ಎಂಎಸ್ ವರ್ಲ್ಡ್!

ರೋಗ ನಿರೋಧಕ ಸಾಮರ್ಥ್ಯ ತಾನಾಗಿಯೇ ಹಾಳಾಗುವ ಕಾಯಿಲೆಗೆ ಮಲ್ಟಿಪಲ್ ಸೆಲೆರೋಸಿಸ್ (ಎಂಎಸ್) ಎನ್ನುವರು. ಇಂಥದ್ದೊಂದು ಭಯಾನಕ ರೋಗ 18-30ರ ವಯಸ್ಸಿನಲ್ಲೇ ದಾಳಿ ನಡೆಸುತ್ತದೆ. ಅದೂ ಮಹಿಳೆಯರನ್ನು ಕಾಡೋದು ಹೆಚ್ಚು.
ಹಾಗಂಥ ಈ ರೋಗ ಇಂಥದ್ದೇ ರೋಗ ಲಕ್ಷಣಗಳನ್ನು ಹೊಂದಿದೆ ಎನ್ನಲೂ ಆಗದು. ವ್ಯಕ್ತಿಯಿಂದ ವ್ಯಕ್ತಿಗೆ ಎಲ್ಲವೂ ವಿಭಿನ್ನವಾಗಿರುತ್ತದೆ. ಕೇಂದ್ರ ನರಮಂಡಲ ವ್ಯವಸ್ಥೆಯ ಉರಿ ಸ್ಥಳವನ್ನು ಆಧರಿಸಿ ಈ ರೋಗದ ಲಕ್ಷಣಗಳು ಭಿನ್ನವಾಗಿರುತ್ತವೆ.
ಸಾಮಾನ್ಯ ಲಕ್ಷಣಗಳು
ದೃಷ್ಟಿ ಮಂದವಾಗುವುದು ಅಥವಾ ಎರಡೆರಡು ಕಾಣುವುದು, ವೆಟರ್ಗೋ, ಮುಖದಲ್ಲಿ ನೋವು, ಸಮತೋಲನ ಕಳೆದುಕೊಳ್ಳುವುದು, ಸಣ್ಣಪುಟ್ಟ ಚಲನವಲನ ಮಾಡುವಾಗ ತೊಂದರೆಗಳು, ಸ್ಪರ್ಶಜ್ಞಾನ ಇಲ್ಲದಿರುವುದು, ಶರೀರ ಕುಗ್ಗುವುದು ಮತ್ತು ಅಂಗದಲ್ಲಿ ಅಥವಾ ಅಂಗಾಂಗಗಳಲ್ಲಿ ಕ್ಷೀಣತೆ, ಮೂತ್ರ ಕಟ್ಟಿಕೊಳ್ಳಲು ಅಥವಾ ವಿಸರ್ಜಿಸಲು ಕಷ್ಟವಾಗುವುದು, ಮಲಬದ್ಧತೆ ಹಾಗೂ ಇತರೆ ಉದರ ಸಮಸ್ಯೆಗಳು, ಸ್ನಾಯುಗಳಲ್ಲಿ ಸೆಳೆತ ಮತ್ತು ಅತಿಯಾದ ಕ್ಷೀಣತೆ, ಏಕಾಗ್ರತೆ ಕೊರತೆ, ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಗುವುದು, ಜ್ಞಾಪಕ ಶಕ್ತಿ ಕಳೆದುಕೊಳ್ಳುವುದು, ಮಾನಸಿಕ ಏರುಪೇರುಗಳಿಂದ ಖಿನ್ನತೆ ಅಥವಾ ಪಾರ್ಶ್ವವಾಯು ಸಂಭವಿಸಬಹುದು.
ಕೇಂದ್ರ ನರಮಂಡಲದ ಮೇಲೆಯೇ ಈ ರೋಗ ಪ್ರಭಾವ ಬೀರುವುದರಿಂದ ಪ್ರತಿ ದಾಳಿಯೂ ದಿನಗಳು, ವಾರಗಳು, ತಿಂಗಳುಗಳವರೆಗೆ ಇರುತ್ತವೆ. ನಂತರವೂ ರೋಗ ಪೂರ್ತಿಯಾಗಿ ಗುಣಮುಖವಾಗುವುದಿಲ್ಲ. ಜ್ವರ, ಬಿಸಿನೀರು ಸ್ನಾನ, ಸೂರ್ಯನಿಗೆ ಮೈ ಒಡ್ಡುವುದು, ಒತ್ತಡಗಳಿಂದ ಸಮಸ್ಯೆ ಮತ್ತಷ್ಟೂ ಕಾಡಬಹುದು.
