ಅಣಲೆಕಾಯಿ ಪಂಡಿತ

'ಅಣಲೆಕಾಯಿ ಪಂಡಿತ' ಎಂದು ಎಲ್ಲ ವ್ಯಾಧಿಗೂ ಅಣಲೆಕಾಯಿ ಮದ್ದು ಕೊಡುವ ನಾಟಿ ವೈದ್ಯರನ್ನು ಆಡಿಕೊಳ್ಳುವ ಮಾತು. ಆದರೆ ಅಣಲೆಕಾಯಿ ನಿಜಕ್ಕೂ 'ವನೌಷಧಗಳ ರಾಜ' ಎಂಬುದು ಗೊತ್ತೆ?
ಹೊಟ್ಟೆನೋವೆ? ಅಜೀರ್ಣವೆ? ಮಲಬದ್ಧತೆಯೇ? ನೆಗಡಿಯೇ? ಅಣಲೆಕಾಯಿಯನ್ನು ನೀರಿನಲ್ಲಿ ತೇದು ನೆಕ್ಕಿಸಿದರೆ ಅಥವಾ ನೀರಿನಲ್ಲಿ ಕುದಿಸಿ ಕಷಾಯ ಮಾಡಿ ಕುಡಿಸಿದರೆ ಪರಿಣಾಮ ಗ್ಯಾರಂಟಿ. ಪುಟ್ಟ ಮಕ್ಕಳಿರುವ ಮನೆಯಲ್ಲಿ ಒಂದೆರಡು ಹಸಿ ಅಥವಾ ಒಣ ಅಣಲೆಕಾಯಿ ಇದ್ದರೆ ಡಾಕ್ಟರ್‌ನಿಂದ ದೂರವಿರಬಹುದು.
ಸಸ್ಯಶಾಸ್ತ್ರೀಯವಾಗಿ 'ಟರ್ಮಿನೇಲಿಯ ಚೆಬುಲ'ಎಂದು ಕರೆಸಿಕೊಳ್ಳುವ ಅಣಲೆಕಾಯಿಗೆ ಸಂಸ್ಕೃತದಲ್ಲಿ ಹರೀತಕಿ ಎಂಬ ಹೆಸರಿದೆ. 'ಭಾವಪ್ರಕಾಶ' ಗ್ರಂಥದ ಉಲ್ಲೇಖದಂತೆ ಇಂದ್ರನ ಕೈಲಿದ್ದ ಅಮೃತದ ಗಿಂಡಿಯಿಂದ ಒಂದು ಹನಿ ಭೂಮಿಗೆ ಬಿದ್ದು ಅಣಲೆ ಸಸ್ಯ ಹುಟ್ಟಿತಂತೆ. ಆಯುರ್ವೇದದಲ್ಲಿ ಅಣಲೆಕಾಯಿಗೆ ಅತ್ಯಂತ ಮಹತ್ವದ ಸ್ಥಾನ ನೀಡಲಾಗಿದ್ದು, ಬಹುತೇಕ ಔಷಧಗಳ ತಯಾರಿಕೆಗೆ ಅಣಲೆಕಾಯಿಯೇ ಮೂಲ ಅಂಶ. ವಾತ-ಪಿತ್ತ-ಕಫ ತ್ರಿಧಾತುಗಳನ್ನು ಸಮತೋಲನದಲ್ಲಿಡುವ ಏಕೈಕ ಔಷಧ ಇದು. ಅಣಲೆಕಾಯಿಯಲ್ಲಿ ಶೇ.45ರಷ್ಟು ಟೆನಿನ್ ಎಂಬ ರಾಸಾಯನಿಕವಿರುತ್ತದೆ. ಉಳಿದಂತೆ ಗ್ಯಾಲಿಕ್ ಆ್ಯಸಿಡ್, ಅಲ್ಬುಮಿನ್, ಚೆಬುಲಿಕ್ ಆ್ಯಸಿಡ್ ಇತ್ಯಾದಿ ಅಡಕವಾಗಿವೆ.
