ಫಿಫಾ ವಿಶ್ವಕಪ್ 2014

ಮಹಾನ್ ಕ್ರಿಕೆಟಿಗ ಈಗ ಕ್ಯಾಬ್ ಡ್ರೈವರ್!

ಮಹಾನ್ ಕ್ರಿಕೆಟಿಗ ಈಗ ಕ್ಯಾಬ್ ಡ್ರೈವರ್!
Published On :

ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟಿಗನೊಬ್ಬ ತನ್ನ ನಿವೃತ್ತ ಬದುಕನ್ನು ಹೇಗೆ ಕಳೆಯಬಹುದು? ಟೆಸ್ಟ್ ಆಡುವ ದೇಶಗಳಲ್ಲಿ ಈ ಪ್ರಶ್ನೆ ರಣಜಿ, ಕೌಂಟಿ, ಕ್ಲಬ್, ಫ್ರಾಂಚೈಸಿ ಆಟಗಾರನನ್ನೇ ಬಾಧಿಸುವುದಿಲ್ಲ. ಅಂಥದ್ದರಲ್ಲಿ ಜೀವಮಾನದಲ್ಲೊಮ್ಮೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಆಟಗಾರ ಸುಮ್ಮನಿರುತ್ತಾನೆಯೇ?
ಒಂದಿಲ್ಲೊಂದು ಅವಕಾಶ ಆತನನ್ನು ಹುಡುಕಿಕೊಂಡು ಬರುತ್ತದೆ. ಕಾಮೆಂಟೇಟರ್, ರೆಫ್ರೀ, ಅಂಪೈರ್, ಕೋಚ್. ಕ್ರಿಕೆಟ್‌ನ ಸಹವಾಸ ಬೇಡ ಎಂದಾದಲ್ಲಿ ವ್ಯಾಪಾರ, ವ್ಯವಹಾರ, ಇದ್ಯಾವುದೂ ಬೇಡ ಎಂದಾದಲ್ಲಿ ಇದ್ದೇ ಇದೆ ರಾಜಕೀಯ... ಒಟ್ಟಿನಲ್ಲಿ ಆರ್ಥಿಕವಾಗಿ ಕೈಹಿಡಿಯುವಂಥ ದಾರಿಗಳನ್ನೇ ಹುಡುಕುತ್ತಾರೆನ್ನಿ.
ಆದರೆ, ಇದಕ್ಕೆ ವ್ಯತಿರಿಕ್ತ ವಿದ್ಯಮಾನ ಇಲ್ಲಿದೆ. 14 ವರ್ಷ ರಾಷ್ಟ್ರೀಯ ತಂಡದ ಭಾಗವಾಗಿದ್ದ ನ್ಯೂಜಿಲೆಂಡ್‌ನ ಮಧ್ಯಮ ವೇಗಿ ಈಗ ಟ್ಯಾಕ್ಸಿ ಚಾಲಕ!
ಆಗ ವಿಶ್ವದ ಹೀರೋ
1975ರಿಂದ 1989ರವರೆಗೆ 43 ಟೆಸ್ಟ್ ಮತ್ತು 114 ಏಕದಿನ ಪಂದ್ಯಗಳಲ್ಲಿ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸಿದ ಇವಾನ್ ಚ್ಯಾಟ್‌ಫೀಲ್ಡ್ ಕ್ರಮವಾಗಿ 123 ಮತ್ತು 140 ವಿಕೆಟ್ ಕಬಳಿಸಿದ್ದರು. ಅಂದರೆ 157 ಅಂತಾರಾಷ್ಟ್ರೀಯ ಪಂದ್ಯಗಳಿಂದ 263 ವಿಕೆಟ್! ಕಿವೀಸ್ ಪರ ಏಕದಿನ ಹಾಗೂ ಟೆಸ್ಟ್ ಎರಡರಲ್ಲೂ 100ಕ್ಕಿಂತ ಹೆಚ್ಚು ವಿಕೆಟ್ ಗಳಿಸಿದ 6 ಮಂದಿಯ ಕ್ಲಬ್‌ನಲ್ಲಿ ಇವರೂ ಒಬ್ಬರು. ಈ ಆಜಾನುಬಾಹು ಎದುರಾಳಿಯನ್ನು ಬೌನ್ಸರ್‌ಗಳಿಂದಲೇ ಕಂಗೆಡಿಸಬಹುದಿತ್ತು. ಆದರೆ 14 ವರ್ಷಗಳ ವೃತ್ತಿಜೀವನದಲ್ಲಿ ಒಂದೇ ಒಂದು ಬೌನ್ಸರ್ ಎಸೆಯದ ಈ ಮಧ್ಯಮ ವೇಗಿ ಲೈನ್ ಮತ್ತು ಲೆಂಗ್ತ್‌ಗಷ್ಟೇ ಗಮನ ಕೊಟ್ಟಿದ್ದರು.