ಕಾರಣಗಳೇನು?
ಎಂಎಸ್ ಇಂಥದ್ದೇ ಕಾರಣವೆಂದು ಇದುವರೆಗೂ ಹೇಳಲಾಗಿಲ್ಲ. ಆದರೆ, ಕೆಲವೊಂದು ಸೋಂಕು ಅಥವಾ ವಂಶ ಪಾರಂಪರ್ಯ ಸಮಸ್ಯೆ ಎನ್ನಲಾಗುತ್ತದೆ. ಜತೆಗೆ ಪರಿಸರಾತ್ಮಕ ಕಾರಣಗಳೂ ಇರಬಹುದು ಎಂದು ನಂಬಲಾಗಿದೆ. ಈ ಸಿದ್ಧಾಂತಗಳು ಕೇವಲ ಸಂಭಾವ್ಯ ಕಾರಣಗಳನ್ನು ಮಾತ್ರವೇ ತಿಳಿಸುತ್ತವೆ. ಆದರೆ, ಯಾವುದನ್ನೂ ಪರಿಗಣಿಸಲು ಸಾಧ್ಯವಿಲ್ಲ.
ಕಮ್ಮಿ ಆಗಲು ಏನ್ಮಾಡ್ಬೇಕು?
- ನಿರಂತರ ವ್ಯಾಯಾಮ ಮತ್ತು ಶರೀರಕ್ಕೆ ಭಾರಿ ಎನ್ನದ ರೀತಿಯಲ್ಲಿ ಕೈ-ಕಾಲು ಆಡಿಸುವ ಅಭ್ಯಾಸಗಳು.
- ರೋಗಿಯು ನಿರಂತರವಾಗಿ, ಶಾಂತಿಯಿಂದ ನಿದ್ರಿಸಬೇಕು ಮತ್ತು ಸಾಕಷ್ಟು ವಿಶ್ರಾಂತಿ ಪಡೆದುಕೊಳ್ಳಬೇಕು.
- ದೈಹಿಕ ಚಿಕಿತ್ಸೆ, ವೃತ್ತಿಪರರಿಂದ ಚಿಕಿತ್ಸೆ ಪ್ರಯೋಜನಕಾರಿಯಾಗಿರುತ್ತವೆ.
- ಸಾಕಷ್ಟು ಪೌಷ್ಟಿಕಾಂಶಗಳ ಸೇವನೆಯೊಂದಿಗೆ ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಬೇಕು.
- ಅತಿಯಾದ ಉಷ್ಣತೆಯಿಂದ ಎಂಎಸ್ ತೀವ್ರಗೊಳ್ಳುತ್ತವೆ. ಆದ್ದರಿಂದ ಹೊರಗಡೆ ಉಷ್ಣತೆ ಹೆಚ್ಚಾಗಿರುವಾಗ ರೋಗಪೀಡಿತರು ಮನೆಯಿಂದ ಹೊರ ಹೋಗಬಾರದು.
- ಧೂಮಪಾನ, ಮದ್ಯಪಾನ ವರ್ಜಿಸಲೇಬೇಕು.
- ಒತ್ತಡ-ರಹಿತ ಪರಿಸರ ಸೃಷ್ಟಿಸಿಕೊಳ್ಳಿ.
ಪತ್ತೆ ಹೇಗೆ?
ಎಂಎಸ್ ಅನ್ನು ಆರಂಭದಲ್ಲಿಯೇ ಪತ್ತೆ ಮಾಡಿದಲ್ಲಿ ದಾಳಿಗಳ ತೀವ್ರತೆ ಮತ್ತು ಸಂಖ್ಯೆಗಳನ್ನು ಕಡಿಮೆ ಮಾಡಬಹುದು. ಈ ರೋಗ ಪತ್ತೆ ಮಾಡಲು ನರಮಂಡಲ ವ್ಯವಸ್ಥೆಯ ಇತಿಹಾಸ ಕಂಡುಕೊಳ್ಳುವುದು ಮತ್ತು ದೈಹಿಕ ಪರೀಕ್ಷೆಗಳ ಅಗತ್ಯವಿದೆ. ಈ ರೋಗದ ಲಕ್ಷಣಗಳು ಮತ್ತು ಚಿಹ್ನೆಗಳನ್ನು ಹೊರಹಾಕುವ ಸಮಯ ಮತ್ತು ಸ್ಥಳವನ್ನು ನಿಖರವಾಗಿ ಗಮನಿಸುತ್ತಿರಬೇಕು.
