ಆರೋಗ್ಯ-ಜೀವನಶೈಲಿ

ಟ್ಯಾಬ್ಲೆಟ್ ಟ್ರಬಲ್

ತಲೆನೋವಿನ ಗಿರಾಕಿಗಳೇ, ನಿಮಗೆ ಎದುರಾಗಲಿರುವ ಗಂಭೀರ ಸಮಸ್ಯೆಗಳು...

ಟ್ಯಾಬ್ಲೆಟ್ ಟ್ರಬಲ್
Published On :

ಆತ್ಮೀಯ ತಲೆನೋವಿನ ಗಿರಾಕಿಗಳೇ,
'ಕ್ಷೇಮವೇ?' ಎಂದು ನಾವೇನೂ ಕೇಳೆವು. ನಿಮ್ಮ ಬುರುಡೆಯೆಂಬ ಪಾತ್ರೆಯೊಳಗೆ ತಲೆನೋವು ಸದಾ ಕೊತ ಕೊತ ಅಂತಲೂ ಗೊತ್ತು. ನಿಮ್ಮ ತಲೆನೋವನ್ನು ನುಂಗಿ ನೀರು ಕುಡಿಯುವ ನಾವು (ಪ್ಯಾರಸೆಟಮೊಲ್, ಪ್ಯಾನಡಾಲ್, ಆಸ್ಪಿರಿನ್) ಒಂದು ಪತ್ರ ಬರೆಯುತ್ತಿದ್ದೇವೆ. ಏಕೆಂದರೆ, ನಿಮಗೆ ಎದುರಾಗಲಿರುವ ಗಂಭೀರ ಸಮಸ್ಯೆಗಳು ನಮಗೇ ತಲೆನೋವು ತಂದೊಡ್ಡಿವೆ!

ಯಾವ ವೈದ್ಯರ ಶಿಫಾರಸಿಲ್ಲದೆ ಒಂದೆರಡು ರುಪಾಯಿಗೆ ನೀವು ನಮ್ಮನ್ನು ಖರೀದಿಸುತ್ತೀರಿ. ನೀವು ಖರೀದಿಸಿದೆಡೆಗೆ ನಾವು ಬರುತ್ತೇವೆ. ವೇಶ್ಯೆಯ ಥರ. ಕ್ಷಣಿಕ ಶಮನ ನೀಡುವುದಷ್ಟೇ ನಮ್ಮ ಡ್ಯೂಟಿ. ನಿಮ್ಮ ಪ್ರೀತಿಗೆ ನಾವು ಚಿರಋಣಿ. ಆದರೆ, ನಮಗೂ ನಿಮ್ಮ ತಲೆನೋವುಗಳನ್ನು ನೋಡಿ, ಕರಗೀ ಕರಗಿ (ಹೊಟ್ಟೆಯೊಳಗೆ) ಸಾಕಾಗಿದೆ. ನೀವು ಹೀಗೆಯೇ ಪೆಪ್ಪರ್‌ಮಿಂಟಿನಂತೆ ನಮ್ಮನ್ನು ತಿನ್ನುತ್ತಿದ್ದರೆ, ಸತ್ತ ಮೇಲೆ ನಿಮ್ಮ ಶವವನ್ನು ಒಂದು ಎರೆಹುಳುವೂ ತಿನ್ನಲಿಕ್ಕಿಲ್ಲ!
ಏಕೆ? ಅಂತ ಕೇಳಿ. ನಿಮಗೆ ಪಾರ್ಸಿಗಳು ಗೊತ್ತಲ್ಲ. ಅದೇ ಪರ್ಷಿಯಾದ ಮಂದಿ. ಅವರು ಸತ್ತವರನ್ನು ಹೂಳುವುದೂ ಇಲ್ಲ, ಸುಡುವುದೂ ಇಲ್ಲ. ಅವರ ಮತದವರು ಯಾರೇ ಸತ್ತರೂ, ಆ ಶವವನ್ನು ವಿಶೇಷವಾಗಿ ನಿರ್ಮಿಸಲಾದ ಗಾಳಿಗೋಪುರದೊಳಕ್ಕೆ ಹಾಕುತ್ತಾರೆ (ಬೇಕಾದರೆ ನೀವು ಬೆಂಗಳೂರಿನ ಹೆಬ್ಬಾಳದಲ್ಲಿರುವ 'ಟವರ್ ಆಫ್ ಸೈಲೆನ್ಸ್‌'ಗೆ ಭೇಟಿ ನೀಡಬಹುದು). ಸತ್ತ ಮೇಲೂ ಶವಗಳು ಉಪಯೋಗಕ್ಕೆ ಬರಲಿ, ಪಕ್ಷಿಗಳು ತಿನ್ನಲಿ ಎಂಬ ಧರ್ಮೀಯ ಗುಣ ಅವರದು. ಆದರೆ, ಈಗ ಅವರು ಅಂಥ ಗೋಪುರದೊಳಗೆ ಶವಗಳನ್ನು ಹಾಕುತ್ತಿಲ್ಲ.
ಯಾಕೆ ಗೊತ್ತಾ? ಹಾಗೆ ಸತ್ತವರು ವಿಪರೀತವಾಗಿ ನಮ್ಮಂಥ 'ತಲೆನೋವು ನಿವಾರಕ'ಗಳನ್ನು ಸೇವಿಸುತ್ತಿದ್ದರು. ಅಂಥ ಶವಗಳನ್ನು ತಿಂದ ರಣಹದ್ದಿನಂಥ ಪಕ್ಷಿಗಳು ಹೇಳಹೆಸರಿಲ್ಲದೆ ಸಾಯುತ್ತಿದ್ದವು! ಈ ಇಬ್ಬರನ್ನು ಕೊಲೆಗೈದ ಆಪಾದನೆಯನ್ನು ನಾವೇ ಹೊತ್ತುಕೊಳ್ಳುತ್ತೇವೆ. ಏಕೆಂದರೆ, ನಾವು ಅಷ್ಟೊಂದು ಡೇಂಜರಸ್. ನೀವು ನಮ್ಮನ್ನು  ನುಂಗಿ ಸತ್ತರೂ, ನಿಮ್ಮ ದೇಹದೊಳಗೆ ನಾವು ಕನಿಷ್ಠ 5 ವರ್ಷ ಜೀವಂತ ಇರಬಲ್ಲೆವು!

