ಕಾಡದಿರಲಿ ಖಿನ್ನತೆ

ಖಿನ್ನತೆ ಯಾರನ್ನೂ ಕಾಡದೆ ಬಿಟ್ಟಿಲ್ಲ. ಅಯ್ಯೋ ಜಗತ್ತಿನಲ್ಲಿ ಸಮಸ್ಯೆಗಳು ನನಗೊಬ್ಬನಿಗೆಯೇ ಇರುವುದು ಎಂದುಕೊಂಡು ಕುಳಿತುಬಿಟ್ಟರೆ ಖಿನ್ನತೆಯಿಂದ ಹೊರಬರುವುದು ಅಸಾಧ್ಯವೇ ಸರಿ. ಇಂತಿಪ್ಪ ಖಿನ್ನತೆ ಎಲ್ಲಿಂದ, ಯಾಕೆ, ಹೇಗೆ ಬರುತ್ತದೆ ಎಂದರೆ ಆರೋಗ್ಯದ ತೊಂದರೆ, ಸಂಬಂಧಗಳಲ್ಲಿ ಇರುಸುಮುರುಸು, ಕೌಟುಂಬಿಕ ಸಮಸ್ಯೆ, ಉದ್ಯೋಗ, ಹಣಕಾಸಿನ ಮುಗ್ಗಟ್ಟು ಇತ್ಯಾದಿಗಳನ್ನೆಲ್ಲ ಹೆಸರಿಸಬಹುದು.
ಖಿನ್ನತೆಯಿಂದ ಹೊರಬರಲು ತಿಳಿಯದೆ ದುಶ್ಚಟಗಳಿಗೆ ದಾಸರಾಗುವುದು- ಏನೋ ಮರೆಯಲು ಹೋಗಿ ಇನ್ನೇನೋ ತಗುಲಿಸಿಕೊಂಡಂತೆ. ಕುಡಿತ, ಮಾದಕ ವ್ಯಸನಗಳು ಎಂದಿಗೂ ಖಿನ್ನತೆಗೆ ಪರಿಹಾರವಾಗಲಾರವು. ಖಿನ್ನತೆ ವಿರುದ್ಧ ಹೋರಾಟಕ್ಕೆ ಕೆಲವು ಸಲಹೆಗಳು..
ಆರೋಗ್ಯದೆಡೆ ಗಮನವಿರಲಿ
ಅನಗತ್ಯ ಆಲೋಚನೆ ಬೇಡ. ಜಂಕ್ ಖಾದ್ಯ ಪದಾರ್ಥಗಳ ಸೇವನೆ ಬಿಡಿ. ಆಹಾರಕ್ರಮ ಹೊತ್ತು ಹೊತ್ತಿಗೆ ಸರಿಯಾಗಿರಲಿ, ನಿಯಮಿತವಾದ ವ್ಯಾಯಾಮ ಅಥವಾ ಬಿರುಸಾದ ಒಂದು ನಡಿಗೆ- ಇಷ್ಟು ಸಾಕು ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಲು. ಆರೋಗ್ಯದಲ್ಲಿನ ಏರುಪೇರು- ಕಾಯಿಲೆ ಈ ವಿಚಾರಗಳಲ್ಲಿ ಅಸಡ್ಡೆ ಬೇಡ. ವೈದ್ಯರನ್ನು ಕಂಡು ಅವರ ಸಲಹೆಯಂತೆ ನಡೆಯುವುದು ಉತ್ತಮ.
ಮನಸ್ಸನ್ನು ನಿಯಂತ್ರಣದಲ್ಲಿಡಿ
ಖಿನ್ನತೆಯ ಕಪಿಮುಷ್ಟಿಯಿಂದ ಹೊರಬರಲು ಮಾನಸಿಕವಾಗಿ ಸಿದ್ಧರಾಗಿ. ಗುರಿಯ ಬಗ್ಗೆ ಸ್ಪಷ್ಟತೆಯಿರಲಿ. ಎತ್ತೆತ್ತಲೋ ಓಡುವ ಮನಸ್ಸಿಗೆ ಲಗಾಮು ಹಾಕಿ. ನಿಮ್ಮನ್ನ ನೀವು ಚೆನ್ನಾಗಿ ಅರಿಯುವ ಸಮಯವಿದು. ಮನಸ್ಸಿಗೆ ಬುದ್ಧಿಮಾತು ಹೇಳಿ.
ಹವ್ಯಾಸಗಳತ್ತ ಗಮನಕೊಡಿ
ಮನಸ್ಸಿಗೆ ಖುಷಿ ಕೊಡುವ ಉತ್ತಮ ಅಭ್ಯಾಸವೇ ಹವ್ಯಾಸ. ಅದು ಓದಾಗಿರಬಹುದು, ಬದಲಾವಣೆ ಬಯಸಿದಲ್ಲಿ ಒಂದು ಪ್ರವಾಸವಿರಬಹುದು, ಸ್ನೇಹಿತರೊಂದಿಗೆ ಒಂದು ಸಿನೆಮಾ ಇರಬಹುದು. ನಿಮಗೆ ಬರವಣಿಗೆ, ಕಲೆ, ಛಾಯಾಗ್ರಹಣ ಇತ್ಯಾದಿ ಹವ್ಯಾಸಗಳಿದ್ದರೆ- ಆ ಕಡೆ ವಿಶೇಷ ಗಮನ ಕೊಡಿ.
ಅಚಲ ವಿಶ್ವಾಸವಿರಲಿ
ಈ ಮೇಲೆ ಹೇಳಿದ ಎಲ್ಲ ವಿಚಾರಗಳನ್ನ ನೀವು ಅರ್ಥೈಸಿಕೊಂಡಿದ್ದೀರಿ- ರೂಢಿಸಿಕೊಂದಿದ್ದೀರಿ ಎಂದಾದರೆ ನಿಮಗೆ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ಅದು ನಿಮ್ಮ ಮನಸ್ಸಿನಿಂದ - ನಿಮ್ಮ ಕಾರ್ಯಗಳಿಗೆ ಧನಾತ್ಮಕ ಚೈತನ್ಯ ತುಂಬುತ್ತದೆ. ಖಿನ್ನತೆಯಿಂದ ಹೊರ ಬಂದ, ಪರಿವರ್ತಿತಗೊಂಡ ನಿಮ್ಮನ್ನ ನೋಡಿ ಜಗತ್ತು ಬೆರಗಾಗಲಿ. ನಂಬಿ, ಈ ಜಗತ್ತು ಒಳ್ಳೆಯದಿದೆ ಹಾಗೂ ಅದು ನಿಮ್ಮೊಂದಿಗಿದೆ.
- ಗುರುಪ್ರಸಾದ್ ಹೆಗ್ಡೆ ಹರ್ತೆಬೈಲ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