ಬೆನ್ನೆಲುಬು ದ್ರಾವಣ ಪತ್ತೆ ಮಾಡುವ ಮೂಲಕವೂ ರೋಗವನ್ನು ಪತ್ತೆ ಮಾಡಬಹುದು. ಭಾರತದ ನ್ಯೂರೋಲಾಜಿಸ್ಟ್‌ಗಳು ರೋಗ ಪತ್ತೆಗೆ ಎಂಆರ್‌ಐ ಬಳಸುತ್ತಿರುವ ಕಾರಣದಿಂದ ಪರಿಸ್ಥಿತಿಯಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ. ಇದರಿಂದ ರೋಗಿಯ ಸ್ಥಿತಿಯನ್ನು ಇನ್ನಷ್ಟು ಚೆನ್ನಾಗಿ ಅರಿತುಕೊಳ್ಳಲು ಮೆದುಳು ಮತ್ತು ಬೆನ್ನೆಲುಬು ಪರೀಕ್ಷೆ ಅಗತ್ಯ.
ಡಿಎಂಟಿ ಲಭ್ಯತೆ
ಎಂಎಸ್‌ಗೆ ಉತ್ತಮವಾದ ಚಿಕಿತ್ಸಾ ಲಭ್ಯತೆ ಎಲ್ಲ ರಾಜ್ಯಗಳಲ್ಲೂ ಒಂದೇ ರೀತಿಯಾಗಿಲ್ಲ. ನಗರದಲ್ಲಿ ವಾಸಿಸುತ್ತಿರುವ ರೋಗಿಗೆ ಡಿಎಂಟಿ ಲಭ್ಯತೆ ಇದೆ. ಸಣ್ಣಪುಟ್ಟ ಪಟ್ಟಣಗಳಲ್ಲಿ ಇರುವವರಿಗೆ ಇದು ಸಿಗದಿರಬಹುದು. ಈ ಹೊಸ ಚಿಕಿತ್ಸೆ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ.
- ಡಾ.ಎಸ್.ರಾಘವೇಂದ್ರ, ಕನ್ಸಲ್ಟೆಂಟ್ ನ್ಯೂರೋಲಾಜಿಸ್ಟ್, ವಿಕ್ರಮ್ ಹಾಸ್ಪಿಟಲ್
ಶೇ.60 ನಿಯಂತ್ರಣ
15 ವರ್ಷಗಳಷ್ಟು ಹಿಂದೆ ಎಂಎಸ್‌ಗೆ ಚಿಕಿತ್ಸೆ ಲಭ್ಯವಿರಲಿಲ್ಲ. ಇಂದು ಔಷಧಿ ಅಭಿವೃದ್ಧಿಪಡಿಸುವಲ್ಲಿ ಮಾಡಿರುವ ಸಂಶೋಧನೆಗಳಿಂದ ಈ ರೋಗವನ್ನು ಶೇ.60ರವರೆಗೆ ನಿಯಂತ್ರಿಸುವುದು ಸಾಧ್ಯವಾಗಿದೆ. ಆದರೆ, ಇವು ದುಬಾರಿಯಾಗಿರುವ ಕಾರಣ ಕೇವಲ ಶೇ.5ರಷ್ಟು ರೋಗಿಗಳು ಮಾತ್ರವೇ ಈ ಚಿಕಿತ್ಸೆ ಪಡೆಯಬಹುದು. ಇದಲ್ಲದೆ ಇನ್ಷೂರೆನ್ಸ್ ಕಂಪನಿಗಳೂ ಈ ರೋಗದ ಚಿಕಿತ್ಸೆಗೆ ಮಾನ್ಯತೆ ನೀಡಬೇಕು.
-ಡಾ.ಥಾಮಸ್ ಮ್ಯಾಥ್ಯೂ, ಅಸೋಸಿಯೆಟ್ ಪ್ರೊಫೆಸರ್,
ಸೈಂಟ್ ಜಾನ್ಸ್ ಮೆಡಿಕಲ್ ಕಾಲೇಜು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