ಇನ್ನೊಬ್ಬಳು ಗಗನಸಖಿ ಬಗ್ಗೆ ಹೇಳಲೇಬೇಕು. ಅವಳು ನೋಡಲು ತೆಳ್ಳಗೆ, ಬೆಳ್ಳಗೆ ಚೆನ್ನಾಗಿದ್ದಳು. ದಿನಪೂರ್ತಿ ನಿಂತು, ಕೆಲಸದ ಒತ್ತಡದಲ್ಲೇ ಇರುವ ಕಾರಣ ಆಕೆಗೆ ಮೈಕೈ ನೋವು, ತಲೆನೋವು ವಿಪರೀತ ಕಾಡುತ್ತಿತ್ತು. ಆಗವಳು ನನ್ನನ್ನು, ನನ್ನ ಬಾಲ್ಯಮಿತ್ರ 'ಪ್ಯಾನಡಾಲ್‌'ನನ್ನು ಸಿಕ್ಕಾಪಟ್ಟೆ ಸೇವಿಸುತ್ತಿದ್ದಳು. ಈಗವಳಿಗೆ ವಯಸ್ಸು ಮೂವತ್ತು. ತಿಂಗಳಿಗೊಮ್ಮೆ ಮೂತ್ರಜನಕಾಂಗ ಶುದ್ಧಗೊಳಿಸಿಕೊಳ್ಳುವ ದುಃಸ್ಥಿತಿ ಬಂದಿದೆ.
ಯಾವ ವೈದ್ಯರೂ ಹೇಳದ ಸತ್ಯ ಹೇಳುತ್ತೇನೆ ಕೇಳಿ. ದಿನವೊಂದಕ್ಕೆ ಒಬ್ಬ ವ್ಯಕ್ತಿ ಗರಿಷ್ಠ 3.2 ಗ್ರಾಂ. ಅಷ್ಟೇ ನೋವುನಿವಾರಕ ಮಾತ್ರೆ ನುಂಗಬಹುದು. ಅದೂ ವಿರಳವಾಗಿ. ಆದರೆ, ಅನೇಕರು ತಲೆನೋವು ಕಳಚಿಕೊಳ್ಳುವ ವರೆಗೂ ನಮ್ಮನ್ನು ನುಂಗುತ್ತಲೇ ಇರುತ್ತಾರೆ. ನಾವೇನು ಪಾಪ್‌ಕಾರ್ನಾ? ನಮ್ಮೊಳಗೆ ಅಸಿಟಮಿನೋಫಿನ್ ಎಂಬ ರಾಸಾಯನಿಕವುಂಟು. ಇದು ಯಕೃತ್ತಿಗೆ ಹಾನಿ ಮತ್ತು ಮೆದುಳಿನಲ್ಲಿ ದ್ರವ ತುಂಬಿಕೊಳ್ಳುವಂತೆ ಮಾಡುತ್ತದೆ. ಸ್ಪರ್ಶಜ್ಞಾನವನ್ನೂ ಕುಂಠಿತಗೊಳಿಸುತ್ತದೆ.

