ಆರೋಗ್ಯ-ಜೀವನಶೈಲಿ

ಅಡುಗೆ ಆರೋಗ್ಯ

Published On :

ಹಿಂದೆ ಪ್ರತಿದಿನದ ಅಡುಗೆಯೂ ವೈವಿಧ್ಯವಾಗಿರುತ್ತಿತ್ತು. ದೇಹದ ವಿವಿಧ ಬೇನೆಗಳಿಗೆ ಭಕ್ಷ್ಯಗಳ ಮೂಲಕವೇ ಔಷಧಿ ಮಾಡಿಕೊಂಡು ಸೇವಿಸಲಾಗುತ್ತಿತ್ತು. ಅಡುಗೆಯಿಂದಲೇ ಆರೋಗ್ಯ ಗಟ್ಟಿಯಾಗಿರುತ್ತಿತ್ತು. ಅವರ ಆರೋಗ್ಯದ ಗಟ್ಟಿಗೆ ಈ ಆಹಾರವೇ ಗುಟ್ಟು. ಯಾವ ಆಹಾರಗಳು ಹಿತ..?

ಇಂಗು (ಹಿಂಗಲಿ)
ಅಜೀರ್ಣ, ಜಂತು ಬಾಧೆಯಿಂದ ಹೊಟ್ಟೆ ನೋವಾಗುತ್ತಿದ್ದರೆ, ಸ್ವಲ್ಪ ಇಂಗು ಮತ್ತು ಸೈಂದವ ಲವಣವನ್ನು ನೀರಿನಲ್ಲಿ ಕಲಸಿ ಕುಡಿಯಬೇಕು. ವಾತ, ಕಫ, ಗುಲ್ಮ, ಶೂಲ ಉದರ ತೊಂದರೆ ಕಡಿಮೆಯಾಗುತ್ತದೆ.

ಹುಣಸೆಹಣ್ಣು
ಹೊಸದಾಗಿರುವ ಹುಣಸೆಹಣ್ಣು ಅಪಥ್ಯ. ಹಳೆ ಹುಣಿಸೆ ಹಣ್ಣಿನಲ್ಲಿ ವಾತ, ಪಿತ್ತ, ಶೀತ ರೋಗಗಳನ್ನು ಶಾಂತಗೊಳಿಸಬಹುದು. ಇದು ಹೃದಯಕ್ಕೆ ಬಲ ಕೊಡುತ್ತದೆ. ಹಳೆಯದಾಗಲಿ, ಹೊಸದಾಗಲಿ ಹೆಚ್ಚು ಸೇವಿಸಿದರೆ ರಕ್ತ ಕೆಡುವುದು. ಹುಣಿಸೆ ಹಣ್ಣಿನ ಬೆಲ್ಲದ ಪಾನಕ ತಲೆನೋವಿಗೆ ರಾಮಬಾಣ. ಅಡಕೆ ಗಾತ್ರದ ಹುಣಸೆ ಹಣ್ಣಿಗೆ ಉಪ್ಪು, ನಾಲ್ಕು ಕರಿಮೆಣಸು ಅಗಿದು ನುಂಗುತ್ತಿದ್ದರೆ ಅಜೀರ್ಣ ರೋಗಿಗಳಿಗೆ ಹಿತ.
ಹುಣಸೆಹಣ್ಣಿಗೆ ಸ್ವಲ್ಪ ಉಪ್ಪು, ಬೆಲ್ಲ, ಸೇರಿಸಿ ಶೋಧಿಸಿ ಬಿಸಿಯಾಗಿರುವಾಗಲೇ ಲೇಪಿಸಿದರೆ ಬಾವು, ಉಳುಕು, ನೋವು, ಕಡಿಮೆಯಾಗುವುದು. ಅದೇ ರೀತಿ ನೆಲ್ಲಿ ಗಾತ್ರದ ಹುಣಸೆ ಹಣ್ಣನ್ನು ಅಷ್ಟೇ ಪ್ರಮಾಣದ ಬೆಲ್ಲ, ಟೀ ಚಮಚ ಜೀರಿಗೆ ಚೆನ್ನಾಗಿ ಕುಟ್ಟಿ ಮುದ್ದೆ ಮಾಡಿ ಚಪ್ಪರಿಸುತ್ತಿದ್ದರೆ ಹೊಟ್ಟೆ ತೊಳೆಸುವುದು, ತಲೆಸುತ್ತು, ವಾಂತಿ, ವಾಕರಿಕೆಯಂಥ ಪಿತ್ತ ವಿಕಾರಗಳು ಹೋಗುತ್ತವೆ.

