ಆರೋಗ್ಯ-ಜೀವನಶೈಲಿ

ಕಣ್ಣೊಳಗೆ ಕಳ್ಳ!

ಕಣ್ಣಿನಲ್ಲಿ ಒತ್ತಡ ಹೆಚ್ಚಾದರೆ ಮುಖ್ಯ ನರವಾಹಿನಿ ಆಪ್ಟಿಕ್‌ನರ್ವ್‌ಗೆ ಧಕ್ಕೆ ಉಂಟಾಗುತ್ತದೆ.

ಕಣ್ಣೊಳಗೆ ಕಳ್ಳ!
Published On :

ಕಣ್ಣಿನಲ್ಲಿ ಒತ್ತಡ ಹೆಚ್ಚಾದರೆ ಮುಖ್ಯ ನರವಾಹಿನಿಯಾದ ಆಪ್ಟಿಕ್‌ನರ್ವ್‌ಗೆ ಧಕ್ಕೆ ಉಂಟಾಗುತ್ತದೆ. ಈ ಹಾನಿಗೊಳಗಾಗುವ ಸ್ಥಿತಿಯೇ 'ಗ್ಲಾಕೋಮಾ'. ಒಂದರ್ಥದಲ್ಲಿ ಕಣ್ಣಿನ ನರಗಳ ದುಃಸ್ಥಿತಿ ಎನ್ನಬಹುದು. ಆಗದೃಷ್ಟಿ ದೋಷ ಕಟ್ಟಿಟ್ಟಬುತ್ತಿ. ಭಾರತದಲ್ಲಿ ಸುಮಾರು 11.2 ಮಿಲಿಯನ್ ಮಂದಿ ಈ ರೀತಿಯ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಯಾವುದೇ ಲಕ್ಷಣಗಳನ್ನು ವ್ಯಕ್ತಪಡಿಸದೇ ನಿಧಾನವಾಗಿ ನಮ್ಮ ದೃಷ್ಟಿಯನ್ನು ಕಸಿದುಕೊಳ್ಳುವ ರೋಗವಿದು. ವಾಸ್ತವದಲ್ಲಿ ಗ್ಲಾಕೋಮಾದಿಂದ ನರಳುತ್ತಿರುವ ರೋಗಿಗಳಿಗೆ ಅಂಧತ್ವ ಆವರಿಸುತ್ತಿದೆ ಎಂಬ ವಿಷಯವೇ ಗೊತ್ತಿರಲ್ಲ. ಹಾಗಾಗಿಯೇ ಗ್ಲಾಕೋಮಾವನ್ನು 'ದೃಷ್ಟಿಯ ಠಕ್ಕ' (Silent Thief of Vision) ಎಂದೂ ಕರೆಯುತ್ತಾರೆ.

ದ್ರೋಹವೆಸಗುವ ದ್ರವ
ಆರೋಗ್ಯಕರವಾದ ಕಣ್ಣು ಏಕ್ವಿಯಿಸ್ ಹ್ಯೂಮರ್ (Aqueous Humor) ಎಂಬ ದ್ರವವೊಂದನ್ನು ಉತ್ಪಾದಿಸುತ್ತದೆ. ಅದೇ ಪ್ರಮಾಣದಲ್ಲಿ ಅದು ಹೊರ ಹರಿಯುತ್ತದೆ. ಉತ್ಪತ್ತಿ ಮತ್ತು ಹೊರಸೋರುವಿಕೆಯಲ್ಲಿ ಸಮತೋಲನ ಇರಬೇಕು. ಹೀಗಾದಲ್ಲಿ ಕಣ್ಣಿನ ಒಳ ಒತ್ತಡ ಸರಿಯಿರುತ್ತದೆ  (Normal IOP - 10 mmHg - 12mmHg). ಕಾರಣಾಂತರದಿಂದ ಹೊರಸೋರುವಿಕೆ ಕಟ್ಟಿಕೊಂಡಾಗ ಹೆಚ್ಚಿನ ಒತ್ತಡ ಉಂಟಾಗುತ್ತದೆ. ಈ ಹೆಚ್ಚಾದ ಕಣ್ಣಿನ ಒತ್ತಡ, ದೃಷ್ಟಿಯ ನರಕ್ಕೆ ಹಾನಿಯುಂಟುಮಾಡುತ್ತದೆ. ಸಾಮಾನ್ಯವಾಗಿ ಫೆರಿಫರಲ್ ಅಥವಾ ಸುತ್ತಲೂ ದೃಷ್ಟಿ ಹಾನಿಯಾಗುವ ಮೂಲಕ ಆರಂಭವಾಗಿ ನಂತರ ಸಂಪೂರ್ಣ ದೃಷ್ಟಿ ನಾಶಕ್ಕೆ ಕಾರಣವಾಗಬಹುದು.
ತೆರೆದ ಕೋನದ ಗ್ಲಾಕೋಮಾ, ಜನನಾಗತ ಗ್ಲಾಕೋಮಾ, ಸೆಕೆಂಡರಿ ಗ್ಲಾಕೋಮಾ, ಪಿಗ್ಮೆಂಟರಿ ಗ್ಲಾಕೋಮಾ, ಸಂಕುಚಿತ ಕೋನದ ಗ್ಲಾಕೋಮಾ ಎಂಬ ವಿವಿಧ ಬಗೆಯ ಗ್ಲಾಕೋಮಾಗಳಿವೆ.

