ಮಹಾ ಶ್ವೇತ
ನಮ್ಮ ಸುತ್ತಲಿನ ಎಷ್ಟೋ ಜನರಲ್ಲಿ ಅಸಾಮಾನ್ಯವಾಗಿ ಚರ್ಮ ಬಿಳಿಬಣ್ಣಕ್ಕೆ ತಿರುಗಿ ಬಿಳಿಚರ್ಮ ಅಥವಾ ಲ್ಯುಕೋಡರ್ಮ ಕಾಯಿಲೆಗೆ ಒಳಗಾಗಿರುವುದನ್ನು ನೋಡುತ್ತಿರುತ್ತೇವೆ. ಹೆಚ್ಚು ಕಾಣಿಸಿಕೊಳ್ಳುವ ಚರ್ಮದ ಕಾಯಿಲೆಗಳಲ್ಲಿ ಇದೂ ಒಂದು.
ಚರ್ಮದ ಮೇಲೆ ಚುಕ್ಕೆಚುಕ್ಕೆಗಳ ರೀತಿ ಅಥವಾ ಕಲೆಗಳ ರೀತಿಯಲ್ಲಿ ಅಲ್ಲಲ್ಲಿ ಅಥವಾ ಇಡೀ ಚರ್ಮದ ಮೇಲೆ ಕಾಣಿಸಿಕೊಳ್ಳಬಹುದು. ಬಣ್ಣ ಅಥವಾ ವರ್ಣಕ್ಕೆ ಸಂಬಂಧಪಟ್ಟ ಜೀವಕೋಶಗಳು ದುರ್ಬಲವಾಗುವುದರಿಂದ ಅಥವಾ ಅಂಥ ಜೀವಕೋಶಗಳು ನಾಶವಾಗುವುದರಿಂದ ಈ ರೀತಿಯ ಕಲೆಗಳು ಅಥವಾ ಚುಕ್ಕೆಗಳು ಮೂಡುತ್ತವೆ. ಹಾಗಾಗಿ ಈ ರೀತಿ ಬಿಳಿಯಾದ ಭಾಗಗಳಲ್ಲಿ ವರ್ಣಕ್ಕೆ ಸಂಬಂಧಪಟ್ಟ ಜೀವಕೋಶಗಳು ಹೊಸದಾಗಿ ಉತ್ಪನ್ನವಾಗುವುದಿಲ್ಲ. ಈ ಕಾಯಿಲೆಯನ್ನು ದೇಹದ ಸ್ವ-ಪ್ರತಿರೋಧಕ್ಕೆ ಸಂಬಂಧಪಟ್ಟ ಕಾಯಿಲೆ ಎಂದು ಪರಿಗಣಿಸಲಾಗಿದೆ. ಈ ಕಾಯಿಲೆಯಲ್ಲಿ ಚರ್ಮದ ಬಣ್ಣ ಮಾತ್ರ ಬಿಳಿಯಾಗುತ್ತದೆಯೇ ಹೊರತು ಚರ್ಮದ ಮೇಲ್ಮೈ ಅಥವಾ ಇತರೆ ಯಾವ ಗುಣಗಳೂ ಬದಲಾಗುವುದಿಲ್ಲ.
ಚರ್ಮಕ್ಕೆ ಅದರದೇ ಬಣ್ಣ ಕೊಡುವ 'ಮೆಲಾನಿನ್' ಎಂಬ ಬಣ್ಣ ವಸ್ತುವಿದೆ. ಇದು ಚರ್ಮದ ಹೊರಭಾಗ- ಎಪಿಡರ್ಮಿಸ್ ಭಾಗದಲ್ಲಿರುತ್ತದೆ. ಈ ಮೆಲಾನಿನ್ ನಾಶವಾದಾಗ ಅಥವಾ ಹೊಸದಾಗಿ ಉತ್ಪನ್ನವಾಗದೆ ಹೋದರೆ, ಈ 'ಬಿಳಿಚರ್ಮ' ಉಂಟಾಗುತ್ತದೆ. ಚರ್ಮದ ಯಾವ್ಯಾವ ಭಾಗದಲ್ಲಿ ಈ ಕ್ರಿಯೆ ಜರುಗುತ್ತದೆಯೊ ಅಲ್ಲೆಲ್ಲಾ ಚರ್ಮ ಬಿಳಿಯಾಗುತ್ತಾ ಹೋಗುತ್ತದೆ. ಇದರ ಸರಿಯಾದ ಕಾರಣವಿನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಸ್ವಲ್ಪ ಮಟ್ಟಿಗೆ ಅನುವಂಶೀಯವಾಗಿಯೂ ಕಂಡುಬರಹುದು.
ಕಾಯಿಲೆಯ ಲಕ್ಷಣಗಳು
ಚರ್ಮದ ವಿವಿಧ ಭಾಗಗಳಲ್ಲಿ ಬಿಳಿ ಬಣ್ಣದ ಮಚ್ಚೆ, ಕಲೆಗಳು ಕಾಣಿಸಿಕೊಳ್ಳುತ್ತದೆ. ಇದಕ್ಕೆ ತೊನ್ನು ರೋಗ ಎಂದೂ ಹೇಳುತ್ತಾರೆ. ಬಣ್ಣದ ಬದಲಾವಣೆ ಬಿಟ್ಟರೆ ಚರ್ಮದ ಉಳಿದ ಯಾವ ಗುಣಗಳೂ ಬದಲಾಗುವುದಿಲ್ಲ. ಈ ಭಾಗದಲ್ಲಿ ಕಡಿತ, ತುರಿಕೆ ಅಥವಾ ಇನ್ಯಾವುದೇ ಲಕ್ಷಣಗಳಿರುವುದಿಲ್ಲ. ಯಾವುದೇ ವಯಸ್ಸಿನವರಲ್ಲಿ ಇದು ಕಂಡು ಬರಬಹುದಾದರೂ 20-30 ವರ್ಷಗಳವರಲ್ಲಿ ಇದು ಜಾಸ್ತಿ.
