ರಾಜ್ಯದಲ್ಲಿ ಒಟ್ಟಾರೆ ಶೇ. 68.62 ಮತದಾನ: ಮಂಡ್ಯದಲ್ಲಿ ಅತಿ ಹೆಚ್ಚು, ಬೆಂಗಳೂರು ಕೇಂದ್ರದಲ್ಲಿ ಅತಿ ಕಡಿಮೆ ಮತದಾನ
ರಾಜ್ಯದ ಒಟ್ಟು 28 ಲೋಕಸಭಾ ಕ್ಷೇತ್ರಗಳಿಗೆ ನಡೆದ ಎರಡು ಹಂತಗಳ ಚುನಾವಣೆಯಲ್ಲಿ ಬಹುತೇಕ ಶಾಂತಿಯುತ ಮತದಾನ ನಡೆಸಿದ್ದು, ಒಟ್ಟು ಶೇ. 68.62ರಷ್ಟು ಮತ ಪ್ರಮಾಣ ದಾಖಲಾಗಿದೆ.

Published On :
ಬೆಂಗಳೂರು: ರಾಜ್ಯದ ಒಟ್ಟು 28 ಲೋಕಸಭಾ ಕ್ಷೇತ್ರಗಳಿಗೆ ನಡೆದ ಎರಡು ಹಂತಗಳ ಚುನಾವಣೆಯಲ್ಲಿ ಬಹುತೇಕ ಶಾಂತಿಯುತ ಮತದಾನ ನಡೆಸಿದ್ದು, ಒಟ್ಟು ಶೇ. 68.62ರಷ್ಟು ಮತ ಪ್ರಮಾಣ ದಾಖಲಾಗಿದೆ.
ರಾಜ್ಯದ ಒಟ್ಟು 58, 186 ಮತಗಟ್ಟೆಗಳಲ್ಲಿ ಮತದಾನ ನಡೆದಿದ್ದು, ಒಟ್ಟು 478 ಅಭ್ಯರ್ಥಿಗಳ ಹಣೆಬರಹ ಮತಯಂತ್ರ ಸೇರಿದೆ. ಏ.23ರಂದು ಫಲಿತಾಂಶ ಹೊರಬೀಳಲಿದೆ.
ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ರಾಜಕೀಯ ಸೂಕ್ಷ್ಮ ಕ್ಷೇತ್ರ ಎಂದು ಗುರುತಿಸಿಕೊಂಡಿದ್ದ ಮಂಡ್ಯದಲ್ಲಿ ಅತಿ ಹೆಚ್ಚು ಮತದಾನವಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಸ್ಟಾರ್ ಪ್ರಚಾರಕರ ಭಾರಿ ಬೆಂಬಲ ಪಡೆದಿದ್ದ ಸುಮಲತಾ ಅಂಬರೀಶ್ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದ್ದ ಈ ಕ್ಷೇತ್ರದಲ್ಲಿ ಬಿಗಿ ಭದ್ರತೆ ನಡುವೆ ಶೇ. 80.23ರಷ್ಟು ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಉಳಿದಂತೆ ದಕ್ಷಿಣ ಕನ್ನಡ, ಕೋಲಾರ, ಹಾಸನ, ಶಿವಮೊಗ್ಗ, ದಾವಣಗೆರೆ, ಉತ್ತರ ಕನ್ನಡ, ಚಿಕ್ಕೋಡಿ, ಬಾಗಲಕೋಟೆ, ಧಾರವಾಡ, ಹಾವೇರಿ, ತುಮಕೂರು, ಚಾಮರಾಜನಗರ, ಉಡುಪಿ ಚಿಕ್ಕಮಗಳೂರು ಹಾಗೂ ಚಿತ್ರದುರ್ಗದಲ್ಲಿ ಶೇ. 70ಕ್ಕೂ ಹೆಚ್ಚಿನ ಮತದಾನವಾಗಿದೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಶೇ.54.66 ರಷ್ಟು ಅತಿ ಕಡಿಮೆ ಮತದಾನವಾಗಿದೆ. ಬೆಂಗಳೂರು ಉತ್ತರ, ದಕ್ಷಿಣ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಕೂಡ ಕಡಿಮೆ ಮತದಾನ ದಾಖಲಾಗಿದೆ.
