ಆರೋಗ್ಯ-ಜೀವನಶೈಲಿ

ಯೋಗ ಯಾಗ

ಯೋಗ ಯಾಗ
Published On :

ಇಂದು ಪ್ರತಿಯೊಬ್ಬರೂ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢವಾಗಲು ಏನೇನೋ ಕಸರತ್ತು ನಡೆಸುತ್ತಾರೆ. ಅದರಲ್ಲಿ ಯೋಗವೂ ಒಂದು. ಮೈಮನಸ್ಸುಗಳನ್ನು ಸುಸ್ಥಿತಿಯಲ್ಲಿಡುವ ಶಕ್ತಿ ಈ ಯೋಗಕ್ಕಿದೆ. ಇದು ಔಷಧಿ ರಹಿತ ಚಿಕಿತ್ಸಾ ವಿಧಾನ.
ಯೋಗಾಭ್ಯಾಸ ಮಾಡುವ ಮುನ್ನ ಆಸನಗಳನ್ನು ಸರಿಯಾಗಿ ಹಾಕದಿದ್ದರೆ, ಯೋಗ ಶಿಕ್ಷಕರ ಸೂಚನೆ ಪಾಲಿಸದಿದ್ದರೆ, ಇಲ್ಲವೇ ಶಿಕ್ಷಕರು ಸರಿಯಾಗಿ ಸೂಚನೆ ನೀಡದಿದ್ದರೆ ದೇಹಕ್ಕೆ ಹಾನಿಯಾಗಿ ಶಾಶ್ವತ ಸಮಸ್ಯೆಗಳಿಗೂ ಒಳಗಾಗಬಹುದು. ಈಗಾಗಲೇ ಯೋಗಾಭ್ಯಾಸ ಪೂರ್ವಾಪರ ತಿಳಿಯದೇ ಯೋಗಾಭ್ಯಾಸ ಕೈಗೊಂಡು ಮೂಳೆ ಮುರಿತದಿಂದ ಹಿಡಿದು ಮೆದುಳು ಹಾಗೂ ನರಮಂಡಲಕ್ಕೆ ಶಾಶ್ವತ ಹಾನಿ ಮಾಡಿಕೊಂಡ ಉದಾಹರಣೆಗಳೂ ಇವೆ. ಅಸಂಬದ್ಧ ಯೋಗಾಭ್ಯಾಸದಿಂದ ಕಾಲು, ತೊಡೆ ಮತ್ತು ಬೆನ್ನಿನ ಕೆಳಭಾಗದ ಸ್ನಾಯುಗಳಿಗೆ ತೊಂದರೆ ಸಾಮಾನ್ಯ.

