ಕಣ್ಣು ಮಂಜು

ಸರಿಯಾಗಿ ಕಾಣಿಸುತ್ತಿದ್ದ ಕಣ್ಣು ಒಮ್ಮೆಲೇ ಕಾಣಿಸುವುದೇ ಇಲ್ಲ ಎಂದರೆ ಗಾಬರಿ ಸಹಜ.
ದಿಢೀರ್ ಅಂಧತ್ವ ಎಂದರೆ ಸರಿಯಾಗಿಯೇ ಕಾಣಿಸುತ್ತಿದ್ದ ಒಂದು ಕಣ್ಣು ಒಮ್ಮೆಲೆ ಕಾಣಿಸುವುದಿಲ್ಲ. ಇದು ಕೆಲವೇ ಕ್ಷಣಗಳಲ್ಲಾಗುವ ಮಾರ್ಪಾಡು. ಕಣ್ಣಿನ ಈ ರೋಗ ಲಕ್ಷಣಕ್ಕೆ ಹಲವಾರು ಕಾರಣಗಳಿವೆ. ದೃಷ್ಟಿ ಪರಿಪೂರ್ಣವಾಗಿರಲು ಅಗತ್ಯವಾದ ಪಾರದರ್ಶಕ ಪಟಿಲ ಕಾರ್ನಿಯಾ ಅಪಘಾತಕ್ಕೀಡಾಗಿ ದಿಢೀರ್ ಪಾರದರ್ಶಕ ಗುಣ ಕಳೆದುಕೊಳ್ಳುವುದರಿಂದ ಆಗಬಹುದು. ಅಕ್ಷಿ ಪಟಲ ಬೆಳಕನ್ನು ಗ್ರಹಿಸುವ ತನ್ನ ಶಕ್ತಿಯನ್ನು ಕಳೆದು ಕೊಳ್ಳುವುದರಿಂದಲೂ ಆಗಬಹುದು. ದೃಷ್ಟಿ ನರವಾದ ಆಪ್ಟಿಕ್ ನರದಲ್ಲಿ ಆಗುವ ವ್ಯತ್ಯಾಸಗಳಿಂದ ಈ ತೊಂದರೆ ಸಂಭವಿಸಬಹುದು. ಒಂದು ವಿಧದ ಗ್ಲಾಕೋಮಾದಿಂದಲೂ ಈ ಸಮಸ್ಯೆ ಕಾಡಬಹುದು. ಅಕ್ಷಿಪಟಲಕ್ಕೆ ರಕ್ತ ಪೂರೈಸುವ ರಕ್ತ ನಾಳಗಳು ತೊಂದರೆಗೀಡಾಗುವುದರಿಂದ ಈ ರೀತಿ ದಿಡೀರ್ ಅಂಧತ್ವ ಬರಬಹುದು ಅಥವಾ ಬೆಳಕನ್ನು ಒಳಗೆ ಸಾಗಿಸಲು ನೆರವಾಗುವ ಕಣ್ಣಿನ ಒಳಗಿನ ದ್ರವಗಳಾದ ಕಾಜೀರಸ ಅಥವಾ ಏಕ್ವಿಯಸ್ ದ್ರವಗಳು ವಿವಿಧ ಕಾರಣಗಳಿಂದ ತಮ್ಮ ಪಾರದರ್ಶಕತನವನ್ನು ಕಳೆದುಕೊಂಡು ಬೆಳಕು ಅಕ್ಷಿಪಟಲದ ಮೇಲೆ ಕೇಂದ್ರಿಕೃತವಾಗದೆ ಅಂಧತ್ವ ಸೃಷ್ಟಿಸಬಹುದು.
ಸಾಮಾನ್ಯವಾಗಿ ಅಪಘಾತದ ಕಾರಣಗಳನ್ನು ಬಿಟ್ಟರೆ, ದಿಡೀರ್ ಅಂಧತ್ವ ಒಂದು ಕಣ್ಣಿನಲ್ಲಿ ಬರಲು ಕಾರಣಗಳಿವೆ. ಅಕ್ಷಿಪಟಲ ಬೇರ್ಪಡುವಿಕೆ, ಸಂಕುಚಿತ ಕೋನದ ಗ್ರಾಕೋಮಾ ಒಂದು ರೀತಿಯ ತಾರಕೆಸುತ್ತಿನುರಿತ, ಕಣ್ಣಿನ ಅಕ್ಷಿಪಟಲದಲ್ಲಿ ರಕ್ತನಾಳಗಳ ಮುಚ್ಚುವಿಕೆ, ಕಣ್ಣಿನ ನರದ ಸೋಂಕು, ಪ್ಯಾಪಿಲೈಟಿಸ್ ಕಾಜೀರಸದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಅವುಗಳಲ್ಲಿ ಪ್ರಮುಖವಾದವು.
