ಆರೋಗ್ಯ-ಜೀವನಶೈಲಿ

ಮನೆ ಮಾಯೆ

ನಮ್ಮ ದೇಶದಲ್ಲೊಂದು ಜನಾಂಗದಲ್ಲಿ ಮೃತ ಶರೀರವನ್ನು ಎತ್ತರದ ಜಾಗದಲ್ಲಿಡುವ ಸಂಪ್ರದಾಯ. ಮೃತ ದೇಹ ಪಕ್ಷಿಗಳಿಗೆ ಆಹಾರವಾಗಲಿ...

ಮನೆ ಮಾಯೆ
Published On :

ನಮ್ಮ ದೇಶದಲ್ಲೊಂದು ಜನಾಂಗದಲ್ಲಿ ಮೃತ ಶರೀರವನ್ನು ಎತ್ತರದ ಜಾಗದಲ್ಲಿಡುವ ಸಂಪ್ರದಾಯ. ಮೃತ ದೇಹ ಪಕ್ಷಿಗಳಿಗೆ ಆಹಾರವಾಗಲಿ ಎಂಬುದು ಅವರ ಉದ್ದೇಶ. ಆದರೆ, ಹೆಣ ತಿನ್ನುತ್ತಿದ್ದ ಹದ್ದುಗಳ ಮಾರಣಹೋಮ ಹೆಚ್ಚಾಗತೊಡಗಿತು. ಕಾರಣ ಪತ್ತೆ ಹಚ್ಚಿದಾಗ ಮೃತರಾಗುವ ಮುನ್ನ ಆ ವ್ಯಕ್ತಿಗಳು ತಿನ್ನುತ್ತಿದ್ದ ಪೈನ್ ಕಿಲ್ಲರ್ಸ್‌ನ ಅಂಶಗಳು ಪಕ್ಷಿಗಳಿಗೆ ವಿಷವಾಗಿ ಪರಿಣಿಸುತ್ತಿತ್ತು!
ಹೌದು. ಪೈನ್ ಕಿಲ್ಲರ್ಸ್‌ನ ಅತಿ ಸೇವನೆಯಿಂದ ಕ್ರಮೇಣವಾಗಿ ಕಿಡ್ನಿ, ಹೃದಯದ ಮೇಲೂ ಪರಿಣಾಮ ಬೀರಬಲ್ಲದು. ಆಧುನಿಕ ಜೀವನ ಶೈಲಿಯಿಂದ ಆಗಾಗ ಕುತ್ತಿಗೆ ನೋವು, ಸ್ನಾಯು ಸೆಳೆತ, ಬಿಗಿತ ಅಥವಾ ಇನ್ನೆಲ್ಲೋ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಯೋಗ, ವ್ಯಾಯಾಮ ಮಾಡಿದರೆ ದೇಹದ ಆರೋಗ್ಯ ಸುಸ್ಥಿತಿಯಲ್ಲಿರುತ್ತದೆ. ಆದರೆ, ಅದಕ್ಕೆಲ್ಲಿದೆ ಸಮಯ? ಆದ್ದರಿಂದ ಸಣ್ಣಪುಟ್ಟ ನೋವುಗಳಿಗೆ ಮನುಷ್ಯ ನೋವು ನಿವಾರಕಗಳ ಮೊರೆ ಹೋಗುತ್ತಿದ್ದಾನೆ. ಇವು ಉರಿಯುವ ಬೆಂಕಿಗೆ ತುಪ್ಪ ಸುರಿದ ಹಾಗೆ. ಮತ್ತೊಂದಿಷ್ಟು ಪರಿಣಾಮ ಬೀರುತ್ತದೆ.
ಸಹಜವಾಗಿ, ಸಾಮಾನ್ಯವಾಗಿ ಕಾಡುವ ಕೆಲವು ನೋವುಗಳಿಗೆ ನೈಸರ್ಗಿಕ ನೋವು ನಿವಾರಕಗಳನ್ನು ಬಳಸುವುದೇ ಸೂಕ್ತ. ಅವುಗಳಲ್ಲಿ ಯಾವುದು? ಯಾವ ನೋವಿಗೆ ಸೂಕ್ತ? ಎಂಬುದನ್ನು ತಿಳಿದುಕೊಳ್ಳಬೇಕಷ್ಟೆ.