ಒಂದಿಷ್ಟು ಎಚ್ಚರಿಕೆಗಳು

  •     ಯೋಗಾಸನ ಆರಂಭಿಸುವವರು ದೇಹಸ್ಥಿತಿ ಹಾಗೂ ಅದರ ಅಗತ್ಯಗಳಿಗೆ ಸರಿಹೊಂದುವ ಆಸನಗಳ ಬಗ್ಗೆ ಯೋಗ ಶಿಕ್ಷಕರು ಹಾಗೂ ವೈದ್ಯರಿಂದ ಸಲಹೆ ಪಡೆದೇ ಮುಂದುವರಿಯಬೇಕು.
  •     ದುರ್ಬಲ ದೇಹ ಪ್ರಕೃತಿ ಉಳ್ಳವರು ವ್ಯಾಯಾಮ ಮಾಡುವ ಮೊದಲು ವೈದ್ಯರ ಸಲಹೆ ಪಡೆವ ಜೊತೆಗೆ ಆರಂಭದ ಕೆಲವು ತಿಂಗಳು ಸರಳ ಆಸನಗಳನ್ನು ಮಾತ್ರ ಮಾಡಬೇಕು.
  •     ಯೋಗಾಭ್ಯಾಸವನ್ನು ಸಾಮೂಹಿಕ ಶಿಬಿರ, ಶಿಕ್ಷಕರ ಸಹಾಯವಿಲ್ಲದೆ ಕಲಿಯುವುದು, ಶಾಲೆಗಳಲ್ಲಿ ಇಲ್ಲವೇ ಟಿವಿ ಮುಂದೆ ನಿಂತು ಯೋಗಾಭ್ಯಾಸ ಮಾಡುವುದರಿಂದ ಅನಾನುಕೂಲವೇ ಹೆಚ್ಚು.
  •     ಬಿಬಿ, ಸೈನಸ್ ಹಾಗೂ ಗಂಭೀರ ಕಾಯಿಲೆ ಇರುವವರು ತಲೆಕೆಳಗೆ ಮಾಡಬೇಕಾದ ಆಸನಗಳನ್ನು ಮಾಡಬಾರದು.
  •     ಶಿಸ್ತುಬದ್ಧವಾಗಿ, ಕ್ರಮಬದ್ಧವಾಗಿ ಯೋಗ ಮಾಡುವುದರಿಂದ ಮತ್ತು ಹಂತಹಂತವಾಗಿ ದೀರ್ಘಕಾಲದವರೆಗೆ ಯೋಗಾಸನ ಮಾಡುವುದರಿಂದ ಮಾತ್ರ ದೇಹಸ್ಥಿತಿ ಮತ್ತು ಮಾನಸಿಕ ಸ್ಥಿತಿ ಸುಸ್ಥಿತಿಯಲ್ಲಿಡಲು ಸಾಧ್ಯ. ಆದರೆ, ಬಹುಬೇಗ ಯೋಗ ಕಲೆ ಸಿದ್ಧಿಸಿಕೊಳ್ಳಬೇಕೆಂಬ ಆತುರದಲ್ಲಿ ಕಡಿಮೆ ಸಮಯದಲ್ಲಿ ಹೆಚ್ಚಿನ ವರ್ಕ್‌ಔಟ್ ಮಾಡಿದರೆ ಇರುವೆಯಂತಿದ್ದ ಸಮಸ್ಯೆ ಆನೆಯಂತಾಗುತ್ತದೆ.
  •     ಯೋಗ ಮಾಡುವಾಗ ಉಸಿರಿನ ಬಗ್ಗೆ ವಿಶೇಷ ಗಮನವಿರಲಿ. ಆ ಸಂದರ್ಭದಲ್ಲಿ ನೋವಿನ ಅನುಭವವಾದರೆ ತಕ್ಷಣ ಕ್ರಮ ಬದಲಿಸಿಕೊಳ್ಳಿ.
  •     ಕೆಲವು ಆರೋಗ್ಯ ಸಮಸ್ಯೆಗಳಿದ್ದವರಿಗೆ ಕೆಲವು ಆಸನಗಳು ಸೂಕ್ತವಲ್ಲ. ಹಾಗಾಗಿ, ಯೋಗ ಆರಂಭಿಸುವ ಮುನ್ನ ಸೂಕ್ತ ತಪಾಸಣೆ ಒಳಿತು.
  •     ಯೋಗಾಭ್ಯಾಸದ ಆರಂಭಿಕವಾಗಿ ಇಷ್ಟ ದೇವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಳಿಸಿ. ಮೊದಲಿಗೆ ಸರಳ ಆಸನಗಳನ್ನು ಮಾಡಿ. ಇದರಿಂದ ದೇಹ ಮತ್ತು ಮನಸ್ಸು ನಿಯಂತ್ರಣಕ್ಕೆ ಬರುವ ಜೊತೆಗೆ ಆಸನ ಮಾಡಲು ದೇಹ ಪಕ್ವಗೊಳ್ಳುತ್ತದೆ.
  •     ತೀವ್ರಗತಿಯಲ್ಲಿ ಉಸಿರಾಟ ಒಳಗೊಂಡಿರುವ ಕಪಾಲಭಾತಿ ಮತ್ತು ಭಸ್ತ್ರಿಕದಂಥ ಪ್ರಾಣಾಯಾಮ ಮಾಡುವಾಗ ಕೆಲವರು ಅತ್ಯುತ್ಸಾಹದಿಂದ ತಮ್ಮ ಮನಸ್ಸಿನ ಉಸಿರಾಟದ ಗತಿಯನ್ನು ವಿಪರೀತ ಹೆಚ್ಚಿಸಿಕೊಳ್ಳುತ್ತಾರೆ. ಇವುಗಳನ್ನು ಮಾಡುವಾಗ ಸ್ವನಿಯಂತ್ರಣ ಅಗತ್ಯ.
  •     ನಿಗದಿತ ಸಮಯ ಅಂದರೆ ಬೆಳಗ್ಗೆ ಮತ್ತು ಸಂಜೆ ಮಾತ್ರ ಮಾಡಿ.
  •     ಯೋಗಾಭ್ಯಾಸಕ್ಕೂ ಮುನ್ನ ಮಾನಸಿಕವಾಗಿ ಸಿದ್ಧಗೊಳ್ಳಿ. ಆಯಾಸವಿದ್ದಾಗ ಆಸನಗಳು ಬೇಡ.
  •     ಖಾಲಿ ಹೊಟ್ಟೆಯಲ್ಲಿ ಯೋಗ ಮಾಡಲು ಆಗದಿದ್ದರೆ ಒಂದಿಷ್ಟು ದ್ರವ ಆಹಾರ ಸೇವಿಸಿ.
  •     ಅಭ್ಯಾಸ ಮುಗಿದ ಕೂಡಲೇ ಲಘುಬಗೆಯಲ್ಲಿ ಕೆಲಸಗಳಿಗೆ ತೆರಳದಿರಿ. ಶವಾಸನದಲ್ಲಿ ಮಲಗಿ ಅಥವಾ ವಿರಮಿಸಿ.
- ಗಣೇಶ್ ಕಮ್ಲಾಪುರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.