ಸೂರ್ಯನ ಕಿರಣಗಳು ಬೀಳುವ ದೇಹದ ಭಾಗಗಳಲ್ಲಿ ಇದು ಹೆಚ್ಚು ಕಾಣಿಸಿಕೊಳ್ಳುತ್ತದೆ. ಅಲ್ಲದೇ ಕಂಕುಳು, ತೊಡೆಸಂದಿ, ಬಾಯಿಯ ಸುತ್ತಲಿನ ಭಾಗ, ಕಣ್ಣು, ಮೂಗಿನ ಹೊಳ್ಳೆ, ಹೊಕ್ಕಳು ಹಾಗೂ ಗುಪ್ತಾಂಗಗಳಲ್ಲೂ ಕಂಡು ಬರುತ್ತದೆ. ಕೆಲವು ರೋಗಿಗಳಲ್ಲಿ ಚರ್ಮ ಬೆಳ್ಳಗಾಗುವ ಜತೆಗೆ ತಲೆಯ ಮೇಲಿನ ಕೂದಲು, ಕಣ್ಣಿನ ರೆಪ್ಪೆ ಕೂದಲುಗಳು, ಹುಬ್ಬು ಮತ್ತು ಗಡ್ಡ- ಇವೂ ಬಿಳಿ ಬಣ್ಣಕ್ಕೆ ತಿರುಗಬಹುದು.
ಇದು ಸಾಂಕ್ರಾಮಿಕ ರೋಗವೇ?
ಇದು ಬಿಳಿ ಕುಷ್ಠ. ಬೇರೆಯವರಿಗೆ ಹರಡುತ್ತದೆ ಎಂದು ಜನ ನಂಬುತ್ತಾರೆ. ಆದರೆ, ಇದು ಅಂಟುರೋಗವಲ್ಲ. ಹಾಗೇನಾದರೂ ಆಗಿದ್ದರೆ ಈ ಕಾಯಿಲೆ ಚಿಕಿತ್ಸೆ ಮಾಡುವ ವೈದ್ಯರಿಗೆ ಅಥವಾ ಕಾಯಿಲೆಗೆ ಒಳಗಾದವರಿಗೆಲ್ಲ ಬರೋಲ್ಲ.
ರೋಗಕ್ಕೆ ಮದ್ದಿದೆ
ಈ ಕಾಯಿಲೆಗೆ ಮೊದಲಿಗಿಂತ ಹೆಚ್ಚಿನ ಚಿಕಿತ್ಸಾ ವಿಧಾನಗಳು ಲಭ್ಯವಿದೆ. ಬೇರೆ ಬೇರೆ ರೋಗಿಗಳಿಗೆ ಬೇರೆ ಬೇರೆ ರೀತಿಯ ಚಿಕಿತ್ಸಾ ವಿಧಾನಗಳನ್ನು ಕೈಗೊಳ್ಳಬೇಕಾಗುತ್ತದೆ. ಎಲ್ಲರಿಗೂ ಒಂದೇ ರೀತಿಯ ಚಿಕಿತ್ಸೆ ಫಲಪ್ರದವಾಗುವುದಿಲ್ಲ. ಸ್ಟೆರಾಯ್ಡ್ ಕ್ರೀಂಗಳ ಬಳಕೆ, ಅಲ್ಟ್ರಾವೈಲೆಟ್ ಕಿರಣಗಳನ್ನು ಉಪಯೋಗಿಸಿ ಚಿಕಿತ್ಸೆ, ಸೂಡೋಕೆಟಲೇಸ್ ಕ್ರೀಂಗಳು, ಎಕ್ಸೈಮರ್ ಲೇಸರ್ ಚಿಕಿತ್ಸೆ, ಚರ್ಮದ ಕಸಿ, ಬಣ್ಣ ವಸ್ತುವಿನ ಕಸಿ, ಸೊಮೋಲೆನ್ಸ್ ಎಂಬ ಔಷಧಗಳ ಬಳಕೆ, ದೇಹದ ಪ್ರತಿರೋಧ ಶಕ್ತಿ ವೃದ್ಧಿಸುವ ನವೀನ ಔಷಧಗಳು-ಹೀಗೆ ಹಲವು ರೀತಿಯ ಚಿಕಿತ್ಸೆಗಳೀಗ ಲಭ್ಯವಿದೆ. ಯಾವ ರೋಗಿಗೆ ಯಾವುದು ಹೆಚ್ಚು ಪರಿಣಾಮಕಾರಿ, ಬೇಗ ಕಾಯಿಲೆಯನ್ನು ನಿರ್ಮೂಲನ ಮಾಡಬಹುದು ಎಂಬ ಅಂಶವನ್ನು ಚಿಕಿತ್ಸೆ ಉಪಯೋಗಿಸಿಯೇ ತಿಳಿದುಕೊಳ್ಳಬೇಕಾಗುತ್ತದೆ.
-ಡಾ. ಎಚ್. ಎಸ್. ಮೋಹನ್, ಸಾಗರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