ಜೀರಿಗೆ
ಇದು ದೀಪನ, ಪಾಚನ, ಕಫ, ವಾತ ಪ್ರಶಮನ, ವೇದನಾ ಸ್ಥಂಭನ ಮತ್ತು ದಾಹ ಪ್ರಶಾನವಾಗಿದೆ. ಇದರ ಬಳಕೆಯಿಂದ ನವೆ ಹೋಗುತ್ತದೆ. ಹೊಟ್ಟೆ ಉಬ್ಬರ, ವಾಂತಿ, ಸಂಗ್ರಹಣ, ಬೇಧಿ, ಅಪಚನ ವಿಕಾರಗಳಲ್ಲಿ ಜೀರಿಗೆ ಗುಣಕಾರಿ. ಮೂಲವ್ಯಾಧಿಯಲ್ಲಿ ಮುಳ್ಳುಗಳು ನೋಯುತ್ತಿದ್ದರೆ, ಜೀರಿಗೆ ಸಕ್ಕರೆ ಸೇವಿಸಬೇಕು. ಜೀರಿಗೆಯನ್ನು ತಣ್ಣೀರಿನಲ್ಲಿ ಅರೆದು ಹಚ್ಚಬೇಕು. ಪಮೇಂಕ, ಅಶ್ಮರಿ, ಮೂತ್ರ ಉರಿತಕ್ಕೆ ಜೀರಿಗೆಯನ್ನು ಕಲ್ಲು ಸಕ್ಕರೆಯ ಕಷಾಯದೊಂದಿಗೆ ಸೇವಿಸಿದರೆ ಸೂಕ್ತ. ಜೀರಿಗೆ ಮತ್ತು ಕಲ್ಲುಸಕ್ಕರೆ ಕೆಮ್ಮಿಗೂ ಇದನ್ನೇ ಬಳಸುವುದು ಹಳ್ಳಿಯಲ್ಲಿ ವಾಡಿಕೆಯಲ್ಲಿದೆ.

ಅರಿಶಿನ
ಮನೆಯಲ್ಲಿಯೇ ಬೆಳೆಸಿದ ಅರಿಶಿನ ಹಿಟ್ಟು ಒಳ್ಳೆಯ ಔಷಧಿ ದ್ರವ್ಯ. ಉಷ್ಣ, ಕಫ, ವಾತನಾಶಕ, ದೀಪನ, ತ್ವಗ್ರೋಹರ, ಶಾಂತಿವರ್ಧಕ, ಸ್ತನ್ಯಶೋಧನ ಮುಂತಾದ ಗುಣ ಅರಶಿನದಲ್ಲಿದೆ. ಮಳೆಗಾಲದಲ್ಲಿ, ಶೀತಕಾಲದಲ್ಲಿ ನೆಗಡಿಯಾದರೆ ಕೆಂಡದ ಮೇಲೆ ಅರಿಶಿನದ ಪುಡಿಯನ್ನು ಹಾಕಿ ಅದರ ಹೊಗೆ ತೆಗೆದುಕೊಳ್ಳಬೇಕು. ಶ್ವಾಸ ಸರಾಗವಾಗುತ್ತದೆ. ಬಿಸಿ ಹಾಲಲ್ಲಿ ಅರಿಶಿನ ಪುಡಿ, ಕಾಲು ಟೀ ಸ್ಪೂನ್ ಕಲ್ಲು ಸಕ್ಕರೆ ಕೂಡಿಸಿ ಕುಡಿಯಬೇಕು. ಮೂತ್ರ ಸರಾಗವಾಗಿ ಆಗದಿದ್ದರೆ ಅರಿಶಿನ ರಾಮಬಾಣ. ಕಣ್ಣು ನೋವಿಗೂ ದಿವ್ಯ ಔಷಧಿ. ಒಂದು ಚಮಚ ಅರಿಶಿನದ ಪುಡಿಯನ್ನು ಅರ್ಧ ಲೀಟರ್ ನೀರಿನಲ್ಲಿ ಹಾಕಿ ಕುದಿಸಿ ಆರಿಸಿ ತಣ್ಣಗಾದ ನೀರನ್ನು ಗಾಜಿನ ಬಾಟಲಿಯೊಳಗೆ ಶೇಖರಿಸಿಟ್ಟು ಸ್ವಚ್ಛ ಅರಿವೆಯಲ್ಲಿ ನೆನಸಿ ಕಣ್ಣು ರೆಪ್ಪೆ ಮೇಲಿಡಬೇಕು. ಇದರಿಂದ ಕಣ್ಣಿನಲ್ಲಿ ಹೂ ಕೂತಿದ್ದರೂ ಸರಿ ಹೋಗುತ್ತದೆ.