ಒತ್ತಡ ಯಾರ್ ಯಾರಿಗೆ?

  • 40 ವರ್ಷ ಮೇಲ್ಪಟ್ಟವರಿಗೆ.
  • ಶುಗರ್, ಥೈರಾಯ್ಡ್ ಇರುವವರಿಗೆ.
  • ಬಿಪಿ ಇದ್ದರೆ.
  • ದೀರ್ಘಕಾಲ ಸ್ಟೆರಾಯ್ಡ್ ಬಳಸುವವರಿಗೆ.
  • ಕಣ್ಣಿಗೆ ಪೆಟ್ಟುಬಿದ್ದ ಇತಿಹಾಸವಿದ್ದರೆ.
  • ದೃಷ್ಟಿದೋಷ ತೀವ್ರವಾಗಿದ್ದರೆ.
  • ಕಣ್ಣಿನ ಟ್ಯೂಮರ್ ಇದ್ದರೆ.
ಲಕ್ಷಣಗಳೇನು?
  •     ತೆರೆದ ಕೋನದ ಗ್ಲಾಕೋಮಾದಲ್ಲಿ ಹೆಚ್ಚು ರೋಗ ಲಕ್ಷಣಗಳಿರುವುದಿಲ್ಲ. ಇದ್ದರೂ ಸಾಮಾನ್ಯವಾಗಿ ತಲೆನೋವು, ಪಾಪೆ (Pupil) ಹಿಗ್ಗಿರುತ್ತದೆ.
  •     ಮುಂದುವರಿದ ಗ್ಲಾಕೋಮಾದಲ್ಲಿ ಸುತ್ತಲಿನ ದೃಷ್ಟಿ ಸಂಕುಚಿತವಾಗಿ ಕೊಳವೆಯಲ್ಲಿ ನೋಡುವಂತಿರುತ್ತದೆ.
  •     ಸಂಕುಚಿತ ಕೋನದ ಗ್ಲಾಕೋಮಾದಲ್ಲಿ ಕಣ್ಣು ಕೆಂಪಾಗುವುದು, ಮಂದ ಬೆಳಕಿನಲ್ಲಿ ಕಣ್ಣು ಮತ್ತು ತಲೆನೋವು, ವಾಕರಿಕೆ ಸಹಿತ ವಾಂತಿ ಆಗುತ್ತದೆ. ಇದಕ್ಕೆ ತುರ್ತು ಚಿಕಿತ್ಸೆ ಆಗತ್ಯ.
ಪರೀಕ್ಷೆ ಹೇಗೆ?
  •     ಟೋನೋಮಿಟ್ರಿ- ಅಪ್ಲನೇಷನ್ ಟೋನೋಮೀಟರ್ ಎಂಬ ಅತಿ ಸೂಕ್ಷ್ಮ ಸಲಕರಣೆಯಿಂದ ಕಣ್ಣಿನ ಒತ್ತಡ ಅಳೆಯಬೇಕು.
  •     ಆಪ್ಟಿಕ್ ನರ್ವ್ ನೇರ ಪರೀಕ್ಷೆ- 90ಡಿ ಅಥವಾ 20ಡಿ ಲೆನ್ಸ್‌ನಿಂದ ನರದ ಪರೀಕ್ಷೆ ಮಾಡಿ ತಕ್ಕಮಟ್ಟಿಗೆ ಹಾನಿಗೊಳಗಾದ ನರದ ಭಾಗವನ್ನು ಅಂದಾಜಿಸಲಾಗುವುದು.
  •     ದೃಷ್ಟಿಯ ಹೊರ ಭಾಗವನ್ನು ಅಳೆಯುವುದು- ಇದು ಬೆಲೆಬಾಳುವ ಕಂಪ್ಯೂಟರೀಕೃತ ಪರೀಕ್ಷೆ. ಇದಕ್ಕೆ ಆಟೋಮೇಟೆಟ್ ಫೀಲ್ಡ್ ಅನಲೈಸರ್ ಎನ್ನುತ್ತಾರೆ.
  •     ಗೋನಿಯೋಸ್ಕೋಪಿ- ಏಕ್ವಿಯಸ್ ದ್ರವ ಹೊರ ಹರಿಯುವಿಕೆಯ ಜಾಗವಾದ ಟ್ರಾಬೇಕುಲರ್  ಮಶ್‌ವರ್ಕ್ ಅನ್ನು ಒಂದು ಕನ್ನಡಿ ಮೂಲಕ ಪರೀಕ್ಷಿಸುವುದನ್ನು ಗೋನಿಯೋಸ್ಕೋಪಿ ಎನ್ನುತ್ತಾರೆ.
  •     ಪ್ಯಾಕಿಮಿಟ್ರಿ - ಪಾರದರ್ಶಕ ಪಟಲ ಎಷ್ಟು ದಪ್ಪಗಿದೆ ಎಂದು ಅಳೆಯುವುದೇ ಈ ಪರೀಕ್ಷೆಯ ಉದ್ದೇಶ. ಹೆಚ್ಚು ಒತ್ತಡ ಪಟಲವನ್ನು ತೆಳ್ಳಗಾಗಿಸುತ್ತದೆ.
- ಡಾ. ಸಂಜಯ್ ಎಂ.
sanjeye@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.