ಆಂಟಿ ವೈರಸ್

ನಾರಿಯರಿಗೆ ಕಾಡುವ ಸೆರ್ವಿಕಲ್ ಕ್ಯಾನ್ಸರ್!
ಸದಾ ಕುಟುಂಬದವರ ಆರೋಗ್ಯದ ಬಗ್ಗೆಯೇ ಚಿಂತಿಸುವ ಮಹಿಳೆಯರು ತಮ್ಮ ಆರೋಗ್ಯದ ಕಡೆಯೂ ತುಸು ಗಮನಹರಿಸೋದು ಒಳಿತು. ಆಗೊಮ್ಮೆ, ಈಗೊಮ್ಮೆ ತಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ನಾರಿಯರು ಕೆಲವು ಟೆಸ್ಟ್‌ಗಳಿಗೆ ಮೊರೆ ಹೋಗುವುದು ಅನಿವಾರ್ಯ.
ಸೆರ್ವಿಕಲ್ ಕ್ಯಾನ್ಸರ್‌ನಂಥ ಮಹಾಮಾರಿ ಯಾರನ್ನು ಬೇಕಾದರೂ ಕಾಡಬಹುದು. ದುರಂತವೆಂದರೆ ಹಳ್ಳಿಗರು ಹಾಗೂ ಅನಕ್ಷರಸ್ಥರನ್ನೇ ಈ ರೋಗ ಹೆಚ್ಚು ಕಾಡುತ್ತದೆ. ಸಮಯಕ್ಕೆ ಸರಿಯಾಗಿ ರೋಗ ಪತ್ತೆಯಾದರೆ ಮಾತ್ರ ಸಂಪೂರ್ಣವಾಗಿ ಗುಣಪಡಿಸಬಹುದಾದ ಅಪರೂಪದ ಕ್ಯಾನ್ಸರ್‌ಗಳಲ್ಲಿ ಇದೂ ಒಂದು. ಆದರೆ, ಯಾವುದೇ ರೋಗ ಲಕ್ಷಣಗಳಿಲ್ಲದೇ ನಿಧಾನವಾಗಿ ನಿಮ್ಮನ್ನು ಆವರಿಸುವ ಈ ರೋಗ ಪತ್ತೆಗೆ 18 ವರ್ಷ ಮೇಲ್ಪಟ್ಟ ಮಹಿಳೆಯರು ಆಗಾಗ ಪಾಪ್ ಟೆಸ್ಟ್‌ನಂಥ ಕೆಲವು ಪರೀಕ್ಷೆಗಳನ್ನು ಮಾಡಿಸಿಕೊಳ್ಳಲೇಬೇಕು. ಕ್ಯಾನ್ಸರ್ ತಗಲುವ ಪೂರ್ವದಲ್ಲಿಯೇ ಇದನ್ನು ಪತ್ತೆ ಹಚ್ಚಬಹುದು.
ಪಾಪಿ ವೈರಸ್ ಕಾರಣ
28-62 ವಯಸ್ಸಿನ ಶೇ.45-80ರಷ್ಟು ಮಹಿಳೆಯರು ಸೆರ್ವಿಕಲ್ (ಗರ್ಭಕೋಶ ಕೊರಳು) ಕ್ಯಾನ್ಸರ್ ಹೊಂದಿರುತ್ತಾರೆ. ಇದು ಪಾಪಿಲೋಮಾ ವೈರಸ್ (ಎಚ್‌ಪಿವಿ)ನಿಂದ ಉಂಟಾಗಬಹುದು. ಇದುವರೆಗೂ 100ಕ್ಕೂ ಹೆಚ್ಚಿನ ಎಚ್‌ಪಿವಿಗಳನ್ನು ಗುರುತಿಸಲಾಗಿದ್ದು, ಇವು, ಗರ್ಭಕೋಶದ ಕಂಠವನ್ನು ಮಾರ್ಪಾಡು ಮಾಡಿ ಅಸ್ವಾಭಾವಿಕತೆಯನ್ನು ಸೃಷ್ಟಿಸುತ್ತದೆ. ನಂತರ ಅದು ಕ್ಯಾನ್ಸರ್ ಆಗಿ ಪರಿವರ್ತನೆಗೊಳ್ಳಲಿದೆ.
ರೋಗ ನಿರೋಧಕ ಶಕ್ತಿಯಿಂದ ಶೇ.90ರಷ್ಟು ವೈರಸ್ ನಾಶವಾಗಬಹುದು. ಇನ್ನುಳಿದ ಸಂದರ್ಭಗಳಲ್ಲಿ ಸೂಕ್ತ ರಕ್ಷಣೆ ಬೇಕು. ಲೈಂಗಿಕವಾಗಿ ಸಕ್ರಿಯವಾಗಿರುವ ಎಲ್ಲ ನಾರಿಯರೂ ಆಗಾಗ ಟೆಸ್ಟ್‌ಗೆ ಒಳಗಾಗುವುದರಿಂದ ಕೋಶದಲ್ಲಿ ತುಸು ಬದಲಾವಣೆಗಳಾಗಿರುವುದು ಕಂಡು ಬಂದಲ್ಲಿ ತಕ್ಷಣವೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬಹುದು.
