ಆರೋಗ್ಯ-ಜೀವನಶೈಲಿ

ಖಿನ್ನಮತ

ಖಿನ್ನಮತ
Published On :

ರಾಣಿ 10 ವರ್ಷದ ಹುಡುಗಿ. ಸ್ಕೂಲಿಗೆ ಯಾವಾಗಲೂ ಚಕ್ಕರ್. ಸ್ಕೂಲಿಗೆ ಬಂದರೂ ಸುಸ್ತಾಗಿರ್ತಾಳೆ. ಕೂದಲನ್ನೂ ಸರಿಯಾಗಿ ಬಾಚಿರುವುದಿಲ್ಲ, ಆಕೆಯ ಸಮವಸ್ತ್ರವೂ ಸ್ವಚ್ಛವಾಗಿರುವುದಿಲ್ಲ.  ಶಾಲೆಗೆ ಬರಲು ಪೋಷಕರಿಗೆ ಹೇಳಿ ಕಳುಹಿಸಿದರೂ ಬರಲ್ಲ. ಬೇರೆ ಮಕ್ಕಳೊಂದಿಗೆ ರಾಣಿ ಜೋರಿನ ಸ್ವಭಾವ ಎಂದೇ ಹೆಸರು ಪಡೆದಿದ್ದಾಳೆ. ಅಂತೂ ರಾಣಿಯ ಟೀಚರ್ ತಾವೇ ಸ್ವತಃ ರಾಣಿ ಮನೆಗೆ ಹೋದರೆ, ಅವರಿಗೆ ಆಕೆಯ ವರ್ತನೆಗೆ, ಸ್ಥಿತಿಗೆ ಕಾರಣ ತಿಳಿದಿತ್ತು.
ಮದ್ಯವ್ಯಸನಿಯಾದ ರಾಣಿಯ ತಂದೆ ಕೂಲಿ ಕೆಲಸಕ್ಕೆ ಹೋಗುತ್ತಾರೆ. ತಾಯಿ ದೀರ್ಘಕಾಲಿನ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಅವಳಿಗೆ ಮನೋ ವೈದ್ಯರಲ್ಲಿ ಚಿಕಿತ್ಸೆ ಕೊಡಿಸಿದರೂ, ಮನೆಯಲ್ಲಿ ಸರಿಯಾಗಿ ಮಾತ್ರೆ ಕೊಡುವವರಿಲ್ಲ. ತಾಯಿಗೆ ತನ್ನನ್ನೇ ನೋಡಿ ಕೊಳ್ಳಲು ಆಗಲ್ಲ ಎಂದ ಮೇಲೆ ಇನ್ನು ರಾಣಿಯನ್ನು ನೋಡಿಕೊಳ್ಳುವವರು ಯಾರು?
ವರ್ತನೆಯಲ್ಲೂ ವೈಪರಿತ್ಯ
ಮಾನಸಿಕ ರೋಗ ಎಂದರೆ ಮನಸ್ಸಿಗೆ ಬರುವ ಕಾಯಿಲೆ. ಮನುಷ್ಯನ ವರ್ತನೆ, ಯೋಚಿಸುವ ರೀತಿ, ನಿದ್ರೆ, ಆಹಾರ ಇತ್ಯಾದಿಗಳಲ್ಲಿ ತೊಂದರೆ ಕಾಣಿಸಿಕೊಳ್ಳಲಾರಂಭಿಸುತ್ತದೆ. ಈ ಕಾಯಿಲೆ ಅತಿ ಸೌಮ್ಯವಾದ ಖಿನ್ನತೆ, ಆತಂಕದಿಂದ ದೀರ್ಘ ಕಾಲಿಕವಾದ ಸ್ಕಿಜೋಫ್ರೀನಿಯಾ ತನಕವೂ ಇರಬಹುದು. ಹಾಗಾದರೆ ದೀರ್ಘಕಾಲಿಕ ಮಾನಸಿಕ ರೋಗದಿಂದ ಬಳಲುತ್ತಿರುವ ತಂದೆ- ತಾಯಿಗಳಿಂದ ಮಕ್ಕಳ ಮೇಲೆ ಯಾವ ಪರಿಣಾಮ ಆಗುತ್ತದೆ? ಸಾಧಾರಣವಾಗಿ ಮಕ್ಕಳು ಒತ್ತಡಗಳನ್ನು ಮೀರಿ ಬೆಳೆಯುತ್ತಾ, ಅವುಗಳನ್ನು ನಿಭಾಯಿಸುವುದನ್ನೂ ಕಲಿಯುತ್ತಾರೆ. ಆದರೆ, ಯಾವಾಗ ಮಕ್ಕಳಿಗೆ ಈ ಒತ್ತಡ ದೀರ್ಘಕಾಲಿಕವಾಗುತ್ತದೋ ಮತ್ತು ಅದೇನೆಂದು ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತದೋ, ಆಗ ಅವರ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಬಲ್ಲದು.
ಹಲವಾರು ಬಾರಿ ತಂದೆ-ತಾಯಿ ಮಾನಸಿಕ ಕಾಯಿಲೆಯನ್ನು ಮಕ್ಕಳಿಂದ ಮುಚ್ಚಿಡಲು ಯತ್ನಿಸುತ್ತಾರೆ. ಅದು ಕೇಳಬಾರದ, ಮಾತನಾಡಬಾರದ ವಿಷಯವೆಂದೇ ಭಾವಿಸುತ್ತಾರೆ. ಹೀಗೆ ಮಾಡುವುದರಿಂದ ಮಕ್ಕಳಿಗೆ ಈ ಒತ್ತಡವನ್ನು ನಿಭಾಯಿಸುವುದು ಮತ್ತಷ್ಟೂ ಕಷ್ಟವಾಗುತ್ತದೆ. ಆಗ ಮಕ್ಕಳನ್ನು ಎಲ್ಲಿಲ್ಲದ ಚಿಂತೆಗಳು ಕಾಡಲಾರಂಭಿಸುತ್ತವೆ.