ಅಜವಾನ
ಇದನ್ನು ಕೆಲವು ಕಡೆ 'ಓಮಿನ ಕಾಳು' ಎಂದೂ ಹೇಳುತ್ತಾರೆ. ದೀಪನ, ಪಾಚನ ಗುಣಗಳನ್ನು ಹೊಂದಿದೆ. ಇದನ್ನು ಸ್ವಲ್ಪ ಅರೆದು ಕಷಾಯ ಮಾಡಿ ಕುಡಿದರೆ ಗ್ಯಾಸ್, ಹೊಟ್ಟೆ ತೊಂದರೆ ನಿವಾರಣೆ ಆಗುತ್ತದೆ. ವಾತ, ಕಫನಾಶಕ ಗುಣಗಳನ್ನು ಹೊಂದಿದೆ. ಹಸಿವು ಸರಿ ಆಗದಿದ್ದರೆ ಅಜವಾನವನ್ನು ತಿನ್ನುತ್ತಾ ಹೋದರೆ ಗುಣ ಕಂಡು ಬರುತ್ತದೆ. ಮರಳ ಜಂತು ಹುಳುಗಳ ತೊಂದರೆಗೆ ಒಳ್ಳೆಯ ಮನೆಮದ್ದು. ಹಳೆ ಹುಣ್ಣಿಗೆ ಅಜವಾನವನ್ನು ಅರೆದು ಕಟ್ಟುವುದರಿಂದ ಗುಣವಾಗುವುದು. ಹಲ್ಲುನೋವಿಗೆ ಅಜವಾನ, ಸೈಂದವ ಲವಣ, ಇಂಗು ಇವುಗಳನ್ನು ತುಳಸಿ ರಸದಲ್ಲಿ ಅರೆದು ಗುಳಿಗೆ ಮಾಡಿ ನೋವಿರುವ ಹಲ್ಲಿನ ಸಂದುಗಳಲ್ಲಿ ಇಟ್ಟುಕೊಳ್ಳಬೇಕು. ಬಾಲಕರಿಗೆ, ವಯಸ್ಕರಿಗೆ ಪ್ರಮಾಣ ಅರಿತು ಕೊಡಬೇಕು.

ಹಸಿಶುಂಠಿ
ಎಲ್ಲ ರೋಗಗಳಿಗೂ ಮಂದಾಗ್ನಿಯೇ ಕಾರಣ ಎನ್ನುತ್ತದೆ ಆಯರ್ವೇದ. ಅಗ್ನಿದೀಪನ ಮಾಡುವ ಔಷಧಿಗಳಲ್ಲಿ ಶುಂಠಿ ಹೆಸರಾದದ್ದು. ಬಾಯಿಗೆ ರುಚಿ ಇಲ್ಲವಾದಾಗ, ಅಜೀರ್ಣ, ದಮ್ಮಿನಿಂದ ಶ್ವಾಸದ ತೊಂದರೆಯಾಗುತ್ತಿದ್ದಲ್ಲಿ ಒಂದು ಚಮಚ ಶುಂಠಿ ರಸಕ್ಕೆ ಕಲ್ಲು ಸಕ್ಕರೆ ಪುಡಿ, ಜೇನುತುಪ್ಪ, ಲಿಂಬೆರಸ ಸೇರಿಸಿ ತೆಗೆದುಕೊಳ್ಳಬೇಕು. ನೆಗಡಿ, ಕೆಮ್ಮು ಇರುವಾಗಲೂ ಒಂದು ಚಮಚ ಶುಂಠಿರಸ, ಜೇನುತುಪ್ಪ ಸೇರಿಸಿ ಎರಡು ಮೂರು ಸಲ ತೆಗೆದುಕೊಳ್ಳಬೇಕು. ವಾಂತಿಯಾಗುತ್ತಿದ್ದಾಗ ಅರ್ಧ ಚಮಚ ಶುಂಠಿ ರಸ ಮತ್ತು ಕಲ್ಲುಸಕ್ಕರೆ ಪುಡಿಯನ್ನು ಸೇರಿಸಿ ತೆಗೆದುಕೊಳ್ಳುವುದರಿಂದ ದೇಹಕ್ಕೆ ಹಿತವೆನಿಸುವುದು.
ಸಂದುನೋವಿನಿಂದ ಬಳಲುತ್ತಿರುವವರು ನೋವಿರುವ ಜಾಗಕ್ಕೆ ಶುಂಠಿ ರಸದಲ್ಲಿ ಸೈಂದವ ಲವಣ ಸೇರಿಸಿ ತಿಕ್ಕಬೇಕು. ಯಾವುದೇ ಕಾರಣದಿಂದ ಶರೀರ ತಣ್ಣಗಾದರೆ ಉಷ್ಣತೆ ಹೆಚ್ಚಿಸಲು ಶುಂಠಿ ರಸ ಒಳ್ಳೆಯದು. ಇವೆರಡೂ ಕೂಡಿಸಿ ಮೈಗೆ ಹಚ್ಚಿ ತಿಕ್ಕಬೇಕು. (ಮಾಹಿತಿಗೆ: 08384-279625)
= ಶೋಭಾ ಎಸ್. ಹೆಗಡೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.