ಕ್ಷಯ ತಾಪತ್ರೆ
ಕ್ಷಯರೋಗವೂ (ಟ್ಯೂಬರ್‌ಕ್ಯುಲೋಸಿಸ್ ಅಥವಾ ಟಿಬಿ) ಸಂತಾನ ಹೀನತೆಗೆ ಕಾರಣವಾಗಬಹುದು. ಭಾರತ ಸೇರಿದಂತೆ ವಿಶ್ವದ ಅಭಿವೃದ್ಧಿ ಹೊಂದಿದ...

ವಿಶ್ವದಲ್ಲಿ ಸುಮಾರು 80 ಮಿಲಿಯನ್ ದಂಪತಿ ಹಾಗೂ ಭಾರತದಲ್ಲಿ 15 ಮಿಲಿಯನ್ ದಂಪತಿ ಸಂತಾನವಿಲ್ಲದೆ ಕೊರಗುತ್ತಿದ್ದಾರಂತೆ. ಒಂದೆರಡು ಕಾರಣಗಳಿಂದ ಸಂತಾನಹೀನತೆ ನಮ್ಮೊಳಗೆ ಬಂದುಸೇರಿಕೊಳ್ಳದು. ಇಂದು ಸಾಮಾನ್ಯ ಕಾರಣಗಳ ಹೊರತಾಗಿಯೂ ಅನ್ಯ ಆರೋಗ್ಯ ಸಮಸ್ಯೆಗಳಿಂದಲೂ ಸಂತಾನಹೀನತೆ ಬರಬಹುದೆಂದು ಸಂಶೋಧನೆಗಳು ದೃಢಪಡಿಸಿವೆ.
ಕ್ಷಯರೋಗವೂ (ಟ್ಯೂಬರ್‌ಕ್ಯುಲೋಸಿಸ್ ಅಥವಾ ಟಿಬಿ) ಸಂತಾನ ಹೀನತೆಗೆ ಕಾರಣವಾಗಬಹುದು. ಭಾರತ ಸೇರಿದಂತೆ ವಿಶ್ವದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೂ ಮೈಕೊಬ್ಯಾಕ್ಟಿರಿಮ್ ಎಂಬ ಬ್ಯಾಕ್ಟೀರಿಯಾದಿಂದ ಬರುವ ಟಿಬಿ ಒಂದು ದೊಡ್ಡ ಸಮಸ್ಯೆ. ಈ ಬ್ಯಾಕ್ಟೀರಿಯಾಗಳು ಮೊದಲು ಶ್ವಾಸಕೋಶ ಅಥವಾ ಪುಪ್ಪುಸವನ್ನು ಹೊಕ್ಕು, ಅಲ್ಲಿ ಜೀವಕಣಗಳನ್ನು ನಾಶಗೊಳಿಸಿ, ನಂತರ ದೇಹದ ಇತರೆ ಭಾಗಗಳಿಗೆ ವ್ಯವಸ್ಥಿತವಾಗಿ ಹರಡಿ, ಆರೋಗ್ಯವನ್ನು ಹದಗೆಡಿಸುತ್ತವೆ.
ಜನನೇಂದ್ರಿಯಗಳೂ ಹೊರತಲ್ಲ!
ಪುರುಷ ಅಥವಾ ಸ್ತ್ರೀ ಜನನೇಂದ್ರಿಯವೂ ಟಿಬಿ ಅಪಾಯಕ್ಕೆ ತುತ್ತಾಗಬಹುದು. ಇದನ್ನು ಜನನೇಂದ್ರಿಯ ಟಿಬಿ ಎಂದೇ ಕರೆಯುತ್ತಾರೆ. ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ಈ ಟಿಬಿಯಿಂದ ಸಂತಾನಹೀನತೆ ಸಮಸ್ಯೆ ಕಾಡುತ್ತದೆ. ಇಂಥವರ ಸಂಖ್ಯೆ ಶೇ.5-10ರಷ್ಟಿದೆ. ಈ ಸಮಸ್ಯೆಯ ಪ್ರಮಾಣ ಅಮೆರಿಕದಲ್ಲಿ ಶೇ.1ರಷ್ಟಿದ್ದರೆ, ಭಾರತದಲ್ಲಿ ಶೇ.10ರಷ್ಟಿದೆ.
