ಸೊಂಟದ ಇಷ್ಯ ಓದಲೇ ಶಿಷ್ಯ!

ಹೈಬ್ರಿಡ್ ಜಮಾನ ದಲ್ಲಿ ರೋಗಗಳಿಗೇನೂ ಬರವಿಲ್ಲ. ಅಡಿಯಿಂದ ಮುಡಿವರೆಗೂ ನೋವು ತಪ್ಪಿದ್ದಲ್ಲ. ಜೀವನಮಾನ ಪೂರ್ತಿ ಆಸ್ಪತ್ರೆಗೆ ಅಲೆದಾಡಿದರೂ ನೋವು ಅನುಭವಿಸೋದು ತಪ್ಪಲ್ಲ. ಹೀಗಾಗಿ 'ಜಗತ್ತಿನಲ್ಲಿ ಆಸ್ಪತ್ರೆಗೆ ಹೋಗದ ವ್ಯಕ್ತಿಯನ್ನು ಹುಡುಕಿ ಕೊಡಿ' ಎಂಬಂತಾಗಿದೆ.
ತಂತ್ರಜ್ಞಾನ ಬೆಳೆದಂತೆ ಬೆರಳ ತುದಿಯಲ್ಲೇ ಮಾಹಿತಿಯ ಆಗರ ದೊರೆಯುತ್ತಿದೆ. ಆದರೆ, ಅಂಥ ಕಡೆ ನಿರಂತರವಾಗಿ 7ರಿಂದ 8 ಗಂಟೆ ಕುಳಿತು ಕೆಲಸ ಮಾಡುವ ವ್ಯಕ್ತಿಗಳಿಗೆ ಕಾಡುವ ಸೊಂಟದ ನೋವು ಅನುಭವಿಸಿದವರಿಗೇ ಗೊತ್ತು. ಇದಕ್ಕಾಗಿಯೇ ಬೆಂಗಳೂರಿನ ಪ್ರಿಸ್ಟಿನ್ ಆಸ್ಪತ್ರೆ 'ಡಿಸ್ಕ್ ನ್ಯೂಕ್ಲಿಯೋಪ್ಲಾಸ್ಟಿ' ಚಿಕಿತ್ಸೆ ಪರಿಚಯಿಸಿದೆ.
ಯಾರನ್ನು ಕಾಡುತ್ತೆ ಈ ನೋವು?
ಸೊಂಟದ ನೋವಿಗೆ ಪ್ರಮುಖ ಕಾರಣಗಳನ್ನು ಗುರುತಿಸುವುದು ಕಷ್ಟವೇನಲ್ಲ. ಕಂಪ್ಯೂಟರ್ ಮುಂದೆ ಸತತ 7-8 ಗಂಟೆ ಕಾರ್ಯನಿರ್ವಹಿಸುವವರಿಗೆ ಈ ನೋವು ಕಟ್ಟಿಟ್ಟ ಬುತ್ತಿ. ಭಾರದ ವಸ್ತುಗಳನ್ನು ಎತ್ತುವ ಕಟ್ಟಡ ಕಾರ್ಮಿಕರು, ರೈತರು, ಹಮಾಲಿಗಳು, ಕೂಲಿ ಕಾರ್ಮಿಕರು ಸೇರಿದಂತೆ ಇತರರಿಗೂ ಈ ಸೊಂಟ ನೋವು ಕಾಡಿಸುತ್ತದೆ. ಅಲ್ಲದೇ ವೈಬ್ರೇಷನ್ (ಅದರುವಂಥ) ಕೆಲಸ ನಿರ್ವಹಿಸುವವರಿಗೂ ಸೊಂಟ ನೋವಿನ ಕಾಟ ತಪ್ಪಿದ್ದಲ್ಲ. ಜತೆಗೆ ಸದಾ ಪಯಣಿಸುವವರು, ಚಾಲಕರು, ನಿರ್ವಾಹಕರಿಗೂ ಇದರ ಕಹಿ ಅನುಭವ ಆಗದಿರದು.
ತಾತ್ಕಾಲಿಕ ಚಿಕಿತ್ಸೆ ಒಳ್ಳೆಯದಲ್ಲ!
