ಆರೋಗ್ಯ-ಜೀವನಶೈಲಿ

ಅಬ್ಬಬ್ಬಾ, ತಲೆ ಹೋಯ್ತು

ಕೆಲವರು ಸದಾ ಚಟುವಟಿಕೆಯಿಂದ ಇದ್ದು, ನಗ್ತಾನೆ ಇರ್ತಾರೆ. ಆದರೆ, ಸಡನ್ನಾಗಿ ಮಂಕು ಕವಿದಂತಾಗಿ ಬಿಡುತ್ತಾರೆ. ಕಾರಣ ಅವರನ್ನು ಕಾಡುವ ಅರೆ ತಲೆನೋವು....

ಅಬ್ಬಬ್ಬಾ, ತಲೆ ಹೋಯ್ತು
Published On :

ಕೆಲವರು ಸದಾ ಚಟುವಟಿಕೆಯಿಂದ ಇದ್ದು, ನಗ್ತಾನೆ ಇರ್ತಾರೆ. ಆದರೆ, ಸಡನ್ನಾಗಿ ಮಂಕು ಕವಿದಂತಾಗಿ ಬಿಡುತ್ತಾರೆ. ಕಾರಣ ಅವರನ್ನು ಕಾಡುವ ಅರೆ ತಲೆನೋವು. ಅದ್ಯಾವಾಗ, ಏಕೆ ಬರುತ್ತದೆ ಎನ್ನುವುದು ಅರ್ಥವಾಗುವುದಿಲ್ಲ. ಯಾತನೆ ಮಾತ್ರ ಅನುಭವಿಸುವವರಿಗೇ ಗೊತ್ತು.
ಸಾಂಪ್ರದಾಯಿಕ ಮತ್ತು ಇತರೆ ಚಿಕಿತ್ಸೆಗಳನ್ನು ಪಡೆದರೂ ಇಂಥದ್ದೊಂದು ನೋವು ವಾಸಿಯಾಗುವುದು ಕಷ್ಟ. ಆದರೆ, ನೋವು ಬರುವ ಸಂದರ್ಭಗಳು, ತೀವ್ರತೆ, ಮನೋಧರ್ಮ, ಮಾನಸಿಕ ಒತ್ತಡ ಮುಂತಾದವುಗಳನ್ನು ಗಮನಿಸಿ ಸೂಕ್ತ ಹೋಮಿಯೊಪತಿ ಔಷಧಿಗಳನ್ನು ನೀಡುವುದರಿಂದ ಈ ನೋವನ್ನೂ ಗುಣಪಡಿಸಬಹುದು.