ಡ್ರೈವಿಂಗ್ ಅಚ್ಚುಮೆಚ್ಚು
ಕ್ರಿಕೆಟ್ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಈ ಜಂಟಲ್‌ಮ್ಯಾನ್‌ಗೆ ಡ್ರೈವಿಂಗ್ ಅಂದ್ರೆ ಪ್ರಾಣ. 63ರ ಹರೆಯದ ಈ ಹಿರಿಯ ನಾಗರಿಕ ಇನ್ನೂ ಆರೇಳು ವರ್ಷ ಇದನ್ನು ಮುಂದುವರಿಸಬಲ್ಲೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.
'ನನ್ನ ಗೆಳೆಯರು ಅನೇಕರು ವೀಕ್ಷಕ ವಿಶ್ಲೇಷಕರಾಗಿ, ಕೋಚ್ ಆಗಿ, ಅಂಪೈರ್ ಆಗಿದ್ದಾರೆ. ಆದರೆ ನನಗಿದೆಲ್ಲ ಬೋರ್. ನನಗೆ ಡ್ರೈವಿಂಗ್ ಪಂಚಪ್ರಾಣ'- ಇಂದು ಚ್ಯಾಟ್‌ಫೀಲ್ಡ್ ಅಂಬೋಣ. ಕಂಪನಿಯ ಕ್ಯಾಬ್‌ನಲ್ಲಿ ಇಡೀ ವೆಲ್ಲಿಂಗ್‌ಟನ್ ಸುತ್ತು ಹಾಕುವ ಇವರು ಇಂದಿಗೂ ವಾರಾಂತ್ಯದಲ್ಲಿ ಕ್ರಿಕೆಟ್ ಆಡುತ್ತಾರೆ. ಸ್ಥಳೀಯ ಕ್ಲಬ್ ಒಂದರಲ್ಲಿ ಇಂದಿಗೂ ಮಧ್ಯಮ ವೇಗದ ಬೌಲಿಂಗ್ ನಡೆಸುತ್ತಾರೆ.

