ಅವ್ಳಿಗೇನ್ ರೋಗ!?
ಎತ್ತಣ ಮಾಮರ, ಎತ್ತಣ ಕೋಗಿಲೆ? ಹೊಟ್ಟೆ ನೋವಿಗೆ, ಸೈಕಾಲಜಿಸ್ಟ್ ಮೀಟ್ ಆಗ್ಬೇಕಾ?

ಹೇಳಲು ಅಸಾಧ್ಯವಾದ ಹೊಟ್ಟೆನೋವು. ಬೆನ್ನಿನಲ್ಲೂ ಸೆಳೆತ, ತಲೆನೋವೆಂದು ಅದೆಷ್ಟು ಅಮೃತಾಂಜನ್ ಡಬ್ಬಿಗಳು ಖಾಲಿಯಾಗಿವೆಯೋ ಗೊತ್ತಿಲ್ಲ. ಸಾಲದಿದ್ದಕ್ಕೆ ಲೈಂಗಿಕ ಸಮಸ್ಯೆಯೂ ಕಾಡುತ್ತಿದೆ.
ಇವೆಲ್ಲವೂ ದೈನಂದಿನ ಕೆಲಸಗಳಿಗೆ ಅಡ್ಡಿಪಡಿಸುತ್ತಿವೆ ಎಂದು ಅರಿವಿಗೆ ಬರುವ ಮುನ್ನವೇ ನಾಲ್ಕಾರು ವೈದ್ಯರನ್ನು ಕಂಡಾಗಿದೆ. ಚಿಕಿತ್ಸೆಯನ್ನೂ ಪಡೆದಾಗಿದೆ. ಸಾಲದಿದ್ದಕ್ಕೆ ಹೇಳಿದ್ದ ಟೆಸ್ಟ್‌ಗಳನ್ನೆಲ್ಲವನ್ನೂ ಮಾಡಿಸಿಯಾಗಿದೆ.
ಊಹ್ಞೂಂ! ಸಮಸ್ಯೆಗೆ ಕಾರಣ ಗೊತ್ತಾಗುತ್ತಿಲ್ಲ. ಎಲ್ಲವೂ ನಾರ್ಮಲ್ ಎನ್ನುವ ರಿಪೋರ್ಟ್! ಕಡೆಗೊಬ್ಬ ವೈದ್ಯರು ಮಾನಸಿಕ ತಜ್ಞರನ್ನು ಕಾಣಲು ಹೇಳಿಬಿಟ್ಟರು.
ಎತ್ತಣ ಮಾಮರ, ಎತ್ತಣ ಕೋಗಿಲೆ? ಹೊಟ್ಟೆ ನೋವಿಗೆ, ಸೈಕಾಲಜಿಸ್ಟ್ ಅನ್ನು ಮೀಟ್ ಆಗ್ಬೇಕಾ? ಮನೆಯವರಿಗೂ ಈ ವೈದ್ಯರ ಸಲಹೆಯನ್ನು ಅಕ್ಸೆಪ್ಟ್ ಮಾಡಿಕೊಳ್ಳುವುದು ಕಷ್ಟ. ಬೇಡ ಸುಮ್ಮನಿರು ಎಂದೇ ಹೇಳುತ್ತಾರೆ. ಆದರೆ, ಅನುಭವಿಸಲಾಗದ ನೋವಿಗೆ ಮದ್ದು ಬೇಕು. ಯಾವುದೋ ಕಾಯಿಲೆಯಿದೆ ಎನ್ನುವ ಭಯಕ್ಕೆ ಖಿನ್ನತೆ ಬೇರೆ ಕಾಡುತ್ತದೆ. ಅಂತೂ ಮನಸ್ಸು ಮಾಡಿ ಮನಃಶಾಸ್ತ್ರಜ್ಞರ ಬಳಿ ಹೋಗಿಯಾಯಿತು. ಯೆಸ್... ಆತನಿಗೆ ಕಾಡುತ್ತಿರುವ ದೈಹಿಕ ಕಾಯಿಲೆಗೆ ಕಾರಣ ಮನಸ್ಸೆಂಬ ಮರ್ಕಟ.