ಮಾನಸಿಕ ಸಂಕೀರ್ಣತೆ
ಲಕ್ಷಾಂತರ ಜನರನ್ನು ಕಾಡುವ ಅರೆತಲೆನೋವು ಒಂದು ಮಾನಸಿಕ ಸಂಕೀರ್ಣತೆಯ ಲಕ್ಷಣ. ಈ ನೋವು ಹೆಚ್ಚಾಗಿ 20-30ರ ಮಧ್ಯವಯಸ್ಸಿನವರನ್ನು ಬಾಧಿಸುತ್ತದೆ. ಅದರಲ್ಲಿಯೂ ಮಕ್ಕಳು ಸೇರಿದಂತೆ ಸೂಕ್ಷ್ಮತೆ ಹೆಚ್ಚಾಗಿರುವವರಲ್ಲಿ ಸಾಮಾನ್ಯ.
ಕಾಲಕಾಲಕ್ಕೆ ತೀವ್ರ ತಲೆನೋವು ಕಾಣಿಸಿಕೊಳ್ಳುತ್ತದೆ. ಈ ಅಸ್ವಸ್ಥತೆಯ ತೀವ್ರತೆ, ಆವರ್ತನಕಾಲ ಮತ್ತು ಕಾಲಾವಧಿಯಲ್ಲಿ ಬೇರೆ ಬೇರೆ ಆಗಿರುತ್ತದೆ. ಕೌಟುಂಬಿಕ ಸಮಸ್ಯೆಗಳೂ ಕಾರಣವಾದ ಈ ನೋವು ಹೆಚ್ಚಾಗಿ ಮಹಿಳೆಯರನ್ನು ಕಾಡುತ್ತದೆ. ಮಗುವಿನ ಜನನದ ವೇಳೆ ಹಾಗೂ ಋತುಬಂಧದ ವೇಳೆಯೂ ಇದು ಬಾಧಿಸಬಹುದು. ಋತುಚಕ್ರದ ಮೊದಲು ಅಥವಾ ನಂತರವೂ ಮಹಿಳೆಯನ್ನು ಕಾಡಬಹುದು. ಅಲ್ಲದೆ, ಈ ಅರೆತಲೆ ನೋವು ಪರಿಪೂರ್ಣತೆಯನ್ನು ಸಾಧಿಸಲು ಯತ್ನಿಸುವವರನ್ನು ಹೆಚ್ಚಾಗಿ ಕಾಡುತ್ತದೆ.
ಸಾಮಾನ್ಯವಾಗಿ ವಾರಾಂತ್ಯದಲ್ಲಿ ಕಾಡುವ ಈ ನೋವು ಹಠತ್ತಾಗಿ, ನಿಧಾನವಾಗಿ, ತೀವ್ರವಾದ ಏರಿಕೆಯಲ್ಲಿ ಕಾಡುತ್ತದೆ. ಅದು ಒಬ್ಬ ವ್ಯಕ್ತಿಯ ಕೆಲಸ, ಉತ್ಪಾದಕತೆ ಮತ್ತು ವಿಶ್ರಾಂತಿಗೆ ಧಕ್ಕೆಯುಂಟು ಮಾಡಬಹುದು. ಒಂದು ರಜೆಯನ್ನು ನಿರುತ್ಸಾಹಗೊಳಿಸಬಹುದು. ತಲೆಯ ಮೇಲೆ ಒಂದು ಸಣ್ಣ ಹೊಡೆತ, ಶೀತಕ್ಕೆ ಒಡ್ಡಿಕೊಳ್ಳುವುದು, ಪಥ್ಯದಲ್ಲಿ ವೈಪರೀತ್ಯಗಳು, ಭೋಜನವನ್ನು ತಪ್ಪಿಸುವುದು ಅಥವಾ ಮಾನಸಿಕ ಹೋರಾಟ ಅರೆತಲೆನೋವನ್ನುಂಟು ಮಾಡಬಹುದು. ಇದರೊಂದಿಗೆ ಒತ್ತಡ, ಉದ್ವೇಗ, ನಿರಾಸೆ ಮತ್ತು ತಪ್ಪಿತಸ್ಥಭಾವನೆಯೂ ಈ ನೋವಿಗೆ ಕಾರಣವಾಗಬಲ್ಲದು.
ಉದ್ರೇಕದಿಂದ ಖಿನ್ನತೆ, ಹಸಿವಾಗದಿರುವುದು, ವಾಕರಿಕೆ, ವಾಂತಿ ನಂತರ ಭೇದಿ ಮತ್ತು ಹೆಚ್ಚಾದ ಮೂತ್ರವಿಸರ್ಜನೆ ಈ ನೋವಿನ ಲಕ್ಷಣಗಳು.

ರಕ್ತನಾಳಗಳಲ್ಲಿ ನೋವು ಆರಂಭ
ಸಾಮಾನ್ಯವಾಗಿ ಅರೆತಲೆನೋವು ಬುರುಡೆಯ ರಕ್ತನಾಳಗಳಲ್ಲಿ ಮತ್ತು ಮೆದುಳಿನ ರಕ್ತನಾಳಗಳಲ್ಲಿ ಆರಂಭವಾಗುತ್ತದೆ. ತ್ವಚೆಗೆ ಹತ್ತಿರವಿರುವ ರಕ್ತನಾಳಗಳು ಅರೆತಲೆನೋವು ಬಂದಾಗ ಊದಿಕೊಂಡಂತೆ ಮತ್ತು ಸಂವೇದನೆ ಹೆಚ್ಚಾದಂತೆ ಕಂಡರೂ ನೋವಿರುವ ಸ್ಥಳದ ಮೇಲೆ ಸ್ವಲ್ಪ ಒತ್ತಡವನ್ನು ಹಾಕಿದರೂ ತಾತ್ಕಾಲಿಕವಾಗಿ ನೋವು ನಿವಾರಣೆಯಾಗುತ್ತದೆ.
ಹೋಮಿಯೋಪಥಿ ಇಡೀ ಕಾಯಿಲೆಯನ್ನು ಸಮಗ್ರವಾಗಿ ನೋಡುವುದರಿಂದ ಅರೆತಲೆನೋವಿನ ಮೂಲ ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುತ್ತದೆ. ಇದರಿಂದ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ.