ಎರಡೂ ಹಂತಗಳ ಚುನಾವಣೆಯಲ್ಲಿ ಹಲವೆಡೆ ಗ್ರಾಮಸ್ಥರು ಆಡಳಿತ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮತದಾನ ಬಹಿಷ್ಕರಿಸಿದ್ದು, ಈ ವೇಳೆ ಚುನಾವಣಾ ಆಯೋಗದ ಸಿಬ್ಬಂದಿ ಅವರ ಮನವೊಲಿಸಿದ್ದಾರೆ.
2014ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿಯ ಮತಪ್ರಮಾಣದಲ್ಲಿ ಅಲ್ಪಪ್ರಮಾಣದ ಹೆಚ್ಚಳ ಕಂಡು ಬಂದಿದೆ. 2014ರಲ್ಲಿ 67.20ರಷ್ಟು ಮತದಾನವಾಗಿತ್ತು. ಈ ಬಾರಿ ಶೇ. 1.42ರಷ್ಟು ಮತದಾನ ಪ್ರಮಾಣ ಹೆಚ್ಚಳವಾಗಿದೆ. ಕಳೆದ ಸಾರ್ವತ್ರಿಕ ಚುನಾವಣೆಗೆ ಹೋಲಿಸಿದರೆ, ಬೆಳಗಾವಿ, ರಾಯಚೂರು, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ , ಬೆಂಗಳೂರು ಕೇಂದ್ರ ಕ್ಷೇತ್ರಗಳಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿರುವುದು ಕಂಡು ಬಂದಿದೆ.
ಜಿಲ್ಲೆಗಳ ಶೇಕಡಾವಾರು ವಿವರ
ಎರಡನೇ ಹಂತ- ಚಿಕ್ಕೋಡಿ ಶೇ.75.52, ಬೆಳಗಾವಿ ಶೇ.67.44, ಬಾಗಲಕೋಟೆ ಶೇ.70.59, ಬಿಜಾಪುರ ಶೇ. 61.70, ಗುಲ್ಬರ್ಗ ಶೇ.60.88, ರಾಯಚೂರು ಶೇ.57.91, ಬೀದರ್ ಶೇ. 62.69, ಕೊಪ್ಪಳ ಶೇ.68.41 ,ಬಳ್ಳಾರಿ ಶೇ.69.90, ಹಾವೇರಿ ಶೇ.73.99, ಧಾರವಾಡ ಶೇ.70.03,
ಉತ್ತರಕನ್ನಡ ಶೇ.74.07, ದಾವಣಗೆರೆ ಶೇ.72.96, ಶಿವಮೊಗ್ಗ ಶೇ. 76.37
ಒಂದನೇ ಹಂತ-ಉಡುಪಿ ಚಿಕ್ಕಮಗಳೂರು ಶೇ. 75.91, ಹಾಸನ ಶೇ. 77.08, ದಕ್ಷಿಣ ಕನ್ನಡ ಶೇ.77.90, ಚಿತ್ರದುರ್ಗ ಶೇ. 70.65, ತುಮಕೂರು ಶೇ. 77.21, ಮಂಡ್ಯ ಶೇ.80.23, ಮೈಸೂರು ಶೇ.69.28, ಚಾಮರಾಜನಗರ ಶೇ. 75.19, ಬೆಂಗಳೂರು ಗ್ರಾಮಾಂತರ ಶೇ. 64.90,ಬೆಂಗಳೂರು ಉತ್ತರ ಶೇ. 54.66, ಬೆಂಗಳೂರು ಕೇಂದ್ರ ಶೇ. 54.28, ಬೆಂಗಳೂರು ದಕ್ಷಿಣ ಶೇ.53.47, ಚಿಕ್ಕಬಳ್ಳಾಪುರ ಶೇ. 76.61, ಕೋಲಾರ ಶೇ.77.11
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