ಮನೋದೈಹಿಕ ರೋಗ
ಮನೋವಿಜ್ಞಾನದ ಪ್ರಕಾರ ಸೊಮ್ಯಾಟೋಫಾರ್ಮ್ ಎನ್ನುವ ಮಾನಸಿಕ ಕಾಯಿಲೆಯೊಂದು ದೈಹಿಕ ಲಕ್ಷಣವಾಗಿ ಗೋಚರಿಸುತ್ತದೆ. ಈ ಕಾಯಿಲೆಯಿಂದ ಕೆಲವು ದೈಹಿಕ ಲಕ್ಷಣಗಳನ್ನು ರೋಗಿ ಆರೋಪಿಸುತ್ತಾನೆ. ಆದರೆ, ಆ ರೀತಿಯ ದೈಹಿಕ ಕಾಯಿಲೆಗಳು ಯಾವುದೇ ಪರೀಕ್ಷೆಗಳಿಂದ ಸಾಬೀತು ಮಾಡಲು ಸಾಧ್ಯವೇ ಇಲ್ಲ. ಹಾಗಂತ ಆತನೇನೂ ಸುಳ್ಳು ಹೇಳುತ್ತಿರುವುದಿಲ್ಲ. ಆ ನೋವು ಅನುಭವಿಸುವುದು ಸತ್ಯ. ಆದರದು ದೈಹಿಕ ವ್ಯಾಧಿಯಲ್ಲ. ಯಾವುದೋ ಮಾನಸಿಕ ಚಿಂತೆ, ಅವ್ಯಕ್ತ ಭಯದಿಂದ ಹೊರಬರುವ ವಿಧಾನ ಸರಿಯಾಗಿ ತಿಳಿಯದೆ ದೈಹಿಕ ಕಾಯಿಲೆಯ ರೂಪದಲ್ಲಿ ಲಕ್ಷಣಗಳನ್ನು ತೋರುತ್ತಿರುತ್ತದೆ.
ವ್ಯವಸ್ಥೆಯಲ್ಲಿ ವ್ಯತ್ಯಯ
ಈ ರೋಗಕ್ಕೆ ಮುಖ್ಯವಾಗಿ ಮೆದುಳಿನಲ್ಲಿರುವ ಆಟೋನಮಿಕ್ ನರ್ವಸ್ ಸಿಸ್ಟಮ್‌ನ ಕೆಲಸದಲ್ಲಿ ಏರುಪೇರಾಗುವುದೇ ಕಾರಣ. ವೈರಿಂಗ್‌ನಲ್ಲಿ ಯೂವುದೋ ಒಂದು ಚಿಕ್ಕ ವೈರ್ ಸ್ವಲ್ಪ ಪಕ್ಕದ ಜಾಗದಲ್ಲಿ ಕನೆಕ್ಟ್ ಆದರೂ ಎಡವಟ್ಟಾಗುವುದಿಲ್ಲವೇ? ಹಾಗೆಯೇ ಇಲ್ಲಿಯೂ ಆಗಿರುತ್ತದೆ. ಈ ಅವ್ಯವಸ್ಥೆಯಿಂದ ಮೆದುಳಿನ ನರಗಳ ಸಂದೇಶ ರವಾನೆ ಪ್ರಕ್ರಿಯೆಯಲ್ಲಿ ಏರುಪೇರಾಗುತ್ತದೆ.