ಬಹುತೇಕ ಸಂದರ್ಭಗಳಲ್ಲಿ ಜನನೇಂದ್ರಿಯ ಟಿಬಿ ಸಂಭೋಗದ ವೇಳೆ ರಕ್ತಗಾಯ ಉಂಟಾದರೂ ವ್ಯಾಪಿಸುತ್ತದೆ. ಇದನ್ನು ಪತ್ತೆ ಹಚ್ಚೋದು ಸುಲಭವಲ್ಲ. ಬಹುತೇಕ ಪ್ರಕರಣಗಳಲ್ಲಿ ಎಂಡೊಮೆಟಿರಿಯಲ್ ಬಯಾಪ್ಸಿ ಪರೀಕ್ಷಾ ವಿಧಾನ ನಡೆಸಿ ಈ ಬಗೆಯ ಟಿಬಿಯನ್ನು ಪತ್ತೆ ಹಚ್ಚಲಾಗುತ್ತದೆ. ಅಲ್ಟ್ರಾಸೌಂಡ್ ಸ್ಕ್ಯಾನ್ ವೈದ್ಯರಿಗೆ ಒಂದಿಷ್ಟು ಸುಳಿವು ನೀಡಬಹುದು. ಅಂತೆಯೇ ಲ್ಯಾಪ್ರೋಸ್ಕೊಪಿ, ಹಿಸ್ಟಿರೊಸ್ಕೊಪಿ ಪರೀಕ್ಷೆಗಳೂ ರೋಗದ ಕುರಿತು ಸುಳಿವು ನೀಡಬಹುದು. ಆದ್ದರಿಂದ ಜನನೇಂದ್ರಿಯ ಟಿಬಿ ಕುರಿತು ನಿಖರ ನಿರ್ಧಾರಕ್ಕೆ ಬರಲು ಕನಿಷ್ಠ ಆರು ತಿಂಗಳು ವಿವಿಧ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಬೇಕು. ರೋಗ ತೀವ್ರವಾಗಿರುವವರಿಗೆ ದೀರ್ಘ ಕಾಲದ ಚಿಕಿತ್ಸೆಯ ಅಗತ್ಯವಿದೆ.
ಸಾಮಾನ್ಯ ಔಷಧಿ ನಡೆಯಲ್ಲ
ಜನನೇಂದ್ರಿಯ ಟಿಬಿಯನ್ನು ಸಾಮಾನ್ಯ ಟಿಬಿಗೆ ನೀಡುವ ಔಷಧಿಯಿಂದ ಗುಣಪಡಿಸೋದು ಕಷ್ಟ. ಇಂಥ ಟಿಬಿಯಿಂದ ಫಾಲೊಪಿಯನ್ ನಾಳಗಳಿಗೆ ತೀವ್ರ ಘಾಸಿಯಾಗಿರುತ್ತದೆ. ಈ ಘಾಸಿಗೊಂಡ ಭಾಗವನ್ನು ಶಸ್ತ್ರಕ್ರಿಯೆ ಮೂಲಕವೂ ಸರಿಪಡಿಸೋದು ಕಷ್ಟ. ಹೀಗಾಗಿಯೇ ಮಹಿಳೆಯರಲ್ಲಿ ಕಂಡುಬರುವ ಈ ಟಿಬಿಗೆ ನೀಡುವ ಚಿಕಿತ್ಸೆ ಫಲಕಾರಿಯಾಗೋದಿಲ್ಲ. ಈಗ ಲಭ್ಯವಿರುವ ಹಿಸ್ಟಿರೊಸ್ಕೊಪಿ, ಕೃತಕ ಗರ್ಭಧಾರಣೆ (ಇನ್ವಿಟ್ರೊ ಫರ್ಟಿಲೈಸೇಷನ್- ಐವಿಎಫ್) ಹಾಗೂ ಎಂಬ್ರಿಯೊ ಟ್ರಾನ್ಸ್‌ಫರ್ (ಭ್ರೂಣಗಳ ವರ್ಗಾವಣೆ) ತಂತ್ರಜ್ಞಾನಗಳು ಈ ರೋಗಿಗಳ ಸಂತಾನ ಸಾಫಲ್ಯತೆಯ ಆಸೆಯನ್ನು ಜೀವಂತವಾಗಿರಿಸಿವೆ.
ಟಿಬಿ ಇದ್ದರೂ ಅವಳಿ ಮಕ್ಕಳಿಗೆ ಜನನ!