ಗಿರಾಕಿಗಳೇ, ಅಷ್ಟಕ್ಕೂ ತಲೆನೋವು ಯಾಕೆ ಬರುತ್ತದೆ ಅಂತ ನಿಮಗೆ ಗೊತ್ತಾ? ಮೆದುಳಿಗೆ ಎಲೆಕ್ಟ್ರಾನ್ ಅಥವಾ ಅಯಾನ್ ಸರಬರಾಜಾಗುವಾಗ ಏನಾದರೂ ತಡೆಯಾದರೆ, ಆಗ ತಲೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ನೋವನ್ನು ನಿವಾರಿಸಲು ನಾವೇ ಬೇಕಂತಿಲ್ಲ. ಬದಲೀ ಪರಿಹಾರಗಳಿವೆ. ಹೆಚ್ಚು ಹೆಚ್ಚು ನೀರು ಕುಡಿಯಿರಿ, ತಲೆನೋವು ನಿಮ್ಮ ವಿಳಾಸ ಹುಡುಕಿಕೊಂಡೇ ಬರದು. ಅಥವಾ ತಲೆನೋವಿದ್ದಾಗ ನಿಮ್ಮ ಪಾದಗಳನ್ನು ತುಸುಬೆಚ್ಚನೆಯ ನೀರಿನ ಟಬ್ಬಿನೊಳಗೆ ಮುಳುಗಿಸಿ. ಇದರಿಂದ ರಕ್ತವು ಸಲೀಸಾಗಿ ತಲೆಯಿಂದ ಪಾದದ ವರೆಗೆ ಹರಿಯುತ್ತದೆ. ಯಾವುದೇ ಮದ್ದಿಲ್ಲದೆ ನೀವು ತಲೆನೋವನ್ನು ಓಡಿಸಬಹುದು. ಅದನ್ನು ಬಿಟ್ಟು ನಾವೇ ಬೇಕು ಎಂದರೆ, ವಯಸ್ಸಾದ ಮೇಲೆ ನಿಮ್ಮ ಸ್ನಾಯುಗಳಲ್ಲಿ ಚೈತನ್ಯವೇ ಇರದ ಹಾಗೆ ಮಾಡಿಬಿಡುತ್ತೇವೆ ಹುಷಾರ್!

ನೋಡ್ರಿ, ಕೊನೆಯದಾಗಿ ಹೇಳ್ತೀವಿ. ನಮ್ಮ ಸಹವಾಸ ನಿಮ್ಗೆ ಬೇಡ. ನಮ್ಮ ಮಾರುಕಟ್ಟೆ ಬಗ್ಗೆ ಚಿಂತೆಯೂ ಬೇಡ. ನೀವು ಚೆನ್ನಾಗಿರಿ, ಅಷ್ಟೇ ಸಾಕು... ನಮಗೊಂದು ತಲೆನೋವು ತಪ್ಪಿದಂತೆ...
ನಿಮ್ಮವರಾದ
ಪ್ಯಾರಸೆಟಮೊಲ್, ಪ್ಯಾನಡಾಲ್, ಆಸ್ಪಿರಿನ್ ನೋವು ನಿವಾರಕ ಸಂಘ (ರಿ.)

- ಕೀರ್ತಿ ಕೋಲ್ಗಾರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.