ಅಕ್ಷಿಪಟಲ ಬೇರ್ಪಡುವಿಕೆ
ಅಕ್ಷಿಪಟಲದ ಹೊರಗಿನ ಮತ್ತು ಒಳಗಿನ ಪದರಗಳು ವಿವಿಧ ಕಾರಣಗಳಿಂದ ಬೇರೆಯಾಗುವ ಕ್ರಿಯೆ. ಒಂದು ಕಣ್ಣಿನಲ್ಲಿ ದಿಢೀರ್ ಅಂಧತ್ವ ಉಂಟಾಗಲು ಇದೊಂದು ಪ್ರಮುಖ ಕಾರಣ. ಇನ್ನೊಂದು ಕಣ್ಣಿಗೂ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ದರೆ ಇದೇ ತೊಂದರೆ ಕಾಡಬಹುದು. ಸಮೀಪ ದೃಷ್ಟಿ (ಮಯೋಪಿಯಾ) ದೋಷವಿರುವವರಲ್ಲಿ, ಸಾಮಾನ್ಯವಾಗಿ ಮಧ್ಯ ವಯಸ್ಸಿ (50-60 ವರ್ಷ)ನವರಲ್ಲಿ ಹೆಚ್ಚು ಮುಂಜಾಗ್ರತಾ ಕ್ರಮ ಅಗತ್ಯ. ಸಮೀಪ ದೃಷ್ಟಿ ದೋಷವಿರುವವರು ಕನಿಷ್ಠ ಆರು ತಿಂಗಳಿಗೊಮ್ಮೆ ಸೂಕ್ತ ನೇತ್ರ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಬೇಕು. ಕಣ್ಣಿನ ಮುಂದೆ ಹಲವಾರು ಕಪ್ಪು ಚುಕ್ಕೆಗಳು ಒಮ್ಮೆಲೇ ಕಾಣಿಸಿಕೊಂಡಾಗ ಅಥವಾ ಕೆಲವೇ ಕಪ್ಪುಚುಕ್ಕೆಗಳು ಇರುವುದು ಒಮ್ಮೆಲೇ ಜಾಸ್ತಿಯಾದಾಗ ವೈದ್ಯರನ್ನು ಸಂಪರ್ಕಿಸಬೇಕು. ದೃಷ್ಟಿಯ ಯಾವುದೇ ಭಾಗದಲ್ಲಿ ಮಿಂಚು ಹೊಡೆದಂತೆ ಅಥವಾ ಪ್ರಖರತೆ ಒಮ್ಮೆಲೆ ಕೆಲವು ಕ್ಷಣ ಜಾಸ್ತಿಯಾದಂತೆ ಅನಿಸಿದಾಗ ನೇತ್ರ ವೈದ್ಯರ ಸಲಹೆ ಪಡೆಯಿರಿ. ಶಸ್ತ್ರ ಚಿಕಿತ್ಸೆ ಅಗತ್ಯ.
ಸಂಕುಚಿತ ಕೋನದ ಗ್ಲಾಕೋಮಾ
ದಿಢೀರನೆ ಕಣ್ಣು ಕೆಂಪಾಗುವುದು, ನೋವು ಬರುವುದು, ತಲೆನೋವು ಬರುವುದು ಒಮ್ಮೆಯೇ ಒಂದು ಕಣ್ಣಿನಲ್ಲಿ ದೃಷ್ಟಿ ಹೋಗುವುದು...ಇಂಥ ಲಕ್ಷಣಗಳನ್ನು ತೋರುವ ಗ್ಲಾಕೋಮಾ ಮಹಿಳೆಯರಲ್ಲಿ ಹೆಚ್ಚು. ಮಾನಸಿಕ ಒತ್ತಡ, ಹೆಚ್ಚಾಗಿ ಚಿಂತಿಸುವವರಲ್ಲಿ, ಸಾಮಾನ್ಯವಾಗಿ 50-60 ವರ್ಷದಲ್ಲಿ ಕಾಣಿಸಿಕೊಳ್ಳುವ ಈ ಸಮಸ್ಯೆಯಿಂದ ಕಣ್ಣು ಮಂಜಾಗುತ್ತದೆ. ಬೆಳಕಿನ ಸುತ್ತ ಬಣ್ಣ ಬಣ್ಣದ ಚಕ್ರಗಳು ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ತಲೆನೋವುತ್ತದೆ.