ಎಲ್ಲೆಡೆ ಲಭ್ಯ
ಎತ್ತರವಾಗಿ ಬೆಳೆಯುವ ಅಣಲೆಮರ ಭಾರತದಾದ್ಯಂತ ವ್ಯಾಪಿಸಿದೆ. ಸಾಮಾನ್ಯವಾಗಿ ಮಾರ್ಚ್ ಏಪ್ರಿಲ್‌ನಲ್ಲಿ ಹೂ ಬಿಟ್ಟು ಸೆಪ್ಟೆಂಬರ್ ಹೊತ್ತಿಗೆ ಕಾಯಿ ಬಲಿಯುತ್ತದೆ. ಡಿಸೆಂಬರ್ ಹೊತ್ತಿಗೆ ಹಸಿರು ಕಾಯಿ ಹಣ್ಣಾಗಲು ತೊಡಗಿ ಜನವರಿ ಹೊತ್ತಿಗೆ ಹಳದಿ ವರ್ಣಕ್ಕೆ ತಿರುಗಿ ಉದುರುತ್ತವೆ. ಜನವರಿ ವೇಳೆ ದೊರೆಯುವ ಅಣಲೆ ಉತ್ಕೃಷ್ಟವಾದದ್ದು. ಮಲೆನಾಡ ಹಳ್ಳಿಗರು ಬಿದ್ದ ಹಣ್ಣುಗಳನ್ನು ಸಂಗ್ರಹಿಸಿ ನೆರಳಿನಲ್ಲಿ ಒಣಗಿಸಿ ಬಳಸುತ್ತಾರೆ.
ನೂರು ಸಮಸ್ಯೆಗೆ ಪರಿಹಾರ
ಹೊಟ್ಟೆ ತೊಂದರೆ ಮಾತ್ರವಲ್ಲ ಮೂತ್ರ ಸಮಸ್ಯೆ, ಮಧುಮೇಹ, ಚರ್ಮರೋಗ, ಸೋಂಕು, ಹೃದ್ರೋಗ, ಒಳಜ್ವರ ಇನ್ನೂ ಅನೇಕ ವ್ಯಾಧಿಗಳಿಗೆ ಅಣಲೆಕಾಯಿ ಮದ್ದು ಅರೆಯಲಾಗುತ್ತಿದೆ. ಊಟ, ತಿಂಡಿ ನಂತರ ಸೇವಿಸಿದರೆ ಫುಡ್ ಪಾಯಿಸನಿಂಗ್ ಅನ್ನು ನಿಯಂತ್ರಿಸಬಹುದು. ಈ ಕಾಯಿ ದೃಷ್ಟಿ ಹಾಗೂ ಬುದ್ಧಿಯನ್ನೂ ಚುರುಕಾಗಿಸುತ್ತದೆ. ಒಸಡಿನಲ್ಲಿ ರಕ್ತ ಸೋರುವ ಸಮಸ್ಯೆಯಿದ್ದರೆ ಅಣಲೆಕಾಯಿ ಕುದಿಸಿದ ನೀರಿನಲ್ಲಿ ಬಾಯಿ ಮುಕ್ಕಳಿಸಿದರೆ ಸಮಸ್ಯೆ ಪರಿಹಾರವಾಗಲಿದೆ. ಅದೇ ನೀರಿನಿಂದ ಕಣ್ಣು ತೊಳೆದುಕೊಂಡರೆ ಸೋಂಕು ದೂರ. ಆಹಾರದಲ್ಲಿನ ಕೊಲೆಸ್ಟರಾಲ್ ನಿಯಂತ್ರಿಸಿ ಕೊಬ್ಬನ್ನು ಕರಗಿಸುತ್ತದೆ. ಆರು ಋತುಗಳಲ್ಲೂ ಅಣಲೆಯನ್ನು ಹೇಗೆ ಸೇವಿಸಬೇಕು, ಪರಿಣಾಮಗಳೇನು ಎಂಬುದನ್ನು 'ಋತು ಹರೀತಕಿ'ಯಲ್ಲಿ ವಿವರಿಸಲಾಗಿದೆ.
'ಸಂ'ಶೋಧನೆ
ಅಣಲೆ ಮೇಲೆ ವ್ಯಾಪಕ ಆಧುನಿಕ ಸಂಶೋಧನೆಗಳು ನಡೆಯುತ್ತಿವೆ. ಮುಂಬೈನ ಬಾಬಾ ಅಣು ಸಂಶೋಧನ ಕೇಂದ್ರದ ಪ್ರಕಟಣೆಯಂತೆ ಅಣಲೆಯಲ್ಲಿ ವಿಕಿರಣ ನಿರೋಧಕ ಶಕ್ತಿಯೂ ವಿಫುಲವಾಗಿದೆ.
= ಡಾ. ಅಮೃತಾ ಭಟ್ ತದ್ದಲಸೆ
(ಮೊ:9481421166)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