ಪ್ರಚಾರಪ್ರಿಯನಲ್ಲ
ನಾವು ಅಂತಾರಾಷ್ಟ್ರೀಯ ಕ್ರಿಕೆಟಿಗನೊಂದಿಗೆ ಪಯಣಿಸುತ್ತಿದ್ದೇವೆ ಎಂದು ಅವರ ಕ್ಯಾಬಿನಲ್ಲಿ ಹೋಗುವ ಎಷ್ಟೋ ಮಂದಿಗೆ ತಿಳಿಯುವುದೇ ಇಲ್ಲ. ತಿಳಿಸಬೇಕೆಂಬ ಹಂಬಲವೂ ಚ್ಯಾಟ್‌ಫೀಲ್ಡ್‌ಗೆ ಇಲ್ಲ. ಕ್ಯಾಬ್‌ನಲ್ಲಿ ಕೂತ ಎಷ್ಟೋ ಮಂದಿ ಕ್ರೀಡೆ ಬಗ್ಗೆ, ಅದರಲ್ಲೂ ಕ್ರಿಕೆಟ್ ಬಗ್ಗೆ ಇವರೊಂದಿಗೆ ಮಾತಿಗಿಳಿಯುತ್ತಾರೆ, ಇಲ್ಲ ತಮ್ಮೊಳಗೆ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಾರೆ. ಆದರೆ ಪ್ರಚಾರದಿಂದ ದೂರ ಇರುವ ಇವರು ಎಲ್ಲೂ ತಾನೊಬ್ಬ ಅಂತಾರಾಷ್ಟ್ರೀಯ ಕ್ರಿಕೆಟಿಗ ಎಂಬುದನ್ನು ತೋರಗೊಡುವುದಿಲ್ಲ. ಯಾರನ್ನಾದರೂ ಪಿಕ್‌ಅಪ್ ಮಾಡಬೇಕೆಂದು ವೆಲ್ಲಿಂಗ್‌ಟನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರವೇಶಿಸಿದರೆ ದೀರ್ಘ ಕಾಲದ ಒಡನಾಡಿ ರಿಚರ್ಡ್ ಹ್ಯಾಡ್ಲಿ ಸೇರಿದಂತೆ ಅನೇಕ ಕ್ರಿಕೆಟಿಗರು ಇವರಿಗೆ ಸಿಗುತ್ತಾರೆ, ಮಾತನಾಡುತ್ತಾರೆ, ಹರಟುತ್ತಾರೆ. ಹ್ಯಾಡ್ಲಿಯನ್ನಂತೂ ಆವಾಗಾವಾಗ ಭೇಟಿಯಾಗುತ್ತಿರುತ್ತೇನೆ ಎಂದು ಸಹಜವಾಗಿಯೇ ಹೇಳುತ್ತಾರೆ.

ಬೌನ್ಸರ್ ಪೆಟ್ಟು ತಿಂದು ಬದುಕುಳಿದ!
1975ರಲ್ಲಿ ಇಂಗ್ಲೆಂಡ್ ವಿರುದ್ಧ ಪಂದ್ಯವನ್ನಾಡುವ ವೇಳೆ 11ನೇ ಬ್ಯಾಟ್ಸ್‌ಮನ್ ಆಗಿ ಕ್ರೀಸ್‌ಗಿಳಿದಿದ್ದ ಚ್ಯಾಟರ್‌ಫೀಲ್ಡ್, ಪೀಟರ್ ಲೆವೆಲ್ ಎಸೆದ ಬೌನ್ಸರ್ ತಲೆಗೆ ಬಡಿದಿತ್ತು. ಇಂದಿನಂತೆ ಹೆಲ್ಮೆಟ್ ಆಗಲಿ, ಇನ್ನಿತರ ರಕ್ಷಾಕವಚ ಇದ್ದ ಕಾಲವಲ್ಲ ಅದು. ಗಾಯದಿಂದ ಆಸ್ಪತ್ರೆ ಸೇರಿದ್ದ ಇವಾನ್ ಕ್ರಿಕೆಟ್‌ಗೆ ಮರಳುವುದೇ ಅನುಮಾನವಾಗಿತ್ತು. ಆದರೆ ಚೇತರಿಸಿಕೊಂಡ ಈ ಛಲದಂಕಮಲ್ಲ 2 ವರ್ಷಗಳಲ್ಲಿ ಕ್ರಿಕೆಟ್‌ಗೆ ಮರಳಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದರು. ತಾನಾಡಿದ ಯಾವ ಪಂದ್ಯದ ವಿಡಿಯೋ ಕ್ಲಿಪ್‌ಗಳೂ ಚ್ಯಾಟರ್‌ಫೀಲ್ಡ್ ಬಳಿ ಇಲ್ಲ. ಆದರೆ ಈ ವೀಡಿಯೋ ಸಂಗ್ರಹಿಸಿ ತನ್ನ ಮೊಮ್ಮಕ್ಕಳಿಗೆ ತೋರಿಸುವ ಮೂಲಕ ಬದುಕಿನ ಪಾಠ ಕಲಿಸುವ ಇಚ್ಛೆ ಚ್ಯಾಟರ್‌ಫೀಲ್ಡ್‌ಗೆ.

- ಗಣಪ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.