ಜೇನು ತುಪ್ಪ
ಗಂಟಲು ನೋವು , ಶೀತದಿಂದ ಉಂಟಾಗುವ ನೋವುಗಳ ನಿವಾರಣೆಗೆ ಜೇನು ತುಪ್ಪ ಉತ್ತಮ. ಥಂಡಿಯಿಂದ ಬಂದ ಗಂಟಲು ನೋವಿಗೆ ರಾಮಬಾಣ.

ಕಾಫಿ
ಮೈಗ್ರೇನ್ ತಲೆನೋವಿಗೆ ಒಳ್ಳೆಯದು. ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ ಕೆಫೀನ್ ಆರೋಗ್ಯಕ್ಕೆ ಹಾನಿಕಾರಕವಲ್ಲ. ತಲೆನೋವಿಗೆ ನೋವು ನಿವಾರಕ ಗುಳಿಗೆಗಳ ಬದಲಾಗಿ ಬಿಸಿಬಿಸಿ ಕಾಫಿ ಸೇವಿಸಿ.

ಲವಂಗ
ಹಲ್ಲು ನೋವಿದ್ದರೆ ತಕ್ಷಣವೇ ಡೆಂಟಿಸ್ಟ್ ಬಳಿ ಓಡಬೇಡಿ. ಲವಂಗ ಹಲ್ಲು ನೋವಿಗೆ ಜೋಮು ಹಿಡಿಸುವ  ಕೆಲಸ ಮಾಡುತ್ತದೆ. ನೋವಿರುವ ಹಲ್ಲುಗಳ ಮಧ್ಯೆ ಲವಂಗವನ್ನು ಇಟ್ಟುಕೊಂಡರೆ, ನೋವು ಮಾಯ.

ಬಿಸಿ ನೀರಿನ ಸ್ನಾನ
ಸ್ನಾಯು ಬಿಗಿತಕ್ಕೆ ಬಿಸಿ ನೀರಿನಲ್ಲಿ ಸ್ನಾನ ಮಾಡಿ. ಇದರಿಂದ ಬಿಗಿತ ಸರಿಹೋಗುತ್ತದೆ.

ಮೊಸರು
ಹೆಂಗಸರಿಗೆ ಬರುವ ಮುಟ್ಟಿನ ಸೆಳೆತಕ್ಕೆ ಕ್ಯಾಲ್ಸಿಯಂ ಮತ್ತು ಮೆಗ್ನಿಷಿಯಮ್ ಎರಡನ್ನೂ ಹೊಂದಿರುವ ಮೊಸರು ಅತ್ಯಗತ್ಯ. ಋತು ಚಕ್ರದ ಸಮಯದಲ್ಲಿ ಕನಿಷ್ಠ ಎರಡು ಬಟ್ಟಲಷ್ಟು ಮೊಸರು ಸೇವಿಸಿ.

ಟೊಮ್ಯೊಟೋ
ನಿತ್ಯವೂ ಕಾಲಿನ ಸ್ನಾಯು ಬಿಗಿತ ಕಂಡು ಬರುತ್ತಿದೆಯೇ? ಅದಕ್ಕೆ ನರಗಳ ತೊಂದರೆಯೇ ಪ್ರಮುಖ ಕಾರಣ. ಹೆಚ್ಚಿನ ಪೊಟ್ಯಾಷಿಯಂ ಹೊಂದಿರುವ ಟೊಮ್ಯಾಟೋಗಳು ನರಮಂಡಲದ ಉತ್ತಮ ಆರೋಗ್ಯಕ್ಕೆ ಅತ್ಯಗತ್ಯ.

ಬ್ಲ್ಯೂ ಬೆರ್ರಿ
ವಿಟಮಿನ್ 'ಸಿ' ಯೆಥೇಚ್ಛವಾಗಿರುವ ಈ ಹಣ್ಣುಗಳು ಮೂತ್ರ ನಾಳದ ಸೋಂಕಿಗೆ ರಾಮಬಾಣ.

ಅನಾನಸ್
ವಾಯುವಿನಿಂದ ಉಂಟಾಗುವ ಹೊಟ್ಟೆ ನೋವಿಗೆ ಅನಾನಸ್ ಉತ್ತಮ ಔಷಧ. ಇದರಲ್ಲಿರುವ ಶುದ್ಧಿಕಾರಕ ಅಂಶಗಳು ಹೊಟ್ಟೆಯಲ್ಲಿನ ವಾಯುವನ್ನು ಕಡಿಮೆ ಮಾಡುತ್ತದೆ.