ಈ ರೋಗಿಗಳಿಗೆ 'ಸಮಸ್ಯೆಯೇ ಇಲ್ಲ' ಎನ್ನುವ ವೈದ್ಯರಿಗಿಂತ 'ಸಮಸ್ಯೆ ಇದೆ' ಎನ್ನುವ ವೈದ್ಯರು ಹೆಚ್ಚು ಪ್ರಿಯವೆನಿಸುತ್ತಾರೆ. ಈ ಮೂಲಕ ಸದಾ ಕಾಲ ಎಲ್ಲರ ಅನುಕಂಪಕ್ಕೆ ಪಾತ್ರರಾಗಬಯಸುತ್ತಾರೆ. ಸಾಮಾನ್ಯವಾಗಿ ಮಧ್ಯಮ ವಯಸ್ಸಿನಲ್ಲಿ ಕಾಡುವ ಈ ಸಮಸ್ಯೆ ಪುರುಷರಿಗಿಂತ ಮಹಿಳೆಯರನ್ನು ತುಸು ಹೆಚ್ಚಾಗಿ ಕಾಡುತ್ತದೆ.ಟಿ
ಯಾವಾಗಲೋ ಕಾಡುತ್ತೆ...
ಯಾವಾಗಲೂ ವಾಂತಿ ಮಾಡುವುದು (ಗರ್ಭಿಣಿಯಿದ್ದಾಗ ಹೊರತುಪಡಿಸಿ), ಹೊಟ್ಟೆ ನೋವು (ಋತುಚಕ್ರವಿಲ್ಲದಿದ್ದರೂ ಕಾಡುತ್ತೆ), ಹೊಟ್ಟೆಯಲ್ಲಿ ವಿವರಿಸಲಾಗದಂಥ ತಳಮಳ, ದೇಹದ ಭಾಗಗಳು ಊದಿಕೊಂಡಂತೆ ಅನಿಸುವುದು. ಕೈ ಕಾಲಿನಲ್ಲಿ ಅತಿಯಾದ ನೋವು, ಸೆಳೆತ, ಬೆನ್ನು ನೋವು, ಹೃದಯ ಸಂಬಂಧಿ ಕಾಯಿಲೆಗಳು, ಎದೆ ಭಾಗ ನೋವು, ತಲೆ ತಿರುಗುವುದು, ಹೃದಯ ಜೋರಾಗಿ ಬಡಿದುಕೊಳ್ಳುವುದು, ಮರೆವು, ಆಹಾರ ನುಂಗಲು ತೊಂದರೆ, ಅಪರೂಪವಾಗಿ ಮೂರ್ಛೆ, ಲೈಂಗಿಕ ಸಂಬಂಧಿ ಸಮಸ್ಯೆಗಳು, ನಪುಂಸಕತ್ವ ಕಾಣಿಸಿಕೊಳ್ಳುತ್ತಲೇ ಇರುತ್ತದೆ.
ಆದರೆ, ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿದಾಗ ಯಾವುದೇ ಲೋಪಗಳು ಕಂಡುಬರುವುದೇ ಇಲ್ಲ. ಆ್ಯಸಿಡಿಟಿ, ಹೊಟ್ಟು ಹುಣ್ಣು ಮುಂತಾದ ರೋಗಗಳೆಂದು ಔಷಧಿ ತೆಗೆದುಕೊಂಡರೂ ಫಲ ನೀಡುವುದೇ ಇಲ್ಲ.
ಮನೋ ಚಿಕಿತ್ಸೆ ಮುಖ್ಯ
ಯಾವ ಸಮಸ್ಯೆಗಳೂ ಇಲ್ಲದೆ, ಸಮಸ್ಯೆಗಳು ಪದೇ ಪದೇ ಕಾಣಿಸಿದಲ್ಲಿ ಯಾವ ಶಸ್ತ್ರಚಿಕಿತ್ಸೆಗೂ ಒಳಪಡಿಸದೆ ಅಥವಾ ಯಾವುದೇ ಔಷಧಿಯನ್ನು ಹೆಚ್ಚು ಬಳಸುವ ಬದಲು ಮನೋಚಿಕಿತ್ಸೆಗೆ ಮುಂದಾಗಬೇಕು. ಧ್ಯಾನ, ಯೋಗ ಹಾಗೂ ಆಪ್ತಸಲಹೆ ಮೂಲಕ ರೋಗ ಮದ್ದಿಲ್ಲದೆಯೂ ಮನೋದೈಹಿಕ ಕಾಯಿಲೆಗಳು ಗುಣವಾಗಬಲ್ಲದು.
- ಸದಾನಂದ್ ಕೆ.ಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