ಸಾಮಾನ್ಯವಾಗಿ ಸೊಂಟ ನೋವು ಕಾಣಿಸಿಕೊಂಡಾಗ ತಾತ್ಕಾಲಿಕ ಶಮನಕ್ಕೆ ನೋವು ನಿವಾರಕ ಮಾತ್ರೆ ಸೇವಿಸುವುದು, ಒತ್ತಿಸಿಕೊಳ್ಳುವುದು, ನೋವು ನಿವಾರಕ ಮುಲಾಮು ಹಚ್ಚಿಕೊಳ್ಳುವುದು ಮಾಮೂಲಿ. ಆದರೆ, ಕಾಲಾಂತರದಲ್ಲಿ ಅದು ವೃದ್ಧಿಯಾಗುತ್ತದೆ. ವೈದ್ಯರು ಈ ನೋವನ್ನು ಮೂರು ವಿಧಗಳಲ್ಲಿ ವಿಂಗಡಿಸುತ್ತಾರೆ. ಮೊದಲೆರಡು ಹಂತಗಳಲ್ಲಿ 'ಡಿಸ್ಕ್ ನ್ಯೂಕ್ಲಿಯೋಪ್ಲಾಸ್ಟಿ' ಚಿಕಿತ್ಸೆ ನೀಡಲಾಗುತ್ತದೆ. ಒಂದು ವೇಳೆ ಮೂರನೇ ಹಂತ ತಲುಪಿದ್ದರೆ ಮಾತ್ರ ಶಸ್ತ್ರಚಿಕಿತ್ಸೆ ಅನಿವಾರ್ಯ.
ಚಿಕಿತ್ಸೆ ಹೇಗೆ?
ನಿರಂತರವಾಗಿ ಕುಳಿತುಕೊಳ್ಳುವುದರಿಂದ ಬೆನ್ನಿನ ಕೆಳ ಭಾಗ ಅಥವಾ ಕುತ್ತಿಗೆ ಬಳಿ ಶೇಖರಣೆಯಾಗುವ ದ್ರವದಿಂದ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ವೈದ್ಯಕೀಯ ಭಾಷೆಯಲ್ಲಿ ಇದಕ್ಕೆ ಲುಂಬಾರ್ ಎನ್‌ಎಕ್ಸ್ ಎಂದು ಕರೆಯಲಾಗುತ್ತದೆ. ಸಂಗ್ರಹವಾದ ದ್ರವ ಅಂಶವನ್ನು ಗುರುತಿಸಿ ಆ ಭಾಗದಲ್ಲಿ ಚಿಕ್ಕದಾದ ರಂಧ್ರ ಕೊರೆಯಲಾಗುತ್ತದೆ. ರಂಧ್ರದಲ್ಲಿ ಕೊಳವೆ ರೂಪದ 'ಸಿಯಾಮ್' ಅಳವಡಿಸಿ ನೋವಿಗೆ ಕಾರಣವಾದ ದ್ರವವನ್ನು ಹೊರ ತೆಗೆಯಲಾಗುತ್ತದೆ. ನಂತರ ಆ ರಂಧ್ರವನ್ನು ಮುಚ್ಚಲಾಗುತ್ತದೆ. ಕನಿಷ್ಠ 20ರಿಂದ 30 ನಿಮಿಷ ನಡೆಯುವ ಈ ಪ್ರಕ್ರಿಯೆ ಮುಗಿದ ಮೂರು ವಾರಗಳಲ್ಲಿ ರೋಗಿ ಗುಣಮುಖನಾಗುತ್ತಾನೆ. ಈ ಚಿಕಿತ್ಸೆಗೆ ಸುಮಾರು ರು.40,000 ಬೇಕು. ಮಾಹಿತಿಗೆ- ಡಾ. ಪ್ರಸನ್ನ ಎಚ್.ಎಂ. (9845005060) ಅವರನ್ನು ಸಂಪರ್ಕಿಸಬಹುದು.
22ರಿಂದ 30 ವರ್ಷದೊಳಗಿನವರಿಗೆ ಸಾಮಾನ್ಯವಾಗಿ ಈ ನೋವು ಕಂಡು ಬರುತ್ತದೆ. ಈ ನೋವಿಗೆ 'ಡಿಸ್ಕ್ ನ್ಯೂಕ್ಲಿಯೋಪ್ಲಾಸ್ಟಿ' ಸಹಾಯಕವಾಗಲಿದೆ. ಈ ಕುರಿತು ಜರ್ಮನಿಯ ಮೂಳೆ ಶಸ್ತ್ರ ಚಿಕಿತ್ಸಕ ಡಾ. ಆಸೀಮ್ ಲೂಥ್ ಬೆಂಗಳೂರಿನ ವೈದ್ಯರಿಗೆ ತರಬೇತಿ ನೀಡಿದ್ದಾರೆ.
- ಡಾ. ಪ್ರಸನ್ನ,
ಪ್ರಿಸ್ಟಿನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ
- ಚನ್ನು ಮೂಲಿಮನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


