ಬೋನ್ ಸರ್ಜರಿ

ಅಪಘಾತದಲ್ಲಿ ಈ ರೈತನ ಕಾಲಿನಮೂಳೆ ಮೂರು ಕಡೆ ಮುರಿದು ಹೋಗಿ, ಬದುಕು ಮುಗಿದೇ ಹೋಯಿತು ಎನ್ನುವಂತಾಗಿತ್ತು. ಎಲ್ಲದಕ್ಕೂ ಇತರರನ್ನು ಅವಲಂಬಿಸಬೇಕಾಗಿತ್ತು. 'ಉರಿಯುವ ಬೆಂಕಿಗೆ ತುಪ್ಪಿ ಸುರಿದಂತೆ' ಗುಲ್ಬರ್ಗ ಜಿಲ್ಲಾಸ್ಪತ್ರೆಯಲ್ಲಿಯಲ್ಲಿ ಸಕ್ಕರೆ ಕಾಯಿಲೆ ಇರುವ ರೈತ ವಿಠಲ್‌ಗೆ ಎರಡೂ ಕಾಲುಗಳನ್ನು ಕತ್ತರಿಸಬೇಕಾಗುತ್ತದೆ. ಇಲ್ಲದಿದ್ದರೆ ಗ್ಯಾಂಗ್‌ರೀನ್ ಆಗಿಬಿಡುತ್ತೆ ಎಂದು ಹೆದರಿಸಿಬಿಟ್ಟಿದ್ದರು.
ಏನಾದರೂ ಆಗಲಿ ಎಂದು ಈ ರೈತನ ಕುಟುಂಬ ಗುಲ್ಬರ್ಗದ ಬಸವೇಶ್ವರ ಆಸ್ಪತ್ರೆಯ ಮೂಳೆ- ಕೀಲು ರೋಗ ಹಾಗೂ ಪ್ಲಾಸ್ಟಿಕ್ ಸರ್ಜನ್‌ರನ್ನು ಭೇಟಿ ಮಾಡಿತು. ಅಲ್ಲಿ ವಿಠಲ್ ಮೊದಲಿನಂತಾಗುವ ಭರವಸೆ ಸಿಕ್ಕಿತು.
ಪ್ಲಾಸ್ಟಿಕ್ ಸರ್ಜನ್ ಡಾ. ಅನಿಲ್ ಮಲ್ಹಾರಿ, ಮೂಳೆ- ಕೀಲು ತಜ್ಞ ಡಾ. ಬಿ.ಸಿ. ಪಾಟೀಲ್ ಮತ್ತವರ ತಂಡ ವಿಠಲ್‌ನ ಕಾಲಿನ (ಮೊಳಕಾಲಿನ ಕೆಳಭಾಗದಲ್ಲಿ) ಮೂರೂ ಮುರಿತಗಳನ್ನು ಜೋಡಿಸಿ ಎಲುಬಿನ ಒಳಗಡೆಯಿಂದಲೇ ಸ್ಟೀಲ್ ರಾಡ್ ಅಳವಡಿಸಿ ಯಶಸ್ವಿ ಶಸ್ತ್ರಕ್ರಿಯೆ ನೆರವೇರಿಸಿದರು.
ಅಬ್ಬಾ, ಎಲ್ಲವೂ ಸುಸೂತ್ರವಾಯಿತು ಎನ್ನುವಷ್ಟರಲ್ಲಿ ಮತ್ತೊಂದು ಸಮಸ್ಯೆ ಎದುರಾಯಿತು. ಮುರಿದ ಮೂಳೆಗಳು ಹೊಂದಿಕೆಯಾದವು, ಅವು ಹಾಗೇ ರಕ್ತ- ಮಾಂಸಖಂಡಗಳಿಲ್ಲದೆ ಹೊರಗೆ ಕಾಣಿಸಿಕೊಂಡರೆ ರೋಗಿಯ ಗತಿ ಏನಾಗಬೇಡ? ಇನ್‌ಫೆಕ್ಷನ್ ಆಗಿ ಕಾಲು ಮುರಿತಕ್ಕಿಂತಲೂ ಹೆಚ್ಚಿನ ಯಾತನೆ ಅನುಭವಿಸಬೇಕಾಗಿತ್ತು.