ಎಲ್‌ಬಿಸಿ ಮಾಡಿಸಿ
ಕೆಳಭಾಗವಾಗಿ, ಯೋನಿಯೊಳಕ್ಕೆ ತೆರೆದುಕೊಳ್ಳುವ ಗರ್ಭಕೋಶದ ಕಂಠದ ಮೇಲಿರುವ ಕೋಶಗಳು ನಿಯಂತ್ರಣವಿಲ್ಲದೆ ಬೆಳೆದಾಗ ಸೆರ್ವಿಕಲ್ ಕ್ಯಾನ್ಸರ್ ಉಂಟಾಗುತ್ತದೆ. ರೋಗ ಉಲ್ಬಣಗೊಂಡರೆ ಡಾಕ್ಟರ್‌ಗೆ ಹಿಸ್ಟೆರೆಕ್ಟೊಮಿ ಮಾಡದೇ ವಿಧಿ ಇಲ್ಲ. ಆಗ ಮಹಿಳೆ ಗರ್ಭ ಧರಿಸುವ ಅವಕಾಶವನ್ನೇ ಕಳೆದುಕೊಳ್ಳುತ್ತಾಳೆ.
ಸೆರ್ವಿಕಲ್ ಕ್ಯಾನ್ಸರ್ ಕಂಡು ಹಿಡಿಯುವ ಪಾಪ್ ಟೆಸ್ಟ್‌ಗೆ 350 ಆದರೆ, ರೋಗ ಬಂದರೆ ಚಿಕಿತ್ಸೆಗೆ ತಗಲುವ ವೆಚ್ಚ 5 ಲಕ್ಷಕ್ಕಿಂತಲೂ ಹೆಚ್ಚಾಗಬಹುದು. ಸಾಂಪ್ರದಾಯಿಕ ಪಾಪ್ ಟೆಸ್ಟ್‌ಗಿಂತ ಎಲ್‌ಬಿಸಿ (ದ್ರವ ಆಧಾರಿತ ಸೈಟೋಲಜಿ) ಬಹಳ ನಿಖರವಾಗಿ ರೋಗವನ್ನು ಪತ್ತೆ ಹಚ್ಚಬಲ್ಲದು.
ಸೆರ್ವಿಕಲ್ ಸ್ಕ್ರೀನಿಂಗ್ ಜತೆ ಎಚ್‌ಪಿವಿ ವ್ಯಾಕ್ಸಿನೇಷನ್ ಮಾಡಿಸಿಕೊಳ್ಳುವುದು ಈ ಕ್ಯಾನ್ಸರ್ ತಡೆಗಟ್ಟಲು ಇರುವ ಮತ್ತೊಂದು ಉಪಾಯ. ಇದನ್ನು ಮಗುವಿರುವಾಗಲೇ ಮಾಡಿಸಿದರೆ ಒಳಿತು. ಗರ್ಡಾಸಿಲ್ ಹಾಗೂ ಸರ್ವಾರಿಕ್ಸ್ ಲಭ್ಯವಿರುವ ವ್ಯಾಕ್ಸಿನ್‌ಗಳನ್ನು ಕುವರಿಯರಿಗೆ 12 ವರ್ಷಗಳಿರುವಾಗಲೇ ನೀಡಬಹುದು. ಆರು ತಿಂಗಳ ಅವಧಿಯಲ್ಲಿ ಮೂರು ಬಾರಿ ನೀಡುವ ಈ ವ್ಯಾಕ್ಸಿನ್‌ಗಳು ಎಚ್‌ಪಿವಿಯಿಂದ ಬರುವ ಅನಾರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸುತ್ತದೆ.
(ಲೇಖಕರು ನವದೆಹಲಿಯ ಬಿ.ಎಲ್. ಕಪೂರ್ ಮೆಮೋರಿಯಲ್ ಹಾಸ್ಪಿಟಲ್‌ನ ಗೈನೋಕಾಲಜಿ ವಿಭಾಗದ ಮುಖ್ಯಸ್ಥರು )
ತಪಾಸಣೆ ಬೇಕು
ಸಾವಿಗೆ ಕಾರಣವಾದ ಕಾಯಿಲೆಗಳಲ್ಲಿ ಮೊದಲ ಸ್ಥಾನದಲ್ಲಿದ್ದ ಸೆರ್ವಿಕಲ್ ಕ್ಯಾನ್ಸರ್‌ಗೆ ಸರ್ಕಾರ ಮಹಿಳೆಯರ ಆರೋಗ್ಯ ತಪಾಸಣೆಗೆ ಪ್ರಾಮುಖ್ಯತೆ ನೀಡಿದ್ದರಿಂದ ಮಾರಕ ರೋಗ ಪಟ್ಟಿಯಲ್ಲಿ ಇದೀಗ 14ನೇ ಸ್ಥಾನಕ್ಕಿಳಿದಿದೆ. ಇಂಗ್ಲೆಂಡ್‌ನಲ್ಲಂತೂ ಪ್ರತಿವರ್ಷ 30 ಮಿಲಿಯನ್ ಮಹಿಳೆಯನ್ನು ತಪಾಸಿಸಲಾಗುತ್ತದೆ. 70ರ ದಶಕದಲ್ಲಿ ಈ ರೋಗಕ್ಕೆ ಸುಮಾರು 1.5 ಲಕ್ಷ ನಾರಿಯರು ಮೃತಪಡುತ್ತಿದ್ದು, ಈಗ ಈ ಸಂಖ್ಯೆ 2 ಸಾವಿರಕ್ಕೆ ಇಳಿದಿದೆ.
- ಡಾ. (ಕು.) ಎಸ್.ಕೆ. ದಾಸ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