ಉಪ್ಪು
ರಾತ್ರಿ ವೇಳೆಗೆ ಅನೇಕರು ಪಾದ ನೋವಿನಿಂದ ಬಳಲುತ್ತಿರುತ್ತಾರೆ. ಅದರಲ್ಲಿಯೂ ಗರ್ಭಿಣಿಯರಿಗೆ ಪಾದಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಬೆಚ್ಚಗಿನ ಉಪ್ಪು ನೀರಿನಲ್ಲಿ ಕಾಲುಗಳನ್ನು ತುಸು ಕಾಲ ನೆನೆಸಿಟ್ಟುಕೊಳ್ಳುವುದರಿಂದ ಪಾದಗಳ ನೋವು ಹಾಗೂ ಊತ ಕಡಿಮೆಯಾಗುತ್ತದೆ.

ದ್ರಾಕ್ಷಿ
ದ್ರಾಕ್ಷಿ ಸೇವನೆ ಬೆನ್ನಿನ ಕೆಳ ಭಾಗಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ ಎಂಬುದನ್ನು ವೈಜ್ಞಾನಿಕ ಸಂಶೋಧನೆಗಳು ಸಾಬೀತು ಪಡಿಸಿವೆ. ಹಾಗಾಗಿ ಬೆನ್ನಿನ ನೋವಿನ ನಿವಾರಣೆಗೆ ದ್ರಾಕ್ಷಿ ಸೇವನೆ ಪರಿಣಾಮಕಾರಿ.

ಅರಿಶಿನ
ಊತ ಶಮನಕಾರಿ, ನಂಜು ನಿವಾರಕ ಅರಿಶಿನ. ಇದೊಂದು ಅದ್ಭುತ ಔಷಧೀಯ ಗುಣ ಹೊಂದಿರುವ ಮಸಾಲೆ ಪದಾರ್ಥ. ಸುಟ್ಟ ಗಾಯಗಳಿಗೂ ಹಿತವಾದ ಪರಿಣಾಮವನ್ನು ಬೀರುತ್ತದೆ. ರಕ್ತ ಹೆಪ್ಪುಗಟ್ಟಿವಿಕೆಯಾದ ಕೆಂಪಾದ ಅಥವಾ ನೋವಿನಿಂದ ಊದಿರುವ ದೇಹದ ಯಾವುದೇ ಭಾಗಕ್ಕೆ ಬೇಕಾದರೂ ಅರಿಶಿನದ ಪ್ಟೇಸ್ಟ್ ಲೇಪಿಸಬಹುದು.
ಚೆರ್ರಿ
ಗಂಟು ನೋವಿಗೆ ಅತ್ಯಗತ್ಯ. ಈ ಹಣ್ಣುಗಳಲ್ಲಿರುವ ಆ್ಯಂಟಿಆ್ಯಕ್ಸಿಡೆಂಟ್‌ಗಳು ಮತ್ತು ಆಂತೋಸಿಯಾನ್ಸಿಸ್ ಉತ್ತಮ ನೈಸರ್ಗಿಕ ನೋವು ನಿವಾರಕಗಳಾಗಿ ಕೆಲಸ ಮಾಡುತ್ತವೆ. ಹಾಗಾಗಿ ಸಂಧಿವಾತದ ನೋವಿನಿಂದ ಬಳಲುವವರು ತಮ್ಮ ಆಹಾರದಲ್ಲಿ ಈ ಹಣ್ಣುಗಳನ್ನು ಹೆಚ್ಚಾಗಿ ಬಳಸಬೇಕು.

ಆ್ಯಪಲ್ ಸೈಡ್ ವಿನೆಗರ್
ಆ್ಯಸಿಡಿಟಿ ಕಾರಣದಿಂದ ಎದೆಉರಿ ಇದ್ದಲ್ಲಿ, 1 ಚಮಚ ಆ್ಯಪಲ್ ಸೈಡ್ ವಿನೆಗರ್ ಅನ್ನು ನೀರಿನಲ್ಲಿ ಬೆರೆಸಿ ಕುಡಿಯಿರಿ. ಇದು ಆ್ಯಸಿಡಿಟಿ ಮತ್ತು ಎದೆಯುರಿಯನ್ನು ತಡೆಯುತ್ತದೆ.

- ರಶ್ಮಿ ಕಾರ್ಗಲ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.