ಪ್ಲಾಸ್ಟಿಕ್ ಸರ್ಜನ್ ಕರಾಮತ್ತು
ಆದರೆ, ಇಂಥ ಸವಾಲನ್ನೂ ಡಾ. ಮಲ್ಹಾರಿ ಫ್ಯಾಸಿಕ್ಯುಟೇನಿಯೋಸ್ ಫ್ಲ್ಯಾಪ್ (A Fasciocutaneous flap surgery) ಚಿಕಿತ್ಸೆ ನಡೆಸುವ ಮೂಲಕ ಯಶಸ್ವಿಯಾಗಿ ನಿಭಾಯಿಸಿದರು. ವಿಠಲ್‌ನ ತೊಡೆಯ ಚರ್ಮವನ್ನು ತೆಗೆದು ಹರಿದುಹೋದ ಎರಡೂ ಮೊಳಕಾಲುಗಳಿಗೆ ಹೊದಿಸಿದರು. ಅಕ್ಕಪಕ್ಕದಲ್ಲಿ ಹಾನಿಗೊಳದಾಗ ಮಾಂಸ-ಖಂಡಗಳನ್ನೆಲ್ಲ ಸರಿಪಡಿಸಿ ಅದನ್ನೇ ಹೊದಿಕೆಯಡಿ ಹಾಕಿ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದರು.
ಕೂಡಲೇ ದಾಖಲು
ಅಪಘಾತವಾಗಿ ಎಲುಬು ಹೊರಬಂದಲ್ಲಿ ತಕ್ಷಣವೇ ರೋಗಿಯನ್ನು ಆಸ್ಪತ್ರೆಗೆ ಸೇರಿಸಬೇಕು. ಹೀಗಾದರೆ ಸುಲಭವಾಗಿ ಚಿಕಿತ್ಸೆ ನೀಡಬಹುದು. ಆಳಂದ ರೈತ ವಿಠಲ್ ಅಪಘಾತಕ್ಕೊಳಗಾದ ಮಾರನೇ ದಿನವೇ ನನ್ನ ಬಳಿ ಬಂದಿದ್ದರಿಂದ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದೆವು.
- ಡಾ. ಅನಿಲ್ ಕುಮಾರ್ ಮಲ್ಹಾರಿ, ಪ್ಲಾಸ್ಟಿಕ್ ಸರ್ಜನ್, ಬಿಟಿಜಿಎಚ್, ಗುಲ್ಬರ್ಗ (9448911778)
ಸರ್ಜರಿಯ ಸವಾಲುಗಳು
- ಅಪಘಾತವಾಗಿ ಕಾಲು ಮುರಿದುಕೊಂಡಿದ್ದ ರೈತ ವಿಠಲ್ ಮಧುಮೇಹಿ. ತುಸು ಇನ್‌ಫೆಕ್ಷನ್ ಆದರೂ ಅಪಾಯ ಕಾದಿತ್ತು.
- ಎಲುಬುಗಳು ತೆರೆದುಕೊಂಡಿದ್ದರಿಂದ ಅಲ್ಲಿ ಪಕ್ಕಾ ಹೊದಿಕೆ ಹಾಕುವ ಕೆಲಸವಾಗಬೇಕಿತ್ತು.
- ಚಾಕಚಕ್ಯತೆಯಿಂದ ಮಾಂಸ-ಖಂಡಗಳ ಮೇಲುಹೊದಿಕೆ ಮುಚ್ಚುವ ಕೌಶಲ್ಯ- ಕೈಚಳಕದ ವೈದ್ಯರು- ಸಿಬ್ಬಂದಿ ಇಂಥ ಶಸ್ತ್ರಕ್ರಿಯೆಗೆ ಬೇಕು.
- ದೇಹದ ಇತರೆ ಭಾಗದಿಂದ ಚರ್ಮ ಪಡೆದು ಮಾಡುವ ಮೇಲುಹೊದಿಕೆ ಕಸಿ ಹೊಂದಿಕೊಳ್ಳಬೇಕು.
ಓಡಾಡಂಗ ಮಾಡ್ಯಾರ್ರಿ...
ನಾನಂತೂ ಇನ್ನೇನ್ ಮೇಲೇಳೋದಿಲ್ಲ ಅಂತ ತಿಳ್ಕೊಂಡಿದ್ದೆ. ಆದ್ರ ಇಲ್ಲಿನ ಡಾ. ಅನಿಲ್ ಸೇರಿದಂತೆ ಎಲ್ಲರೂ ನನಗ ಎಲ್ಲಾರಂಗ ನಡಕೊಂತ ಓಡಾಡುವಂಗ ಮಾಡ್ಯಾರ್ರಿ.
- ವಿಠಲ್, ಶಸ್ತ್ರಚಿಕಿತ್ಸೆಗೊಳಗಾದ ರೈತ
- ಶೇಷಮೂರ್ತಿ ಅವಧಾನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