ಮಕ್ಕಳಿಗೆ ಬೇಡ ಖಿನ್ನತೆ
ತಂದೆ- ತಾಯಿಯ ಕಾಯಿಲೆಗೆ ನಾವೇ ಕಾರಣವೇನೋ ಎಂಬ ತಪ್ಪುಭಾವನೆ ಕಾಡಬಹುದು. ಇದರಿಂದಲೂ ಮಕ್ಕಳು ಖಿನ್ನತೆಯಿಂದ ಬಳಲುವ ಸಾಧ್ಯತೆಗಳಿರುತ್ತವೆ.
ತಂದೆ- ತಾಯಿಯೊಂದಿಗೆ ಸೌಹಾರ್ದಯುತ ಸಂಬಂಧ ಬೆಳೆಯಲು ಕಷ್ಟವಾಗುತ್ತದೆ.
ತಂದೆ ಮದ್ಯವ್ಯಸನಿಯಾಗಿದ್ದರೆ, ಮನೆಯಲ್ಲಿ ಹೆಂಡತಿ, ಮಕ್ಕಳ ಮೇಲೆ ದೈಹಿಕ ದೌರ್ಜನ್ಯ ನಡೆಸಬಹುದು.
ಶಾಲೆಯ ಇತರೆ ಮಕ್ಕಳೊಂದಿಗಿನ ನಡವಳಿಕೆಯಿಂದ ಇಂಥ ಮಕ್ಕಳು ನಿರ್ಲಕ್ಷ್ಯಕ್ಕೊಳಗಾಗಬಹುದು.
ಈ ಎಲ್ಲ ಕಾರಣಗಳಿಂದ ಮಕ್ಕಳು ಮಂಕಾಗಬಹುದು ಅಥವಾ ಹಠದ ಸ್ವಭಾವವನ್ನು ಬೆಳೆಸಿಕೊಳ್ಳಬಹುದು. ಮಕ್ಕಳಿಗೂ ತಮಗೋನೋ ಆಗಿದೆ ಎಂಬ ಭಯದಿಂದ ಭಾವನಾತ್ಮಕ ಸಮಸ್ಯೆಗಳು ಕಾಡಬಹುದು.

ಭಯ ಬಿಟ್ಹಾಕಿ, ಚಿಕಿತ್ಸೆ ಇದೆ
    ಪ್ರಪ್ರಥಮವಾಗಿ ದೀರ್ಘಕಾಲಿಕ ಮಾನಸಿಕ ತೊಂದರೆಗಳಿಗೆ ಒಳ್ಳೆಯ ಚಿಕಿತ್ಸೆ ಲಭ್ಯವಿದೆ. ಚಿಕಿತ್ಸೆಯನ್ನು ಪಡೆದು ಕಾಯಿಲೆಯನ್ನು ನಿಯಂತ್ರಣದಲ್ಲಿಟ್ಟಕೊಳ್ಳಬಹುದು. ಆದ್ದರಿಂದ ಇತರೆ ಬಂಧುಗಳು, ಮಾನಸಿಕ ತೊಂದರೆ ಇರುವವರಿಗೆ ಒಳ್ಳೆಯ ಚಿಕಿತ್ಸೆ ಕೊಡಿಸಬೇಕು.
    ಮಕ್ಕಳಿಗೆ ಅವರಿಗೆ ಅರ್ಥವಾಗುವಂತೆ ಇರುವ ತೊಂದರೆ ಬಗ್ಗೆ ತಿಳಿಹೇಳಬೇಕು.
    ತಂದೆ- ತಾಯಿಗೆ ಏನೇ ತೊಂದರೆ ಇದ್ದರೂ, ಮಕ್ಕಳ ಬೆಳವಣಿಗೆ, ಓದು, ಶಾಲೆಯ ಮೇಲೆ ಯಾವುದೇ ಪರಿಣಾಮ ಬೀರದ ಹಾಗೆ ನೋಡಿಕೊಳ್ಳಿ.
    ಮಕ್ಕಳಿಗೂ ಮನೋವ್ಯೆದ್ಯರೊಂದಿಗೆ ಮಾತನಾಡಲು, ಆಪ್ತಸಲಹೆ ಪಡೆಯಲು ಅವಕಾಶ ಕೊಡಿ.

- ಡಾ. ಕೆ.ಎಸ್. ಶುಭ್ರತಾ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.