32 ವರ್ಷದ ಮಹಿಳೆಯೊಬ್ಬರಿಗೆ ಗರ್ಭಾಶಯದ ಎಡನಾಳದಲ್ಲಿ ಎರಡು ಬಾರಿ ಗರ್ಭ ಕಟ್ಟಿಕೊಂಡಿತ್ತು (ಎಕ್ಟಾಪಿಕ್ ಪ್ರೆಗ್ನೆನ್ಸಿ ಇನ್ ಫಾಲೊಪಿಯನ್ ಟ್ಯೂಬ್). ವಿವಿಧ ವೈದ್ಯಕೀಯ ತಪಾಸಣೆ ನಂತರ, ಬಲ ನಾಳ ಸಹಜ ಸ್ಥಿತಿಯಲ್ಲಿರುವುದನ್ನು ಕಂಡು, ಮಹಿಳೆಯನ್ನು ಪಿಸಿಆರ್ ಟ್ಯೂಬರ್‌ಕ್ಯೂಲೋಸಿಸ್ ಪರೀಕ್ಷೆಗೆ ಒಳಪಡಿಸಲಾಯಿತು. ಆಗ ಮಹಿಳೆಯ ಹಿಸ್ಟಿರೊಸ್ಕೊಪಿ ಪರೀಕ್ಷೆ ಸಹಜವಾಗಿರುವುದು ಪತ್ತೆಯಾಯಿತು. ಆದರೆ ಪಿಸಿಆರ್ ಮೆಕೊಬ್ಯಾಕ್ಟಿರಿಯಮ್ ಟಿಬಿ ರೋಗ ಪತ್ತೆಯಾಯಿತು. ಇದುವೇ ಎಕ್ಟಾಪಿಕ್ ಗರ್ಭಧಾರಣೆಗೆ ಕಾರಣ ಎಂದು ಕಂಡುಕೊಳ್ಳಲಾಯಿತು. ತದನಂತರ ಮಹಿಳೆಗೆ ಆರು ತಿಂಗಳು ಟಿಬಿ ಚಿಕಿತ್ಸೆ ನೀಡಲಾಯಿತು. ಗುಣಮುಖರಾದ ನಂತರ ಕೃತಕ ಗರ್ಭಧಾರಣೆಗೆ ನಿರ್ಧರಿಸಿದ ಮಹಿಳೆಯ ಪತಿಯ ವೀರ್ಯಾಣುಗಳ ಸಂಖ್ಯೆ ಗರ್ಭಧಾರಣೆಗೆ ಅಗತ್ಯವಿರುಷ್ಟು ಪ್ರಮಾಣದಲ್ಲಿದ್ದವು (ಶೇ.60). ಕೃತಕ ಗರ್ಭಧಾರಣೆ ಮಾಡಿದ 22ನೇ ದಿನದಂದು ಸ್ಕ್ಯಾನ್ ಮಾಡಿ ನೋಡಿದರೆ ಮತ್ತೆ ಎಕ್ಟಾಮಿಕ್ ಗರ್ಭಧಾರಣೆಯಾಗಿದ್ದು ಕಂಡುಬಂತು. ಗರ್ಭನಾಳದ ಮೂಲಕ ಮಾಡಲಾದ ಗರ್ಭಧಾರಣೆ ಸಫಲವಾಗಿಯೂ ಭ್ರೂಣ ಕಟ್ಟಿಕೊಳ್ಳುತ್ತಿತ್ತು. ಆಗ ಸೂಕ್ತ ವೈದ್ಯಕೀಯ ಚಿಕಿತ್ಸಾ ವಿಧಾನಗಳ ಮೂಲಕ ಎರಡೂ ನಾಳಗಳ ಅಡೆತಡೆಗಳನ್ನು ನಿವಾರಿಸಿ, ಭ್ರೂಣವನ್ನು ರಕ್ಷಿಸಲಾಯಿತು. ಸುದೀರ್ಘ ವೈದ್ಯಕೀಯ ಚಿಕಿತ್ಸೆಗೆ ಸ್ಪಂದಿಸಿದ ಮಹಿಳೆ ಆರೋಗ್ಯವಂತ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ.
ತೀವ್ರ ಸ್ವರೂಪದ ಜನನೇಂದ್ರಿಯದ ಟಿಬಿ ಇರುವ ಮಹಿಳೆಯರೂ, ವೈದ್ಯರ ಸೂಚನೆಯಂತೆ ಪರೀಕ್ಷೆ ಮಾಡಿಸಿಕೊಂಡು, ಸುದೀರ್ಘ ಚಿಕಿತ್ಸೆಗೆ ಸ್ಪಂದಿಸಿದರೆ ಸಂತಾನಹೀನತೆಯಿಂದ ಹೊರಬರಬಹುದು. ಸಂಪರ್ಕಿಸಿ: ಗುಣಶೀಲ ಆಸ್ಪತ್ರೆ: 080-41312600, 26673585.
- ಡಾ. ದೇವಿಕಾ ಗುಣಶೀಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