ದಿಢೀರ್ ತಾರಕೆಸುತ್ತಿನುರಿತ
ಒಮ್ಮೆಲೆ ಕಣ್ಣು ಕೆಂಪಾಗುವುದು, ಕಣ್ಣಿನಲ್ಲಿ ನೀರು ಬರುವುದು, ದಿಡೀರ್ ಕಣ್ಣು ಕಾಣುವುದಿಲ್ಲವಾಗುವ ಲಕ್ಷಣಗಳಿಂದ ಶುರುವಾಗುವ ಇನ್ನೊಂದು ರೋಗ ತಾರಕೆಸುತ್ತಿನುರಿತ. ಕೆಲವೊಮ್ಮೆ ಈ ಸಮಸ್ಯೆ ಇತರೆ ಕಾಯಿಲೆಗಳಾದ ಕ್ಷಯ ಗುಹ್ಯ ರೋಗಗಳಾದ ಸಿಫಲಿಸ್, ಗೊನೊರಿಯಾ ಮೊದಲಾದ ರೋಗ ಲಕ್ಷಣಗಳಾಗಿಯೂ ಕಾಣಿಸಿಕೊಳ್ಳಬಹುದು. ಆ ಸಂದರ್ಭಗಳಲ್ಲಿ ದೈಹಿಕವಾಗಿ ಈ ಕಾಯಿಲೆಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡುವುದು ಅನಿವಾರ್ಯ.
ಅಕ್ಷಿಪಟಲದ ರಕ್ತನಾಳಗಳ ಮುಚ್ಚುವಿಕೆ
ಕಣ್ಣಿನ ಅಕ್ಷಿಪಟಲದ ಅಪಧಮನಿಗಳು ಅಥವಾ ಅಭಿಧಮನಿಗಳು ಯಾವುದಾದರೂ ಮುಚ್ಚಿ ಹೋಗಬಹುದು. ಹೆಚ್ಚಿನ ಸಂದರ್ಭದಲ್ಲಿ ಇದರ ಚಿಕಿತ್ಸೆ ನಿರಾಶಾದಾಯಕ. ದೃಷ್ಟಿ ಹಿಂದಿರುಗಿ ಬರುವ ಸಾಧ್ಯತೆ ಕಡಿಮೆ.
ಕಣ್ಣಿನ ನರದ ಸೋಂಕು
ಪ್ಯಾಪಿಲೈಟಿಸ್ ಆಪ್ಟಿಕ್ ನ್ಯೂರೈಟಿಸ್ ವಿವಿಧ ಕಾರಣಗಳಿಂದ ದೃಷ್ಟಿ ನರವಾದ ಆಪ್ಟಿಕ್ ನರ ಸೋಂಕಿಗೆ ಒಳಗಾಗಬಹುದು. ಈ ಕಾರಣಗಳಲ್ಲಿ ಮುಖ್ಯವಾದವುಗಳು ಮೂಗಿನ ಬದಿಗಿರುವ ಸೈನಸ್ ಭಾಗದ ಸೋಂಕು, ಹಲ್ಲುಗಳ ಸೋಂಕು ಅಥವಾ ಇತರ ಯಾವುದೇ ಸೋಂಕಾಗಬಹುದು. ಒಟ್ಟಿನಲ್ಲಿ ಪರಿಣಾಮ ಎಂದರೆ, ದಿಡೀರ್ ಒಂದು ಕಣ್ಣು ಕಾಣದೇ ಇರುವುದು. ಕೂಡಲೇ ರೋಗ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ದೃಷ್ಟಿ ಮೊದಲಿನಂತಾಗುತ್ತದೆ.
- ಡಾ. ಎಚ್.ಎಸ್. ಮೋಹನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