ಎಂತೆಂಥ ತಲೆನೋವು
ಉದ್ವೇಗ, ಆತಂಕದಿಂದ ಬರುವ ತಲೆನೋವು ಒಂದು ವಿಧದ ತಲೆನೋವು. ಇದು ಒಬ್ಬ ವ್ಯಕ್ತಿ ನಿಯಮಿತವಾಗಿ ಅಸಾಮಾನ್ಯ ಒತ್ತಡವನ್ನ ಅನುಭವಿಸಿದರೆ ಉಂಟಾಗುತ್ತದೆ. ನೋವು ಅಲ್ಪದಿಂದ ಸಾಧಾರಣದವರೆಗೆ ಇದ್ದು, ಒಂದೆರಡು ದಿನಗಳ ಕಾಲವೂ ಕಾಡಬಹುದು. ಉದ್ವೇಗದಿಂದ ಬರುವ ತಲೆನೋವಿರುವ ಕೆಲವರು ತಮಗೆ ಅರೆತಲೆನೋವಿದೆ ಎಂದೇ ಭಾವಿಸುತ್ತಾರೆ. ಆದರೆ ಅವರ ನೋವು ಒತ್ತಡಕ್ಕೆ ಬರುವುದು. ಉದ್ವೇಗದ ತಲೆನೋವಿನಿಂದ ಮಂಪರು ಉಂಟಾಗುತ್ತದೆ. ಏಕಾಗ್ರತೆಯ ಕೊರತೆಯೂ ಕಾಡುತ್ತದೆ.
ಕ್ಲಸ್ಟರ್ ತಲೆನೋವು ಅತಿ ತೀವ್ರ ತೆರನಾದ ನೋವು. ಭಯ, ಚಡಪಡಿಕೆ, ಕಣ್ಣಿನಲ್ಲಿ ನೋವು ಮತ್ತು ನಿದ್ರೆಬಂದಂತಾಗುವುದು ಇದರ ಲಕ್ಷಣಗಳು. ಈ ರೀತಿಯ ತಲೆನೋವು, 20-40 ವರ್ಷಗಳ ವಯೋವಾನದವರನ್ನು ಕಾಡುತ್ತದೆ. ನೋವು, ದಿನಕ್ಕೆ 3-4 ಬಾರಿ ಬಂದು, 3-4 ತಿಂಗಳುಗಳ ಕಾಲ ಇರಬಹುದು.
ಸಮೂಹ ತಲೆನೋವು ದಿನವೂ ಒಂದೇ ವೇಳೆಯಲ್ಲಿ ಬರುವ ಸಾಧ್ಯತೆಯಿದೆ.
ಉದ್ವೇಗ ಮತ್ತು ಅರೆತಲೆನೋವುಗಳ ಮಿಶ್ರಣವೇ ಮಿಶ್ರಿತ ತಲೆನೋವು. ನೋವು ಹಠಾತ್ತಾಗಿ ಬರುತ್ತದೆ.  ದೀರ್ಘಕಾಲ ಇರುವುದಿಲ್ಲ. ಬಹುತೇಕ, ವ್ಯಕ್ತಿಯು ತೀವ್ರ ಒತ್ತಡದಲ್ಲಿದ್ದರೆ ನೋವು ಕಾಣಿಸಬಹುದು. ವ್ಯಕ್ತಿ ಒತ್ತಡದಿಂದ ಮುಕ್ತನಾದಾಗ ನೋವು ಮಾಯವಾಗುತ್ತದೆ.

ಏನು ಮಾಡಿದರೆ ಒಳಿತು?
= ಪ್ರತಿ ದಿನವೂ 6-8 ಗಂಟೆಗಳ ಕಾಲ ನಿದ್ದೆ ಮಾಡಿ.  
= ನಿಯಮಿತವಾಗಿ ಊಟ ಮಾಡಿ. ಊಟವನ್ನು ತ್ಯಜಿಸುವುದು ಅಥವಾ ಅನಿಯಮಿತವಾಗಿ ಕುರುಕು ತಿಂಡಿಗಳನ್ನು ತಿನ್ನುವುದು ಮಾಡಬೇಡಿ.
= ನಿಯಮಿತವಾಗಿ ವ್ಯಾಯಾಮ ಮಾಡಿ.
= ಹಳೆ ಗಿಣ್ಣು, ಮದ್ಯ, ಚಾಕೋಲೆಟ್, ಕಿಣ್ವ, ಹಳಸಲು ಮಾಂಸ, ಕೆಂಪು ದ್ರಾಕ್ಷಾರಸ, ಸೋಯಾಬಿನ್ ಮತ್ತು ಕಾಫಿಯಿಂದ ದೂರವಿರಿ.

- ಡಾ. ಮುಖೇಶ್ ಬಾತ್ರಾ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.