಕೆಂದರೆ, ಸುಧಾರಿತ ರೀತಿಯ ಶಸ್ತ್ರಚಿಕಿತ್ಸೆಯ ಗಾಯವು 200 ಎಂಎಂಎಚ್‌ಜಿ ಮೇಲ್ಪಟ್ಟದ ಕಣ್ಣಿನ ಒತ್ತಡವನ್ನು ಸಹಿಸುತ್ತದೆ.
  • ಅಸಮ ನಿಟ್ಟು (Astigmatism) ಹೊಲಿಗೆ ರಹಿತ ಶಸ್ತ್ರಚಿಕಿತ್ಸೆಯಿಂದ ಬಹಳ ಕಡಿಮೆ ಇರುತ್ತದೆ. ಅಸಮನಿಟ್ಟು ಇದ್ದರೆ ವಸ್ತುಗಳು ವಕ್ರವಾಗಿ ಕಾಣಿಸುತ್ತವೆ.
  • ಕಣ್ಣಿನ ಪೊರೆ ಚಿಕಿತ್ಸೆಯಲ್ಲಿ ನವೀನ ಆವಿಷ್ಕಾರವೆಂದರೆ ಯಾಂತ್ರೀಕೃತ ಪೊರೆಯ ಶಸ್ತ್ರಚಿಕಿತ್ಸೆ Phacoemulcification 3-5 ಎಂಎಂ ಗಾಯದಿಂದ ಪೊರೆಯ ಹೊರ ಪದರವನ್ನು ಬೇಧಿಸಿ ಟೈಟಾನಿಯಂ ಸೂಜಿಯಿಂದ ಶಕ್ತಿಯುತ ಅಲ್ಟ್ರಾಸೌಂಡ್ ತರಂಗದ ಮೂಲಕ ಸಣ್ಣ ಸಣ್ಣ ಪುಡಿಮಾಡಿ ಪೊರೆಯನ್ನು ತೆಗೆಯಲಾಗುತ್ತದೆ. ಇದನ್ನೇ ಸಾಮಾನ್ಯ ಜನರು ಲೇಸರ್ ಪೊರೆ ಆಪರೇಷನ್ ಎಂದು ಕರೆಯುತ್ತಾರೆ.
  • ಹೆಚ್ಚಿನ ಜನರಿಗೆ ಇಂಜೆಕ್ಷನ್ ಮೂಲಕ ಅರಿವಳಿಕೆ (ಅನಸ್ತೇಷಿಯಾ) ಬೇಕಾಗುವುದಿಲ್ಲ.
  • ಹಾಗಾಗಿ ಫೆಕೊಎಮಲ್ಸಿಫೀಕೇಷನ್ ಆಪರೇಷನ್ ಹೊಲಿಗೆ ಇಲ್ಲದೆ, ಇಂಜೆಕ್ಷನ್ ಇಲ್ಲದೆ ಮತ್ತು ಬ್ಯಾಂಡೇಜ್ ಇಲ್ಲದೆ ಮಾಡುವ ಉತ್ಕೃಷ್ಟ ಗುಣಮಟ್ಟದ ಶಸ್ತ್ರ ಚಿಕಿತ್ಸೆ. ಈ ಶಸ್ತ್ರಚಿಕಿತ್ಸೆಯನ್ನು ಮಾಡಲು ನೇತ್ರ ತಜ್ಞರು ವಿಶೇಷ ತರಬೇತಿ ಮತ್ತು ಹೆಚ್ಚಿನ ನೈಪುಣ್ಯತೆಯನ್ನು ಹೊಂದಿರಬೇಕಾಗಿದ್ದು, ಸೂಕ್ಷ್ಮದರ್ಶಕದಲ್ಲಿಯಲ್ಲಿಯೇ ಮಾಡಬೇಕಾಗುತ್ತದೆ.
- ಡಾ. ಸಂಜಯ್, ತುಮಕೂರು (0816- 2275836)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.